ದುಬಾರಿ ದಂಡ ಎಫೆಕ್ಟ್: ಆಗಸ್ಟಲ್ಲಿ ಎಲ್‌ಎಲ್‌ಆರ್ ಪಡೆದವರು 34000 ಕ್ಕೂ ಹೆಚ್ಚು!
ಆಗಸ್ಟಲ್ಲಿ ಎಲ್‌ಎಲ್‌ಆರ್ ಪಡೆದವರು 34000ಕ್ಕೂ ಹೆಚ್ಚು! ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸುತ್ತಿರುವುದರ ಎಫೆಕ್ಟ್ | ಆರ್‌ಟಿಒ ಕಚೇರಿಗಳಿಗೆ ಮುಗಿಬಿದ್ದ ವಾಹನ ಸವಾರರು
ಬೆಂಗಳೂರು (ಸೆ. 20): ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಾಹನ ಚಾಲಕರಿಗೆ ದೊಡ್ಡ ಮಟ್ಟದಲ್ಲೇ ಬಿಸಿ ಮುಟ್ಟಿಸಿದೆ. ಪರಿಣಾಮ ವಾಹನ ಚಾಲನಾ ಪರವಾನಗಿ ಪತ್ರ ಹೊಂದಿಲ್ಲದೆ ವಾಹನ ಚಲಾಯಿಸುತ್ತಿದ್ದವರು ಇದೀಗ ಕಲಿಕಾ ಚಾಲನಾ ಪತ್ರ (ಎಲ್‌ಎಲ್‌ಆರ್) ಪಡೆಯಲು ಆರ್‌ಟಿಓ ಕಚೇರಿಗಳಿಗೆ ಎಡತಾಕತೊಡಗಿದ್ದಾರೆ.
ದುಬಾರಿ ದಂಡ ಜಾರಿಯಾಗುವ ಭೀತಿಯಲ್ಲಿ ಆಗಸ್ಟ್ ತಿಂಗಳೊಂದರಲ್ಲೇ ರಾಜ್ಯದ 65 ಆರ್‌ಟಿಓ ಕಚೇರಿಗಳಲ್ಲಿ 2.16 ಲಕ್ಷ ಮಂದಿ ವಾಹನ ಕಲಿಕಾ ಚಾಲನಾ ಪತ್ರ (ಎಲ್‌ಎಲ್‌ಆರ್) ಪಡೆದಿದ್ದಾರೆ. ಇದಕ್ಕೂ ಮುನ್ನ ಅಂದರೆ ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ಎಲ್‌ಎಲ್‌ಆರ್ ಪಡೆದವರ ಸಂಖ್ಯೆ 34 ಸಾವಿರ ಹೆಚ್ಚಳವಾಗಿದೆ!
ಹೆಲ್ಮೆಟ್ ಧರಿಸದ 43,600 ಬೈಕ್ ಸವಾರರು ಸಾವು!
ಕೇಂದ್ರ ಸರ್ಕಾರ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ಮಾಡಿ ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೊತ್ತವನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ ನಂತರ ಚಾಲನಾ ಪತ್ರವಿಲ್ಲದೆ ವಾಹನ ಚಲಾಯಿಸುವ ಚಾಳಿ ಹೊಂದಿದ್ದವರು ಬೆಚ್ಚಿ ಬಿದ್ದಿದ್ದಾರೆ. ಅವರೆಲ್ಲ ದುಬಾರಿ ದಂಡದಿಂದ ತಪ್ಪಿಸಿಕೊಳ್ಳಲು ಆರ್‌ಟಿಓ ಕಚೇರಿಗಳತ್ತ ಎಡತಾಕುತ್ತಿದ್ದಾರೆ.
ರಾಜ್ಯದಲ್ಲಿ ಸೆ.4 ರಿಂದ ದುಬಾರಿ ದಂಡ ಜಾರಿಗೆ ಬಂದಿದೆ. ಆದರೆ, ಸೆ.4 ರಿಂದ ಈ ನೀತಿ ಜಾರಿಯಾಗಲಿದೆ ಎಂಬ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಆಗಸ್ಟ್‌ನಲ್ಲೇ ಎಲ್‌ಎಲ್‌ಆರ್ ಪಡೆಯುವವರ ಸಂಖ್ಯೆ ದಿಢೀರ್ ಹೆಚ್ಚಳವಾಗಿತ್ತು.
ಬೆಂಗಳೂರಿನ ರಾಜಾಜಿನಗರ ಆರ್‌ಟಿಓದಲ್ಲಿ ಜುಲೈನಲ್ಲಿ 5582 ಮಂದಿ ಎಲ್‌ಎಲ್‌ಆರ್ ಪಡೆದಿದ್ದರೆ, ಆಗಸ್ಟ್‌ನಲ್ಲಿ 8076 ಮಂದಿ ಪಡೆದಿದ್ದಾರೆ. ಮೈಸೂರು ಪಶ್ಚಿಮ ಆರ್‌ಟಿಓದಲ್ಲಿ ಇದೇ ಅವಧಿಯಲ್ಲಿ ಕ್ರಮವಾಗಿ 3187 ಮತ್ತು 5540, ಹಾಸನದಲ್ಲಿ 3009 ಮತ್ತು 4955, ಬೆಳಗಾವಿಯಲ್ಲಿ 2997 ಮತ್ತು 5168 ಮಂದಿ ಎಲ್‌ಎಲ್‌ಆರ್ ಪಡೆದಿದ್ದಾರೆ.
