Asianet Suvarna News Asianet Suvarna News

ಭಾರತೀಯ ಬಾಹ್ಯ ಗೂಢಚರ ಸಂಸ್ಥೆ ‘ರಾ’; ಏಕ್‌ಥಾ ಟೈಗರ್‌ಗೆ ಸ್ಫೂರ್ತಿಯಾದ ರವೀಂದ್ರ ಕೌಶಿಕ್

ರೀಸಚ್‌ರ್‍ ಅಂಡ್‌ ಅನಾಲಿಸಿಸ್‌ ವಿಂಗ್‌-ರಾ ಏನು ಮಾಡುತ್ತಿದೆ? ಭಾರತಕ್ಕೆ ಹೇಗೆ ನೆರವಾಗುತ್ತಿದೆ. ಹೇಗೆ ಭಾರತದ ಶತ್ರುಗಳನ್ನು ಅದು ಮಟ್ಟಹಾಕುತ್ತಿದೆ. ನಾವು ಜೇಮ್ಸ್‌ಬಾಂಡ್‌ ಸಿನಿಮಾಗಳಲ್ಲೋ ಡಿಟೆಕ್ಟಿವ್‌ ಥ್ರಿಲ್ಲರ್‌ಗಳಲ್ಲೋ ಅಥವಾ ಫ್ಯಾಮಿಲಿ ಮ್ಯಾನ್‌ನಂಥ ವೆಬ್‌ ಸೀರೀಸ್‌ಗಳಲ್ಲೋ ನೋಡುವ ಚಿತ್ರ ನಿಜವೇ? ನಿಜಕ್ಕೂ ರಾ ಏಜಂಟರು ಅಷ್ಟೆಲ್ಲ ಕಷ್ಟಪ‚ಡುತ್ತಾರಾ? ಈ ನೂರಾರು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ ನಿವೃತ್ತ ಪೊಲೀಸ್‌ ಮಹಾನಿರ್ದೇಶಕ ಡಾ. ಡಿವಿ ಗುರುಪ್ರಸಾದ್‌. ಅವರ ಏಟಿಗೆ ಎದುರೇಟು ಕೃತಿಯಲ್ಲಿ ಇಂಥ ಹತ್ತಾರು ಕತೆಗಳಿವೆ.

Black Tiger Ravindra Kaushik The Man Behind Ek Tha Tiger Story vcs
Author
Bengaluru, First Published Jul 31, 2022, 12:05 PM IST

-ಡಾ. ಡಿ ವಿ ಗುರುಪ್ರಸಾದ್‌

ಪಾಕಿಸ್ತಾನದಲ್ಲಿ ಕಾರ್ಯನಿರ್ವಹಿಸಿದ ಅತ್ಯಂತ ಹೆಸರುವಾಸಿಯಾದ ಭಾರತೀಯ ಗೂಢಚರನೆಂದರೆ ಬ್ಲಾಕ್‌ ಟೈಗರ್‌ ಎಂದೇ ಪರಿಚಿತನಾಗಿರುವ ರವೀಂದ್ರ ಕೌಶಿಕ್‌. 1952ರಲ್ಲಿ ರಾಜಾಸ್ತಾನದಲ್ಲಿ ಜನಿಸಿದ ಕೌಶಿಕ್‌ ಪದವಿಯನ್ನು ಪಡೆದ ಕೂಡಲೇ ‘ರಾ’ ಗೆ ಸೇರಿದ. ಆತನಿಗೆ ಎರಡು ವರ್ಷ ತರಬೇತಿ ಕೊಟ್ಟನಂತರ ಅವನಿಗೆ ನಬಿ ಅಹ್ಮದ್‌ ಶಕೀರ್‌ ಎಂಬ ಹೆಸರನ್ನು ಕೊಡಲಾಯಿತು. ಆತನಿಗೆ ಉರ್ದುವನ್ನು ಕಲಿಸಿದಲ್ಲದೇ, ಪಾಕಿಸ್ತಾನದ ಭೌಗೋಳಿಕ ವಿವರಗಳ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಕೊಡಲಾಯಿತು. ಇದಲ್ಲದೇ ಅವನಿಗೆ ಇಸ್ಲಾಂ ಧರ್ಮದ ಆಚಾರ ವಿಚಾರಗಳನ್ನು ಕಲಿಸಿ ಇಸ್ಲಾಂ ಧರ್ಮೀಯರಂತೆ ಅವನಿಗೆ ಸುನ್ನತಿಯನ್ನು ಕೂಡಾ ಮಾಡಿಸಲಾಯಿತು.

