Asianet Suvarna News Asianet Suvarna News

ಹುಬ್ಬಳ್ಳಿಯಲ್ಲಿ ವರುಣನ ಅಬ್ಬರ: 15ಕ್ಕೂ ಹೆಚ್ಚು ಮನೆ ಕುಸಿತ

ಮತ್ತೆ ಆತಂಕ ಮೂಡಿಸಿದ ಮಳೆ| ಮನೆ, ಕಾಲನಿಗಳಿಗೆ ನುಗ್ಗಿದ ನೀರು| ಕಳೆದ ಒಂದು ವಾರದಿಂದ ಸಂಜೆ ಬಳಿಕ ಸುರಿಯುತ್ತಿರುವ ಮಳೆ| ಭಾನುವಾರ ಸಂಜೆ ಬಳಿಕ ಸುರಿದ ಮಳೆಯಿಂದ ಮತ್ತೆ ನೆರೆ ಆತಂಕ ಸೃಷ್ಟಿ|  ಹುಬ್ಬಳ್ಳಿ ಗ್ರಾಮೀಣ, ನಗರ ಸೇರಿ ಒಟ್ಟಾರೆ 15ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿತ| ನೂರಾರು ಮನೆಗಳಿಗೆ ನೀರು ನುಗ್ಗಿದೆ|

Heavy Rain in Hubballi: More Than 15 Houses Collapse
Author
Bengaluru, First Published Oct 21, 2019, 7:23 AM IST

ಹುಬ್ಬಳ್ಳಿ[ಅ.21]: ಕಳೆದ ಒಂದು ವಾರದಿಂದ ಸಂಜೆ ಬಳಿಕ ಸುರಿಯುತ್ತಿರುವ ಮಳೆ ಅಪಾರ ಹಾನಿ ಸೃಷ್ಟಿಸುತ್ತಿದೆ. ಅದರಲ್ಲೂ ಭಾನುವಾರ ಸಂಜೆ ಬಳಿಕ ಸುರಿದ ಮಳೆಯಿಂದ ಮತ್ತೆ ನೆರೆ ಆತಂಕ ಸೃಷ್ಟಿಯಾಗಿದೆ. ನವಲಗುಂದದ ತುಪ್ಪರಿ ಹಳ್ಳದಲ್ಲಿ ದಂಪತಿ ಸಿಲುಕಿದ್ದು, ತಹಸೀಲ್ದಾರ್‌, ಪಿಎಸ್‌ಐ ತಂಡ ರಕ್ಷಣೆಗೆ ತೆರಳಿದೆ. ಹುಬ್ಬಳ್ಳಿ ಗ್ರಾಮೀಣ, ನಗರ ಸೇರಿ ಒಟ್ಟಾರೆ 15ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿದ್ದು, ನೂರಾರು ಮನೆಗಳಿಗೆ ನೀರು ನುಗ್ಗಿದೆ.

ನವಲಗುಂದ ತಾಲೂಕಿನ ಜಾವೂರ್‌ ಬಳ್ಳೂರು ನಡುವಿನ ಹಣಸಿ ಎಂಬಲ್ಲಿ ತುಪ್ಪರಿ ಹಳ್ಳ ಉಕ್ಕೇರಿದ ಪರಿಣಾಮ ದಂಪತಿ ಸಿಲುಕಿದ್ದಾರೆ. ಪ್ರಕಾಶ್‌ ಗುರುನಾಥ ಅಮರಶೆಟ್ಟಿಮತ್ತು ಅವರ ಪತ್ನಿ ಸವಿತಾ ಸಿಲುಕಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ತಹಸೀಲ್ದಾರ್‌ ನವೀನ್‌ ಹುಲ್ಲೂರ ಭೇಟಿ ನೀಡಿದ್ದಾರೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ತಾಲೂಕಿನ ಬೆಣ್ಣಿ ಹಳ್ಳ, ತುಪ್ಪರಿ ಹಳ್ಳಗಳು ತುಂಬಿ ಹರಿದು ಸಾಕಷ್ಟು ಉದ್ದು, ಹತ್ತಿ ಬೆಳೆ ನಾಶವಾಗಿದೆ. ಕುಂದಗೋಳ ತಾಲೂಕಿನಲ್ಲಿ ಭಾನುವಾರ ರಾತ್ರಿ 7.30ರ ಬಳಿಕ ಧಾರಾಕಾರ ಮಳೆಯಾಗಿದೆ. ಗುಡೇನಕಟ್ಟಿಗ್ರಾಮದಲ್ಲಿ ಮಳೆಯಿಂದ ಅಪಾರ ಪ್ರಮಾಣದ ಬೆಳೆಹಾನಿಯಾಗಿದೆ.

