Asianet Suvarna News Asianet Suvarna News

Aerial Crop Spraying: ಅಡಕೆ ಬೆಳೆ ಕ್ರಿಮಿನಾಶಕ ಸಿಂಪಡಿಸಲು ಬಂತು ಡ್ರೋನ್!

*2 ಗಂಟೆಯಲ್ಲೇ ಸಿಂಪರಣೆ ಕೆಲಸ ಮುಗಿಸಿದ ಡ್ರೋಣ್‌
*ರೈತರಲ್ಲಿ ಆಸಕ್ತಿ ಹುಟ್ಟಿಸಿದ ಹೊಸ ತಂತ್ರಜ್ಞಾನ
*ಎಂ-ಡ್ರೋಣ್‌ ಮಲ್ಟಿಫ್ಲೆಕ್ಸ್‌ ಪ್ರೈವೇಟ್‌ ಲಿಮಿಟೆಡ್‌ ಡ್ರೋನ್

Chitradurga Drone Technology provides aerial crop spraying solution for farming mnj
Author
Bengaluru, First Published Jan 18, 2022, 12:56 PM IST

ಚಿತ್ರದುರ್ಗ/ಸಿರಿಗೆರೆ (ಜ. 18):  ಅಡಿಕೆಗೆ ಕೊಳೆ ರೋಗ, ಸುಳಿ ರೋಗ ಬಂದಾಗ ಇನ್ನೇನು ಹಲವು ವರ್ಷ ಕಾಪಾಡಿಕೊಂಡು ಬಂದಿದ್ದ ತೋಟ ಕೈಕೊಡುತ್ತದೋ ಏನೋ ಎಂಬಂತೆ ತಲೆಮೇಲೆ ಕೈಹೊತ್ತು ಕೂರುವ ರೈತರ ನೆರವಿಗೆ ಇದೀಗ ಬಂದಿದೆ ಡ್ರೋಣ್‌ ತಂತ್ರಜ್ಞಾನ (Drone Technology). ಇದುವರೆಗೂ ಸಿನಿಮಾ, ಮದುವೆ ಮನೆಗಳ ಚಿತ್ರೀಕರಣ ಸಂದರ್ಭದಲ್ಲಿ ನಮ್ಮ ಚಿತ್ತವನ್ನು ಕಲಕುತ್ತಿದ್ದ ಡ್ರೋಣ್‌ ಈಗ ನೇರವಾಗಿ ರೈತರ ಹೊಲ-ಗದ್ದೆ-ತೋಟಗಳಿಗೆ ಇಳಿದು ತನ್ನ ಕಾರ್ಯಾಚರಣೆ ಆರಂಭಿಸಿದೆ.

ಎಂ-ಡ್ರೋಣ್‌ ಮಲ್ಟಿಫ್ಲೆಕ್ಸ್‌ ಪ್ರೈವೇಟ್‌ ಲಿಮಿಟೆಡ್‌ (Multiplex Drone Pvt. Ltd) ಸಂಸ್ಥೆಯು ವ್ಯವಸಾಯದ ಬಳಕೆಗಾಗಿಯೇ ವಿಶೇಷವಾಗಿ ರೂಪುಗೊಳಿಸಿರುವ ಡ್ರೋಣ್‌ ಯಂತ್ರವನ್ನು ಭತ್ತ, ಗೋದಿ, ಕಬ್ಬು, ಅಡಿಕೆ ಬೆಳೆಯಲ್ಲಿನ ರೋಗಗಳ ನಿಯಂತ್ರಣಕ್ಕೆ ಬಳಸಬಹುದಾಗಿದೆ. ಈಗಾಗಲೇ ಇದನ್ನು ಕರ್ನಾಟಕದ ಶಿವಮೊಗ್ಗ, ಚಿಕ್ಕಮಗಳೂರು, ಗುಲ್ಬರ್ಗಾ, ಬೀದರ್‌ ಮುಂತಾದ ಕಡೆ ಪ್ರಯೋಗ ನಡೆಸಿರುವ ಡ್ರೋಣ್‌ ಸಿರಿಗೆರೆ ಸಮೀಪದ ಹಳೆರಂಗಾಪುರದಲ್ಲಿ ಸೋಮವಾರ ಸುಮಾರು 2 ಗಂಟೆಗಳ ಕಾಲ ತನ್ನ ಸಿಂಪರಣಾ ಕೆಲಸ ಮಾಡಿದೆ. 