1975ರಲ್ಲಿ ಅಂದರೆ ತನ್ನ 23ನೇ ವರ್ಷದಲ್ಲಿ ಆತ ಪಾಕಿಸ್ತಾನಕ್ಕೆ ಹೋದ. ಆಲ್ಲಿ ಆತ ಕರಾಚಿ ವಿಶ್ವವಿದ್ಯಾಲಯದಲ್ಲಿ ಎಲ್‌.ಎಲ್‌.ಬಿಗೆ ಪ್ರವೇಶ ಪಡೆದ. ಆನಂತರ ಆತ ಪಾಕಿಸ್ತಾನ ಸೈನ್ಯವನ್ನು ಸೇರಿಕೊಂಡು ಮೇಜರ್‌ ಹುದ್ದೆಗೂ ಏರಿದ. ತರುವಾಯ ಪಾಕಿಸ್ತಾನದ ಸೈನ್ಯದಲ್ಲಿಯೇ ಕೆಲಸ ಮಾಡುತ್ತಿದ್ದ ಅಧಿಕಾರಿಯೊಬ್ಬನ ಪುತ್ರಿ ಅಮಾನತ್‌ ಎನ್ನುವವಳನ್ನು ಲಗ್ನವಾದ. 1979ರಿಂದ 1983ರವರೆಗೆ ಕೌಶಿಕ್‌ ಪಾಕಿಸ್ತಾನಿ ಸೈನ್ಯದ ಚಟುವಟಿಕೆಗಳ ಬಗ್ಗೆ ಭಾರತಕ್ಕೆ ಕಾಲಕಾಲಕ್ಕೆ ಉಪಯುಕ್ತ ಮಾಹಿತಿಗಳನ್ನು ನೀಡುತ್ತಾ ಬಂದ.

ಆಳುವ ವರ್ಗವನ್ನು ಮತ್ತಷ್ಟು ಬಲಪಡಿಸುವ ಪುರೋಹಿತಶಾಹಿ ರಚನೆ ಪುಣ್ಯಕೋಟಿ ಕಥೆ; ಜೋಗಿ ವಿಮರ್ಶೆ

1983ರಲ್ಲಿ ಇನಾಯತ್‌ ಮಸೀಹಾ ಎಂಬ ಬಾರತದ ಗೂಢಚಾರಿ ಪಾಕಿಸ್ತಾನದೊಳಕ್ಕೆ ನುಸುಳುವ ಸಂದರ್ಭದಲ್ಲಿ ಐ.ಎಸ್‌.ಐ ನಿಂದ ಬಂಧನಕ್ಕೊಳಗಾದ. ಅವನನ್ನು ಆ ಅಧಿಕಾರಿಗಳು ತೀವ್ರ ರೀತಿಯ ಹಿಂಸಾಚಾರಕ್ಕೆ ಗುರಿಮಾಡಿ ಪಾಕಿಸ್ತಾನದಲ್ಲಿರುವ ಭಾರತೀಯ ಗೂಢಚಾರರ ಹೆಸರನ್ನು ಹೇಳು ಎಂದು ಪೀಡಿಸಿದಾಗ ಆತ ಕೌಶಿಕ್‌ನ ಬಗ್ಗೆ ಅವರಿಗೆ ಮಾಹಿತಿಯಿತ್ತ. ಕೂಡಲೇ ಐ.ಎಸ್‌.ಐ ಕೌಶಿಕ್‌ನನ್ನು ಬಂಧಿಸಿ ಅವನನ್ನು ಸಿಯಾಲ್‌ ಕೋಟ್‌ನಲ್ಲಿರುವ ಶಿಬಿರವೊಂದಕ್ಕೆ ಕರೆದೊಯ್ದು ನಾನಾ ರೀತಿಯ ಚಿತ್ರಹಿಂಸೆಯನ್ನು ನೀಡಿತು. ಆದರೂ ಕೌಶಿಕ್‌ ಬಾಯಿಬಿಡಲಿಲ್ಲ. ಕೊನೆಗೆ ಆತನನ್ನು ಪಾಕಿಸ್ತಾನದ ವಿರುದ್ಧ ಗೂಢಚರ್ಯೆ ಮಾಡುತ್ತಿದ್ದ ಆರೋಪದ ಮೇರೆ ನ್ಯಾಯಾಲಯಕ್ಕೆ ಕಳಿಸಲಾಯಿತು. 1985 ರಲ್ಲಿ ಪಾಕಿಸ್ತಾನದ ನ್ಯಾಯಾಲಯವೊಂದು ಅವನಿಗೆ ಮರಣದಂಡನೆಯನ್ನು ವಿಧಿಸಿತು. ಇದರ ವಿರುದ್ಧ ಆತ ಸುಪ್ರೀಂ ಕೋರ್ಟಿಗೆ ಮೇಲ್ಮನವಿಯನ್ನು ಸಲ್ಲಿಸಿದಾಗ ಅವನ ಶಿಕ್ಷೆಯನ್ನು ಜೀವಾವಧಿ ಕಾರಾಗೃಹವಾಸಕ್ಕೆ ಪರಿವರ್ತಿಸಲಾಯಿತು. ಆತ 16 ವರ್ಷಗಳ ಕಾಲ ಪಾಕಿಸ್ತಾನದ ಬೇರೆ ಬೇರೆ ಜೈಲುಗಳಲ್ಲಿದ್ದ. ಕೌಶಿಕ್‌ನ ಆರೋಗ್ಯವು ಬಿಗಡಾಯಿಸಿ ಆತ ಹೃದಯ ಸಂಬಂಧೀ ರೋಗವೊಂದರಿಂದ 2001ರ ನವೆಂಬರಿನಲ್ಲಿ ಜೈಲಿನಲ್ಲಿಯೇ ಅಸುನೀಗಿದ. ಭಾರತವು ಕೌಶಿಕ್‌,‘ರಾ’ದ ಗೂಢಚಾರಿಯೆನ್ನುವುದನ್ನು ಅಲ್ಲಗಳೆದಿದೆ. ಕೌಶಿಕ್‌ ನ ಜೀವನದ ಬಗ್ಗೆ ‘ಏಕ್‌ ಥಾ ಟೈಗರ್‌’ ಎನ್ನುವ ಹಿಂದಿ ಚಿತ್ರ ಬಿಡುಗಡೆಯಾಗಿದೆ.

