Asianet Suvarna News Asianet Suvarna News

ದಕ್ಷಿಣ ಭಾರತದ ಜಲಾಶಯಗಳಲ್ಲಿ 17% ಮಾತ್ರವೇ ನೀರು ಸಂಗ್ರಹ..!

ದಕ್ಷಿಣ ಭಾರತದ ಒಟ್ಟು ಜಲಾಶಯಗಳ ನೀರಿನ ಸಂಗ್ರಹ ಸಾಮರ್ಥ್ಯಕ್ಕೆ ಹೋಲಿಸಿದರೆ ಸದ್ಯ ಶೇ.17ರಷ್ಟು ಮಾತ್ರ ನೀರಿನ ಸಂಗ್ರಹವಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ 42 ಜಲಾಶಯಗಳನ್ನು ಇಲ್ಲಿ ಪರಿಗಣಿಸಲಾಗಿದೆ.

Only 17 Percent of Water Storage in South India's Dam's grg
Author
First Published Apr 27, 2024, 6:16 AM IST

ನವದೆಹಲಿ(ಏ.27):  ಕರ್ನಾಟಕದಲ್ಲಿ ಬರಗಾಲ ವಿಕೋಪಕ್ಕೆ ಹೋಗಿರುವಾಗಲೇ ಇಡೀ ದಕ್ಷಿಣ ಭಾರತದ ಜಲಾಶಯಗಳಲ್ಲಿ ನೀರಿನ ಸಂಗ್ರಹ ಅಪಾಯಕಾರಿ ಮಟ್ಟಕ್ಕೆ ಕುಸಿದಿರುವ ವರದಿಯೊಂದು ಬಿಡುಗಡೆಯಾಗಿದೆ.

ಕೇಂದ್ರ ಜಲ ಆಯೋಗ ಈ ವರದಿ ಬಿಡುಗಡೆ ಮಾಡಿದ್ದು, ದಕ್ಷಿಣ ಭಾರತದ ಒಟ್ಟು ಜಲಾಶಯಗಳ ನೀರಿನ ಸಂಗ್ರಹ ಸಾಮರ್ಥ್ಯಕ್ಕೆ ಹೋಲಿಸಿದರೆ ಸದ್ಯ ಶೇ.17ರಷ್ಟು ಮಾತ್ರ ನೀರಿನ ಸಂಗ್ರಹವಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಕೇರಳ ಹಾಗೂ ತಮಿಳುನಾಡಿನ 42 ಜಲಾಶಯಗಳನ್ನು ಇಲ್ಲಿ ಪರಿಗಣಿಸಲಾಗಿದೆ.

ಆಲಮಟ್ಟಿ ಡ್ಯಾಂ: ಜುಲೈನಲ್ಲೂ ಮಳೆಯಾಗದಿದ್ರೂ ನೀರಿನ ಸಮಸ್ಯೆ ಇಲ್ಲ..!

ದಕ್ಷಿಣ ಭಾರತದ ಈ 42 ಡ್ಯಾಮ್‌ಗಳಲ್ಲಿ ಒಟ್ಟು 53.334 ಬಿಲಿಯನ್‌ ಕ್ಯೂಬಿಕ್‌ ಮೀಟರ್‌ (ಬಿಸಿಎಂ) ನೀರು ಸಂಗ್ರಹಿಸಬಹುದಾಗಿದೆ. ಆದರೆ ಸದ್ಯ ಒಟ್ಟು 8.865 ಬಿಸಿಎಂ ಮಾತ್ರ ನೀರಿನ ಸಂಗ್ರಹವಿದೆ. ಇದು ಒಟ್ಟು ಸಾಮರ್ಥ್ಯದ ಶೇ.17ರಷ್ಟಾಗುತ್ತದೆ. ಕಳೆದ ವರ್ಷ ಇದೇ ಸಮಯದಲ್ಲಿ ಶೇ.29ರಷ್ಟು ನೀರಿತ್ತು. ಕಳೆದ ಹತ್ತು ವರ್ಷಗಳ ಸರಾಸರಿ ಪರಿಗಣಿಸಿದರೆ ಈ ಸಮಯದಲ್ಲಿ ಶೇ.23ರಷ್ಟು ನೀರಿರುತ್ತಿತ್ತು. ಹೀಗಾಗಿ ಈ ವರ್ಷದ ನೀರಿನ ಸಂಗ್ರಹ ಐತಿಹಾಸಿಕ ಕನಿಷ್ಠ ಎಂದು ಹೇಳಲಾಗಿದೆ. ಜಲಾಶಯಗಳಲ್ಲಿ ನೀರಿನ ಸಂಗ್ರಹ ಕುಸಿತದಿಂದ ನೀರಾವರಿ, ಕುಡಿಯುವ ನೀರು ಪೂರೈಕೆ, ಜಲವಿದ್ಯುತ್‌ ಉತ್ಪಾದನೆಗೆ ಸಮಸ್ಯೆಯಾಗಲಿದೆ.

ದೇಶದ ಬೇರೆ ಭಾಗಗಳಲ್ಲಿ ಹೇಗಿದೆ?:

ದಕ್ಷಿಣಕ್ಕೆ ಹೋಲಿಸಿದರೆ ಪೂರ್ವ ಭಾಗದ ಒಡಿಶಾ, ಪಶ್ಚಿಮ ಬಂಗಾಳ, ಅಸ್ಸಾಂನಂತಹ ರಾಜ್ಯಗಳಲ್ಲಿ ನೀರಿನ ಸಂಗ್ರಹ ಕಳೆದ 10 ವರ್ಷಗಳ ಸರಾಸರಿಗಿಂತ ಸುಧಾರಣೆಯಾಗಿದ್ದು, ಜಲಾಶಯಗಳಲ್ಲಿ ಶೇ.34ರಷ್ಟು ನೀರಿದೆ. ಆದರೆ ಗುಜರಾತ್‌ ಹಾಗೂ ಮಹಾರಾಷ್ಟ್ರ ರಾಜ್ಯಗಳು ಬರುವ ಪಶ್ಚಿಮ ವಲಯದ ಡ್ಯಾಮ್‌ಗಳಲ್ಲಿ ಶೇ.31.7ರಷ್ಟು ನೀರಿದೆ. ಇದು ಕಳೆದ 10 ವರ್ಷದ ಸರಾಸರಿಗಿಂತ ಕೊಂಚ ಕಡಿಮೆ. ಹಾಗೆಯೇ ಉತ್ತರ ಹಾಗೂ ಮಧ್ಯ ವಲಯದ ರಾಜ್ಯಗಳ ಡ್ಯಾಮ್‌ಗಳಲ್ಲೂ ನೀರಿನ ಸಂಗ್ರಹ ಕುಸಿಯುತ್ತಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಬ್ರಹ್ಮಪುತ್ರಾ, ನರ್ಮದಾ ಹಾಗೂ ತಾಪಿ ನದಿಯ ಡ್ಯಾಮ್‌ಗಳಲ್ಲಿ ಸಾಮಾನ್ಯಕ್ಕಿಂತ ಹೆಚ್ಚು ನೀರಿನ ಸಂಗ್ರಹವಿದ್ದರೆ, ಕಾವೇರಿ ಹಾಗೂ ಪೂರ್ವಕ್ಕೆ ಹರಿಯುವ ಮಹಾನದಿ ಮತ್ತು ಪೆನ್ನಾರ್‌ನ ಡ್ಯಾಮ್‌ಗಳಲ್ಲಿ ಅತ್ಯಂತ ಕಡಿಮೆ ನೀರಿದೆ.

Follow Us:
Download App:
  • android
  • ios