ಬೋಲ್ಟ್‌ಗಿಂತ ಸ್ಪೀಡ್ ಈ ತುಳುನಾಡ ಕಂಬಳವೀರ: ವೇಗಕ್ಕೆ ಸಾಟಿಯೇ ಇಲ್ಲ!
ದಕ್ಷಿಣ ಕನ್ನಡದ ಗ್ರಾಮೀಣ ಕ್ರೀಡೆ ಕಂಬಳದಲ್ಲಿ, ಕಂಬಳವೀರನೊಬ್ಬ ಬೋಲ್ಟ್‌ಗಿಂತ ಸ್ಪೀಡಾಗಿ ಓಡಿ ಎಲ್ಲರನ್ನೂ ಅಚ್ಚರಿಗೀಡು ಮಾಡಿದ್ದಾರೆ. ಅಂದಹಾಗೇ ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತಹ ಸಾಧನೆ ಮಾಡಿದ 'ತುಳುನಾಡ ಉಸೇನ್ ಬೋಲ್ಟ್' ಬೇರಾರೂ ಅಲ್ಲ, ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆಯ ಶ್ರೀನಿವಾಸಗೌಡ. 13.62 ಸೆಕೆಂಡಲ್ಲಿ 142.5 ಮೀ. ದೂರಕ್ಕೆ ಓಡಿದ ಅವರು, ವಿಶ್ವಖ್ಯಾತ ಉಸೇನ್ ಬೋಲ್ಟ್ ದಾಖಲೆಗಿಂತ ವೇಗವಾಗಿ ಓಡಿ ಎಲ್ಲರ ಗಮನ ಸೆಳೆದಿದ್ದಾರೆ. ಈ ಅಪರೂಪದ ಪ್ರತಿಭೆಯ ಕೆಲ ಫೋಟೋಗಳು ಇಲ್ಲಿವೆ ನೋಡಿ
ದಕ್ಷಿಣ ಕನ್ನಡ ಜಿಲ್ಲೆ ಮೂಡುಬಿದಿರೆಯ ಮೀಯಾರಿನ ಯುವಕ ಶ್ರೀನಿವಾಸ ಗೌಡ (28) ಅದಕ್ಕಿಂತಲೂ ವೇಗವಾಗಿ ಓಡಿ ಅಚ್ಚರಿ ಮೂಡಿಸಿದ್ದಾರೆ! ಅದೂ ಕೆಸರಿನಿಂದ ಕೂಡಿದ ಕಂಬಳದ ಗದ್ದೆಯಲ್ಲಿ ಕೋಣಗಳ ಜೊತೆಗೆ!
ಫೆ.1ರಂದು ಮಂಗಳೂರು ಸಮೀಪದ ಐಕಳ ಎಂಬಲ್ಲಿ ನಡೆದ ತುಳುನಾಡಿನ ಸಾಂಪ್ರದಾಯಿಕ ಕಂಬಳ ಕ್ರೀಡೆಯಲ್ಲಿ ಶ್ರೀನಿವಾಸ ಗೌಡ ಅವರು 142.50 ಮೀಟರ್ ಕರೆ(ಕಂಬಳದ ಕೋಣಗಳ ಟ್ರ್ಯಾಕ್)ಯನ್ನು ಕೇವಲ 13.62 ಸೆಕೆಂಡಲ್ಲಿ ಕ್ರಮಿಸಿದ್ದಾರೆ.
ಇದು ಕಂಬಳ ಕ್ರೀಡೆಯಲ್ಲಿ ಇದುವರೆಗಿನ ಅತ್ಯಂತ ವೇಗದ ದಾಖಲೆಯಾಗಿದ್ದು ಎಲ್ಲರೂ ಮೂಗಿನ ಮೇಲೆ ಬೆರಳಿಡುವಂತೆ ಮಾಡಿದೆ.
ಇದೀಗ ಶ್ರೀನಿವಾಸ ಗೌಡ ಅವರನ್ನು ಉಸೇನ್ ಬೋಲ್ಟ್ ಜೊತೆ ಹೋಲಿಸಲಾಗುತ್ತಿದೆ.