ಕೌಶಿಕ್‌ರಂತೆ ಹಲವಾರು ಭಾರತೀಯ ಗೂಢಚಾರರು ವಿದೇಶಗಳಲ್ಲಿ ತಮ್ಮ ಜೀವದ ಹಂಗು ತೊರೆದು ದೇಶಕ್ಕಾಗಿ ಕೆಲಸಮಾಡುತ್ತಿದ್ದಾರೆ. ಇನ್ನು ಕೆಲವರು ಕಾಶ್ಮೀರದಲ್ಲಿರುವ ಆತಂಕವಾದಿ ಸಂಘಟನೆಗಳ ಒಳಗಡೆ ಗುಪ್ತವಾಗಿ ನುಸುಳಿ ಅವುಗಳ ಮಾಹಿತಿಯನ್ನು ಸಂಗ್ರಹಿಸುತ್ತಿದ್ದಾರೆ. ಪಾಕಿಸ್ತಾನ ಸರ್ಕಾರಕ್ಕೆ ವಿರೋಧವಾಗಿರುವ ಹಲವಾರು ಆತಂಕವಾದಿ ದಳಗಳಿಗೆ ಭಾರತದ ಗೂಢಚಾರರು ಸಹಾಯ ಹಸ್ತವನ್ನು ನೀಡಿ ಹೋರಾಡಲು ಪ್ರಚೋದಿಸುತ್ತಿರುವುದು ತೆರೆದಿಟ್ಟಗುಟ್ಟು. ನಿವೃತ್ತ ‘ರಾ’ ಅಧಿಕಾರಿ ಬಿ.ರಾಮನ್‌ ಹೇಳುವಂತೆ ನೀವು ನಮಗೆ ಪೆಟ್ಟು ಕೊಟ್ಟರೆ, ನಾವು ನಿಮಗೆ ಪೆಟ್ಟು ಕೊಡಲು ತಯಾರಿದ್ದೇವೆ ಎಂದು ತೋರಿಸುವುದೇ ಇದರ ಉದ್ದೇಶ.

