ಮೈಕ್ರೋ ಫೈನಾನ್ಸ್ ಕಿರುಕುಳ ನಿಯಂತ್ರಣಕ್ಕೆ ಸಿಎಂ ಕ್ರಮ: ಬಾಲಕೃಷ್ಣ
ಮೈಕ್ರೋ ಫೈನಾನ್ಸ್ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು. ದಿನದ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಜಿಲ್ಲೆಯ ಎಸ್ಪಿ ಜೊತೆ ಮಾತನಾಡಿ ಸ್ಥಳೀಯ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ: ಶಾಸಕ ಬಾಲಕೃಷ್ಣ
ಮಾಗಡಿ(ಜ.25): ಮೈಕ್ರೋ ಫೈನಾನ್ಸ್ ಸಾಲಗಾರರಿಗೆ ಕಿರುಕುಳ ನಿಯಂತ್ರಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವರು ಸಭೆ ಕರೆದು ಮಾತುಕತೆ ನಡೆಸಲಾಗಿದೆ ಎಂದು ಶಾಸಕ ಬಾಲಕೃಷ್ಣ ಹೇಳಿದರು.
ತಾಲೂಕಿನ ಚಕ್ರಬಾವಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಕ್ರೋ ಫೈನಾನ್ಸ್ ಬಗ್ಗೆ ಸಾರ್ವಜನಿಕರು ಎಚ್ಚರ ವಹಿಸಬೇಕು. ದಿನದ ಬಡ್ಡಿ ದಂಧೆಗೆ ಕಡಿವಾಣ ಹಾಕಲು ಜಿಲ್ಲೆಯ ಎಸ್ಪಿ ಜೊತೆ ಮಾತನಾಡಿ ಸ್ಥಳೀಯ ಪ್ರಕರಣಗಳ ವಿರುದ್ಧ ಕ್ರಮ ಕೈಗೊಳ್ಳಲು ಸೂಚಿಸುತ್ತೇನೆ. ತಾಲೂಕಿನಲ್ಲಿ ಮೈಕ್ರೋ ಫೈನಾನ್ಸ್ ವಹಿವಾಟು ಕುರಿತಂತೆ ಯಾವುದೇ ಪ್ರಕರಣ ನನ್ನ ಗಮನಕ್ಕೆ ಬಂದಿಲ್ಲ. ಮೈಕ್ರೋ ಫೈನಾನ್ಸ್ ಜೊತೆಗೆ ಕ್ರಿಕೆಟ್ ಬೆಟ್ಟಿಂಗ್, ಆನ್ ಲೈನ್ ಗೇಮ್ ಗಳಿಂದ ಯುವಕರು ದಾರಿ ತಪ್ಪುತ್ತಿದ್ದು ಅವರನ್ನು ಸರಿದಾರಿಗೆ ತರಬೇಕಿದೆ ಎಂದು ತಿಳಿಸಿದರು.
ಕರ್ನಾಟಕದಲ್ಲಿ ಮಿತಿ ಮೀರಿದ ಮೈಕ್ರೋ ಫೈನಾನ್ಸ್ ದಾದಾಗಿರಿ: ಮತ್ತಿಬ್ಬರು ಆತ್ಮಹತ್ಯೆ
ವೈಜಿ ಗುಡ್ಡ ಜಲಾಶಯದಿಂದ ಚಕ್ರಬಾವಿ ಕೆರೆ ತುಂಬಿಸುವ ಯೋಜನೆ ಅನುಷ್ಠಾನ:
ಚುನಾವಣೆ ಸಂದರ್ಭದಲ್ಲಿ ಮಾಜಿ ಸಂಸದ ಡಿ.ಕೆ.ಸುರೇಶ್ ನೀಡಿದಭರವಸೆಯಂತೆವೈಜಿಗುಡ್ಡಜಲಾಶಯದಿಂದ ಚಕ್ರಬಾವಿ ಕೆರೆ ಸೇರಿದಂತೆ ಸುತ್ತಮುತ್ತಲ ಕೆರೆಗಳನ್ನು ತುಂಬಿಸುವ ಯೋಜನೆ ಅನುಮೋದನೆ ಪಡೆದಿದ್ದು ಇನ್ನೆರಡು ಮೂರು ತಿಂಗಳಲ್ಲಿ ಕಾರ್ಯಗತಗೊಳಿಸ ಲಾಗುವುದು. ಆದರೆ ದುಡಿಯುವ ನಾಯಕರಿಗೆ ಮತ ಹಾಕದೆ ಕಳೆತ್ತುಗಳಿಗೆ ಮತ ಹಾಕಿ ಚುನಾವಣೆಯಲ್ಲಿ ಸೋಲಿಸಿರುವುದೇ ಬೇಸರದ ಸಂಗತಿ. ಚಕ್ರಬಾವಿ ನನ್ನ ಸ್ವಗ್ರಾಮ ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದು ಬಾಲಕೃಷ್ಣ ತಿಳಿಸಿದರು.
