ಭಾರತಕ್ಕೆ 4 ಸ್ಟಾರ್ ಚೀಫ್ ಆಫ್ ಡಿಫೆನ್ಸ್ ಸ್ಟಾಫ್: ಮಿಲಿಟರಿ ಸಮನ್ವಯ ಇನ್ನು ಸುಲಭ!
ಭಾರತದ ಮೂರೂ ರಕ್ಷಣಾ ಪಡೆಗಳಲ್ಲಿ ಸಮನ್ವಯ| ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಹುದ್ದೆ ಅಸ್ತಿತ್ವಕ್ಕೆ| ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಹುದ್ದೆ ಸೃಷ್ಟಿಗೆ ಕೇಂದ್ರ ಸಚಿವ ಸಂಪುಟದ ಭದ್ರತಾ ಸಮಿತಿ ಅಸ್ತು| ನೂತನ ರಕ್ಷಣಾ ವ್ಯವಹಾರ ಇಲಾಖೆ ಅಸ್ತಿತ್ವಕ್ಕೆ| ಕೇಂದ್ರ ಸರ್ಕಾರಕ್ಕೆ ಮಿಲಿಟರಿ ಸಲಹೆ ನೀಡುವ ಸಿಡಿಎಸ್| ಸಿಡಿಎಸ್’ಗೆ ಮೂರೂ ಪಡೆಗಳ ಮುಖ್ಯಸ್ಥರು ಪಡೆಯುವ ವೇತನ|
ನವದೆಹಲಿ(ಡಿ.24): ಭಾರತದ ಮೂರೂ ರಕ್ಷಣಾ ಪಡೆಗಳ ಸಮನ್ವಯಕ್ಕಾಗಿ ಹೊಸ ಹುದ್ದೆ ಸೃಷ್ಟಿಸಲು ಕೇಂದ್ರ ಸಚಿವ ಸಂಪುಟದ ಭದ್ರತಾ ಸಮಿತಿ ಅಸ್ತು ಎಂದಿದೆ.
ಈ ಮೂಲಕ ಮೂರು ರಕ್ಷಣಾ ಪಡೆಗಳ ಸಮನ್ವಯ ಅಧಿಕಾರಿಯಾಗಿ ನಾಲ್ಕು ಸ್ಟಾರ್ ರ್ಯಾಂಕ್‌ನ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಹುದ್ದೆ ಅಸ್ತಿತ್ವಕ್ಕೆ ಬಂದಿದೆ.
ಭೂಸೇನೆ, ವಾಯುಸೇನೆ ಹಾಗೂ ನೌಕಾಸೇನೆಯ ಮುಖ್ಯಸ್ಥರ ಮೇಲೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಹುದ್ದೆ ಇರಲಿದ್ದು, ಮೂರು ಪಡೆಗಳಲ್ಲಿ ಸಮನ್ವಯ ಸೃಷ್ಟಿಯಲ್ಲದೇ ಕೇಂದ್ರ ಸರ್ಕಾರಕ್ಕೆ ಮಿಲಿಟರಿ ಸಲಹೆ ಕೂಡ ನೀಡುವ ಮಹತ್ವದ ಹುದ್ದೆ ಇದಾಗಿದೆ.
ಹೊಸದಾಗಿ ರಕ್ಷಣಾ ವ್ಯವಹಾರ ಇಲಾಖೆಯನ್ನು ಸೃಷ್ಟಿ ಮಾಡಲಾಗಿದ್ದು, ಚೀಫ್ ಆಫ್ ಡಿಫೆನ್ಸ್(CDS) ಇದರ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಲಿದ್ದಾರೆ.
ಭೂಸೇನೆ, ವಾಯುಸೇನೆ ಅಥವಾ ನೌಕಾಸೇನೆಯಲ್ಲಿ ಮುಖ್ಯಸ್ಥರಾಗಿರುವವರು ಸಿಡಿಎಸ್ ಮುಖ್ಯಸ್ಥರಾಗಿಯೂ ನೇಮಕಗೊಳ್ಳಲಿದ್ದು, ಮೂರೂ ಪಡೆಗಳ ಮುಖ್ಯಸ್ಥರು ಪಡೆಯುವ ವೇತನವನ್ನೇ ಪಡೆಯಲಿದ್ದಾರೆ.
1999ರ ಕಾರ್ಗಿಲ್ ಯುದ್ಧದ ಬಳಿಕ ಮೂರೂ ಪಡೆಗಳಲ್ಲಿ ಸಮನ್ವಯ ತರುವ ಉದ್ದೇಶದಿಂದ ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಹುದ್ದೆ ಸೃಷ್ಟಿಗೆ ಒತ್ತಾಯ ಕೆಳಿ ಬಂದಿತ್ತು.
ಮೂರು ಪಡೆಗೆ ಓರ್ವ ಮುಖ್ಯಸ್ಥ: ಮೋದಿ ಘೋಷಣೆ, ರಾಜೀವ್ ಆಲೋಚನೆ!
ಕಳೆದ ಆ.15ರ ಸ್ವಾತಂತ್ರ್ಯ ದಿನಾಚರಣೆಯ ತಮ್ಮ ಭಾಷಣದಲ್ಲಿ, ಪ್ರಧಾನಿ ಮೋದಿ ಈ ಉನ್ನತ ಹುದ್ದೆ ಸೃಷ್ಟಿಸುವ ಕುರಿತು ಮಾತನಾಡಿದ್ದನ್ನು ಇಲ್ಲಿ ಸ್ಮರಿಸಬಹುದು.
ಇನ್ನು ಸಿಡಿಎಸ್ ಸ್ಥಾಪನೆಗೆ ಕೇಂದ್ರ ಸರ್ಕಾರಕ್ಕೆ ಧನ್ಯವಾದ ಸಲ್ಲಿಸಿರುವ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್, ಇದು ಭಾರತದ ರಕ್ಷಣಾ ಪಡೆಗಳ ಹುಮ್ಮಸ್ಸನ್ನು ದ್ವಿಗುಣಗೊಳಿಸಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.