ಕ್ವಿಟ್‌ ಸೋಷಿಯಲ್‌ ಮೀಡಿಯಾ: ನಾವು ಪ್ರಾಡೆಕ್ಟ್‌ಗಳನ್ನಷ್ಟೇ ಬಳಸುತ್ತಿಲ್ಲ, ನಾವೇ ಪ್ರಾಡಕ್ಟುಗಳಾಗಿದ್ದೇವೆ

ಕೆಲವು ಸರ್ಕಾರಗಳ ಅವಧಿಯಲ್ಲಿ ‘ರಾ’ ಕೋವರ್ಚ್‌ ಚಟುವಟಿಕೆಗಳನ್ನು ಮಾಡುವುದನ್ನು ನಿಲ್ಲಿಸಬೇಕಾದ ಪ್ರಮೇಯವೂ ಬಂದಿತ್ತು. ಇಂದರ್‌ಸಿಂಗ್‌ ಗುಜ್ರಾಲ್‌ರವರು ಭಾರತದ ಪ್ರಧಾನಿಯಾಗಿ ಅಧಿಕಾರವನ್ನು ವಹಿಸಿಕೊಂಡ ಕೂಡಲೇ ಪಾಕಿಸ್ತಾನದಲ್ಲಿಯಾಗಲೀ ಅಥವಾ ಬೇರೆ ಯಾವುದೇ ದೇಶದಲ್ಲಾಗಲೀ ‘ರಾ’ ಸಂಘಟನೆ ಕೋವರ್ಚ್‌ ಆಕ್ಷನ್‌ ಮಾಡಬಾರದು ಎಂಬ ಸ್ಪಷ್ಟನಿರ್ದೇಶನ ಕೊಟ್ಟರು. ಅಟಲ್‌ ಬಿಹಾರಿ ವಾಜಪೇಯಿ ಸರ್ಕಾರ ಈ ಆದೇಶವನ್ನು ಮುಂದುವರೆಸಿತ್ತು. ಹೀಗಾಗಿ ಆ ಸಮಯದಲ್ಲಿ ‘ರಾ’ ಬೇರೆ ದೇಶಗಳಲ್ಲಿ ರಹಸ್ಯ ಚಟುವಟಿಕೆಗಳನ್ನು ನಡೆಸಲಿಲ್ಲ. ಆದರೆ 1999ರಲ್ಲಿ ಇಂಡಿಯನ್ಸ್‌ ಏರ್‌ಲೈನ್ಸ್‌ ವಿಮಾನವನ್ನು ಕಂದಹಾರ್‌ಗೆ ಅಪಹರಣ ಮಾಡಿದ ಘಟನೆಯ ನಂತರ ಸರ್ಕಾರವು ತನ್ನ ನಿರ್ದೇಶನವನ್ನು ಹಿಂತೆಗೆದುಕೊಂಡಿತು.

ಭಾರತವು ಅಣು ಬಾಂಬ್‌ ಪರೀಕ್ಷೆಯನ್ನು ಮಾಡುತ್ತಿರುವ ಬಗ್ಗೆ ಇಡೀ ಜಗತ್ತಿಗೇ ಯಾವ ಸುಳಿವು ಸಿಕ್ಕಿರದಂತೆ ಮಾಡಿದ ಯಶಸ್ಸು ‘ರಾ’ ಮತ್ತು ಭಾರತೀಯ ವಿಜ್ಞಾನಿಗಳಿಗೆ ಸಲ್ಲಬೇಕು. ಅಮೆರಿಕದ ಉಪಗ್ರಹಗಳು ಭಾರತದ ಮೇಲೆ ಸುತ್ತು ಹಾಕುತ್ತಾ ನೆಲದ ಮೇಲೆ ನಡೆಯುವ ವಿದ್ಯಮಾನಗಳನ್ನು ಚಿತ್ರೀಕರಿಸುತ್ತವೆ ಎಂದು ಪ್ರತಿಯೊಬ್ಬರಿಗೂ ತಿಳಿದಿತ್ತು. ಹೀಗಾಗಿ ಪೊಖಾರನ್‌ ಅಣು ಪರೀಕ್ಷಾ ಕೇಂದ್ರದ ಎಲ್ಲ ಚಟುವಟಿಕೆಗಳನ್ನೂ ರಾತ್ರಿಯಲ್ಲೇ ನಡೆಸಲಾಯಿತು. ಅಮೆರಿಕದ ಗೂಢಚರ ದಳ ಸಿಐಎ ಟೆಲಿಫೋನ್‌ ಸಂಭಾಷಣೆಗಳನ್ನು ಕದ್ದಾಲಿಸುತ್ತದೆ ಎಂದು ತಿಳಿದಿದ್ದ ‘ರಾ’, ಸಂಬಂಧಪಟ್ಟಅಧಿಕಾರಿಗಳಿಗೆ ಸಾಧ್ಯವಾದಷ್ಟುಕಾಲ ಮುಖತಃ ಚರ್ಚಿಸಬೇಕೆಂದು ಸೂಚಿಸಿತು. ಇದಲ್ಲದೆ ಎಲ್ಲ ಸಂಬಂಧಪಟ್ಟಹಿರಿಯ ವಿಜ್ಞಾನಿಗಳು, ಸಚಿವರು ಮತ್ತಿತರಿಗೆ ಬೇಕೆಂತಲೇ ಸುಳ್ಳು ಹೆಸರುಗಳನ್ನು ನೀಡಲಾಯಿತು. ಉದಾಹರಣೆಗೆ ಹಿರಿಯ ವಿಜ್ಞಾನಿ ಚಿದಂಬರಂಗೆ ಮೇಜರ್‌ ಜನರಲ್‌ ನಟರಾಜ್‌ ಎಂದು ಕರೆದರೆ ಇನ್ನೊಬ್ಬ ವಿಜ್ಞಾನಿಗೆ ಬ್ರಿಗೇಡಿಯರ್‌ ಕೌಲ್‌ ಎಂಬ ಹೆಸರನ್ನು ನೀಡಲಾಗಿತ್ತು. ಅವರೆಲ್ಲರೂ ಪರಸ್ಪರ ಸಂವಹನ ಮಾಡುವಾಗ ಮಿಲಿಟರಿ ಹೆಸರುಗಳನ್ನೇ ಬಳಸಬೇಕೆಂದು ತಿಳಿಸಿತ್ತು. ಇದರಿಂದ ಅವರ ಸಂಭಾಷಣೆಗಳನ್ನು ಕದ್ದಾಲಿಸಿದರೂ ಗೂಢಚಾರರಿಗೆ ಅವರೇನು ಮಾತನಾಡುತ್ತಿದ್ದಾರೆ ಎಂದು ತಿಳಿಯುತ್ತಿರಲಿಲ್ಲ.

