Asianet Suvarna News Asianet Suvarna News

ಹುಡುಗರಿಗೂ ಇರಬೇಕು ಅಳುವ ಸುಖ!

ಪುರುಷರು ಮೊದಲು ತಾವು ತಮ್ಮ ಶೋಕವನ್ನು ಗುರುತಿಸಿಕೊಳ್ಳುವುದನ್ನು ಕಲಿಯಬೇಕು. ಅದನ್ನು ಅನುಭವಿಸುವುದು, ಅದನ್ನು ಹಾದು ಹೋಗುವುದು ಆತನ ಸಹಜ ಶಕ್ತಿಗಾಗಲೀ, 'ಪುರುಷತ್ವ'ದ ಗುಣಗಳಿಗಾಗಲೀ ಯಾವ ಧಕ್ಕೆಯನ್ನೂ ತರಲಾರದು.

Psychologist Dr KS Pavithra says men should cry and express their emotions vcs
Author
Bangalore, First Published May 30, 2021, 4:54 PM IST

- ಡಾ.ಕೆ.ಎಸ್. ಪವಿತ್ರ

‘ಏನು ಹುಡುಗೀ ಥರ ಅಳ್ತೀಯಾ?’ ಎಂದು ಗಂಡು ಮಕ್ಕಳನ್ನು ಬೆದರಿಸಿ ಹಿರಿಯರು ಸುಮ್ಮನಾಗಿಸುವುದನ್ನು ನೋಡಿದ್ದೀರಲ್ಲಾ? ‘ಗಂಡು’ ಎಂದಾದರೆ ತನ್ನ ಭಾವನೆಗಳನ್ನು ಅದರಲ್ಲಿಯೂ ವಿಶೇಷವಾಗಿ ಅಳುವನ್ನು ಅದುಮಿಡಬೇಕು, ಒಳಗೆ ಯಾವ ಭಾವನೆಗಳೇ ಇರಲಿ, ಹೊರಗೆ ಧೈರ್ಯದಿಂದಿದ್ದು ಜವಾಬ್ದಾರಿಗಳನ್ನು ನಿಭಾಯಿಸಬೇಕು ಎಂದು ಜಗತ್ತಿನ ಬಹುತೇಕ ಸಮಾಜಗಳು ನಂಬುತ್ತವೆ. ಅದರಂತೆ ಗಂಡು ಮಕ್ಕಳನ್ನು ಬೆಳೆಸುವುದನ್ನು ಪೊ್ರೀತ್ಸಾಹಿಸುತ್ತವೆ. ಆದರೆ ಸಾವನ್ನೂ ಒಳಗೊಂಡಂತೆ ಯಾವುದೇ ರೀತಿಯ ‘ಕಳೆದುಕೊಳ್ಳುವಿಕೆ’ ತರುವ ಭಾವನೆಗಳು ಲಿಂಗಭೇದವನ್ನು ಮೀರಿರುವಂತಹವು. ಅಂಥ ಶೋಕವನ್ನು ಪುರುಷರು ವ್ಯಕ್ತಪಡಿಸುವ ಬಗೆ ಹೇಗೆ? ಅದನ್ನು ಆರೋಗ್ಯಕರವಾಗಿ ನಿಭಾಯಿಸಲು ಸಾಧ್ಯವೆ?

ಮನುಷ್ಯನ ಜೀವನದ ಅವಿಭಾಜ್ಯ ಅಂಗ ‘ಶೋಕ’. ಜೀವನದಲ್ಲಿ ಇನ್ನೊಬ್ಬರಿಂದ ಪ್ರತ್ಯೇಕಿಸುವ ಅನುಭವವನ್ನು ಅದು ತಂದುಕೊಡುತ್ತದೆ. ಪುರುಷರಲ್ಲಿ ‘ಶೋಕ’ ವನ್ನು ತಪ್ಪಾಗಿ ಅರ್ಥೈಸುವುದು, ಕಡಿಮೆ ಅಂದಾಜು ಮಾಡುವುದು, ಬೇಡದ ಪ್ರಕ್ರಿಯೆಯಾಗಿ ನೋಡುವುದು ಸಾಮಾನ್ಯ. ಆದರೆ ಮನೋ ವೈಜ್ಞಾನಿಕವಾಗಿ ನೋಡಿದರೆ ‘ಅದುಮಿಟ್ಟ ಶೋಕ’ ಪುರುಷ -ಮಹಿಳೆ ಯಾರಲ್ಲಿಯೂ ಸಮಸ್ಯೆಗಳನ್ನು ಉಂಟು ಮಾಡುವುದು, ಖಂಡಿತ.

