ಜೊಮೋಟೋ ಡೆಲಿವರಿ ಬಾಯ್ ಆಗಿ ಕೆಲಸ ಮಾಡ್ತಿದ್ದ ವ್ಯಕ್ತಿ ಇಂದು ಕೇರಳದಲ್ಲಿ ಸಿವಿಲ್ ಜಡ್ಜ್!
ಒಂದು ಕಾಲದಲ್ಲಿ ಜೊಮ್ಯಾಟೋದಲ್ಲಿ ಡೆಲಿವರಿ ಬಾಯ್ ಆಗಿದ್ದ ಯಾಸೀಶ್ ಶಾನ್ ಮೊಹಮದ್, ಈಗ ಕೇರಳ ನ್ಯಾಯಾಂಗ ಸೇವೆ ಪರೀಕ್ಷೆಯಲ್ಲಿ 2ನೇ ಸ್ಥಾನ ಪಡೆದು ಸಿವಿಲ್ ಜಡ್ಜ್ ಆಗಿದ್ದಾರೆ. ಬಡತನದ ಹಿನ್ನೆಲೆಯಿಂದ ಬಂದ ಯಾಸೀನ್, ತಮ್ಮ ಕಠಿಣ ಪರಿಶ್ರಮ ಮತ್ತು ಬದ್ಧತೆಯಿಂದ ಈ ಸಾಧನೆ ಮಾಡಿದ್ದಾರೆ.
ಬೆಂಗಳೂರು (ಜ.24): ಪರಿಶ್ರಮ ಹಾಗೂ ಬದ್ದತೆ ಇದ್ದಲ್ಲಿ ಅದೆಂಥದ್ದೇ ಆದ ಕಷ್ಟಗಳು ಎದುರಾದರೂ ಚಿಕ್ಕದಾಗಿ ಕಾಣುತ್ತವೆ ಅಂತಾರೆ. ಈ ಮಾತು ಕೇರಳದ ವ್ಯಕ್ತಿ ಯಾಸೀಶ್ ಶಾನ್ ಮೊಹಮದ್ ಅವರ ಜೀವನಕ್ಕೆ ಸೂಕ್ತವಾಗಿ ಹೊಂದಿಕೆ ಆಗುತ್ತದೆ. ಯಾಸೀನ್ ಒಂದು ಕಾಲದಲ್ಲಿ ಫುಡ್ ಅಗ್ರಿಗೇಟರ್ ಆಪ್ ಜೊಮೋಟೋದಲ್ಲಿ ಡೆಲಿವರಿ ಬಾಯ್ ಆಗಿದ್ದರು. ಆದರೆ, 2024ರಲ್ಲಿ ನಡೆದ ಕೇರಳ ನ್ಯಾಯಾಂಗ ಸೇವೆ ಪರೀಕ್ಷೆಯಲ್ಲಿ 2ನೇ ಸ್ಥಾನ ಸಂಪಾದನೆ ಮಾಡುವ ಮೂಲಕ ಸಿವಿಲ್ ಜಡ್ಜ್ ಆಗಿ ನೇಮಕವಾಗಿದ್ದಾರೆ. ಡೆಲಿವರಿ ಬಾಯ್‌ನಿಂದ ಸಿವಿಲ್ ಜಡ್ಜ್ ಆಗುವವರೆಗಿನ ಅವರ ಇಡೀ ಹಾದಿ ಹೋರಾಟ, ಸ್ಪೂರ್ತಿ ಹಾಗೂ ಅಪಾರ ಬದ್ಧತೆಯಿಂದ ಕೂಡಿದೆ.
