Asianet Suvarna News Asianet Suvarna News

JLF 2023: ಬರೆಯವ ಮೆಷೀನು ಸೃಜನಶೀಲ ಕವಿಯನ್ನು ಮೀರಿಸುವುದು ಅಸಾಧ್ಯ

ಜೈಪುರ ಸಾಹಿತ್ಯೋತ್ಸವ 2023
ಪುಸ್ತಕ ಮಾರಾಟದಲ್ಲಿ ದಾಖಲೆ
ಜಗತ್ತಿನ ಅತಿ ದೊಡ್ಡ ಸಾಹಿತ್ಯ ಮೇಳದ ವಿಶೇಷತೆಗಳು..

Machines cannot replace creative writers says Avinash Pandey skr
Author
First Published Jan 21, 2023, 5:51 PM IST

ಜೋಗಿ

ಜೈಪುರ: ನಮ್ಮ ಜಗತ್ತನ್ನು ಮುಂದಿನ ಐದು ವರ್ಷಗಳಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೇಗೆ ಬದಲಾಯಿಸುತ್ತದೆ ಅನ್ನುವುದನ್ನು ಹೇಳಲಿಕ್ಕಾಗುವುದಿಲ್ಲ. ಕಾದು ನೋಡುವುದೊಂದೇ ಮಾರ್ಗ. ಅದು ನಮ್ಮ ಬದುಕನ್ನು ಸರಳಗೊಳಿಸುತ್ತದೆ ಮತ್ತು ನಮಗೆ ಹೆಚ್ಚು ಸಮಯ ಉಳಿಯುವಂತೆ ಮಾಡುತ್ತದೆ ಎಂದು ಪತ್ರಿಕೋದ್ಯಮಿ ಅವಿನಾಶ್ ಪಾಂಡೆ ಅಭಿಪ್ರಾಯಪಟ್ಟರು.
12 ವರುಷಗಳ ಹಿಂದೆಯೇ ಮೆಷೀನ್ ಕಾದಂಬರಿ ಬರೆದ ಉದಾಹರಣೆ ಇದೆ. ಈಗಂತೂ ಆರ್ಟಿಫಿಷಿಯಲ್ ಬುದ್ಧಿಮತ್ತೆ ಬಳಸುವ ಮೂಲಕ ಬಾಟ್ ಲೇಖನ, ಕತೆ, ಕವಿತೆ ಬರೆಯುತ್ತದೆ. ಚಿತ್ರವನ್ನೂ ಬಿಡಿಸುತ್ತದೆ. ಅದರ ಅರ್ಥ ಮನುಷ್ಯನ ಅಗತ್ಯ ಕಡಿಮೆಯಾಗುತ್ತದೆ ಅಂತೇನಲ್ಲ. ಸ್ವಂತಿಕೆ ತುಂಬಿದ ಆಸಕ್ತಿಪೂರ್ಣ ಬರಹದ ಕೌಶಲ ಮನುಷ್ಯನಿಗಷ್ಟೇ ಸೀಮಿತ. ಅದನ್ನು ಯಾವ ಯಂತ್ರವೂ ಕಿತ್ತುಕೊಳ್ಳಲಾರದು ಎಂದು ಅವಿನಾಶ್ ಹೇಳಿದರು.

ತಂತ್ರಜ್ಞಾನ ಬಂದ ನಂತರ ಸುದ್ದಿಗಳಿಗೂ ಪ್ರಜಾಪ್ರಭುತ್ವ ಸಿಕ್ಕಿದೆ. ಯಾರು ಏನು ಬೇಕಿದ್ದರೂ ಬರೆಯಬಹುದು. ಸಾಮಾಜಿಕ ಜಾಲತಾಣಕ್ಕೆ ರೈಟಿಂಗ್ ಬಾಟ್‌ಗಳು ಸುದ್ದಿ ಬರೆದುಕೊಡುತ್ತವೆ. ಇದರಿಂದ ಒಳಿತೂ ಇದೆ, ಕೆಡುಕೂ ಇದೆ. ಸಾಮಾಜಿಕ ಜಾಲತಾಣಗಳ ವಿರುದ್ಧ ಕಠಿಣ ಕಾನೂನು ಅಗತ್ಯ ಎಂದು ಅವಿನಾಶ್ ಹೇಳಿದರು.

