Asianet Suvarna News Asianet Suvarna News

ಕಾವೇರಿದೆ ರಣಾಂಗಣ: ಮೊದಲ ಹಂತದ ಚುನಾವಣಾ ಪ್ರಕ್ರಿಯೆ ಆರಂಭ

ಮಹಾಭಾರತ ಸಂಗ್ರಾಮಕ್ಕೆ ಅಧಿಸೂಚನೆ ಪ್ರಕಟ | ಮೊದಲ ಹಂತದ ಚುನಾವಣೆಗೆ ಆಯೋಗದಿಂದ ಅಧಿಸೂಚನೆ |  ಏ.11ರಂದು 20 ರಾಜ್ಯಗಳ 91 ಸ್ಥಾನಗಳಿಗೆ ಚುನಾವಣೆ

Election Commission issues notification for first phase of Lok Sabha elections 2019
Author
Bengaluru, First Published Mar 19, 2019, 11:00 AM IST

ನವದೆಹಲಿ (ಮಾ. 19): 2019ರ ಲೋಕಸಭಾ ಚುನಾವಣಾ ಪ್ರಕ್ರಿಯೆಗಳಿಗೆ ಸೋಮವಾರ ಅಧಿಕೃತವಾಗಿ ಚಾಲನೆ ನೀಡಲಾಗಿದೆ. ಏ.11 ರಂದು ನಡೆಯುವ ಮೊದಲ ಸುತ್ತಿನ ಚುನಾವಣೆ ಸಂಬಂಧ, ಕೇಂದ್ರ ಚುನಾವಣಾ ಆಯೋಗ ಸೋಮವಾರ ಅಧಿಸೂಚನೆ ಹೊರಡಿಸಿದೆ. ಇದರೊಂದಿಗೆ ದೇಶವನ್ನು ಮುನ್ನಡೆಸುವ ಹೊಸ ಸರ್ಕಾರದ ಆಯ್ಕೆಗೆ ಮುನ್ನುಡಿ ಬರೆದಂತೆ ಆಗಿದೆ.

ಏ.11ರಂದು 20 ರಾಜ್ಯಗಳ 91 ಲೋಕಸಭಾ ಸ್ಥಾನಗಳಿಗೆ ಮತದಾನ ನಡೆಯಲಿದೆ. ಈ 91 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಬಯಸುವವರಿಗೆ ಸೋಮವಾರದಿಂದಲೇ ನಾಮಪತ್ರ ಸಲ್ಲಿಕೆಗೆ ಅವಕಾಶ ಸಿಕ್ಕಿದ್ದು, ಮಾ.25ರವರೆಗೂ ನಾಮಪತ್ರ ಸಲ್ಲಿಸಬಹುದಾಗಿರುತ್ತದೆ.

ಮಾ.26ರಂದು ನಾಮಪತ್ರಗಳ ಪರಿಶೀಲನೆ ನಡೆಸಲಿದ್ದು, ಮಾ.28ರಂದು ನಾಮಪತ್ರ ಹಿಂಪಡೆಯಲು ಕಡೆಯ ದಿನವಾಗಿರುತ್ತದೆ. ಹೀಗಾಗಿ 91 ಕ್ಷೇತ್ರಗಳಲ್ಲಿ ಯಾರಾರ‍ಯರು ಸ್ಪರ್ಧಿಸಲಿದ್ದಾರೆ, ಕಣದಲ್ಲಿ ಎಷ್ಟುಜನ ಉಳಿದುಕೊಂಡಿದ್ದಾರೆ, ಪ್ರಮುಖ ಹಣಾಹಣಿ ಯಾರ ನಡುವೆ ನಡೆಯಲಿದೆ ಎಂಬ ಚಿತ್ರಣ ಮಾ.28ರಂದು ಸಿಗಲಿದೆ. ಏ.11ಕ್ಕೆ ಮತದಾನ ನಡೆಯಲಿದ್ದು, ಮೇ 23ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ಈ ಬಾರಿ ದೇಶಾದ್ಯಂತ ಒಟ್ಟು 7 ಹಂತದಲ್ಲಿ ಚುನಾವಣೆ ನಡೆಸಲು ಚುನಾವಣಾ ಆಯೋಗ ನಿರ್ಧರಿಸಿದೆ.