ಕೇರಳದ ಪಾಲಕ್ಕಾಡ್ ಜಿಲ್ಲೆಯಲ್ಲಿ ಜನಿಸಿದ ಯಾಸಿನ್ ಶಾನ್ ಮೊಹಮದ್ ಅವರ ತಾಯಿ ಓದಿದ್ದು ಬರೀ 6ನೇ ಕ್ಲಾಸ್. 14ನೇ ವರ್ಷದಲ್ಲಿ ಮದುವೆಯಾಗಿದ್ದ ಆಕೆ 19ನೇ ವರ್ಷಕ್ಕೆ ಗಂಡನಿಂದ ತಲಾಕ್ ಸ್ವೀಕರಿಸಿದ್ದರು. 15ನೇ ವರ್ಷದವರಾಗಿದ್ದಾಗಲೇ ಆಕೆಗೆ ಯಾಸಿನ್ ಹುಟ್ಟಿದ್ದ. ಯಾಸಿನ್ ತನ್ನ ತಂದೆ ಯಾರು ಅನ್ನೋದು ಈವರೆಗೂ ಗೊತ್ತಿಲ್ಲ. ಕುಟುಂಬದ ಆರ್ಥಿಕ ಸ್ಥಿತಿ ಕೇಳುವಂತೆಯೇ ಇರಲಿಲ್ಲ. ಆದರೆ, ಯಾಸಿನ್ ಅವರ ತಾಯಿ ಕೂಲಿ ಕೆಲಸ ಮಾಡಿ ಇದ್ದ ಒಬ್ಬ ಮಗನನ್ನು ಹಾಗೂ ಕುಟುಂಬವನ್ನು ಸಂಭಾಳಿಸಿದರು.
ಮನೆಯ ಪರಿಸ್ಥಿತಿ ಕಂಡಿದ್ದ ಯಾಸಿನ್ ಬಾಲ್ಯದಲ್ಲಿಯೇ ಮನೆಮನೆಗೆ ಪತ್ರಿಕೆ ಹಾಕುವುದು, ಹಾಲು ಕೊಡುವ ಕೆಲಸ ಮಾಡುತ್ತಿದ್ದರು. ನಿರ್ಮಾಣ ಹಂತದ ಕಟ್ಟಡದಲ್ಲಿ ದಿನಗೂಲಿ ಕಾರ್ಮಿಕರಾಗಿಯೂ ಯಾಸಿನ್ ಕೆಲಸ ಮಾಡಿದ್ದರು. ಇಷ್ಟೆಲ್ಲಾ ಇದ್ದರೂ ಓದಿನಲ್ಲಿ ಎಂದೂ ಹಿಂದೆ ಬಿದ್ದಿರಲಿಲ್ಲ. ಎಲೆಕ್ಟ್ರಾನಿಕ್ಸ್‌ನಲ್ಲಿ ಡಿಪ್ಲೋಮಾ ಮಾಡಿದ್ದ ಯಾಸಿನ್, ಒಂದು ವರ್ಷ ಕೆಲಸ ಕೂಡ ಮಾಡಿದ್ದರು. ದಾದ ನಂತರ, ಅವರು ಸಾರ್ವಜನಿಕ ಆಡಳಿತದಲ್ಲಿ ಪದವಿ ಪಡೆಯುವ ನಿರ್ಧಾರ ಮಾಡಿ, ಬಳಿಕ ಕಾನೂನು ಪದವಿ ಪಡೆಯುವ ತೀರ್ಮಾನ ಮಾಡಿದ್ದರು.
