ಇನ್ನು 10 ದಿನದಲ್ಲಿ ಹೆಚ್ಚು ಕೊರೋನಾ ಕೇಸು| ಹಲವು ತಿಂಗಳು ವೈರಸ್‌ ಕಾಟ ಇರುತ್ತೆ| ಮಾನಸಿಕವಾಗಿ ಸಿದ್ಧರಾಗಿ| ‘ಸಾಮಾಜಿಕ ಅಂತರ’ ಮರೆತರೆ ಗಂಡಾಂತರ| ಏಕಾಏಕಿ ಲಾಕ್‌ಡೌನ್‌ ತೆರವು ಒಳಿತಲ್ಲ, ಹಂತ-ಹಂತವಾಗಿ ಮಾಡುವುದು ಉತ್ತಮ| ಡಾ. ದೇವಿ ಶೆಟ್ಟಿ ಎಚ್ಚರಿಕೆ

ಶ್ರೀಕಾಂತ್‌ ಎನ್‌.ಗೌಡಸಂದ್ರ

ಬೆಂಗಳೂರು(ಏ.06): ‘ಮುಂದಿನ ಹತ್ತು ದಿನದಲ್ಲಿ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದ ಕೊರೋನಾ ಪ್ರಕರಣಗಳು ವರದಿಯಾಗಲಿವೆ. ಏಪ್ರಿಲ್‌ 14ರ ಬಳಿಕ ಏಕಾಏಕಿ ಲಾಕ್‌ಡೌನ್‌ ತೆರವುಗೊಳಿಸಿದರೆ ಹಾಗೂ ಸಾರ್ವಜನಿಕರು ಸಾಮಾಜಿಕ ಅಂತರ ಮರೆತು ಚಟುವಟಿಕೆಯಲ್ಲಿ ತೊಡಗಿದರೆ ಅತಿ ದೊಡ್ಡ ಗಂಡಾಂತರ ಕಾದಿದೆ. ಹೀಗಾಗಿ ಹಂತ-ಹಂತವಾಗಿ ಲಾಕ್‌ಡೌನ್‌ ಸಡಿಲಗೊಳಿಸಬೇಕು. ನಾವು ಎಷ್ಟೇ ನಿಯಂತ್ರಿಸಿದರೂ ಇನ್ನೂ ಹಲವು ತಿಂಗಳುಗಳ ಕಾಲ ಕೊರೋನಾ ಸೋಂಕಿನ ಕಾಟ ರಾಜ್ಯದಲ್ಲಿ ಮುಂದುವರೆಯಲಿದೆ. ಇದಕ್ಕೆ ಮಾನಸಿಕವಾಗಿ ನಾವು ಸಿದ್ಧವಾಗಬೇಕು.’

ಸಂದರ್ಶನದಲ್ಲಿ ಮಾತನಾಡಿದ ಖ್ಯಾತ ಹೃದ್ರೋಗ ತಜ್ಞ ಡಾ. ದೇವಿಶೆಟ್ಟಿಅವರು ಈ ಎಚ್ಚರಿಕೆಗಳನ್ನು ನೀಡಿದ್ದಾರೆ. ದೇವಿಶೆಟ್ಟಿಅವರ ಮಾತಿನ ವಿವರ ಈ ರೀತಿ ಇದೆ.

* ರಾಜ್ಯದಲ್ಲಿ ಕೊರೋನಾ ಸೋಂಕಿನ ಸಮಸ್ಯೆ ಹೇಗಿದೆ. ಇನ್ನೂ ಆತಂಕದ ದಿನಗಳು ಬರಲಿವೆಯೇ?

ಪ್ರಸ್ತುತ ವರದಿಯಾಗುತ್ತಿರುವ ಪ್ರಕರಣಗಳು ಲಾಕ್‌ಡೌನ್‌ಗಿಂತ ಮೊದಲು ಸೋಂಕಿಗೆ ತುತ್ತಾಗಿರುವವರದ್ದು. ಲಾಕ್‌ಡೌನ್‌ ಅವಧಿಯಲ್ಲಿ ಉಂಟಾದ ಹಾಗೂ ಸೋಂಕಿತರ ಸಂಪರ್ಕದಿಂದ ಹರಡಿರುವ ಸೋಂಕು ಇನ್ನಷ್ಟೇ ವರದಿಯಾಗಲಿದೆ. ಹೀಗಾಗಿ ಪ್ರಸ್ತುತ ಸಂಖ್ಯೆ ಕಡಿಮೆ ಇದ್ದರೂ ಹತ್ತು ದಿನಗಳಲ್ಲಿ ಗಂಭೀರ ಪ್ರಮಾಣದಲ್ಲಿ ಸೋಂಕು ಪ್ರಕರಣಗಳು ರಾಜ್ಯದಲ್ಲಿ ಹೆಚ್ಚಾಗಲಿವೆ.