Psychologist Dr KS Pavithra says men should cry and express their emotions vcs

ಮಾರ್ಕ್ ಮರ್ಸರ್ ಎಂಬ ಮನೋವಿಜ್ಞಾನಿ ತನ್ನ ‘ವಾಟ್ ವಿಮೆನ್ ಶುಡ್ ನೋ ಅಬೌಟ್ ಮೆನ್ ಗ್ರೀಫ್’- (ಪುರುಷರ ಶೋಕದ ಬಗೆಗೆ ಮಹಿಳೆಯರು ಏನನ್ನು ತಿಳಿದಿರಬೇಕು?) ಎಂಬ ಬರಹದಲ್ಲಿ ಹೀಗೆ ಬರೆಯುತ್ತಾನೆ. ‘ನಾವು ಪುರುಷರು ಉಳಿದ ಪುರುಷರ ಮುಂದೆ ಬಡಪೆಟ್ಟಿಗೆ ಅಳಲಾರೆವು. ಒಬ್ಬ ಮಹಿಳೆ ‘ಸುರಕ್ಷಿತ’ ಎಂದು ನಮಗನ್ನಿಸಿದರೆ ಅವಳ ಮುಂದೆ ಸ್ವಲ್ಪವಾದರೂ ಅತ್ತೇವು, ನಮ್ಮ ಬಹುಪಾಲು ಕಣ್ಣೀರು ಹರಿಯುವುದು ನಾವು ಒಂಟಿಯಾಗಿದ್ದಾಗ, ವಾಹನಗಳನ್ನು ಚಲಾಯಿಸುವಾಗ. ಬಹಳಷ್ಟು ಸಲ ನಮ್ಮ ಬಿಸಿ ಕಣ್ಣೀರು ಆಳವಾಗಿ ಮಂಜುಗಡ್ಡೆಯಷ್ಟು ತಣ್ಣಗಾಗಿ ಕೋಪವಾಗಿ-ಆಕೊ್ರೀಶವಾಗಿ ಪರಿವರ್ತನೆಯಾಗುತ್ತದೆ. ಬಹಳಷ್ಟು ಜನ ಕೋಪಿಷ್ಠರೆಂದು ಸಿದ್ಧರಾದ ಪುರುಷರು ನಿಜವಾಗಿ ತುಂಬಾ ಶೋಕ-ದುಃಖಗಳಲ್ಲಿ ಮುಳುಗಿರುವವರು.’

ಅಳು ಬಂದರೆ ತಡೀಬೇಡಿ, ಕಣ್ಣೀರು ಸುರಿಸಿದರೆ ಆರೋಗ್ಯಕ್ಕೆ ಒಳಿತು! 

ಮಹಿಳೆ ಶೋಕವನ್ನು ವ್ಯಕ್ತಪಡಿಸುವ, ನಿಭಾಯಿಸುವ ರೀತಿಗೂ, ಅದೇ ಶೋಕವನ್ನು ಪುರುಷ ಎದುರಿಸುವ ರೀತಿಗೂ ಸಾಂಸ್ಕೃತಿಕವಾಗಿ-ಸಾಮಾಜಿಕವಾಗಿ ಹಲವು ವ್ಯತ್ಯಾಸಗಳಿವೆ. ಮಗುವನ್ನು ಕಳೆದುಕೊಂಡಾಗ ತಾಯಿಯ ದುಃಖ ಪಡೆಯುವ ಗಮನ ತಂದೆಯ ದುಃಖ ಪಡೆಯುವುದಿಲ್ಲ. ಭಾವನಾತ್ಮಕವಾಗಿ ತೀವ್ರ ದುಃಖವನ್ನು ವ್ಯಕ್ತಪಡಿಸುವ ಅಳು-ನರಳು-ಕೂಗು-ಹಲವು ದಿನಗಳ ಕಾಲ ಸತ್ತ ವ್ಯಕ್ತಿಯದೇ ಧ್ಯಾನ ಇವೆಲ್ಲ ನಡವಳಿಕೆಗಳನ್ನು ಮಹಿಳೆಯ ವಿಷಯದಲ್ಲಿ ಸಹಜ ಎಂದು ನಾವು ಒಪ್ಪಿಕೊಳ್ಳುವಷ್ಟು ಬೇಗ ಪುರುಷನ ‘ಅಳು-ಕೂಗು-ಕಣ್ಣೀರು’ ನಮಗೆ ಸಹನೀಯ, ಸಹಜ ಎನ್ನಿಸಲಾರವು.