ತಂತ್ರಜ್ಞ ಮತ್ತು ಲೇಖಕ ಅನಿರುದ್ಧ ಸೂರಿ ಸಾಮಾಜಿಕ ಜಾಲತಾಣ ಗೆಲುವಿರುವಿದೇ ಯಾರು ಬೇಕಿದ್ದರೂ ಏನು ಬೇಕಿದ್ದರೂ ಹೇಳಬಹುದು ಅನ್ನುವುದರಲ್ಲಿ. ಆ ಮಾಧ್ಯಮದ ಮೇಲೆ ಗದಾಪ್ರಹಾರ ಮಾಡಬೇಕಾಗಿಲ್ಲ. ಜಗತ್ತಿನಲ್ಲಿ ತಂತ್ರಜ್ಞಾನ ನಿರಾಶವಾದಿಗಳಿದ್ದಾರೆ. ಅವರು ತಂತ್ರಜ್ಞಾನದಿಂದ ಯಾವ ಉಪಯೋಗವೂ ಇಲ್ಲ, ಅದು ಕೆಲಸ ಕಸಿಯುತ್ತದೆ ಎನ್ನುತ್ತಾರೆ. ತಂತ್ರಜ್ಞಾನ ಆಶಾವಾದಿಗಳಿದ್ದಾರೆ. ಅವರು ತಂತ್ರಜ್ಞಾನದಿಂದ ಸಮಯ ಉಳಿಯುತ್ತದೆ ಎನ್ನುತ್ತಾರೆ. ನಾನು ತಂತ್ರಜ್ಞಾನ ವಾಸ್ತವವಾದಿ. ಟೆಕ್ ಪೆಸಿಮಿಸ್ಟ್ ಮತ್ತು ಟೆಕ್ ಆಪ್ಟಿಮಿಸ್ಟ್ ಥರ ಟೆಕ್ ರಿಯಲಿಸ್ಟ್‌ಗಳು ಯೋಚನೆ ಮಾಡುವುದಿಲ್ಲ ಎಂದು ಹೇಳಿದರು.

ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆಯಿಂದಾಗಿ ಮನುಷ್ಯನ ಕಷ್ಟ ಕಡಿಮೆಯಾಗಿದೆ. ಕೆಲವು ದೇಶಗಳು ವಾರಕ್ಕೆ ನಾಲ್ಕು ದಿನ ಕೆಲಸ, ಮೂರು ದಿನ ರಜೆ ಎಂಬ ನಿಯಮ ರೂಪಿಸಿವೆ. ಇದರಿಂದಾಗಿ ಕಛೇರಿಯ ಕೆಲಸದ ಗುಣಮಟ್ಟ ಕಡಿಮೆಯಾಗಿಲ್ಲ. ಆದರೆ ಕೌಟುಂಬಿಕ ಜೀವನದ ಗುಣಮಟ್ಟ ಏರಿದೆ ಎಂದು ಸಿಡ್ನಿಯ ಯುಎನ್ಎಸ್‌ಡಬ್ಲ್ಯು ವಿಶ್ವವಿದ್ಯಾಲಯದ ಎಐ ಪರಿಣತ ಟಾಬಿ ವಾಲ್ಶ್ ಅಭಿಪ್ರಾಯಪಟ್ಟರು. ಎಐ ಈಗಿನ್ನೂ ಆರಂಭಿಕ ಹಂತದಲ್ಲಿದೆ. ಅದರ ಅಗಾಧ ಸಾಧ್ಯತೆಯ ಬಗ್ಗೆ ನಮಗೆ ಗೊತ್ತಿಲ್ಲ. ಅದು ಮುಂದೆ ಏನೇನು ಮಾಡಲಿದೆಯೋ ಹೇಳುವುದು ಅಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ಮೊದಲೆಲ್ಲ ಹೆಚ್ಚು ತಿಳಿದವನು ಅಧಿಕಾರಿ, ಕಡಿಮೆ ತಿಳಿದವನು ಗುಮಾಸ್ತ ಎಂಬ ಭಾವನೆ ಇತ್ತು. ಈಗ ಎಲ್ಲರಿಗೂ ಎಲ್ಲವೂ ಗೊತ್ತಿದೆ. ಯಾರು ಎಲ್ಲಿಂದ ಬೇಕಿದ್ದರೂ ಕೆಲಸ ಮಾಡಬಹುದಾಗಿದೆ. ವೃತ್ತಿ-ಬದುಕಿನ ಸಾಮರಸ್ಯದ ಬಗ್ಗೆ ನಾವು ಮಾತಾಡುತ್ತೇವೆ. ಆದರೆ ವೃತ್ತಿಗೂ ಬದುಕಿಗೂ ಸಾಮರಸ್ಯ ಸಾಧ್ಯವೇ ಇಲ್ಲ, ಎರಡೂ ವಿಭಿನ್ನ ಜಗತ್ತು ಎಂದು ಅನಿರುದ್ಧ ಸೂರಿ ಅಭಿಪ್ರಾಯಪಟ್ಟರು.
****
ಚೀನಾ ನಮಗಿಂತ ಬಲಶಾಲಿ ಅಲ್ಲ
ನಮ್ಮ ಸೈನಿಕರು ಆಕ್ಸಿಜನ್ ಕಿಟ್ ಇಲ್ಲದೇ ಯುದ್ಧಭೂಮಿಯಲ್ಲಿ ಹೋರಾಟಬಲ್ಲರು. ಪ್ರತಿಕೂಲ ಪರಿಸ್ಥಿತಿಯಲ್ಲೂ ಮುನ್ನುಗ್ಗಬಲ್ಲರು. ಆದರೆ ಚೀನಾದ ಸೈನಿಕರಿಗೆ ಆ ಶಕ್ತಿ ಇಲ್ಲ. ಅವರಿಗೆ ಯುದ್ಧಭೂಮಿ ತರಬೇತಿಯೂ ಇಲ್ಲ. ನಮ್ಮ ಹೆಲಿಕಾಪ್ಟರುಗಳ ಅರ್ಧದಷ್ಟು ತಾಕತ್ತಿರುವ ಚೀನಾ ಹೆಲಿಕಾಪ್ಟರುಗಳು ನಮ್ಮನ್ನು ಸೋಲಿಸಲು ಸಾಧ್ಯವಿಲ್ಲ. ಭಾರತ ಮತ್ತು ಚೀನಾ ಗಡಿಯ ಭೂಗೋಳ ಗೊತ್ತಿದ್ದವರಿಗೆ ಚೀನಾ ಯಾಕೆ ನಮ್ಮ ವಿರುದ್ದ ತಿರುಗಿಬೀಳುವುದು ಸಾಧ್ಯವಿಲ್ಲ ಎಂಬುದು ಗೊತ್ತಾಗುತ್ತದೆ ಎಂದು ಅರುಣಾಚಲ ಪ್ರದೇಶದ ಮಾಜಿ ರಾಜ್ಯಪಾಲ ಜನರಲ್ ಜೆಜೆ ಸಿಂಗ್ ಹೇಳಿದ ಮಾತು, ಎಲ್ಲರ ಚಪ್ಪಾಳೆಗೆ ಕಾರಣವಾಯಿತು. 
****

ಆರೋಗ್ಯಪೂರ್ಣ ಚರ್ಚೆಯೇ ಪ್ರಜಾಪ್ರಭುತ್ವದ ಮೂಲಾಧಾರ; ಶಶಿ ತರೂರ್!

