Asianet Suvarna News Asianet Suvarna News

ಭಾರತ-ಬಾಂಗ್ಲಾ ಟಿ20: ಕನ್ನಡಿಗರಿಗೆ ಸಿಗುತ್ತಾ ಚಾನ್ಸ್..?

ಭಾರತ-ಬಾಂಗ್ಲಾದೇಶ ನಡುವಿನ ಮೊದಲ ಟಿ20 ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಪಂದ್ಯದಲ್ಲಿ ಕರ್ನಾಟಕದ ಕ್ರಿಕೆಟಿಗರಾದ ಕೆ.ಎಲ್ ರಾಹುಲ್, ಮನೀಶ್ ಪಾಂಡೆಗೆ ಅವಕಾಶ ಸಿಗುತ್ತಾ ಎನ್ನುವುದನ್ನು ಕಾದು ನೋಡಬೇಕಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Team India look to fine tune squad ahead of T20 World Cup 2020
Author
New Delhi, First Published Nov 3, 2019, 10:33 AM IST

ನವದೆಹಲಿ[ನ.03]: ಭಾರತ-ಬಾಂಗ್ಲಾದೇಶ ನಡುವಣ 3 ಪಂದ್ಯಗಳ ಟಿ20 ಸರಣಿಗೆ ಭಾನುವಾರ ಚಾಲನೆ ಸಿಗಲಿದೆ. ಎರಡೂ ತಂಡಗಳು ಮುಂದಿನ ವರ್ಷದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಸಿದ್ಧತೆ ನಡೆಸಲು, ಈ ಟೂರ್ನಿಯಲ್ಲಿ ಉತ್ತಮ ಪ್ರದರ್ಶನದ ವಿಶ್ವಾಸದಲ್ಲಿವೆ. ಮೊದಲ ಟಿ20 ಪಂದ್ಯ ಇಲ್ಲಿನ ಅರುಣ್‌ ಜೇಟ್ಲಿ ಮೈದಾನದಲ್ಲಿ ನಡೆಯಲಿದೆ. ನವದೆಹಲಿಯಲ್ಲಿ ವಾಯು ಗುಣಮಟ್ಟ ತೀವ್ರವಾಗಿ ಕುಸಿದಿರುವುದು ಆತಂಕಕ್ಕೆ ಕಾರಣವಾಗಿದೆ. ಈ ನಡುವೆಯೇ ಬಾಂಗ್ಲಾ ವಿರುದ್ಧ ಮಿನಿ ಸಮರಕ್ಕೆ ರೋಹಿತ್‌ ಪಡೆ ಸಜ್ಜಾಗಿದೆ.