ಲಾಕ್‌ಡೌನ್‌ ನಂತರ ಮೈಮರೆತರೆ ಅಪಾಯ: ಡಾ|ದೇವಿ ಶೆಟ್ಟಿ ಎಚ್ಚರಿಕೆ

* ರಾಜ್ಯದಲ್ಲೂ ಅಮೆರಿಕ, ಇಟಲಿಯಂತಹ ಪರಿಸ್ಥಿತಿ ನಿರ್ಮಾಣವಾಗುತ್ತಾ?

ನನ್ನ ಪ್ರಕಾರ ನಮ್ಮ ದೇಶ, ರಾಜ್ಯದಲ್ಲೂ ಕೊರೋನಾ ಸೋಂಕು ಅಮೆರಿಕ, ಇಟಲಿ, ಚೀನಾದ ಮಾದರಿಯಲ್ಲೇ ವರ್ತಿಸಬಹುದು. ನಾವು ಯಾವಾಗಲೂ ಕಷ್ಟದ ಕಾಲ ಊಹಿಸಿಕೊಂಡು ಯೋಜನೆ ಮಾಡಿಕೊಳ್ಳಬೇಕು. ರಾಜ್ಯದಲ್ಲಿ ಅಷ್ಟು ಗಂಭೀರ ಪರಿಣಾಮ ಬೀರದಿದ್ದರೆ ಅದು ಖುಷಿಯ ವಿಚಾರ.

* ಅಮೆರಿಕ, ಇಟಲಿಯಂತಹ ಪರಿಣಾಮ ಉಂಟಾಗುವುದಾದರೆ ಈ ವೇಳೆಗೆ ಆಗಬೇಕಿತ್ತಲ್ಲ?

ಇಲ್ಲ, ನಾವು ಅಮೆರಿಕಕ್ಕೆ ಹೋಲಿಸಿಕೊಂಡರೆ ಸೋಂಕು ಬಾಧಿತರಾಗುವುದರಲ್ಲಿ 1 ತಿಂಗಳು ಹಿಂದೆ ಇದ್ದೇವೆ. ಈ 1 ತಿಂಗಳ ಕಾಲಾವಧಿ ದೊರೆತಿರುವುದು ನಮ್ಮ ಅದೃಷ್ಟಎಂದು ಭಾವಿಸಬೇಕು. ಈ ಅವಧಿಯಲ್ಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲದಿದ್ದರೆ ಭೀಕರ ದಿನಗಳನ್ನು ಎದುರಿಸಬೇಕಾಗುತ್ತದೆ.

* ಒಂದು ತಿಂಗಳು ವಿಳಂಬವಾಗಿದ್ದು ಏಕೆ?

ಎಲ್ಲಾ ದೇಶಗಳಿಗೂ ವಿದೇಶಿ ಪ್ರಯಾಣಿಕರಿಂದ ಸೋಂಕು ಉಂಟಾಗಿದೆ. ನ್ಯೂಯಾರ್ಕ್, ಲಂಡನ್‌, ಟೋಕಿಯೋ ನಗರಗಳಿಗೆ ಹೋಲಿಸಿದರೆ ನಮ್ಮಲ್ಲಿ ಅಷ್ಟೊಂದು ವಿದೇಶಿ ಪ್ರಯಾಣಿಕರು ಬರುವುದಿಲ್ಲ. ಅಲ್ಲದೆ, ಅಮೆರಿಕದಲ್ಲಿ ಮೊದಲ ಸೋಂಕು ಪ್ರಕರಣ ಪತ್ತೆಯಾಗಿದ್ದು ಜ.15ರಂದು ಹಾಗೂ ನಮ್ಮಲ್ಲಿ ಜ.30ರಂದು ಚೀನಾದ ವುಹಾನ್‌ನಿಂದ ಕೇರಳಕ್ಕೆ ಬಂದ ವಿದ್ಯಾರ್ಥಿಗಳಿಂದ. ಈ ಎಲ್ಲಾ ಕಾರಣಗಳಿಂದ ನಾವು 1 ತಿಂಗಳು ಹಿಂದೆ ಇದ್ದೇವೆ. ಸೋಂಕಿನ ಗಂಭೀರ ಮಟ್ಟ ಇನ್ನಷ್ಟೇ ಎದುರಾಗಬೇಕಿದೆ.