ಹೆಲ್ಮೆಟ್ ಹಾಕಲ್ಲ, ಪೊಲೀಸರು ಹಿಡಿಯಲ್ಲ; ಈತ ಎಲ್ಲೇ ಹೋದ್ರು ದಂಡ ಇಲ್ಲ!
ಸಂಚಾರ ನಿಯಮ ಉಲ್ಲಂಘನೆಗೆ ದುಬಾರಿ ದಂಡ ಜಾರಿಗೊಳಿಸಿದ ಬಳಿಕ ಎಲ್‌ಎಲ್‌ಆರ್ ಮಾಡಿಸುವವರ ಸಂಖ್ಯೆ ಹೆಚ್ಚಳವಾಗಿದೆ. ದಂಡ ಜಾರಿಗೂ ಒಂದು ತಿಂಗಳ ಹಿಂದೆಯೇ ಭಾರೀ ಸಂಖ್ಯೆಯಲ್ಲಿ ಎಲ್‌ಎಲ್‌ಆರ್ ಪಡೆದಿದ್ದಾರೆ. ದ್ವಿಚಕ್ರ ವಾಹನ, ನಾಲ್ಕು ಚಕ್ರದ ವಾಹನ, ತ್ರಿಚಕ್ರ ವಾಹನ ಸೇರಿದಂತೆ ವಿವಿಧ ಮಾದರಿಯ ವಾಹನಗಳ ಕಲಿಕೆಗೆ ಎಲ್‌ಎಲ್‌ಆರ್ ವಿತರಿಸಲಾಗಿದೆ ಎಂದು ಹೆಚ್ಚುವರಿ ಸಾರಿಗೆ ಆಯುಕ್ತ ಶಿವರಾಜ್ ಬಿ.ಪಾಟೀಲ್ ‘ಕನ್ನಡಪ್ರಭ’ಕ್ಕೆ ತಿಳಿಸಿದರು.
15 ದಿನದಲ್ಲಿ 85000 ಎಲ್‌ಎಲ್‌ಆರ್:
ಆಗಸ್ಟ್ ತಿಂಗಳ ನಂತರವೂ ರಾಜ್ಯದಲ್ಲಿ ಎಲ್‌ಎಲ್‌ಆರ್ ಪಡೆಯುವರ ಸಂಖ್ಯೆಯಲ್ಲಿ ಹೆಚ್ಚಳವೇ ಕಂಡುಬಂದಿದೆ. ಸೆಪ್ಟೆಂಬರ್ ಮಾಸದ ಮೊದಲ 15 ದಿನಗಳಲ್ಲಿ ಎಲ್‌ಎಲ್‌ಆರ್ ಪಡೆದವರ ಸಂಖ್ಯೆ 85,874 ಮಂದಿ ಆಗಿದೆ.
ಸಂಚಾರ ನಿಯಮ ಉಲ್ಲಂಘನೆಗೆ ದಂಡದ ಮೊತ್ತ ಹೆಚ್ಚಳದಿಂದ ವಾಹನ ಚಾಲಕರಿಗೆ ಭಯ ಹಾಗೂ ಜವಾಬ್ದಾರಿ ಬಂದಿದೆ. ಸಂಚಾರ ನಿಯಮ ಪಾಲನೆಯಲ್ಲಿ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ ಎನ್ನುವ ಭಾವನೆ ಮೂಡುತ್ತಿದೆ. ಹಾಗಾಗಿ ಅಗತ್ಯ ದಾಖಲೆಗಳಿಗಾಗಿ ಆರ್‌ಟಿಓ ಕಚೇರಿಗಳತ್ತ ಬರುತ್ತಿದ್ದಾರೆ.
- ಶಿವರಾಜ್ ಬಿ.ಪಾಟೀಲ್, ಹೆಚ್ಚುವರಿ ಆಯುಕ್ತ, ಸಾರಿಗೆ ಇಲಾಖೆ
ಎಲ್‌ಎಲ್‌ಆರ್ ಹೆಚ್ಚಳದ ಮಾಹಿತಿ
ಆರ್‌ಟಿಓ ಜುಲೈ ಆಗಸ್ಟ್
ರಾಜಾಜಿನಗರ 5582 8076
ಕೆ.ಆರ್.ಪುರಂ 7077 9313
ಮೈಸೂರು ಪಶ್ಚಿಮ 3187 5540
ಹಾಸನ 3009 4955
ಬೆಳಗಾವಿ 2997 5168
ಮಡಿಕೇರಿ 804 1917
ರಾಣೆಬೆನ್ನೂರು 684 1462
- ಮೋಹನ್ ಹಂಡ್ರಂಗಿ