ಬಿಡದಿಯಲ್ಲಿ ಏರ್‌ಪೋರ್ಟ್ ಆದರೆ ಸಮಸ್ಯೆ ಇಲ್ಲ: ಕೆಆರ್‌ಡಿಸಿಎಲ್ ಈಗಾಗಲೇ ಸದ್ದಿಲ್ಲದೆ ಬಿಡದಿಯಲ್ಲಿ ಏರ್‌ಪೋರ್ಟ್ ಮಾಡಲು ಸರ್ವೆ ಕಾರ್ಯ ಹಾಗೂ ಭೂಸ್ವಾಧೀನ ಮಾಡುತ್ತಿರುವ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಶಾಸಕ ಬಾಲಕೃಷ್ಣ ಉತ್ತರಿಸಿ, ಬಿಡದಿಯಲ್ಲಿ ಏರ್‌ಪೋರ್ಟ್ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಬಿಡದಿ ವೇಗವಾಗಿ ಬೆಳೆಯುತ್ತಿದ್ದು ಕೈಗಾರಿಕಾ ಪ್ರದೇಶವೂ ಆಗಿದೆ. ಅದರಿಂದ ಬಿಡದಿ ಒಂದಕ್ಕೆ ಅನುಕೂಲವಾಗುವುದಿಲ್ಲ, ಮೈಸೂರು, ಹೊಸೂರು ಭಾಗದ ನಾಗರಿಕರಿಗೆ ಏರ್‌ಪೋರ್ಟ್ ಅನುಕೂಲವಾಗಲಿದೆ. ದೇವನಹಳ್ಳಿ ಏರ್‌ಪೋರ್ಟ್ ದೂರವಿರುವುದ ರಿಂದ ಈ ಭಾಗದಲ್ಲಿ ಏರ್‌ಪೋರ್ಟ್ ಮಾಡಬೇಕು ಎಂಬ ಒತ್ತಡ ಇದೆ ಎಂದರು.
ಜ.31ರಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಚಕ್ರಬಾವಿ ಗ್ರಾಮದಲ್ಲಿ ಜನವರಿ 31ರಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ 4 ಕೋಟಿ ವೆಚ್ಚದಲ್ಲಿ ನೂತನ ಸರ್ಕಾರಿ ಪ್ರಾಥಮಿಕ ಆಸ್ಪತ್ರೆ ಕಟ್ಟಡ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ಸಂಸದ ಡಾ. ಸಿ.ಎನ್. ಮಂಜುನಾಥ್, ಮಾಜಿ ಸಂಸದ ಡಿ.ಕೆ.ಸುರೇಶ್ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಲಿದ್ದಾರೆ ಎಂದು ಬಾಲಕೃಷ್ಣ ತಿಳಿಸಿದರು.
ಮೈಕ್ರೋಫೈನಾನ್ಸ್‌ಗೆ ಶೀಘ್ರ ಮೂಗುದಾರ: ಕಂಪನಿಗಳ ಕಿರುಕುಳ ತಡೆಯಲು ಸಿಎಂ ಸಿದ್ದು ಮಹತ್ವದ ಸಭೆ
ಮುಖ್ಯಮಂತ್ರಿಗಳಿಗೆ ಲೋಕಾಯುಕ್ತದಿಂದ ಗೊತ್ತಿರುವ ವಿಚಾರವೇ ಅನಾವಶ್ಯಕವಾಗಿ ಕೇಂದ್ರ ಸರ್ಕಾರ ಸಿದ್ದ ರಾಮಯ್ಯನವರಿಗೆ ಉದ್ದೇಶಪೂರಕವಾಗಿ ಬೇರೆ ಬೇರೆ ಪ್ರಕರಣಗಳನ್ನು ಹಾಕಿಸುತ್ತಿದೆ. ಮುಡಾ ವಿಚಾರದಲ್ಲಿ ಯಾವುದೇ ಪಾತ್ರವಿಲ್ಲ ಎಂಬುದನ್ನು ಪ್ರಾಮಾಣಿಕವಾಗಿ ಲೋಕಾಯುಕ್ತರು ತನಿಖೆ ಮಾಡುತ್ತಿದ್ದಾರೆ. ಇದನ್ನು ಪ್ರಶ್ನೆ ಮಾಡುವುದಾದರೆ ವಿರೋಧಿಗಳು ಹೈಕೋರ್ಟ್‌ಗೆ ಹೋಗಬಹುದು ಎಂದು ಬಾಲಕೃಷ್ಣ ಸ್ಪಷ್ಟನೆ ನೀಡಿದರು.
ಈ ಸಂದರ್ಭದಲ್ಲಿ ದಿಶಾ ಸಮಿತಿ ಮಾಜಿ ಸದಸ್ಯ ಜೆಪಿ ಚಂದ್ರೇಗೌಡ, ಕಾಂಗ್ರೆಸ್ ಮುಖಂಡರಾದ ಸಿಗೆಕುಪ್ಪೆ ಶಿವಣ್ಣ, ಚಕ್ರಬಾವಿ ಸಿ.ಬಿ.ರವೀಂದ್ರ, ಯೋಗ ನರಸಿಂಹಯ್ಯ, ಬಸವರಾಜು, ಸಿ.ಎಚ್ ಬೈರೇಶ್, ದೀಪಕ್, ಪುಟಾಣಿ ಕುಮಾರ್, ಬಾಬು, ನಾಗರಾಜು, ಉಪಸ್ಥಿತರಿದ್ದರು.