ಸೋಷಿಯಲ್ ಮೀಡಿಯಾ ಬಿಡುತ್ತಿರುವುದ್ಯಾಕೆ? ಕಾರಣ ಬಹಿರಂಗಪಡಿಸಿದ ಮೋದಿ
ಸಾಮಾಜಿಕ ಮಾಧ್ಯಮ ಖಾತೆಗಳಿಂದ ದೂರ ಉಳಿಯುವ ಚಿಂತನೆಯಲ್ಲಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದು, ಮಂಗಳವಾರ ಟ್ವಿಟರ್‌ನಲ್ಲಿ ಸಂಚಲನ ಸೃಷ್ಟಿಸಿದೆ. ಇದು ಭಾರೀ ಚರ್ಚೆಗೂ ಗ್ರಾಸವಾಗಿತ್ತು. ಅಷ್ಟೇ ಅಲ್ಲದೇ ಮೋದಿ ಅವರ ನಡೆ ತೀವ್ರ ಕುತೂಹಲ ಮೂಡಿಸಿತ್ತು. ಆದ್ರೆ, ಇದೀಗ ಅವೆಲ್ಲವೂಗಳಿಗೆ ಸ್ವತಃ ಮೋದಿ ಅವರೇ ತೆರೆ ಎಳೆದಿದ್ದಾರೆ.
ನವದೆಹಲಿ, (ಮಾ.03): ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯವಾಗಿರುವ ರಾಜಕಾರಣಿಗಳಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಪ್ರಮುಖರು.
ಅವರು ಒಂದು ಟ್ವೀಟ್, ಸ್ಟೇಟಸ್, ವಿಡಿಯೊ ಹಾಕಿದರೆ ಸಾಕು ಕೆಲವೇ ನಿಮಿಷಗಳಲ್ಲಿ ಸಾಕಷ್ಟು ವೈರಲ್ ಆಗುತ್ತದೆ. ದೇಶ-ವಿದೇಶಗಳಲ್ಲಿ ಅವರಿಗೆ ಕೋಟ್ಯಂತರ ಅನುಯಾಯಿಗಳು ಇದ್ದಾರೆ. ಹೀಗಿರುವಾಗ ದಿಢೀರ್ ಆಗಿ ಸೋಮವಾರ ರಾತ್ರಿ ಒಂದು ಬಾಂಬ್ ಹಾಕಿದ ರೀತಿಯ ವಿಷಯವನ್ನು ಸೋಷಿಯಲ್ ಮೀಡಿಯಾದಲ್ಲಿಯೇ ಹಾಕಿದ್ದರು.
ಅದು ನಾನು ಭಾನುವಾರದಿಂದ ಸೋಷಿಯಲ್ ಮೀಡಿಯಾದಿಂದ ಹೊರಬರುತ್ತಿದ್ದೇನೆ ಎಂದು ಟ್ವೀಟ್ ಮಾಡಿ ಎಲ್ಲರ ಹುಬ್ಬೇರುವಂತೆ ಮಾಡಿದ್ದರು.ಇದು ಎಲ್ಲರಲ್ಲೂ ಭಾರೀ ಕೌತುಕ ಮೂಡಿಸಿತ್ತು. ಅಷ್ಟೇ ಅಲ್ಲದೇ ಮೋದಿ ಸಮಾಜಿಕ ಜಾಲತಾಣದಿಂದ ದೂರ ಉಳಿಯುತ್ತಿರುವುದ್ಯಾಕೆ? ಮೋದಿ ಈ ರೀತಿಯ ನಿರ್ಧಾರ ಕೈಗೊಂಡಿದ್ಯಾಕೆ?
ಸೋಮವಾರ ರಾತ್ರಿ ಮೋದಿ ಶಾಕ್: ಈ ಸಂಡೆ ದಿಟ್ಟ ತೀರ್ಮಾನಕ್ಕೆ ಮುಂದಾದ ಪ್ರಧಾನಿ!
ಅಂತೆಲ್ಲಾ ಪ್ರಶ್ನೆಗಳು ಹುಳಗಳ ರೀತಿಯಲ್ಲಿ ಎಲ್ಲರ ತಲೆಯಲ್ಲಿ ಸುಳಿದಾಡುತ್ತಿದ್ದವು. ಇದೀಗ ಸ್ವತಃ ಮೋದಿಯೇ ಊಹಾಪೋಹಗಳಿಗೆ ತೆರೆ ಎಳೆದಿದ್ದು, ಟ್ವಿಟರ್‌ನಲ್ಲಿ ಕಾರಣ ಬಹಿರಂಗಪಡಿಸಿದ್ದಾರೆ
ಊಹಾಪೋಹಗಳಿಗೆ ತೆರೆ ಎಳೆದ ಮೋದಿ..!
ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಜಾಲತಾಣ ತೊರೆಯುತ್ತಿಲ್ಲ. ಬದಲಿಗೆ ಮಹಿಳಾ ದಿನದಂದು (ಮಾರ್ಚ್ 08) ಸಾಧಕ ಸ್ತ್ರೀಗೆ ತಮ್ಮ ಸೋಷಿಯಲ್ ಮೀಡಿಯಾ ಅಕೌಂಟ್ಸ್ ಉಪಯೋಗಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮೋದಿ, ನನ್ನ ಸಾಮಾಜಿಕ ಜಾಲತಾಣದ ಖಾತೆಗಳನ್ನು ಬಿಟ್ಟುಕೊಡ್ತಿದ್ದೇನೆ. ಒಂದು ದಿನದ ಮಟ್ಟಿಗೆ ಸಮಾಜದ ಒಳಿತಿಗಾಗಿ ಶ್ರಮಿಸಿದ ಮಹಿಳೆಯರಿಗೆ, ಸ್ಫೂರ್ತಿದಾಯಕವಾಗಿ ಬದುಕಿದ ಮಹಿಳೆಯರಿಗಾಗಿ ಬಿಟ್ಟುಕೊಡ್ತಿದ್ದೇನೆ. ಆ ರೀತಿಯ ಸಾಧಕ ಮಹಿಳೆಯರ ಪೈಕಿ ನೀವು ಒಬ್ಬರಾ..? ಅಥವಾ ಸ್ಫೂರ್ತಿದಾಯಕ ಮಹಿಳೆಯರನ್ನು ನೀವು ಬಲ್ಲಿರಾ..? ಅವರ ಕಥೆ, ಸಾಧನೆಯನ್ನು #SheInspiresUs ಎಂಬ ಹ್ಯಾಷ್ ಟ್ಯಾಗ್ ಅಡಿ ನನಗೆ ಶೇರ್ ಮಾಡಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.
ಈ ಮೂಲಕ ಮೋದಿ ಮಾಡಿರುವ ಟ್ವೀಟ್ ಎಲ್ಲವುಗಳಿಗೆ ಉತ್ತರ ಸಿಕ್ಕಿದ್ದು, ಮಹಿಳಾ ಸಾಧಕಿಯರ ಕಥೆಗಳನ್ನು ಮೋದಿ ಆಲಿಸಲಿದ್ದು, ಒಬ್ಬ ಮಹಿಳೆಗೆ ಮೋದಿ ಫೇಸ್‌ಬುಕ್, ಟ್ವಿಟ್ಟರ್, ಇನ್‌ಸ್ಟಾ ಗ್ರಾಂ, ಯೂಟ್ಯೂಬ್ ಖಾತೆ ಬಳಸುವ ಅಧಿಕಾರ, ಅವಕಾಶ ಸಿಗಲಿದೆ.