ಟಿ20 ಕ್ರಿಕೆಟ್‌ನಲ್ಲಿ ಬಾಂಗ್ಲಾ ವಿರುದ್ಧ ಪಾರಮ್ಯ ಮೆರೆದಿರುವ ಭಾರತ ತಂಡ,  ಯುವ ಆಟಗಾರರಿಗೆ ಮಣೆ ಹಾಕಿದೆ. ಖಾಯಂ ನಾಯಕ ವಿರಾಟ್‌ ಕೊಹ್ಲಿ ಗೈರು ಹಾಜರಿಯಲ್ಲಿ ರೋಹಿತ್‌ ಶರ್ಮಾ ತಂಡ ಮುನ್ನಡೆಸುತ್ತಿದ್ದಾರೆ. ಶಿಖರ್‌ ಧವನ್‌, ರೋಹಿತ್‌ ಹೊರತುಪಡಿಸಿದರೆ, ಉಳಿದ ಆಟಗಾರರೆಲ್ಲಾ ಯುವಕರೇ ಆಗಿದ್ದಾರೆ. ಕೊಹ್ಲಿ, ರೋಹಿತ್‌, ಬುಮ್ರಾ, ಹಾರ್ದಿಕ್‌ಗೆ ಟಿ20 ವಿಶ್ವಕಪ್‌ ತಂಡದಲ್ಲಿ ಸ್ಥಾನ ಸಿಗುವುದು ಖಚಿತ, ಉಳಿದ 7 ಸ್ಥಾನಗಳಿಗೆ ಯುವ ಆಟಗಾರರಿಂದ ಭಾರೀ ಪೈಪೋಟಿ ವ್ಯಕ್ತವಾಗಿದೆ. ಸೂಕ್ತ ಆಟಗಾರರಿಗೆ ಹುಡುಕಾಟ ನಡೆಸುತ್ತಿರುವ ಭಾರತ ಆಡಳಿತ ಮಂಡಳಿ, ಬಾಂಗ್ಲಾ ಸರಣಿಯಲ್ಲಿ ಹಲವು ಪ್ರಯೋಗಗಳಿಗೆ ಕೈ ಹಾಕಲಿದೆ. ಅಲ್ಲದೇ ಈ ಸರಣಿಯಲ್ಲಿ ಪ್ರಮುಖ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವ ವಿಶ್ವಾಸ ಭಾರತ ತಂಡಕ್ಕಿದೆ. ಟೆಸ್ಟ್‌ ಹಾಗೂ ಏಕದಿನಕ್ಕೆ ಹೋಲಿಸಿದರೆ, ಟಿ20 ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ಕಾಯ್ದುಕೊಳ್ಳಲು ಭಾರತ ತಂಡ ವಿಫಲವಾಗುತ್ತಿದೆ. ಮುಂಬರುವ ಟಿ20 ವಿಶ್ವಕಪ್‌ ಗಮನದಲ್ಲಿಟ್ಟುಕೊಂಡು ಈ ಸರಣಿ ಹೆಚ್ಚು ಪ್ರಮುಖವಾಗಿದೆ.

ಭಾರತ vs ಬಾಂಗ್ಲಾದೇಶ ಟಿ20; ಸಂಭಾವ್ಯ ತಂಡ ಪ್ರಕಟ, ಯಾರಿಗಿದೆ ಚಾನ್ಸ್?

ಏಕದಿನ ವಿಶ್ವಕಪ್‌ ಸೋಲಿನ ಬಳಿಕ ವೆಸ್ಟ್‌ ಇಂಡೀಸ್‌ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗಳಲ್ಲಿ ಅದ್ಭುತ ಪ್ರದರ್ಶನ ತೋರಿರುವ ಭಾರತ ತಂಡ, ಜಯದ ಓಟವನ್ನು ಮುಂದುವರಿಸುವ ಉತ್ಸಾಹದಲ್ಲಿದೆ. ಟಿ20 ಕ್ರಿಕೆಟ್‌ನಲ್ಲಿ ಬಾಂಗ್ಲಾ ವಿರುದ್ಧ ಆಡಿರುವ 8 ಪಂದ್ಯಗಳಲ್ಲಿ ಜಯಭೇರಿ ಬಾರಿಸಿರುವ ಭಾರತ, ಈ ಪಂದ್ಯದಲ್ಲಿ ಗೆಲುವಿನ ವಿಶ್ವಾಸದಲ್ಲಿದೆ. ಆದರೆ ಬಾಂಗ್ಲಾ ತಂಡವನ್ನು ಲಘುವಾಗಿ ಪರಿಗಣಿಸುತ್ತಿಲ್ಲ. ಈ ಹಿಂದೆ ಸಾಕಷ್ಟು ಬಾರಿ ಬಾಂಗ್ಲಾ ತಂಡ, ಭಾರತಕ್ಕೆ ಸೋಲಿನ ರುಚಿ ತೋರಿಸಿದೆ. ಹೀಗಾಗಿ ಟೀಂ ಇಂಡಿಯಾ ಎಚ್ಚರಿಕೆಯ ಹೆಜ್ಜೆಯನ್ನಿಡಲು ನಿರ್ಧರಿಸಿದೆ. 2020ರ ಟಿ20 ವಿಶ್ವಕಪ್‌ಗೂ ಮುನ್ನ ಭಾರತಕ್ಕೆ ಅಭ್ಯಾಸಕ್ಕಾಗಿ ಸುಮಾರು 17 ಪಂದ್ಯಗಳು ದೊರೆಯಲಿವೆ. ಅಲ್ಲದೇ ಐಪಿಎಲ್‌ ಟೂರ್ನಿ ಇರಲಿದ್ದು, ಉತ್ತಮ ತಂಡ ಕಟ್ಟಿಕೊಳ್ಳಲು ಸಮಯವಿದೆ. ಇದರಿಂದಾಗಿಯೇ ತಂಡದ ಆಡಳಿತ ಹಲವು ಪ್ರಯೋಗಗಳಿಗೆ ಮುಂದಾಗಿದೆ. ಬ್ಯಾಟಿಂಗ್‌ ವಿಭಾಗದಲ್ಲಿ ಹೆಚ್ಚಿನ ಪ್ರಯೋಗಕ್ಕೆ ಮುಂದಾಗದ ಭಾರತ, ಬೌಲಿಂಗ್‌ ವಿಭಾಗದಲ್ಲಿ ಪ್ರಯೋಗಗಳನ್ನು ನಡೆಸುತ್ತಿದೆ.