ಮೊದಲ ಹಂತದ ಚುನಾವಣೆಯಲ್ಲಿ 10 ರಾಜ್ಯಗಳು ಮತ್ತು ಒಂದು ಕೇಂದ್ರಾಡಳಿತ ಪ್ರದೇಶದ ಎಲ್ಲಾ ಲೋಕಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ. ಅವುಗಳಲ್ಲಿ ಆಂಧ್ರಪ್ರದೇಶ (25), ತೆಲಂಗಾಣದ 17, ಉತ್ತರಾಖಂಡದ 5, ಅರುಣಾಚಲಪ್ರದೇಶ ಮತ್ತು ಮೇಘಾಲಯದ ತಲಾ 2, ಮಿಜೋರಂ, ನಾಗಾಲ್ಯಾಂಡ್‌, ಸಿಕ್ಕಿಂ, ಅಂಡಮಾನ್‌ ಮತ್ತು ನಿಕೋಬಾರ್‌ ಮತ್ತು ಲಕ್ಷದ್ವೀಪದ ತಲಾ ಒಂದು ಕ್ಷೇತ್ರ ಕೂಡಾ ಸೇರಿದೆ. ಇದರ ಜೊತೆಗೆ ಉತ್ತರಪ್ರದೇಶ (8), ಮಹಾರಾಷ್ಟ್ರ (7) ಅಸ್ಸಾಂ (5) ಬಿಹಾರ (4), ಪಶ್ಚಿಮ ಬಂಗಾಳ (2), ಒಡಿಶಾ (4) ಛತ್ತೀಸ್‌ಗಢ (1), ಮಣಿಪುರ (1), ತ್ರಿಪುರಾ (1) ಜಮ್ಮು ಮತ್ತು ಕಾಶ್ಮೀರದ 2 ಸ್ಥಾನಗಳಿಗೂ ಚುನಾವಣೆ ನಡೆಯಲಿದೆ.

ಹಣಾಹಣಿ: ಈ ಬಾರಿ ಮತ್ತೆ ಅಧಿಕಾರಕ್ಕೆ ಮರಳುವ ಉತ್ಸಾಹದಲ್ಲಿರುವ ಬಿಜೆಪಿ ನೇತೃತ್ವದ ಎನ್‌ಡಿಎ, ಬಹುತೇಕ ರಾಜ್ಯಗಳಲ್ಲಿ ಮೈತ್ರಿ ಮಾಡಿಕೊಂಡಿದೆ. ಆದರೆ ಕಾಂಗ್ರೆಸ್‌ಗೆ ಈ ಬಾರಿ ಹಿಂದಿನ ರೀತಿಯ ಯುಪಿಎ ಮೈತ್ರಿಕೂಟದ ಬಲ ಇಲ್ಲ. ಅದು ಹಲವು ರಾಜ್ಯಗಳಲ್ಲಿ ಬೇರೆ ಬೇರೆ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿದೆ. ಹೀಗಾಗಿ ಎನ್‌ಡಿಎ, ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಮೈತ್ರಿಕೂಟದ ಬಗ್ಗೆ ಸ್ಪರ್ಧಿಸಬೇಕಿದೆ.

ಮೇಲ್ವರ್ಗದಲ್ಲೂ ಆರ್ಥಿಕವಾಗಿ ಹಿಂದುಳಿದವರಿಗೆ ಇತ್ತೀಚೆಗೆ ಪ್ರಕಟಿಸಲಾದ ಶೇ.10ರಷ್ಟುಮೀಸಲು, ಜನಪ್ರಿಯ ಬಜೆಟ್‌, ರೈತರ ಖಾತೆಗೆ ನೇರ ಹಣ ವರ್ಗಾವಣೆಯಂಥ ಯೋಜನೆಗಳು ತನಗೆ ಹೆಚ್ಚಿನ ಲಾಭ ತಂದುಕೊಡಬಹುದು ಎಂಬ ನಿರೀಕ್ಷೆಯಲ್ಲಿ ಬಿಜೆಪಿ ಇದೆ.

2 ನೇ ಹಂತಕ್ಕೆ ಇಂದು ಅಧಿಸೂಚನೆ

ನವದೆಹಲಿ: ಏ.18 ರಂದು ನಡೆಯಲಿರುವ 2ನೇ ಹಂತದ ಚುನಾವಣೆಗೆ ಮಂಗಳವಾರ ಅಧಿಸೂಚನೆ ಪ್ರಕಟವಾಗಲಿದೆ. 2ನೇ ಹಂತದಲ್ಲಿ ಕರ್ನಾಟಕ ಸೇರಿದಂತೆ 13 ರಾಜ್ಯಗಳ 97 ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

Follow Us:
Download App:
  • android
  • ios