Asianet Suvarna News Asianet Suvarna News

ಬಿರು ಬಿಸಿಲಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ತತ್ತರ : 5 ದಿನ ಬಿಸಿಗಾಳಿ ಮುನ್ನೆಚ್ಚರಿಕೆ,

ಬೇಸಿಗೆಯ ಬಿಸಿಲ ಝಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನತೆ ಅಕ್ಷರಶಃ ಕಂಗೆಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ತಾಪಮಾನ ಗಣನೀಯ ಹೆಚ್ಚಳವಾಗಿದ್ದು, ಈಗಾಗಲೇ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ.

5 days hot wind warning in Bengaluru Rural District    snr
Author
First Published May 1, 2024, 12:54 PM IST

ಕೆ.ಆರ್.ರವಿಕಿರಣ್

 ದೊಡ್ಡಬಳ್ಳಾಪುರ :  ಬೇಸಿಗೆಯ ಬಿಸಿಲ ಝಳಕ್ಕೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜನತೆ ಅಕ್ಷರಶಃ ಕಂಗೆಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ತಾಪಮಾನ ಗಣನೀಯ ಹೆಚ್ಚಳವಾಗಿದ್ದು, ಈಗಾಗಲೇ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ.

ಈ ಬಾರಿ ಹಿಂದಿನ ಹಲವು ವರ್ಷಗಳಿಗೆ ಹೋಲಿಸಿದರೆ ತಾಪಮಾನ ಗಣನೀಯ ಏರಿಕೆ ಕಂಡಿದೆ. ಸಾಮಾನ್ಯವಾಗಿ ಬೇಸಿಗೆ ಅವಧಿಯಲ್ಲಿ ಗರಿಷ್ಠ 35 ರಿಂದ 36 ಡಿಗ್ರಿವರೆಗೆ ಇರುತ್ತಿದ್ದ ತಾಪಮಾನ ಈಗ ಮತ್ತೆರಡು ಡಿಗ್ರಿಗಳಷ್ಟು ಏರಿಕೆ ಕಂಡಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.

ಬಿಸಿಗಾಳಿ-ಹವಾಮಾನ ಇಲಾಖೆ ಮುನ್ಸೂಚನೆ:

ಹವಾಮಾನ ಇಲಾಖೆ ಸದ್ಯ ನೀಡಿರುವ ಮುನ್ಸೂಚನೆಯಂತೆ ಮೇ.5ರವರೆಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ಸೇರಿದಂತೆ ದಕ್ಷಿಣ ಒಳನಾಡು ಮತ್ತು ಉತ್ತರ ಒಳನಾಡಿನ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಬಿಸಿ ಗಾಳಿ ಮತ್ತು ತಾಪಮಾನ ಹೆಚ್ಚಳದ ಮುನ್ಸೂಚನೆ ನೀಡಿದೆ. ಬಿಸಿಗಾಳಿಯ ದಾಳಿಗೆ ಕಂಗೆಟ್ಟಿರುವ ಜನ ಇನ್ನೂ ನಾಲ್ಕೈದು ದಿನ ಇದೇ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಬೇಕಾದ ಅನಿವಾರ್ಯತೆ ಇದೆ.

ತಂಪು ಪಾನೀಯ, ಕಲ್ಲಂಗಡಿಗೆ ಬೇಡಿಕೆ:

ಬಿಸಿಲು, ತಾಪಮಾನ ಏರಿಕೆ, ಬಿಸಿಗಾಳಿಯಿಂದ ಕಂಗೆಟ್ಟಿರುವ ಜನತೆ ದಾಹ ತಣಿಸಿಕೊಳ್ಳಲು ತಂಪು ಪಾನೀಯಗಳ ಮೊರೆ ಹೋಗಿದ್ದಾರೆ. ಮುಖ್ಯವಾಗಿ ಹಣ್ಣಿನ ರಸ, ಐಸ್‌ಕ್ರೀಂ, ಮಜ್ಜಿಗೆ, ತಂಪು ಪಾನೀಯ, ಎಳನೀರು, ಕಲ್ಲಂಗಡಿ ಹಣ್ಣು ಸೇರಿ ಬೇಸಿಗೆ ಸ್ನೇಹಿ ಆಹಾರಗಳಿಗೆ ಬೇಡಿಕೆ ಹೆಚ್ಚಿದೆ. ಬೀದಿ ಬದಿಗಳಲ್ಲಿ, ಸಣ್ಣಪುಟ್ಟ ಅಂಗಡಿಗಳಲ್ಲೂ ಪಾನೀಯ, ಹಣ್ಣು ಕೊಳ್ಳಲು ಜನತೆ ಮುಂದಾಗಿದ್ದಾರೆ. ಎಳನೀರಿಗೂ ಬೇಡಿಕೆ ಹೆಚ್ಚಿದ್ದು, ಬೆಲೆ ಕೂಡ ಗಣನೀಯವಾಗಿ ಹೆಚ್ಚಳವಾಗಿದೆ.