ಕೊರೋನಾ ಭೀತಿ: ಲಾಕ್‌ಡೌನ್‌ನಿಂದಾಗಿ ಸಾವಿನ ಸಂಖ್ಯೆ ಶೇ.50 ನಿಯಂತ್ರಣ

* ಹಾಗಾದರೆ, ಲಾಕ್‌ಡೌನ್‌ನಿಂದ ಸೋಂಕು ನಿಯಂತ್ರಣ ಆಗಿಲ್ಲವೇ?

ಲಾಕ್‌ಡೌನ್‌ನಿಂದ ದೇಶದಲ್ಲಿ ಸಂಭವಿಸಬಹುದಾಗಿದ್ದ ಸಾವುಗಳ ಪ್ರಮಾಣ ಶೇ.50 ರಷ್ಟುಕಡಿಮೆಯಾಗಿದೆ. ಲಾಕ್‌ಡೌನ್‌ನಿಂದ ಕೊÜರೋನಾ ನಿಯಂತ್ರಣಕ್ಕೆ ನಮಗೆ ಸೂಕ್ತ ಕಾಲಾವಕಾಶ ದೊರೆತಿದೆ. ಆದರೆ, ಈ ಮೊದಲು ಹರಡಿರುವ ಸೋಂಕು ಪ್ರಕರಣಗಳು ಈ ಅವಧಿಯಲ್ಲಿ ವರದಿಯಾಗುವುದರಿಂದ 10 ದಿನದಲ್ಲಿ ಭಾರೀ ಪ್ರಮಾಣದಲ್ಲಿ ಸೋಂಕು ವರದಿಯಾಗಲಿದೆ.

* ಜನರಿಗೆ ಸೋಂಕಿನಿಂದ ಸಂಪೂರ್ಣ ಮುಕ್ತಿ ಯಾವಾಗ?

ಲಾಕ್‌ಡೌನ್‌ ಮುಗಿಯುವ ವೇಳೆಗೆ ಸೋಂಕು ಪ್ರಕರಣಗಳು ತೀವ್ರವಾಗಿ ಹೆಚ್ಚಾಗಿರುತ್ತದೆ. ಲಾಕ್‌ಡೌನ್‌ ಬಳಿಕ ಸಾರ್ವಜನಿಕರು ಹಾಗೂ ಸರ್ಕಾರ ಎಚ್ಚರ ವಹಿಸಿದರೆ ಸೋಂಕು ಸಂಖ್ಯೆಯಲ್ಲಿ ಸ್ಥಿರತೆ ಮೂಡುತ್ತದೆ. ಬಳಿಕ ಸೋಂಕು ಪ್ರಕರಣಗಳು ಕಡಿಮೆಯಾಗುತ್ತಾ ಹೋಗುತ್ತವೆ. ಇದಕ್ಕೆ ಹಲವು ತಿಂಗಳೇ ಬೇಕಾಗಬಹುದು. ಎಷ್ಟುತಿಂಗಳು ಎಂದು ನಿರ್ದಿಷ್ಟವಾಗಿ ಹೇಳಲಾಗದು. ಹೀಗಾಗಿ ಲಾಕ್‌ಡೌನ್‌ ಅವಧಿಯನ್ನು ಏಕಾಏಕಿ ಸಡಿಲಿಸದೆ ಹಂತ-ಹಂತವಾಗಿ ಸಡಿಲಗೊಳಿಸಬೇಕು. ಸಾರ್ವಜನಿಕರು ಲಾಕ್‌ಡೌನ್‌ ಬಳಿಕವೂ ಸಾಮಾಜಿಕ ಅಂತರದಂತಹ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

* ಹೆಚ್ಚು ಸೋಂಕು ವರದಿಯಾಗದಿರಲು ಪರೀಕ್ಷೆ ಕೊರತೆ ಕಾರಣವಲ್ಲವೇ?