ಬಲಾಢ್ಯ ಬ್ಯಾಟಿಂಗ್‌ ಪಡೆ

ಅನುಭವಿ ಹಾಗೂ ಯುವ ಆಟಗಾರರಿಂದ ಕೂಡಿರುವ ಭಾರತದ ಬ್ಯಾಟಿಂಗ್‌ ವಿಭಾಗ ಬಲಾಢ್ಯವಾಗಿದೆ. ನಾಯಕ ರೋಹಿತ್‌ಗೆ ಅನುಭವಿ ಶಿಖರ್‌ ಧವನ್‌ ಅಥವಾ ಕೆ.ಎಲ್‌. ರಾಹುಲ್‌ ಆರಂಭಿಕರಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಆದರೆ ಧವನ್‌ ಹಾಗೂ ರಾಹುಲ್‌ ಇಬ್ಬರೂ ಬ್ಯಾಟಿಂಗ್‌ ಲಯ ಕಳೆದುಕೊಂಡಿದ್ದಾರೆ. ಈ ಬಾರಿಯೂ ವೈಫಲ್ಯ ಕಂಡರೇ ಇಬ್ಬರೂ ಆಟಗಾರರಿಗೆ ಇದು ಬಹುತೇಕ ಕೊನೆಯ ಸರಣಿಯಾಗಲಿದೆ. ಒಂದೊಮ್ಮೆ ರೋಹಿತ್‌ ಜೊತೆ ಧವನ್‌ ಆರಂಭಿಕರಾಗಿ ಕಣಕ್ಕಿಳಿದರೆ, 3ನೇ ಕ್ರಮಾಂಕದಲ್ಲಿ ರಾಹುಲ್‌ ಆಡಬಹುದು. 4ನೇ ಕ್ರಮಾಂಕದಲ್ಲಿ ಶ್ರೇಯಸ್‌ ಅಯ್ಯರ್‌ ಸ್ಥಾನ ಭದ್ರವಾಗಿದೆ. ರಿಷಭ್‌ ಪಂತ್‌ ವಿಕೆಟ್‌ ಕೀಪರ್‌ ಆಗಿ ಕಣಕ್ಕಿಳಿಯುವುದು ಖಚಿತ, ಆದರೂ ಸಂಜು ಸ್ಯಾಮ್ಸನ್‌ರನ್ನು ಈ ಟೂರ್ನಿಗೆ ಆಯ್ಕೆ ಮಾಡಲಾಗಿದೆ. ಒಂದು ವೇಳೆ ರಿಷಭ್‌ ವೈಫಲ್ಯ ಮುಂದುವರೆಸಿದರೆ ಸಂಜು ತಂಡದಲ್ಲಿ ಆಡಲಿದ್ದಾರೆ. ಆಲ್ರೌಂಡರ್‌ ಸ್ಥಾನದಲ್ಲಿ ಕೃನಾಲ್‌ ಪಾಂಡ್ಯ ಕಣಕ್ಕಿಳಿಯಲಿದ್ದಾರೆ. ಇನ್ನೊಂದು ಸ್ಥಾನಕ್ಕಾಗಿ ಮನೀಶ್‌ ಪಾಂಡೆ ಹಾಗೂ ಶಿವಂ ದುಬೆ ನಡುವೆ ಪೈಪೋಟಿ ಏರ್ಪಡಲಿದೆ.