ಭಾಷೆಯಿಂದ ಬೌದ್ಧ ಧರ್ಮ ಚೀನಕ್ಕೆ ಹೋಯಿತು
ತನ್ನದಲ್ಲದ ಬೌದ್ಧ ಧರ್ಮವನ್ನೂ ಬುದ್ಧನ ಸಿದ್ಧಾಂತವನ್ನೂ ಚೀನಾ ಅಪ್ಪಿಕೊಂಡದ್ದಕ್ಕೆ ಮುಖ್ಯ ಕಾರಣ ಅನುವಾದಕರು. ಅವರು ಸಂಸ್ಕೃತ ಮತ್ತು ಪಾಲಿ ಭಾಷೆಯಲ್ಲಿದ್ದ ಬೌದ್ಧ ಕತೆಗಳನ್ನು ಚೈನೀಸ್ ಭಾಷೆಗೆ ಅನುವಾದಿಸಿ ಎಲ್ಲರಿಗೂ ಸಿಗುವಂತೆ ಮಾಡಿದರು. ಹಿಂದೂ ಧರ್ಮದ ಕೃತಿಗಳು ಅನುವಾದ ಆಗದೇ ಇದ್ದ ಕಾರಣ ಬೌದ್ಧ ಧರ್ಮವೇ ಚೀನಾದ ಮಂದಿಗೆ ಹೆಚ್ಚು ಪ್ರಿಯವಾಯಿತು. ಆ ಕಾಲದ ನಾಲ್ಕೈದು ಮಂದಿ ಕುಳಿತುಕೊಂಡು ಅನುವಾದ ಮಾಡುವ ಮೂಲಕ ಬೌದ್ಧ ಧರ್ಮ ಗ್ರಂಥಗಳನ್ನು ಜಗತ್ತಿಗೆ ಪರಿಚಯಿಸಿದರು, ಚೀನಾ ಹಿಂದೂ ಧರ್ಮದ ಬದಲು ಬೌದ್ಧಧರ್ಮದತ್ತ ಆಕರ್ಷಿತವಾಗಿದ್ದಕ್ಕೆ ಇತಿಹಾಸ ತಜ್ಞ ತಾನ್‌ಸೆನ್ ಸೇನ್ ನೀಡಿದ ಕಾರಣ ಇದು. 
****
ಪುಸ್ತಕ ಮಾರಾಟದಲ್ಲಿ ದಾಖಲೆ
ಗೋಷ್ಠಿಗಳಷ್ಟೇ ಪುಸ್ತಕದ ಅಂಗಡಿಯೂ ತುಂಬಿ ತುಳುಕುತ್ತಿತ್ತು. ಎಲ್ಲಾ ಪುಸ್ತಕಗಳನ್ನೂ ಒಂದೇ ಮಳಿಗೆಯಲ್ಲಿ ಇಡಲಾಗಿತ್ತು. ಸದಾ ಗಿಜಿಗುಡುತ್ತಿದ್ದ ಪುಸ್ತಕದ ಅಂಗಡಿ ಮೂರನೆಯ ದಿನದ ಹೊತ್ತಿಗೆ 80000 ಹೆಚ್ಚು ಪುಸ್ತಕಗಳನ್ನು ಮಾರಾಟ ಮಾಡಿ ದಾಖಲೆ ಮಾಡಿತು. ಒಂದು ಪುಸ್ತಕದ ಬೆಲೆ ಸರಾಸರಿ 500 ರುಪಾಯಿ ಎನ್ನುವ ಲೆಕ್ಕಾಚಾರದಲ್ಲಿ ಮೂರನೇ ದಿನದ ಮಧ್ಯಾಹ್ನದ ಹೊತ್ತಿಗೆ ಸುಮಾರು ನಾಲ್ಕು ಕೋಟಿ ರುಪಾಯಿ ಪುಸ್ತಕ ವ್ಯಾಪಾರ ನಡೆದಿದೆ ಎಂದು ಪುಸ್ತಕ ಮಳಿಗೆಯ ಮೂಲ ತಿಳಿಸಿದೆ.
****
ಕತೆ ಹೇಳಿ ನಗಿಸಿ ನಲಿಸಿದ ಅಂತಾರಾಷ್ಟ್ರೀಯ ಅಜ್ಜಿ ಸುಧಾಮೂರ್ತಿ!
​​​​​​​

ಗುಂಪಿನಲ್ಲಿ ಗೋವಿಂದ
ಸಾಹಿತ್ಯೋತ್ಸವಕ್ಕಾಗಿ ಬಂದ ಲೇಖಕರನ್ನು ಸಂದರ್ಶಿಸುವುದಕ್ಕೆ ಪತ್ರಕರ್ತರಿಗೆ ಅವಕಾಶ ಇರುತ್ತದೆ. ಪ್ರತಿಯೊಬ್ಬರ ಜತೆಗೂ ಲೇಖಕರು ಮಾತಾಡುತ್ತಾರೆ. ಆದರೆ ಈ ವರ್ಷ ಯೂಟ್ಯೂಬರ್‌ಗಳ ಅಧಿಕ ಬೆಳೆಯಿಂದಾಗಿ ಸಾಹಿತಿಗಳು ಐದಾರು ಮಂದಿ ಗುಂಪಿಗೆ ಒಂದು ಸಂದರ್ಶನ ನೀಡಲು ನಿರ್ಧರಿಸಿದ್ದರು. ಹೀಗಾಗಿ ಲೇಖಕರನ್ನು ಖಾಸಗಿಯಾಗಿ, ಸುದೀರ್ಘವಾಗಿ ಸಂದರ್ಶಿಸುವ ಅವಕಾಶ ತಪ್ಪಿಹೋಗಿ ಗುಂಪಿನಲ್ಲಿ ಗೋವಿಂದ ಸಂದರ್ಶನವಷ್ಟೇ ದೊರಕಿತು. 

Follow Us:
Download App:
  • android
  • ios