ಬೇರೆ ದೇಶಗಳಿಗೆ ಹೋಲಿಸಿದರೆ ನಮ್ಮಲ್ಲಿ ಪರೀಕ್ಷೆ ಮಾಡುತ್ತಿರುವ ಸರಾಸರಿ ಪ್ರಮಾಣ ಕಡಿಮೆ ಇದೆ. ಇದೀಗ ರಾಜ್ಯದಲ್ಲಿ 1 ಲಕ್ಷ ಕಿಟ್‌ಗಳಿಗೆ ಕಾರ್ಯಾದೇಶ ನೀಡಿದ್ದಾರೆ. ಆ್ಯಂಟಿ ಬಾಡಿ ಟೆಸ್ಟ್‌ ಕಿಟ್‌ಗಳು 1 ವಾರ ಅಥವಾ 10 ದಿನದೊಳಗಾಗಿ ಬರಲಿವೆ. ಬಳಿಕ ಹೆಚ್ಚು ಮಂದಿಗೆ ಪರೀಕ್ಷೆ ಮಾಡಲು ಅನುವಾಗಲಿದೆ.

* ನಮ್ಮ ವಾತಾವರಣದಲ್ಲಿನ ತಾಪಮಾನ, ನಮ್ಮಲ್ಲಿನ ರೋಗನಿರೋಧಕ ಶಕ್ತಿಯಿಂದ ಕೊರೋನಾ ಹೆಚ್ಚು ಹರಡಲ್ಲ ಎನ್ನುತ್ತಾರಲ್ಲ?

ಕೊರೋನಾ ಹೊಸ ವೈರಾಣು. ಅದರ ವರ್ತನೆ ಇನ್ನೂ ವೈಜ್ಞಾನಿಕವಾಗಿ ಇನ್ನಷ್ಟುಅಧ್ಯಯನವಾಗಬೇಕು. ಹೀಗಾಗಿ ರೋಗನಿರೋಧಕ ಶಕ್ತಿ ಹೊಂದಿರುವವರಿಗೆ, ಬಿಸಿಲು ಇರುವ ಕಡೆ ಸೋಂಕು ಹರಡುವುದಿಲ್ಲ ಎಂಬ ಖಾತ್ರಿ ಇಲ್ಲ. ಒಂದು ವೇಳೆ ಆ ರೀತಿಯಾದರೆ ಖುಷಿಯ ವಿಚಾರ. ನಾವು ಯಾವತ್ತೂ ನಿಟ್ಟಿಸಿರು ಬಿಡಬಾರದು ಕೆಟ್ಟದಿನಗಳನ್ನು ಎದುರು ನೋಡಿಕೊಂಡೇ ಎಚ್ಚರ ವಹಿಸಬೇಕು.

ಕೊರೋನಾ ಆತಂಕ: ಭಟ್ಕಳದಲ್ಲಿ ಕೊರೋನಾ ರಕ್ಷಣೆಗೆ ಸಿದ್ಧ​ವಾ​ಗು​ತ್ತಿ​ದೆ ಫೇಸ್‌ ಶೀಲ್ಡ್‌!

* ಕೊರೋನಾ ವಿಚಾರದಲ್ಲಿ ನಿಜಾಮುದ್ದೀನ್‌ ತಬ್ಲೀಘಿ ಜಮಾತ್‌ ಪ್ರಕರಣದ ಪರಿಣಾಮವೇನು?

ವರದಿಯಾಗುತ್ತಿರುವ ಪಾಸಿಟಿವ್‌ ಸಂಖ್ಯೆ ನೋಡುತ್ತಿದ್ದೇವೆಯಾದರೂ ಎಷ್ಟರ ಮಟ್ಟಿಗೆ ಪರಿಣಾಮ ಎಂದು ಹೇಳುವುದು ಕಷ್ಟ. ಆದರೆ, ಇದು ನಿಜಕ್ಕೂ ಬೇಸರ ತರಿಸುವ ವಿಷಯ.