Asianet Suvarna News Asianet Suvarna News

ಸಾ.ನಾ ರಮೇಶ್‌ನವರ 'ಕಾಡು ಮಲ್ಲೆ' ಕವನ ಸಂಕಲನ ಬಿಡುಗಡೆ

* ಸಾ.ನಾ ರಮೇಶ್‌ನವರ “ಕಾಡು ಮಲ್ಲೆ” ಕವನ ಸಂಕಲನ ಬಿಡುಗಡೆ
* ಕೃಷಿಕ ಸಂಸ್ಥೆಯ ಸಹಯೋಗದ ಕಾರ್ಯಕ್ರಮ
* ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರ್ ಅವರಿಂದ ಲೋಕಾರ್ಪಣೆ

sa ra ramesh kadu malle poetry book released by chandrashekhara kambara rbj
Author
Bengaluru, First Published Jun 8, 2022, 9:02 PM IST

ಬೆಂಗಳೂರು. (ಜೂನ್‌ 08): ನಗರೀಕರಣದ ಕಡೆಗೆ ಹೆಚ್ಚಿನ ಗಮನ ಕೊಟ್ಟಿರುವ ನಾವುಗಳು ಕಲೆ ಮತ್ತು ಪ್ರಕೃತಿಯ ಮೇಲಿನ ಸಂವೇದನಾಶೀಲತೆಯನ್ನು ಮರೆತುಹೋಗಿದ್ದೇವೆ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಸಾಹಿತಿ ಚಂದ್ರಶೇಖರ ಕಂಬಾರರು ಅಭಿಪ್ರಾಯಪಟ್ಟರು.

 ಬೆಂಗಳೂರಿನ ಗುಹಾಂತರ ರೆಸಾರ್ಟ್‌ನಲ್ಲಿ ಕೃಷಿಕ ಸಂಸ್ಥೆಯ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಸಾ.ನಾ ರಮೇಶ್‌ ಅವರ “ಕಾಡು ಮಲ್ಲೆ” ಕವನ ಸಂಕಲನವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು. 

ಪುಸ್ತಕಕ್ಕೂ ಸ್ಟಾರ್‌ ಪಟ್ಟ: ವೀರಲೋಕ ಸಂಸ್ಥೆಯ ಹೊಸ ಯೋಜನೆ

ಕಲೆ ಹಾಗೂ ಸಂಸ್ಕೃತಿಗಳು ನಮ್ಮ ನಾಗರೀಕತೆಯ ಮೂಲ ಅಂಶಗಳು. ಈ ಮೂಲ ಅಂಶಗಳೇ ನಮ್ಮಲ್ಲಿನ ಕವಿ ಹೃದಯಕ್ಕೆ ಪ್ರೇರಣೆ ನೀಡುವ ಪ್ರಮುಖ ವಿಷಯಗಳು. ಕಾಡು ಮಲ್ಲೆ ಕವನ ಸಂಕಲನದ ಮೂಲಕ ಸಾ.ನಾ ರಮೇಶ್‌ ಗಂಭೀರವಾಗಿ ಪರಿಗಣಿಸಬೇಕಾದ ಕವಿಯಾಗಿ ಹೊರಹೊಮ್ಮಿದ್ದಾರೆ. ಪ್ರಕೃತಿಯ ಕಡೆ ಹಾಗೂ ತಮ್ಮ ಜೀವನದ ಪ್ರಾಥಮಿಕ ಹಂತದ ಅನುಭವನದ ಬುತ್ತಿಯನ್ನ ತಮ್ಮ ಹದವಾದ ಭಾಷೆಯಲ್ಲಿ ಕವನದ ರೂಪದಲ್ಲಿ ನಮ್ಮ ಮುಂದೆ ಇಟ್ಟಿದ್ದಾರೆ. ಮೂಲತಃ ವಾಸ್ತುಶಿಲ್ಪಿ (ಆರ್ಕಿಟೆಕ್ಟ್‌) ಆಗಿರುವ ರಮೇಶ್‌ ಅವರು ತಮ್ಮ ಯೋಜನೆಯಲ್ಲಿ ಮೂಲಕ ಪ್ರಕೃತಿಯನ್ನು ಉಳಿಸಿ ಬೆಳೆಸುವಂತಹ ಕಲ್ಪನೆಯನ್ನು ಸಾಕಾರಗೊಳಿಸಿದ್ದಾರೆ. ನಗರೀಕರಣದಿಂದ ನಾವುಗಳು ನಮ್ಮ ಸುತ್ತಮುತ್ತಲಿನ ಘಟನೆಗಳ ಬಗ್ಗೆ ಕಲೆ ಮತ್ತು ಸಂಸ್ಕೃತಿಯ ಬಗ್ಗೆ ಸಂವೇದನಾಶೀಲತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ನಮ್ಮ ಮುಂದಿನ ಪೀಳೀಗೆಗಳು ಇವುಗಳನ್ನು ಮರೆತು ಹೋಗುವ ಮುನ್ನ ಅವರಲ್ಲಿ ಆಸಕ್ತಿಯನ್ನು ಹುಟ್ಟಿಸುವಂತಹ ಕಾರ್ಯಗಳು ಹೆಚ್ಚಾಗಬೇಕು ಎಂದು ಹೇಳಿದರು. 