ಶ್ರೀನಿವಾಸ ಗೌಡ ಗುರಿ ತಲುಪಲು ತೆಗೆದುಕೊಂಡ ಸಮಯವನ್ನು 100 ಮೀ. ಓಟದೊಂದಿಗೆ ತಾಳೆ ಹಾಕಿ ನೋಡಿದರೆ ಅದು 9.55 ಸೆಕೆಂಡ್ ಆಗುತ್ತದೆ.
ಇಲ್ಲಾ ಬೋಲ್ಟ್ ವಿಶ್ವದಾಖಲೆ ಗಣನೆಗೆ ತೆಗೆದುಕೊಂಡಲ್ಲಿ ಅವರಿಗೆ 142.50 ಮೀ. ಕ್ರಮಿಸುವುದಕ್ಕೆ ಬೇಕಾಗಬಲ್ಲ ಸಮಯ 13.65 ಸೆಕೆಂಡ್. ಹೇಗೆ ತಾಳೆ ಹಾಕಿದರೂ ವಿಶ್ವನಾಥ್ ಗೌಡ ಅವರು ಉಸೇನ್ ಬೋಲ್ಟ್‌ಗಿಂತ 0.03 ಸೆಕೆಂಡ್‌ಗಳಷ್ಟು ಮುಂದಿದ್ದಾರೆ.
ಗಟ್ಟಿಮುಟ್ಟಾದ ವ್ಯವಸ್ಥಿತ ಸಿಂಥೆಟಿಕ್ ಟ್ರ್ಯಾಕ್ ಮೇಲೆ ಓಡುವ ಉಸೇನ್ ಬೋಲ್ಟ್‌ಗೂ, ಕಾಲು ಹೂತು ಹೋಗುವ ಕಂಬಳದ ಕೆಸರುಗದ್ದೆಯಲ್ಲಿ ಓಡುವ ಶ್ರೀನಿವಾಸ ಗೌಡರ ಸಾಧನೆಗಳಿಗೆ ಹೋಲಿಕೆ ಸಾಧ್ಯವಿಲ್ಲ.
ಕಂಬಳದ ಕರೆಯಲ್ಲಿ ಓಡುವುದು ಸಿಂಥೆಟಿಕ್ ಟ್ರ್ಯಾಕ್‌ನಲ್ಲಿ ಓಡುವುದಕ್ಕಿಂತಲೂ ಕಷ್ಟಕರವಾದುದು.
ಕರೆಯಲ್ಲಿ ಮೊಣಕಾಲ ಗಂಟಿನ ವರೆಗೆ ಕೆಸರು ತುಂಬಿರುತ್ತದೆ, ಅದೂ ಬರಿಗಾಲಿನಲ್ಲಿ ಓಡಬೇಕಾಗುತ್ತದೆ. ಒಂದು ಕೈಯಲ್ಲಿ ಮುಂದೆ ಓಡುವ ಕೋಣಗಳಿಗೆ ಕಟ್ಟಿದ ಹಗ್ಗ ಇದ್ದರೆ, ಇನ್ನೊಂದು ಕೈಯಲ್ಲಿ ಬಾರ್ಕೋಲು(ಬೆತ್ತ) ಇರುತ್ತದೆ.
ಆದರೂ ಇಬ್ಬರ ಸಾಧನೆಯನ್ನು ತುಲನೆ ಮಾಡಿದರೆ ಪ್ರತಿಕೂಲ ಪರಿಸ್ಥಿತಿಯಲ್ಲಿ ಓಡುವ ಶ್ರೀನಿವಾಸ ಗೌಡ ಅವರೇ ಬೋಲ್ಟಿಗಿಂತ ಕೂದಲೆಳೆಯ ಅಂತರದಲ್ಲಿ ಮುಂದಿದ್ದಾರೆ ಎನ್ನುವುದು ವಾಸ್ತವ.
