Asianet Suvarna News Asianet Suvarna News

ಬಿಸಿಲಿನ ತಾಪಕ್ಕೆ ಬತ್ತಿದ ಅಂತರ್ಜಲ । ಒಣಗುತ್ತಿರುವ ಸಾವಿರಾರು ಹೆಕ್ಟೇರ್‌ ಕೃಷಿ ಭೂಮಿ

ತಾಲೂಕಿನಲ್ಲಿ ಬೇಸಿಗೆ ಬಿಸಿಲಿನ ತಾಪಕ್ಕೆ ಅಂತರ್ಜಲ ಬತ್ತಿದ್ದು ತೋಟಗಾರಿಕೆ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

Ground water dried up by the heat of the sun. Thousands of hectares of agricultural land are drying up snr
Author
First Published May 1, 2024, 1:10 PM IST

ಶೇಖರ್ ಯಲಗತವಳ್ಳಿ

 ಅರಕಲಗೂಡು :  ತಾಲೂಕಿನಲ್ಲಿ ಬೇಸಿಗೆ ಬಿಸಿಲಿನ ತಾಪಕ್ಕೆ ಅಂತರ್ಜಲ ಬತ್ತಿದ್ದು ತೋಟಗಾರಿಕೆ ಬೆಳೆಗಳು ಒಣಗಿ ರೈತರು ಸಂಕಷ್ಟಕ್ಕೀಡಾಗಿದ್ದಾರೆ.

ರೈತರಿಗೆ ದೀರ್ಘಾವಧಿ ಆದಾಯ ತರುವ ಕಾಫಿ, ತೆಂಗು, ಅಡಿಕೆ ಹಾಗೂ ವೀಳ್ಯದೆಲೆ, ಮೆಣಸು ಹಂಬು ಸೇರಿದಂತೆ ತೋಟಗಾರಿಕೆ ಬೆಳೆಗಳು ಬರದ ಬೇಗೆಗೆ ಸಿಲುಕಿ ನಲುಗುತ್ತಿವೆ. ಮಳೆ ಇಲ್ಲದೆ ದಿನೇ ದಿನೇ ಏರಿಕೆಯಾಗುತ್ತಿರುವ ತಾಪಮಾನದ ಪರಿಣಾಮ ಅಂತರ್ಜಲ ಮಟ್ಟ ಪಾತಾಳ ತಲುಪಿದೆ. ಪರಿಣಾಮವಾಗಿ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಹರಸಾಹಸ ಪಡುತ್ತಿದ್ದಾರೆ.

ತಾಲೂಕಿನಲ್ಲಿ 70 ಸಾವಿರಕ್ಕೂ ಅಧಿಕ ಹೆಕ್ಟೆರ್ ಕೃಷಿ ಪ್ರದೇಶವಿದ್ದು, ತಂಬಾಕು ಸೇರಿದಂತೆ ಇತರೆ ಬೆಳೆಗಳನ್ನು 50 ಸಾವಿರ ಹೆಕ್ಟೇರ್‌ನಲ್ಲಿ ಮುಂಗಾರು ಹಂಗಾಮಿನಲ್ಲಿ ಕೈಗೊಳ್ಳಲಾಗುತ್ತಿದೆ. ಬೇಸಿಗೆಯಲ್ಲಿ ತೋಟಗಾರಿಕೆ ಬೆಳೆಗಳನ್ನು ರಕ್ಷಣೆ ಮಾಡಿಕೊಳ್ಳಲು ಈ ಬಾರಿ ಬರದ ಛಾಯೆ ಆವರಿಸಿದೆ. ಈ ಬಾರಿ ಮಳೆ ಮಾಯವಾಗಿದ್ದು ಬೆಳೆಗಳು ಒಣಗಲು ಕಾರಣವಾಗಿದೆ.

ತಾಲೂಕಿನಲ್ಲಿ 4 ಸಾವಿರ ಹೆಕ್ಟೇರ್ ಅಡಿಕೆ, 2500 ಹೆಕ್ಟೇರ್ ತೆಂಗು, ಒಂದು ಸಾವಿರ ಹೆಕ್ಟೇರ್‌ನಲ್ಲಿ ಶುಂಠಿ ಬೆಳೆಯನ್ನು ಕೈಗೊಳ್ಳಲಾಗಿದೆ. ಇದರ ನಡುವೆ ಹಸಿ ತರಕಾರಿ ಬೆಳೆಗಳು, ಮೆಕ್ಕೆಜೋಳ ಸೇರಿದಂತೆ ಅರೆ ನೀರಾವರಿ ಬೆಳೆಗಳನ್ನು ರೈತರು ಬೆಳೆದಿದ್ದಾರೆ. ಕೆರೆಗಳಲ್ಲಿ ನೀರು ಬತ್ತುತ್ತಿರುವ ಹಿನ್ನೆಲೆ ಅಚ್ಚುಕಟ್ಟಿನ ತೋಟಗಾರಿಕೆ ಬೆಳೆಗಳಿಗೆ ನೀರು ಒದಗಿಸುತ್ತಿದ್ದ ಬೋರ್‌ವೆಲ್‌ಗಳಲ್ಲಿ ನೀರಿನ ಲಭ್ಯತೆ ಇಳಿಮುಖವಾಗಿದೆ.