ಈಜುಕೊಳಗಳಲ್ಲಿ ಜನಸಂದಣಿ:

ಬೇಸಿಗೆ ತಾಪ ತಣಿಸಿಕೊಳ್ಳಲು ಜನರು ಈಜುಕೊಳಗಳತ್ತ ಮುಖ ಮಾಡಿದ್ದಾರೆ. ದೊಡ್ಡಬಳ್ಳಾಪುರ ನಗರ ಸುತ್ತಮುತ್ತಲ ಕೆಲ ಈಜುಕೊಳಗಳಲ್ಲಿ ನಿತ್ಯ ನೂರಾರು ಮಕ್ಕಳು, ಯುವಕರು ಈಜಲು ಬರುತ್ತಿದ್ದಾರೆ. ಪ್ರತಿ ಗಂಟೆಗೆ ನಿರ್ದಿಷ್ಟ ಶುಲ್ಕ ನೀಡಿ ಈಜುಕೊಳಗಳತ್ತ ಜನರು ಹೆಜ್ಜೆ ಹಾಕಿದ್ದಾರೆ.

ಕಾದು ಕೆಂಡವಾದ ರಸ್ತೆಗಳು:

ಸಾಮಾನ್ಯವಾಗಿ ಬೆಳಿಗ್ಗೆ 11 ಗಂಟೆ ಬಳಿಕ, ಸಂಜೆ 4 ಗಂಟೆ ನಂತರದ ವರೆಗೆ ರಸ್ತೆಗಳಲ್ಲಿ ಜನ ಸಂದಣಿ ಗಣನೀಯವಾಗಿ ಕಡಿಮೆಯಾಗಿದೆ. ರಸ್ತೆಗಳು ಕಾದ ಕೆಂಡವಾಗಿದ್ದು, ಓಡಾಡುವುದು ದುಸ್ತರವಾಗಿದೆ. ವಾಹನಗಳಲ್ಲೂ ಎಸಿ ಇಲ್ಲದೆ ಸಂಚರಿಸುವುದು ಸವಾಲಿನ ಕೆಲಸವೇ ಆಗಿದೆ. ಇನ್ನು ದ್ವಿಚಕ್ರ ವಾಹನ ಸವಾರರಂತೂ ಕಷ್ಟದ ದಿನಗಳಿಗೆ ಸಾಕ್ಷಿಯಾಗಿದೆ. ಬಸ್ಸುಗಳಲ್ಲಿ ಓಡಾಡುವುದೂ ದುಸ್ತರವಾಗಿದೆ.

ಅಗತ್ಯ ಮುನ್ನೆಚ್ಚರಿಕೆ ವಹಿಸಿ:

ಜನತೆ ಬಿರು ಬಿಸಿಲಿನ ದಿನಗಳನ್ನು ಎದುರಿಸಲು ಅಗತ್ಯ ಸಿದ್ದತೆ ಮಾಡಿಕೊಳ್ಳುವುದು ಅಗತ್ಯವಾಗಿದೆ. ಮುಖ್ಯವಾಗಿ ಮಕ್ಕಳು, ಹಿರಿಯ ನಾಗರಿಕರ ಬಗ್ಗೆ ಕಾಳಜಿ ವಹಿಸುವುದು ಈ ದಿನಗಳಲ್ಲಿ ಅತ್ಯಗತ್ಯ ಎನಿಸಿದೆ.

