ಬೆಂಗಳೂರು ಟೆಕ್ಕಿ ಅತುಲ್‌ ಸುಭಾಶ್ ಕೇಸ್: ನಿಖಿತಾ ಅಂಡ್ ಫ್ಯಾಮಿಲಿಗೆ ಬಂಧನ ಭೀತಿ?

ಬೆಂಗಳೂರಿನಲ್ಲಿ ಉತ್ತರ ಪ್ರದೇಶ ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ಅತುಲ್ ಸುಭಾಷ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 24 ಪುಟಗಳ ಡೆತ್ ನೋಟ್‌ನಲ್ಲಿ ಪತ್ನಿ ಮತ್ತು ಅವರ ಕುಟುಂಬದ ಕಿರುಕುಳದ ಬಗ್ಗೆ ಬರೆದಿದ್ದಾರೆ. ಈ ಘಟನೆ ನ್ಯಾಯಾಂಗ ವ್ಯವಸ್ಥೆಯನ್ನು ಪ್ರಶ್ನಿಸುವಂತೆ ಮಾಡಿದೆ.

First Published Dec 12, 2024, 5:54 PM IST | Last Updated Dec 12, 2024, 5:54 PM IST

ಉತ್ತರ ಪ್ರದೇಶ ಮೂಲದ ಬೆಂಗಳೂರಿನ ಸಾಫ್ಟ್‌ವೇರ್ ಇಂಜಿನಿಯರ್ ಅತುಲ್ ಸುಭಾಷ್ ಡೆತ್‌ ನೋಟ್‌ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ದೇಶಾದ್ಯಂತ ಭಾರಿ ಸದ್ದು ಮಾಡುತ್ತಿದೆ. 24 ಪುಟಗಳ  ಡೆತ್‌ನೋಟ್‌ನಲ್ಲಿ ಅವರು ಕೊಟ್ಟ 'ಜಸ್ಟೀಸ್‌ ಈಸ್‌ ಡ್ಯೂ' (ನ್ಯಾಯ ಬಾಕಿಯಿದೆ) ಎಂಬ ಫಲಕ ನೇತು ಹಾಕಿಕೊಂಡಿರುವುದು ದೇಶದಲ್ಲಿ  ಸ್ತ್ರೀಪರವಾಗಿರುವ ಕಾನೂನು ಸೇರಿದಂತೆ, ಇಡೀ ನ್ಯಾಯಾಂಗದ ವ್ಯವಸ್ಥೆಯನ್ನು ಅಣಕಿಸುವಂತಿದೆ. ನ್ಯಾಯ ಕೇಳಲು ಹೋಗುವ ಸಾಮಾನ್ಯ ಜನರಿಗೆ ಆಗುವ ತಲ್ಲಣಗಳನ್ನು ಅವರ ಡೆತ್‌ನೋಟ್‌ ಅಭಿವ್ಯಕ್ತಪಡಿಸಿದೆ.

ಡಿ.9 ರಂದು ರಂಬಲ್‌ನಲ್ಲಿ ಪೋಸ್ಟ್ ಮಾಡಿದ 1.30 ಗಂಟೆಗಳ ವೀಡಿಯೊದಲ್ಲಿ, ಅವರು ತಮ್ಮ ಹೆಂಡತಿ ಮತ್ತು ಅವರ ಕುಟುಂಬದ ಕಿರುಕುಳದ ಕಾರಣದಿಂದ ಸಾವಿನ ಹಾದಿ ತುಳಿಯುವುದು ಅನಿವಾರ್ಯವಾಗಿದೆ ಎಂದು ಹೇಳಿಕೊಂಡಿದ್ದಾರೆ. ದೆಹಲಿಯ ಪ್ರತಿಷ್ಠಿತ ಸಾಫ್ಟ್‌ವೇರ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿರುವ ತಮ್ಮ ವಿಚ್ಛೇದಿತ ಪತ್ನಿ ತಮ್ಮ ವಿರುದ್ಧ 9 ಬೋಗಸ್ ಕೇಸ್ ದಾಖಲಿಸಿದ್ದಾರೆ. ಜೊತೆಗೆ ವಿನಾಕಾರಣ ನಿರ್ವಹಣೆ ಮೊತ್ತವನ್ನು ಮೂರು ಕೋಟಿ  ಕೇಳುತ್ತಿದ್ದಾರೆ ಎಂದು ಅತುಲ್ ಸುಭಾಷ್ ವೀಡಿಯೊದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: 

