entertainment
By Suvarna Web Desk | 02:29 PM March 11, 2017
ರೂಪಸಿ ರಕ್ಕಸಿ ರಾಂಧವ ಪ್ರೇಯಸಿ

Highlights

ಚಿತ್ರ: ವೀರ ರಣಚಂಡಿ

ನಿರ್ದೇಶಕ: ಆನಂದ್ ಪಿ. ರಾಜು

ನಿರ್ಮಾಪಕ: ವಿ.ಕುಪ್ಪುಸ್ವಾಮಿ

ಸಂಗೀತ ನಿರ್ದೇಶಕ: ಎಸ್.ಪಿ. ವೆಂಕಟೇಶ್

ತಾರಾಗಣ: ರಾಗಿಣಿ ದ್ವಿವೇದಿ, ರಮೇಶ್ ಭಟ್, ಶರತ್ ಲೋಹಿತಾಶ್ವ,ಪದ್ಮಜಾ ರಾವ್, ಭಜರಂಗಿ ಲೋಕಿ, ಶೋಬ್'ರಾಜ್

-ರಾಜೇಶ್ ಶೆಟ್ಟಿ

ಧಗಧಗ ಉರಿಯೋ ಜ್ವಾಲಾಮುಖಿ ಬಾಯಿಗೆ ಮುಚ್ಚಳ ಹಾಕೋಕಾಗಲ್ಲ. ಹಾಗೆ ಈ ಪಿಚ್ಚರಲ್ಲಿ ರಾಗಿಣಿನ ಮುಟ್ಟೋಕಾಗಲ್ಲ. ಚಂಡಿ ಚಾಮುಂಡಿಯಾಗಿ ವೀರ ರಣಚಂಡಿಯಾಗಿ ಹೆಂಗೆ ತಟ್ಟುತ್ತಾರೆ ಅಂದ್ರೆ ವಿಲನ್‌ ಎಲ್ಲಿ ಹೋಗಿ ಬಿದ್ದ ಅಂತ ಕ್ಯಾಮೆರಾಮನ್‌ಗೇ ಕನ್ಫ್ಯೂಸ್‌ ಆಗೋ ಮಟ್ಟಕ್ಕೆ ಹೊಡೆಯುತ್ತಾರೆ. ಹಾಗಾಗಿ ಛಾಯಾಗ್ರಾಹಕ ಆರಡಿ ರಾಗಿಣಿನ ತೋರಿಸುವುದಕ್ಕೆ ಹತ್ತಡಿ ಮೇಲೆ ಹೋಗುತ್ತಾರೆ.