ಒಣಗಿ ನಾಶವಾಗುತ್ತಿರುವ ಬೆಳೆಗಳು:

ತಾಲೂಕಿನ ಗಡಿಭಾಗ ಮಲ್ಲಿಪಟ್ಟಣ ಹೋಬಳಿ ವ್ಯಾಪ್ತಿಯಲ್ಲಿ ಹೆಚ್ಚಾಗಿ ಕಾಫಿ, ಏಲಕ್ಕಿ, ಕಾಳುಮೆಣಸು ಹಾಗೂ ಅಡಿಕೆ ತೋಟ ಕೃಷಿಯನ್ನು ರೈತರು ಕೈಗೊಂಡಿದ್ದಾರೆ. ತಾಲೂಕಿನ ಕೊಣನೂರು, ರಾಮನಾಥಪುರ, ದೊಡ್ಡಮಗ್ಗೆ, ಕಸಬಾ ಹೋಬಳಿ ವ್ಯಾಪ್ತಿಯಲ್ಲಿಯೂ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ರೇಷ್ಮೆ ಬೆಳೆಗಳನ್ನು ಬೆಳೆಯಲಾಗಿದೆ. ಈ ಬೆಳೆಗಳು ಹೆಚ್ಚಾಗಿ ನೀರಿನ ಅವಲಂಬಿತವಾಗಿವೆ. ಕೆರೆ, ಬೋರ್‌ವೆಲ್‌ಗಳಲ್ಲಿ ನೀರು ಇಲ್ಲದ ಪರಿಣಾಮ ಬೆಳೆಗಳು ಒಣಗಲು ಕಾರಣವಾಗುತ್ತಿದೆ.

ಶುಂಠಿ ಬೆಳೆಯತ್ತ ರೈತರು:

ಶುಂಠಿಗೆ ಉತ್ತಮ ದರ ದೊರಕಿದ ಹಿನ್ನೆಲೆಯಲ್ಲಿ ಈ ಬಾರಿ ತಾಲೂಕಿನಲ್ಲಿ ಶುಂಠಿ ಬಿತ್ತನೆ ಪ್ರಮಾಣ ಅಧಿಕವಾಗಿ ವಿಸ್ತರಣೆಗೊಂಡಿದೆ. ಆದರೆ ಮಳೆಯ ಮುನಿಸಿ ಶುಂಠಿ ಬೆಳೆ ಬೆಳವಣಿಗೆಗೆ ಕುತ್ತಾಗಿ ಪರಿಣಮಿಸಿದೆ.

ಕಳೆದ ನಾಲ್ಕೈದು ವರ್ಷಗಳ ಹಿಂದೆ ಶುಂಠಿ ಬೆಲೆ ಕುಸಿತಗೊಂಡ ಪರಿಣಾಮ ತಾಲೂಕಿನಲ್ಲಿ ಶುಂಠಿ ಬೆಳೆ ಪ್ರದೇಶ ಕುಂಠಿತಗೊಂಡಿತ್ತು. ಕಳೆದ ಎರಡು ವರ್ಷಗಳಿಂದ ನಿರೀಕ್ಷೆಗೂ ಮೀರಿ ಬೆಲೆ ದೊರೆಯುತ್ತಿರುವ ಪರಿಣಾಮ ಶುಂಠಿ ಬೆಳೆ ಪ್ರದೇಶ ಸಾವಿರ ಹೆಕ್ಟೇರ್ ಗಡಿಯನ್ನು ದಾಟಿದೆ. ಇದರಿಂದ ಕೊಳವೆಬಾವಿಗಳನ್ನು ಹೊಸದಾಗಿ ಕೊರೆಸುವುದು ನಿತ್ಯ ಕಂಡುಬರುತ್ತಿದೆ. ಸದ್ಯದಲ್ಲೇ ಮಳೆ ಬಾರದಿದ್ದರೆ ಬೆಳೆಗಳನ್ನು ಉಳಿಸಿಕೊಳ್ಳಲು ಕಷ್ಟಕರವಾಗಲಿದೆ ಎನ್ನುತ್ತಾರೆ ಅನ್ನದಾತರು.

ಈ ಬಾರಿ ಏಪ್ರಿಲ್ ತಿಂಗಳು ಕಳೆಯುತ್ತ ಬಂದರೂ ಮಳೆ ಸುರಿಯುತ್ತಿಲ್ಲ. ತಾಲೂಕಿನಲ್ಲಿ ಬರದ ಛಾಯೆ ಎದುರಾಗಿದ್ದು ದೊಡ್ಡ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆಗಳಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚಿದೆ. ಇದರಿಂದ ತೋಟಗಾರಿಕೆ ಬೆಳೆಗಳು, ಅರೆ ನೀರಾವರಿ ಬೆಳೆಗಳನ್ನು ಕೈಗೊಳ್ಳಲು ರೈತರು ಪರಿತಪಿಸುವಂತಾಗಿದೆ.

ರಾಜೇಶ್, ತೋಟಗಾರಿಕೆ ಇಲಾಖೆ ಸಹಾಯಕ ಅಧಿಕಾರಿ, ಅರಕಲಗೂಡು. (30ಎಚ್ಎಸ್ಎನ್3ಎ)

ಮಳೆ ಇಲ್ಲದೆ ಅಡಿಕೆ, ತೆಂಗು ಸೇರಿದಂತೆ ತೋಟಗಾರಿಕೆ ಬೆಳೆಗಳು ಒಣಗಿ ನೆಲಕಚ್ಚುತ್ತಿವೆ. ವರುಣನ ಮುನಿಸಿನಿಂದ ಬೆಳೆಗಳನ್ನು ಉಳಿಸಿಕೊಳ್ಳಲು ಸಾಧ್ಯವಾಗದೆ ದಿಕ್ಕು ತೋಚದಾಗಿದೆ.

Follow Us:
Download App:
  • android
  • ios