ಇದನ್ನೂ ಓದಿ: Karnataka: ರೈತರಿಗೆ ಸಿಗುತ್ತಿರುವ ಸೌಲಭ್ಯ ನೇಕಾರರಿಗೂ ವಿಸ್ತರಣೆ: ಸಚಿವ ಮುನೇನಕೊಪ್ಪ

ಗುರುಶಾಂತಪ್ಪ ಎಂಬುವವರ ನಾಲ್ಕು ಎಕರೆ ಅಡಿಕೆ ತೋಟಕ್ಕೆ ಡ್ರೋಣ್‌ ಬಳಸಿ ಸಿಂಪರಣೆ ಮಾಡಲಾಗಿದೆ. ಸಾಮಾನ್ಯವಾಗಿ ಕೃಷಿ ಕಾರ್ಮಿಕರನ್ನು ಬಳಸಿಕೊಂಡು ನಾಲ್ಕು ದಿನ ಮಾಡಬೇಕಾಗಿದ್ದ ಕೆಲಸವನ್ನು ಡ್ರೋಣ್‌ ಕೇವಲ ಎರಡು ಗಂಟೆಯಲ್ಲಿ ಮಾಡಿ ಮುಗಿಸಿದೆ. ಮಧ್ಯಾಹ್ನ 3 ಗಂಟೆಗೆ ಔಷಧ ಸಿಂಪಡಣೆ ಮಾಡಲು ಆರಂಭಿಸಿ 5 ಗಂಟೆಗೆ ತನ್ನ ಕೆಲಸ ಪೂರೈಸಿದೆ. ಅಂದರೆ 4 ಎಕರೆ ಅಡಿಕೆ ಬೆಳೆಗೆ ಸಿಂಪರಣೆ ಮಾಡಲು ಡ್ರೋಣ್‌ ತೆಗೆದುಕೊಂಡ ಅವಧಿ ಕೇವಲ ಎರಡು ಗಂಟೆ. 

ಇದರ ಮತ್ತೊಂದು ವಿಶೇಷವೆಂದರೆ ನಾಲ್ಕು ಎಕರೆ ಬೆಳೆಗೆ ಸಿಂಪರಣೆಗೆ ಬಳಸಿಕೊಂಡದ್ದು ಕೇವಲ 6 ಬಿಂದಿಗೆ ನೀರು ಮಾತ್ರ. ಕೃಷಿ ಕಾರ್ಮಿಕರು ಮಾಡುವ ಸಾಂಪ್ರದಾಯಿಕ ಸಿಂಪರಣೆಗೆ ನಾಲ್ಕಾರು ಡ್ರಂ ನೀರು ಬೇಕಾಗುತ್ತಿತ್ತು.ಔಷಧ ಮತ್ತು ನೀರು ಸಂಗ್ರಹಿಸಲು ಡ್ರೋಣ್‌ನಲ್ಲಿ 10 ಲೀಟರ್‌ ಸಾಮರ್ಥ್ಯದ ಟ್ಯಾಂಕ್‌ ಇದೆ. ಟ್ಯಾಂಕಿನಲ್ಲಿ ಔಷಧ ಖಾಲಿಯಾದಾಗ ನೆಲಕ್ಕಿಳಿಯುವ ಡ್ರೋಣ್‌, ಕೆಲಸ ಬಿಟ್ಟಜಾಗದಿಂದಲೇ ಮತ್ತೆ ತನ್ನ ಕೆಲಸವನ್ನು ಮುಂದುವರೆಸುತ್ತದೆ.

ಇದನ್ನೂ ಓದಿ: Bagalkot: ಬೆಂಗಳೂರಿನಲ್ಲಿ ಸಾಫ್ಟ್‌ವೇರ್ ಎಂಜಿನಿಯರ್, ವೀಕೆಂಡ್‌ನಲ್ಲಿ ಕೃಷಿಕ, ಅಪರೂಪದ ಸಾಧಕ!