ಮೇಲಿಂದ ಕ್ಯಾಮೆರಾ ಇಟ್ಟು ರಾಗಿಣಿಯ ರೌದ್ರಾವತಾರವನ್ನು ಬಗೆಬಗೆಯಲ್ಲಿ ಚಿತ್ರೀಕರಿಸಿ ಪ್ರೇಕ್ಷಕರಿಗೆ ಆರಡಿ ರೋಮಾಂಚನವನ್ನು ದಯಪಾಲಿಸುತ್ತಾರೆ. ಒಮ್ಮೊಮ್ಮೆ ರಾಗಿಣಿ ತಾರಾಮಾರ ಹೊಡೆಯುವಾಗ ಬ್ಯಾಲೆನ್ಸ್‌ ತಪ್ಪಿ ಏನು ಮಾಡಬೇಕು ಅಂತ ಗೊತ್ತಾಗದೆ ಅಂಡರ್‌ಗ್ರೌಂಡಲ್ಲಿ ಕ್ಯಾಮೆರಾ ಇಟ್ಟು ವಿಶ್ವರೂಪ ದರ್ಶನ ಮಾಡಿಸುತ್ತಾರೆ.
ಇಲ್ಲಿ ರಾಗಿಣಿ ಮನುಷ್ಯರೇ ಅಲ್ಲ. ಒಮ್ಮೆ ದೇವಾನುದೇವತೆಗಳೆಲ್ಲಾ ಮೈಯೊಳಗೆ ಸೇರಿಕೊಂಡಿರೋ ವೀರಾಗ್ರೇಸರಿ. ಮತ್ತೊಮ್ಮೆ ಚಡ್ಡಿ ಹಾಕಿ ಕೂಲಿಂಗ್‌ ಗ್ಲಾಸ್‌ ಇಟ್ಟು ನೋಡುವವರ ದಿಕ್ಕು ತಪ್ಪಿಸುವ ಮಾಡರ್ನ್‌ ರಂಭೆ. ಬಹುಶಃ ಆ ದೃಶ್ಯಗಳನ್ನೆಲ್ಲಾ ಯೋಗರಾಜ ಭಟ್ಟರು ಮೊದಲೇ ಕಲ್ಪಿಸಿಕೊಂಡಿದ್ದಾರೆ ಅನ್ನಿಸುತ್ತದೆ. ಅದೇ ಉತ್ಸಾಹದಲ್ಲಿ ಅವರು ಬರೆದಿರುವ ಹಾಡಿನ ಸಾಲುಗಳನ್ನೊಮ್ಮೆ ಗಮನಿಸಿ.
ರಾಗಿಣಿಗೆ ಬಟ್ಟೆತೊಡಿಸೋಣ ಬನ್ನಿ..
ಗಂಡು ಹುಡ್ಗಿ ನೀ ನನ್ನವಳೇನೇ.. ಕ್ಲೈಮ್ಯಾಕ್ಸಲ್ಲಿ ಸಿಗ್ತೀಯೇನೇ..
ರೂಪಸಿ ರಕ್ಕಸಿ ರಾಂಧವ ಪ್ರೇಯಸಿ...
ರಾಗಿಣಿಯನ್ನು ಮತ್ತು ರಾಗಿಣಿಯ ಪ್ರತಿಭೆಯನ್ನು ಹತ್ತಿರದಿಂದ ಗಮನಿಸದೇ ಬಹುಶಃ ಇಂಥಾ ಸಾಲುಗಳು ಹುಟ್ಟಲಿಕ್ಕಿಲ್ಲ. ಹಾಗಾಗಿ ಹೆಂಗೆಂಗೆಲ್ಲಾ ಪ್ರತಿಭೆಯನ್ನು ತೋರಿಸಬೇಕೋ ಹಂಗೆಲ್ಲಾ ಪ್ರತಿಭೆಯನ್ನು ತೋರಿಸಿದ ಪ್ರತಿಭಾವಂತೆ ರಾಗಿಣಿಗೂ ಆ ಪ್ರತಿಭೆಯನ್ನು ಕರೆಕ್ಟಾಗಿ ಕ್ಯಾಚ್‌ ಹಾಕ್ಕೊಂಡು ಹಾಡು ಬರೆದಿರುವ ಯೋಗರಾಜ ಭಟ್ಟರಿಗೂ ಅಭಿನಂದನೆ ಸಲ್ಲಲೇಬೇಕು.
ನಿರ್ದೇಶಕ ಆನಂದ ಪಿ ರಾಜು ಒಂದು ಆ್ಯಕ್ಷನ್‌ ಸಿನಿಮಾ ಕೊಡಬೇಕು ಅಂತ ನಿರ್ಧರಿಸಿದ್ದಾರೆ. ಅದಕ್ಕೆ ತಕ್ಕಂತೆ ಸಿನಿಮಾ ಮಾಡಿದ್ದಾರೆ. ರುಚಿಗೆ ತಕ್ಕಂತೆ ಎಷ್ಟುಉಪ್ಪು ಬೇಕೋ ಅಷ್ಟುಉಪ್ಪು ಖಾರ ಹಾಕಲು ಹೋಗಿ ಸ್ವಲ್ಪ ಯಾಮಾರಿದ್ದಾರೆ ಅನ್ನುವುದು ಬಿಟ್ಟರೆ ರಾಗಿಣಿ ಎಂಬ ಮೃಷ್ಟಾನ್ನ ಭೋಜನವನ್ನು ಲೆಕ್ಕಕ್ಕಿಂತ ಜಾಸ್ತಿಯೇ ಬಡಿಸಿದ್ದಾರೆ. 
ಇಲ್ಲಿ ರಾಗಿಣಿಗೆ ಬೆಂಬಲವಾಗಿ ನಿಂತಿದ್ದು ಹಲವಾರು ಹಿರಿಯ ಕಲಾವಿದರು. ರಮೇಶ್‌ ಭಟ್‌, ಶರತ್‌ ಲೋಹಿತಾಶ್ವ, ಪದ್ಮಜಾ ರಾವ್‌, ಶೋಭರಾಜ್‌ ಎಲ್ಲರೂ ರಾಗಿಣಿಯ ಮುಂದೆ ಮಂಕಾಗುತ್ತಾರೆ. ನಟನೆಯಲ್ಲಿ ಗೆಲ್ಲುತ್ತಾರೆ. ಅದರಲ್ಲೂ ರಾಗಿಣಿಯ ತಂದೆಯಾದ ತಪ್ಪಿಗೆ ರಮೇಶ್‌ ಭಟ್‌ ಮೀಸೆ ತಿರುವಿ ತಿರುವಿ ಸುಸ್ತಾಗುವುದನ್ನು ನೋಡುವುದೇ ಮಜಾ. ಎಲ್ಲವನ್ನೂ ಪಕ್ಕಕ್ಕಿಟ್ಟರೂ ರಾಗಿಣಿಯ ಉತ್ಸಾಹ ಮತ್ತು ಎನರ್ಜಿ ಇದೆಯಲ್ಲ, ಅದ್ಭುತ. ಸೋ ರಾಗಿಣಿಗಾಗಿಯೇ ಸಿನಿಮಾ ನೋಡುವವರಿಗೆ ಮೋಸವಿಲ್ಲ.

 

(ಕನ್ನಡಪ್ರಭ ವಾರ್ತೆ)

Show Full Article


Recommended


bottom right ad