ಇಂಡೋ-ಬಾಂಗ್ಲಾ ಮೊದಲ ಟಿ20 ಪಂದ್ಯಕ್ಕೆ ವಿಘ್ನ..!

ಅನನುಭವಿ ಬೌಲಿಂಗ್‌ ಪಡೆ:

ಸ್ಪಿನ್ನರ್‌ಗಳಾದ ಯಜುವೇಂದ್ರ ಚಹಲ್‌, ರಾಜಸ್ಥಾನದ ರಾಹುಲ್‌ ಚಹಾರ್‌ ಹಾಗೂ ಕೃನಾಲ್‌ ಪಾಂಡ್ಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಭುವನೇಶ್ವರ್‌, ಶಮಿಗೆ ವಿಶ್ರಾಂತಿ ನೀಡಲಾಗಿದೆ. ದೀಪಕ್‌ ಚಹಾರ್‌, ಖಲೀಲ್‌ ಅಹ್ಮದ್‌ ಸಿಕ್ಕಿರುವ ಅವಕಾಶವನ್ನು ಬಳಸಿಕೊಳ್ಳಲು ಕಾತರರಾಗಿದ್ದಾರೆ. ಆಫ್ರಿಕಾ ವಿರುದ್ಧದ ಸರಣಿಯಲ್ಲಿ ದೀಪಕ್‌ ಚಹಾರ್‌ ಹಾಗೂ ಖಲೀಲ್‌ ಉತ್ತಮ ಪ್ರದರ್ಶನ ತೋರಿದ್ದರು.

ಬಾಂಗ್ಲಾಕ್ಕೆ ಅನುಭವದ ಕೊರತೆ:

ತಾರಾ ಆಲ್ರೌಂಡರ್‌ ಶಕೀಬ್‌ ಅಲ್‌ ಹಸನ್‌ ಅಲಭ್ಯತೆ, ಬಾಂಗ್ಲಾ ತಂಡಕ್ಕೆ ಬಹುವಾಗಿ ಕಾಡಲಿದೆ. ಉಳಿದಂತೆ ಲಿಟನ್‌ ದಾಸ್‌, ಮುಷ್ಫಿಕರ್‌ ರಹೀಂ, ಸೌಮ್ಯ ಸರ್ಕಾರ್‌ ಬಾಂಗ್ಲಾ ತಂಡಕ್ಕೆ ಬಲ ತುಂಬಲಿದ್ದಾರೆ. ಆದರೆ ಯುವ ಆಟಗಾರರನ್ನೆ ನೆಚ್ಚಿಕೊಂಡಿರುವ ಬಾಂಗ್ಲಾ, ಭಾರತಕ್ಕೆ ಅಚ್ಚರಿ ಫಲಿತಾಂಶ ನೀಡುವ ಉತ್ಸಾಹದಲ್ಲಿದೆ.

ಕೊಹ್ಲಿ ಹಿಂದಿಕ್ಕಲಿರುವ ರೋಹಿತ್‌ಗೆ ಬೇಕು 8 ರನ್‌

ಟಿ20 ಕ್ರಿಕೆಟ್‌ನಲ್ಲಿ ಕಾಯಂ ನಾಯಕ ವಿರಾಟ್‌ ಕೊಹ್ಲಿಯ ಅತಿ ಹೆಚ್ಚು ರನ್‌ ದಾಖಲೆ ಮುರಿಯಲು ರೋಹಿತ್‌ ಶರ್ಮಾಗೆ 8 ರನ್‌ ಬೇಕಿದೆ. ರೋಹಿತ್‌ 90 ಇನ್ನಿಂಗ್ಸ್‌ಗಳಲ್ಲಿ 2443 ರನ್‌ಗಳಸಿದ್ದರೆ, ಕೊಹ್ಲಿ 67 ಇನ್ನಿಂಗ್ಸ್‌ಗಳಲ್ಲಿ 2450 ರನ್‌ಗಳಿಸಿದ್ದಾರೆ. ಹೀಗಾಗಿ ಬಾಂಗ್ಲಾ ವಿರುದ್ಧದ ಮೊದಲ ಪಂದ್ಯದಲ್ಲಿ ರೋಹಿತ್‌ 8 ರನ್‌ಗಳಿಸಿದರೆ ಕೊಹ್ಲಿಯನ್ನು ಹಿಂದಿಕ್ಕಲಿದ್ದಾರೆ.