ಇದಲ್ಲದೇ ಅತುಲ್ ಸುಭಾಶ್ ಡೆತ್ ನೋಟ್‌ನಲ್ಲಿ 'ಪತ್ನಿಯ ಕುಟುಂಬವು ತಿಂಗಳಿಗೆ 40 ಸಾವಿರ ರೂಪಾಯಿ ಬೇಡಿಕೆ ಇಟ್ಟಿತ್ತು. ನಂತರ ಅದನ್ನು ದ್ವಿಗುಣಗೊಳಿಸಲಾಯಿತು. 4 ವರ್ಷದ ಮಗನಿಗೆ ಜೀವನಾಂಶದ ನೆಪದಲ್ಲಿ 1 ಲಕ್ಷ ರೂ. ಕೇಳಿದರು. ಆ ಮೊತ್ತವನ್ನು ಪಾವತಿಸಲು ಸಾಧ್ಯವಾಗದಿದ್ದರೆ ಹೋಗಿ ಆತ್ಮಹತ್ಯೆ ಮಾಡಿಕೋ ಎಂದು ಪತ್ನಿ ಹೇಳಿದಳು. ಇದನ್ನು ನ್ಯಾಯಾಧೀಶರ ಎದುರು ಹೇಳಿದಾಗ ಅವರು ನಕ್ಕು ಬಿಟ್ಟರು. ಇದು ನನಗೆ ತುಂಬಾ ನೋವನ್ನು ಉಂಟು ಮಾಡಿತು. ಇದಾದ ಬಳಿಕ ನ್ಯಾಯಾಲಯದಿಂದ ಹೊರಕ್ಕೆ ಹೋದಾಗ ನೀನಿನ್ನು ಸಾಯಲಿಲ್ವ ಎಂದು ಪತ್ನಿಯ ತಾಯಿ ಕೇಳಿದರು. ಇವೆಲ್ಲಾ ನನ್ನನ್ನು ಘಾಸಿಗೊಳಿಸಿತು' ಎಂದು ಉಲ್ಲೇಖ ಮಾಡಿದ್ದಾರೆ.

ಇದೀಗ ಅತುಲ್ ಸುಭಾಶ್‌ನ ಹೆಂಡತಿ ನಿಖಿತಾ ಹಾಗೂ ಅವರ ಕುಟುಂಬ ಸದಸ್ಯರಿಗೆ ಬಂಧನದ ಭೀತಿ ಎದುರಾಗಿದೆ. ಬೆಂಗಳೂರು ಪೊಲೀಸರು ಕಳೆದ ಎರಡು ದಿನಗಳಿಂದ ವಿಚಾರಣೆ ಮಾಡಿದ್ದು, ದೇಶದ ಜನರು ಈ ಪ್ರಕರಣಕ್ಕೆ ಸೂಕ್ತ ನ್ಯಾಯ ಸಿಗಬೇಕಿದೆ ಎಂದು ಆಗ್ರಹ ಮಾಡುತ್ತಿದ್ದಾರೆ. ಈ ಪ್ರಕರಣವನ್ನು ಸ್ವತಃ ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡು ಅತುಲ್ ಸಾವಿಗೆ ನ್ಯಾಯ ಒದಗಿಸಬೇಕು ಎಂಬ ಮಾತುಗಳು ಕೂಡ ಕೇಳಿಬರುತ್ತಿವೆ.