ಉಪಾಸನಾ ಮೋಹನ್‌ಗೆ ಇಂದು ಗೌರಿ ಸುಂದರ್ ಪ್ರಶಸ್ತಿ!

ಎಲ್ಲಕ್ಕಿಂತ ಮಿಗಿಲಾಗಿ ವಿದೇಶೀ ಗೂಢಚಾರರನ್ನು ದಿಕ್ಕು ತಪ್ಪಿಸಲು ಇನ್ನೊಂದು ತಂತ್ರವನ್ನು ಬಳಸಲಾಯಿತು. ಬೇಕೆಂತಲೇ ಭಾರೀ ಮಿಲಿಟರಿ ಉಪಕರಣಗಳನ್ನು ಒಡಿಶಾದಲ್ಲಿರುವ ಚಂದೀಪುರಕ್ಕೆ ಸಾಗಿಸಲಾಯಿತು. ಚಂದೀಪುರದಲ್ಲಿ ಭಾರತದ ಕ್ಷಿಪಣಿ ಪರೀಕ್ಷಾ ಕೇಂದ್ರವಿರುವುದರಿಂದ ದೇಶವು ಹೊಸ ದೂರಗಾಮಿ ಕ್ಷಿಪಣಿಯೊಂದನ್ನು ಪರೀಕ್ಷೆ ಮಾಡುತ್ತದೆ ಎನ್ನುವ ಭಾವನೆ ಎಲ್ಲರಲ್ಲಿಯೂ ಬರುವಂತೆ ‘ರಾ’ ಅಧಿಕಾರಿಗಳು ಸೂಚಿಸಿದರು. ಹೀಗಾಗಿ ಎಲ್ಲ ದೇಶಗಳ ಗೂಢಚರ ದಳಗಳ ಗಮನ ಚಂದೀಪುರದತ್ತ ಹರಿದು ರಾಜಾಸ್ಥಾನದ ಪೊಖಾರನ್‌ನಲ್ಲಿ 1974ರ ಮೇ 18ರ ಬೆಳಿಗ್ಗೆ 8 ಗಂಟೆಗೆ ಅಣುಬಾಂಬನ್ನು ಸ್ಫೋಟಿಸಿ ಪರೀಕ್ಷೆ ಮಾಡಿದಾಗ ಇಡೀ ವಿಶ್ವವೇ ನಿಬ್ಬೆರಗಾಯಿತು. ಈ ಪರೀಕ್ಷೆಯು ಕನ್ನಡಿಗ ವಿಜ್ಞಾನಿ ರಾಜಾ ರಾಮಣ್ಣ ಇವರ ಅಧೀನದಲ್ಲಿ ನಡೆದಿದ್ದು ನಮ್ಮ ರಾಜ್ಯಕ್ಕೆ ಹೆಮ್ಮೆಯ ವಿಷಯ.

Follow Us:
Download App:
  • android
  • ios