ಪಿಚ್‌ ರಿಪೋರ್ಟ್‌:
ನವದೆಹಲಿಯ ಅರುಣ್‌ ಜೇಟ್ಲಿ ಮೈದಾನ ಬ್ಯಾಟಿಂಗ್‌ ಜೊತೆಗೆ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಲಿದೆ. ಕೊನೆ​ಯ​ದಾಗಿ ಇಲ್ಲಿ ನಡೆ​ದಿದ್ದ ಆಸ್ಪ್ರೇ​ಲಿಯಾ ವಿರುದ್ಧದ ಪಂದ್ಯದಲ್ಲಿ ಸ್ಪಿನ್ನರ್‌ಗಳಿಗೆ ಹೆಚ್ಚಿನ ನೆರವು ನೀಡಿತ್ತು. ಪಿಚ್‌ ನಲ್ಲಿ ಸ್ವಲ್ಪ ಹುಲ್ಲು ಇದ್ದರೂ, ಬ್ಯಾಟಿಂಗ್‌ಗೆ ಹೆಚ್ಚಿನ ನೆರ​ವು ದೊರೆಯುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಸಂಭವನೀಯ ತಂಡಗಳು:

ಭಾರತ: ರೋಹಿತ್‌ ಶರ್ಮಾ (ನಾಯಕ), ಖಲೀಲ್‌ ಅಹ್ಮದ್‌, ಯಜುವೇಂದ್ರ ಚಹಲ್‌, ದೀಪಕ್‌ ಚಹಾರ್‌, ರಾಹುಲ್‌ ಚಹಾರ್‌, ಶಿಖರ್‌ ಧವನ್‌, ಶಿವಂ ದುಬೆ, ಶ್ರೇಯಸ್‌ ಅಯ್ಯರ್‌, ಮನೀಶ್‌ ಪಾಂಡೆ, ಕೃನಾಲ್‌ ಪಾಂಡ್ಯ, ರಿಷಭ್‌ ಪಂತ್‌, ಕೆ.ಎಲ್‌. ರಾಹುಲ್‌, ಸಂಜು ಸ್ಯಾಮ್ಸನ್‌, ವಾಷಿಂಗ್ಟನ್‌ ಸುಂದರ್‌, ಶಾರ್ದೂಲ್‌ ಠಾಕೂರ್‌.

ಬಾಂಗ್ಲಾದೇಶ: ಮಹಮದುಲ್ಲಾ ರಿಯಾದ್‌ (ನಾಯಕ), ಲಿಟನ್‌ ದಾಸ್‌, ತೈಜುಲ್‌ ಇಸ್ಲಾಂ, ಮೊಹಮದ್‌ ಮಿಥುನ್‌, ಸೌಮ್ಯ ಸರ್ಕಾರ್‌, ನಯೀಬ್‌ ಶೇಕ್‌, ಮುಷ್ಫೀಕುರ್‌ ರಹೀಂ, ಹೊಸೈನ್‌, ಮೊಸಾದೆಕ್‌ ಹೊಸೈನ್‌, ಅಮಿನುಲ್‌ ಇಸ್ಲಾಂ, ಅರಾಫತ್‌ ಸನ್ನಿ, ಅಬು ಹೈದರ್‌, ಅಲ್‌-ಅಮೀನ್‌, ಮುಸ್ತಾಫಿಜುರ್‌, ಶಫಿಉಲ್ಲಾ ಇಸ್ಲಾಂ.

ಒಟ್ಟು: 08

ಭಾರತ: 08

ಬಾಂಗ್ಲಾದೇಶ: 00

ಸ್ಥಳ: ಅರುಣ್‌ ಜೇಟ್ಲಿ ಮೈದಾನ
ಸಮಯ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್

Follow Us:
Download App:
  • android
  • ios