ಡೆಲಿವರಿ ಬಾಯ್ ಸ್ಥಾನದಿಂದ ವಕೀಲ ವೃತ್ತಿವರೆಗೆ: ಕಾನೂನು ಪದವಿ ಓದುವ ವೇಳೆ ಯಾಸಿನ್, ಸುತ್ತಮುತ್ತಲಿನ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುವ ಕೆಲಸ ಮಾಡುತ್ತಿದ್ದರು. ಅದರೊಂದಿಗೆ ಜೋಮೋಟೋದಲ್ಲಿ ಡೆಲಿವರಿ ಬಾಯ್ ಆಗಿಯೂ ಕೆಲಸ ಮಾಡಿದ್ದರು. ಕೋವಿಡ್ ಸಮಯದಲ್ಲಿ ಈ ಕೆಲಸಗಳೆಲ್ಲಾ ನಿಂತರೂ ಯಾಸಿನ್ ತಮ್ಮ ಹೋರಾಟ ಮಾತ್ರ ಕೈಬಿಟ್ಟಿರಲಿಲ್ಲ. 2023ರಲ್ಲಿ ವಕೀಲರಾಗಿ ನೋಂದಣಿ ಮಾಡಿಕೊಂಡ ಯಾಸಿನ್, ಕೋರ್ಟ್‌ನಲ್ಲಿ ಹಿರಿಯ ವಕೀಲರ ಅಡಿಯಲ್ಲಿ ಕೆಲಸ ಮಾಡಲು ಆರಂಭಿಸಿದರು. ಈ ಹಂತದಲ್ಲಿ ಯಾಸಿನ್ ಜೊತೆಯಲ್ಲಿದ್ದ ಇತರ ಸಹಪಾಠಿಗಳು ಕೇರಳದ ನ್ಯಾಯಂಗ ಸೇವೆ ಪರೀಕ್ಷೆಯನ್ನು ಬರೆಯುವಂತೆ ಪ್ರೋತ್ಸಾಹ ನೀಡಿದ್ದರು.
ಬರೀ ಮೂರು ಊಟದ ಸಹಾಯ, ನಾಲ್ಕು ತಿಂಗಳಲ್ಲೇ 27 ಕೆಜಿ ಕಡಿಮೆಯಾದ ವ್ಯಕ್ತಿ!
ಯಾಸಿನ್ ತನ್ನ ಕಾನೂನು ಜ್ಞಾನವನ್ನು ಹೆಚ್ಚಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಟ್ಯೂಷನ್‌ಗಳನ್ನು ನೀಡುತ್ತಿದ್ದರು. ಇದು ಅವರಿಗೆ ಪರೀಕ್ಷೆಗೆ ತಯಾರಿ ಮತ್ತು ಆದಾಯ ಎರಡಕ್ಕೂ ಹೆಚ್ಚುವರಿ ಸಹಾಯವನ್ನು ನೀಡಿತು. ಮೊದಲ ಪ್ರಯತ್ನದಲ್ಲಿ ಪಾಸ್ ಆಗಲು ಇವರಿಗೆ ಸಾಧ್ಯವಾಗಿರಲಿಲ್ಲ. ಆದರೆ, 2ನೇ ಪ್ರಯತ್ನದಲ್ಲಿ ಕೇರಳ ರಾಜ್ಯಕ್ಕೆ 2ನೇ ಸ್ಥಾನ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು. ಯಾಸೀನ್ ಶಾನ್ ಮುಹಮ್ಮದ್ ಅವರ ಕಥೆ ಹೋರಾಟ, ಕಠಿಣ ಪರಿಶ್ರಮಕ್ಕೆ ದೊಡ್ಡ ಉದಾಹರಣೆಯಾಗಿದೆ. ಅವರ ಯಶಸ್ಸು ಎಷ್ಟೇ ಕಠಿಣ ಪರಿಸ್ಥಿತಿಗಳಿದ್ದರೂ, ನೀವು ಕಠಿಣ ಪರಿಶ್ರಮ ಮತ್ತು ಸಮರ್ಪಣಾಭಾವದಿಂದ ಸತತ ಪ್ರಯತ್ನ ಮಾಡಿದರೆ, ನಿಮ್ಮ ಗುರಿ ಮುಟ್ಟಲು ಸಾಧ್ಯ ಅನ್ನೋದಕ್ಕೆ ಉದಾಹರಣೆಯಂತಿದೆ.
Rameshwaram Cafe To Chumbak: ಗಂಡ-ಹೆಂಡ್ತಿ ಸೇರಿ ಆರಂಭಿಸಿದ ದೇಶದ 10 ಸ್ಟಾರ್ಟ್‌ಅಪ್‌ಗಳು!