ಮಳೆಗೆ ನೆಲಕಚ್ಚಿದ 11ಕ್ಕೂ ಹೆಚ್ಚು ಮನೆಗಳು:

ಹುಬ್ಬಳ್ಳಿ ನಗರ ತಾಲೂಕಿನಲ್ಲಿ ಮೂರು, ಗ್ರಾಮೀಣ ತಾಲೂಕಿನಲ್ಲಿ 11ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದಿವೆ. ಯಾರಿಗೂ ಅಪಾಯವಾಗಿಲ್ಲ ಎಂದು ನಗರ ತಹಸೀಲ್ದಾರ್‌ ಶಶಿಧರ ಮಾಡ್ಯಾಳ ಹಾಗೂ ಗ್ರಾಮೀಣ ತಹಸೀಲ್ದಾರ್‌ ಪ್ರಕಾಶ ನಾಶಿ ತಿಳಿಸಿದರು.

ನಗರದ ಗೋಪನ ಕೊಪ್ಪದಲ್ಲಿ ಸಣ್ಣಗೌಡ್ಪ ಶಿರೂರ, ಬಸವರಾಜ ಮಾರ್ಟಿನ್‌, ಈರಪ್ಪ ಕುಂಬಾರ ಅವರಿಗೆ ಸೇರಿದ ಮೂರು ಶಿಥಿಲ ಮನೆಗಳು ಬಿದ್ದಿವೆ. ಮನೆಯಲ್ಲಿದ್ದ ಯಾರಿಗೂ ಸಮಸ್ಯೆಯಾಗಿಲ್ಲ. ಇನ್ನು, ಬೆಂಗೇರಿ ದಾನೇಶ್ವರಿ ಕಾಲನಿ ದಾನೇಶ್ವರಿ ದೇವಸ್ಥಾನದ ಎದುರಿನ ಮನೆ ಹಾಗೂ ವೀರಭದ್ರೇಶ್ವರ ಕಾಲನಿಗೆ ನೀರು ನುಗ್ಗಿ ಸಮಸ್ಯೆಯಾಗಿದೆ. ಇನ್ನು, ಗ್ರಾಮೀಣ ಭಾಗದ ಶೆರೆವಾಡದಲ್ಲಿ 4, ಅದರಗುಂಚಿ 2, ಛಬ್ಬಿ 2, ಗುಟಕುಂಚಿ 1, ಗುಡರಸಿಂಗಿ 2, ದೇವರಗುಡಿಹಾಳ 1, ರಾಯನಾಳ 1 ಸೇರಿ ವಿವಿಧೆಡೆ ಮನೆಗಳು ಭಾಗಶಃ ಕುಸಿದಿವೆ. ಜನ ಜಾನುವಾರುಗಳಿಗೆ ಯಾವುದೆ ತೊಂದರೆಯಾಗಿಲ್ಲ.

ಶನಿವಾರ ತಡರಾತ್ರಿ 11ಗಂಟೆಗೆ ಆರಂಭವಾದ ಮಳೆ ನಸುಕಿನವರೆಗೂ ಸುರಿಯಿತು. ಬೆಳಗ್ಗೆ ಶಾಂತವಾಗಿದ್ದ ಮಳೆ ಭಾನುವಾರ ಸಂಜೆ ಆಗಾಗ ಅಬ್ಬರಿಸಿತು. ಹೀಗಾಗಿ ಇಲ್ಲಿನ ಉಣಕಲ್‌ ಹಿಂಭಾಗದ ದೇವಿನಗರ, ಬನಶಂಕರಿ ಬಡಾವಣೆ ನಿವಾಸಿಗಳು ಆತಂಕಕ್ಕೆ ಒಳಗಾಗಿದ್ದರು. ಇನ್ನು ನಾಲಾಗುಂಟ ವಿಕಾಸ ನಗರ, ವೀರಭದ್ರೇಶ್ವರ ನಗರ ಹಾಗೂ ಸಿದ್ಧಲಿಂಗೇಶ್ವರ ನಿವಾಸಿಗಳಲ್ಲಿ ಮತ್ತೆ ಕೋಡಿ ಬಿದ್ದು ನೀರು ಆವರಿಸುವ ಭಯ ಆವರಿಸಿತ್ತು.

ನಗರದ ಮಂಟೂರು ರಸ್ತೆ, ಸೋನಿಯಾ ಗಾಂಧಿ ನಗರ, ಎಸ್‌.ಎಂ. ಕೃಷ್ಣ ನಗರದಲ್ಲಿ ಮಳೆ ನೀರು ನಿಂತಿದ್ದು ಸಮಸ್ಯೆ ಉಂಟಾಯಿತು. ಕೆಲ ಮನೆಗಳಿಗೆ ನೀರು ನುಗ್ಗಿ ಜನತೆ ಪರದಾಡಿದರು. ವಿದ್ಯಾನಗರದ ಲೋಕಪ್ಪನ ಹಕ್ಕಲು, ಸ್ಲಂ ಪ್ರದೇಶಗಳಲ್ಲಿ ನೀರು ನಿಂತಿತ್ತು. ಇನ್ನು, ನವನಗರ, ಶ್ರೀನಗರದಲ್ಲಿಯೂ ರಾತ್ರಿ ವೇಳೆ ವಿಪರೀತ ಮಳೆಯಾಗಿದೆ.
 

Follow Us:
Download App:
  • android
  • ios