ಬಿಸಿಲಿನ ಝಳ ಗಣನೀಯವಾಗಿ ಹೆಚ್ಚಳವಾಗಿದೆ. ಕಾಲೇಜಿಗೆ ಹೋಗಿ ಬರುವುದು ದೊಡ್ಡ ಸವಾಲಿನ ಕೆಲಸವೇ ಆಗಿದೆ. ಎಳನೀರು ಸೇವನೆ, ಐಸ್‌ಕ್ರೀಂ ನಿತ್ಯದ ಆಹಾರ ಪದ್ದತಿಯೇ ಆಗಿ ಬಿಟ್ಟಿದೆ.

ಸುಡುತ್ತಿರುವ ಬಿರು ಬಿಸಿಲು

-ಸುಮನ, ವಿದ್ಯಾರ್ಥಿನಿ.

ಬೇಸಿಗೆಯ ತಾಪ ತಣಿಸಿಕೊಳ್ಳಲು ಮಕ್ಕಳೊಂದಿಗೆ ನಿತ್ಯ ಈಜುಕೊಳಕ್ಕೆ ತೆರಳುವುದು ಕಳೆದ 1 ವಾರದಿಂದ ಸಾಮಾನ್ಯವಾಗಿದೆ. ನಿತ್ಯ ಈಜಾಡುವುದರಿಂದ ಒಂದಿಷ್ಟು ಆಹ್ಲಾದಕರ ಎನಿಸುತ್ತದೆ. ಹಿರಿಯರು, ಮಕ್ಕಳ ಬಗ್ಗೆ ಕಾಳಜಿ ವಹಿಸುವುದು ಅಗತ್ಯವಾಗಿದೆ.

- ಶಾಂತಕುಮಾರ್, ಅಧ್ಯಾಪಕ.

ಬಿಸಿಗಾಳಿ ಹೆಚ್ಚಳ, ಎಚ್ಚರ ಅಗತ್ಯ

ಬಿಸಿಗಾಳಿಯ ಪರಿಣಾಮ ಜನತೆಯಲ್ಲಿ ಆತಂಕ ಹೆಚ್ಚಿಸಿದೆ. ಹವಾಮಾನ ಇಲಾಖೆ ರಾಜ್ಯದ ಜನತೆಗೆ ಬಿಸಿಗಾಳಿ ಎದುರಿಸಲು ಸಜ್ಜಾಗುವಂತೆ ತಿಳಿಸಿದ್ದು, ಕೆಲ ನಿರ್ಧಿಷ್ಟ ಅಂಶಗಳನ್ನು ಪಾಲಿಸುವಂತೆ ಹೇಳಿದೆ. ಜನರಲ್ಲಿ ಈ ಅವಧಿಯಲ್ಲಿ ಸಾಮಾನ್ಯವಾಗಿ ಡೀಹೈಡ್ರೇಷನ್‌ ಸಮಸ್ಯೆ ಕಾಡುತ್ತದೆ. ಹೀಗಾಗಿ ನಿಯಮಿತವಾಗಿ ನೀರು ಸೇವಿಸುವುದು ಅಗತ್ಯ. ಬೆಳಿಗ್ಗೆ ಮತ್ತು ಸಂಜೆ ಮಾತ್ರ ಮನೆಯಿಂದ ಹೊರ ಬರುವುದು, ರಸ್ತೆಗಳಲ್ಲಿ ಓಡಾಡುವುದು ಸೂಕ್ತವಾಗಿದ್ದು, ಬಿಸಿಲಿನ ತಾಪ ಹೆಚ್ಚಿರುವ ವೇಳೆ ಮನೆಯಿಂದ ಹೊರಬರದೆ ಮನೆಗಳಲ್ಲೇ ಉಳಿದುಕೊಳ್ಳುವುದು ಅಗತ್ಯ ಎಂಬ ಸಲಹೆ ನೀಡಿದೆ. ಮುಖ್ಯವಾಗಿ ಹಿರಿಯ ನಾಗರಿಕಕರು, ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಅವರಿಗೆ ಮಾರ್ಗದರ್ಶನ ಪಾಲನೆಗೆ ಕ್ರಮ ವಹಿಸಲು ಸೂಚಿಸಿದೆ.

Follow Us:
Download App:
  • android
  • ios