ರೈತರಿಗೆ ವರದಾನ: ಸಾಂಪ್ರದಾಯಿಕ ಸಿಂಪರಣೆ ಮಾಡಲು ಅಧಿಕ ನೀರು, ಔಷಧ, ಕಾರ್ಮಿಕರ ಕೂಲಿ ವೆಚ್ಚ ಭರಿಸಬೇಕಾಗುತ್ತದೆ. ಆದರೆ ಡ್ರೋಣ್‌ ತಂತ್ರಜ್ಞಾನ ಬಳಸಿದರೆ ಎಕರೆಗೆ ಕೇವಲ ರು.1500 ಖರ್ಚು ಬರುತ್ತದೆ. ಚಿತ್ರದುರ್ಗ ಜಿಲ್ಲೆಯಲ್ಲಿ ಇದನ್ನು ಪರಿಚಯಿಸುತ್ತಿರುವ ಕಾರಣದಿಂದ ಬೆಲೆಯಲ್ಲಿ ರಿಯಾಯಿತಿ ತೋರಿ ರು. 1350 ಎಂದು ನಿಗದಿ ಮಾಡಲಾಗಿದೆ. ಭತ್ತ, ಗೋಧಿ ಬೆಳೆಯ ಒಂದು ಎಕರೆ ಪ್ರದೇಶಕ್ಕೆ ಸಿಂಪಡಣೆ ಮಾಡಲು ಕೇವಲ 10 ನಿಮಿಷ ಸಾಕು. 

ಈಗಾಗಲೇ ಕರ್ನಾಟಕದಲ್ಲಿ 3200 ಎಕರೆ ಭೂಪ್ರದೇಶದಲ್ಲಿ ಡ್ರೋಣ್‌ ಬಳಸಿ ಔಷಧಿ ಸಿಂಪರಣೆ ಮಾಡಿದ್ದು ಅದರಲ್ಲಿ 647 ಎಕರೆ ಅಡಿಕೆ ತೋಟವಾಗಿದೆ. ಹಳೆರಂಗಾಪುರ ಗ್ರಾಮದಲ್ಲಿ ಡ್ರೋಣ್‌ ಬಳಸಿದ ಸುದ್ದಿ ತಿಳಿಯುತ್ತಲೇ ಸ್ಥಳಕ್ಕೆ ಧಾವಿಸಿ ಬಂದ ಸುತ್ತಲಿನ ಗ್ರಾಮಗಳ ರೈತರು ತಮ್ಮ ತೋಟದಲ್ಲಿಯೂ ಸ್ಪ್ರೇ ಮಾಡಿಸಲು ತುದಿಗಾಲ ಮೇಲೆ ನಿಂತಿದ್ದಾರೆ.

ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಬಿಹಾರ ಮುಂತಾದ ಕಡೆ ಈ ತಂತ್ರಜ್ಞಾನವನ್ನು ಈಗಾಗಲೇ ರೈತರು ಬಳಸಿಕೊಂಡಿದ್ದಾರೆ. ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರದೇಶಕ್ಕೆ ಔಷಧಿ ಸಿಂಪಡಣೆ ತಂತ್ರಜ್ಞಾನ ಇದು. ಕೃಷಿ ಕಾರ್ಮಿಕರ ಕೊರತೆಯನ್ನು ಇದು ನಿಗಿಸಲಿದೆ. ರೈತರಿಗೆ ನೆರವಾಗಲೆಂದೇ ಇದನ್ನು ವಿಶೇಷವಾಗಿ ರೂಪಿಸಲಾಗಿದೆ. ಈ ರಾಜ್ಯಗಳಲ್ಲಿ ಈ ತಂತ್ರಜ್ಞಾನವನ್ನು ಹೆಚ್ಚಾಗಿ ಬಳಸಲಾಗಿದೆ. ಅಭಿವೃದ್ಧಿಶೀಲವಾಗುತ್ತಿರುವ ಕೃಷಿಗೆ ಇದು ಹೊಸ ಭಾಷ್ಯ ಬರೆಯುತ್ತದೆ ಎಂದು ಮಲ್ಟಿಫ್ಲೆಕ್ಸ್‌ ಡ್ರೋಣ್‌ ಪ್ರೈ.ಲಿ. ವ್ಯವಸ್ಥಾಪಕರಾದ  ಎಚ್‌.ಜಿ. ಶಿವಕುಮಾರ್‌  ಹೇಳಿದ್ದಾರೆ. 

ರಾಜ ಸಿರಿಗೆರೆ, ಕನ್ನಡಪ್ರಭ ವಾರ್ತೆ

Follow Us:
Download App:
  • android
  • ios