ಹಿರಿಯ ಕವಿ ಶ್ರೀ ದೊಡ್ಡರಂಗೇಗೌಡ ಮಾತನಾಡಿ, ಸಾ.ನಾ ರಮೇಶ್‌ ಅವರು ಕಾವ್ಯ ಕೃಷಿಕರೇ ಸರಿ. ಅವರು ಬರೆದಿರುವಂತಹ ಕವನ ಸಂಕಲನದಲ್ಲಿ ತಮ್ಮ ಬಾಲ್ಯದ ಹಳ್ಳಿಯ ಸೊಗಡಿನ ಚಿತ್ರಣವನ್ನು ಕಾವ್ಯಮಯವಾಗಿ ದಾಖಲಿಸಿದ್ದಾರೆ. ಹಳ್ಳಿಯ ಹಿನ್ನಲೆಯಿಂದ ಬಂದಂತಹ ನಮಗೆ ಎಲ್ಲಾ ಸುತ್ತಮುತ್ತಲಿನ ಪ್ರಾಣಿಗಳು ಹಾಗೂ ವಸ್ತುಗಳು ತೆಕ್ಕೆಗೆ ಒಗ್ಗಿರುತ್ತವೆ. ಈ ಎಲ್ಲಾ ಅನುಭವಗಳನ್ನ ತಮ್ಮ ಕಾವ್ಯದ ಮೂಲಕ ಪ್ರಸ್ತುತಪಡಿಸಿದ್ದಾರೆ. ಹಳ್ಳಿಯ ಹುಡುಗ ಹೇಗೆ ತನ್ನ ಮನಬಿಚ್ಚಿ ಹೃದಯದ ಭಾವನೆಗಳನ್ನು ಅಭಿವ್ಯಕ್ತಗೊಳಿಸಿದ್ದಾನೆ ಎನ್ನುವುದನ್ನ ಇಲ್ಲಿ ಕಾಣಬಹುದಾಗಿದೆ. ನಗರೀಕರಣ ಹಾಗೂ ಆಧುನೀಕರಣದಲ್ಲಿ ಸಂಬಂಧಗಳು ಮರೆಯಾಗುತ್ತಿವೆ. ನ್ಯೂಕ್ಲಿಯರ್‌ ಫ್ಯಾಮಿಲಿ ಬಂದು ಅಜ್ಜ, ಅಜ್ಜಿ, ಚಿಕ್ಕಮ್ಮ, ಚಿಕ್ಕಪ್ಪ ಹೀಗೆ ಸಂಬಂಧಗಳೇ ಬೇಕಿಲ್ಲದಂತೆ ಬದುಕುವ ಅನಿವಾರ್ಯತೆಗೆ ದೂಡಿವೆ. ಆದರೆ ಅವಿಭಕ್ತ ಕುಟುಂಬದ ಹಿನ್ನಲೆಯಿಂದ ಬಂದಂತಹ ರಮೇಶ್‌ ಆ ಸಂಬಂಧಗಳನ್ನು ಅರ್ಥಪೂರ್ಣವಾಗಿ ಪೋಣಿಸುತ್ತಾ ಹೋಗಿದ್ದಾರೆ. ತಮ್ಮ ದೇಸೀ ಶೈಲಿಯಲ್ಲಿ ಸಂಬಂಧಗಳ ಕುರಿತಾಗಿ ಬರೆದಿರುವುದು ಸಂತಸ ತಂದಿದೆ. ಪಟ್ಟಣದಲ್ಲಿ ಯಾವುದಕ್ಕೂ ಬೆಲೆ ಇಲ್ಲ. ನಗರದಲ್ಲಿ ಒಬ್ಬಂಟಿಗರಾಗಿ ಬಿಟ್ಟಿದ್ದೇವೆ ಎಂದು ವಿಷಾಧಿಸಿದರು. 

ಕಾರ್ಯಕ್ರಮದಲ್ಲಿ ಕೃಷಿಕ ಸಂಸ್ಥೆಗೆ ಅಧಿಕೃತವಾಗಿ ಚಾಲನೆ ನೀಡಲಾಯಿತು. ಹಿರಿಯ ಸಾಹಿತಿ ಎಸ್‌.ಜಿ ಸಿದ್ದರಾಮಯ್ಯನವರು ಪುಸ್ತಕಬಿಡುಗಡೆಗೊಳಿಸಿದರು. ಕಾರ್ಯಕ್ರಮದಲ್ಲಿ ಕೃಷಿಕ ಸಂಸ್ಥೆಯ ಗಿರೀಶ್‌ ಮತ್ತು ತಿಲಕ್‌, ಸಾಹಿತಿ ಮತ್ತು ಐ.ಎ.ಎಸ್‌ ಅಧಿಕಾರಿ ದಯಾನಂದ್‌, ಸಾಹಿತಿಗಳಾದ ಮಂಜುನಾಥ್‌ ಮಾಗೋದಿಯವರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Follow Us:
Download App:
  • android
  • ios