ಅಷ್ಟಕ್ಕೂ ಕಂಬಳಕರೆಯ ಉಸೇನ್ ಬೋಲ್ಟ್ ಶ್ರೀನಿವಾಸ ಗೌಡ ಅವರು ಯಾವುದೇ ಅಕಾಡೆಮಿಕ್ ತರಬೇತಿ ಪಡೆದವರಲ್ಲ. ಮೂಲತಃ ಅಥ್ಲೀಟ್ ಕೂಡ ಅಲ್ಲ. ಒಂದು ದಿನವೂ ಜಿಮ್‌ಗೆ ಹೋದವರಲ್ಲ. ಪೌಷ್ಟಿಕ ಆಹಾರ ಸೇವನೆ, ಡಯಟ್‌ಗಳನ್ನು ಅನುಸರಿಸಿದವರೂ ಅಲ್ಲ. ಆದರೆ ಅವರ ಸಿಕ್ಸ್ ಪ್ಯಾಕ್ ಹುರಿದೇಹ ಮಾತ್ರ ಯಾವ ಅಥ್ಲೀಟ್‌ಗೂ ಕಮ್ಮಿ ಇಲ್ಲ.
. ಅವರೆಷ್ಟುಮುಗ್ಧರೆಂದರೆ ತಾನು ಕಂಬಳ ಕ್ರೀಡೆಯ ಉಸೇನ್ ಬೋಲ್ಟ್ ಆಗಿದ್ದೇನೆ ಎಂಬ ಪರಿವೆ ಕೂಡ ಅವರಿಗಿಲ್ಲ. ಇನ್ನು ಅದನ್ನು ಪ್ರಚಾರ ಮಾಡುವುದಾಗಲಿ, ಅದರಿಂದ ಪ್ರಚಾರ ಪಡೆಯವುದಾಗಿ ಅವರಿಗೆ ಗೊತ್ತೇ ಇಲ್ಲ.
ಉಸೇನ್ ಬೋಲ್ಟ್ ವಿಶ್ವವಿಖ್ಯಾತಿಯ ಜೊತೆಗೆ ಇಂದು ನೂರಾರು ಕೋಟಿ ರು.ಗಳನ್ನು ಸಂಪಾದಿಸಿದ್ದರೆ, ಶ್ರೀನಿವಾಸ ಗೌಡ ಮಾತ್ರ ಕಂಬಳದ ಸೀಸನ್ ಮುಗಿಯತ್ತಲೇ, ಪ್ರಚಾರವೇ ಇಲ್ಲದೇ ಹೊಟ್ಟೆಪಾಡಿಗೆ ಕಟ್ಟಡಗಳ ಕೆಲಸಕ್ಕೆ ಹೋಗುತ್ತಾರೆ.
ಮೂಡುಬಿದಿರೆಯ ಮಿಯಾರು ಗ್ರಾಮದ ಅಶ್ವತ್ಥಪುರ ಎಂಬಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ಶ್ರೀನಿವಾಸ ಗೌಡರು 10ನೇ ತರಗತಿಯವರೆಗೆ ಶಿಕ್ಷಣ ಪಡೆದಿದ್ದಾರೆ. 18ನೇ ವರ್ಷಕ್ಕೇ ಕಂಬಳದ ಗದ್ದೆಗೆ ಧುಮುಕಿದ ಅವರು ಕಳೆದ 10 ವರ್ಷಗಳಿಂದ ನೂರಾರು ಪದಕಗಳನ್ನು ಕೋಣಗಳ ಮಾಲಕರನ್ನು ಗೆಲ್ಲಿಸಿ ಕೊಟ್ಟಿದ್ದಾರೆ.
ದಕ್ಷಿಣ ಕನ್ನಡದ ಈ ಅಪರೂಪದ ಪ್ರತಿಭೆ ಶ್ರೀನಿವಾಸಗೌಡರಿಗೆ 9980218807 ನಂಬರ್‌ಗೆ ಕರೆ ಮಾಡಿ ಶುಭ ಕೋರಿ