ಸಾಮಾಜಿಕ ಮತ್ತು ವೈಜ್ಞಾನಿಕ ಅಧ್ಯಯನಗಳೆರಡೂ ಪುರುಷರು ತಮ್ಮ ಆತ್ಮೀಯರನ್ನು ಕಳೆದುಕೊಂಡ ಶೋಕವನ್ನು ವಿಭಿನ್ನ ರೀತಿಗಳಲ್ಲಿ ವ್ಯಕ್ತಪಡಿಸಲು ಸಾಧ್ಯ ಎಂಬುದನ್ನು ದೃಢಪಡಿಸಿವೆ. ಭಾವನಾತ್ಮಕ ನಿಯಂತ್ರಣ, ತಮ್ಮ ಮನಸ್ಸಿನ ಭಾವನೆಗಳನ್ನು ಯಾರೊಡನೆಯೂ ಹಂಚಿಕೊಳ್ಳದಿರುವುದು, ತಮ್ಮ ಕೆಲಸದ ಬಗ್ಗೆ ಕೇಂದ್ರೀಕರಿಸುವುದು, ಮೌನವಾಗಿರುವುದು, ಹಠಾತ್ತನೆ ಮತ್ತೊಂದು ಹೊಸ ಸಂಬಂಧದಲ್ಲಿ ತೊಡಗುವುದು- ಇವು ಕಂಡು ಬರುತ್ತವೆ. ತಮ್ಮ ಜೀವನ ಸಂಗಾತಿ, ಮಕ್ಕಳು ಹೀಗೆ ಅತಿ ಮುಖ್ಯ ಸಂಬಂಧಗಳನ್ನು ಸಾವಿನ ಮೂಲಕ ಕಳೆದುಕೊಂಡಾಗ ಅಪಾಯ ತರುವ ನಡವಳಿಕೆಗಳ ಮೂಲಕ ಶೋಕ ವ್ಯಕ್ತವಾಗಬಹುದು. ಮದ್ಯವ್ಯಸನ, ಆತ್ಮಹತ್ಯೆ ಇವು ಮಹಿಳೆಯರಿಗೆ ಹೋಲಿಸಿದರೆ ಪತ್ನಿಯನ್ನು ಕಳೆದುಕೊಂಡ ಸಂದರ್ಭದಲ್ಲಿ ಪುರುಷರಲ್ಲಿ ಗಣನೀಯವಾಗಿ ಹೆಚ್ಚು.

Psychologist Dr KS Pavithra says men should cry and express their emotions vcs

ಪುರುಷರಲ್ಲಿ ಹೀಗೆ ಮಹಿಳೆಯರಿಗಿಂತ ಶೋಕದ ಪ್ರಕ್ರಿಯೆ ವಿಭಿನ್ನವಾಗಿರುವುದಕ್ಕೆ ಕೇವಲ ಸಾಮಾಜಿಕ -ಸಾಂಸ್ಕೃತಿಕ ಬೆಳೆಸುವಿಕೆಯಷ್ಟೇ ಕಾರಣವಲ್ಲ. ಟೆಸ್ಟೋಸ್ಟಿರೋನ್ ಎಂಬ ಹಾರ್ಮೋನು ಮಿದುಳಿನ ಮೇಲೆ ಬೀರುವ ಪರಿಣಾಮ, ಮಿದುಳಿನ ಕೆಲ ಕೇಂದ್ರಗಳು ಪುರುಷನಲ್ಲಿ ಕೆಲಸ ಮಾಡುವ ರೀತಿ- ಇವು ಜೈವಿಕವಾಗಿ ಈ ವಿಭಿನ್ನತೆಯ ಕಾರಣಗಳು. ಇದರ ಜೊತೆಗೆ ಗಂಡು ಮಕ್ಕಳನ್ನು ಬೆಳೆಸುವಲ್ಲಿ ಸಮಾಜ ಅನುಸರಿಸುವ ಅಂಶಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಬಾಲ್ಯದಲ್ಲಿ ಹುಡುಗರು ಮತ್ತು ಹುಡುಗಿಯರಿಗೆ ಸಿಗುವ ಬೇರೆ ಬೇರೆ ರೀತಿಯ ತರಬೇತಿ, ಮಾದರಿಗಳು ಅವರು ಮುಂದೆ ಶೋಕವನ್ನು ಹೇಗೆ ನಿರ್ವಹಿಸುತ್ತಾರೆ ಎಂಬುದನ್ನು ನಿರ್ಧರಿಸುತ್ತವೆ.

ನೀವು ತುಂಬಾ ಅಳುತ್ತೀರಾ? ದೇಹದಲ್ಲಿನ ಕರೆಂಟಿಗೂ ಕಣ್ಣೀರಿಗೂ ಸಂಬಂಧವಿದೆ ! 

ಹುಡುಗರು ನಾಲ್ಕು ಮೂಲಭೂತ ಸಂದೇಶಗಳನ್ನು ತಮ್ಮ ಬಾಲ್ಯದಲ್ಲಿ ಹಿರಿಯರಿಂದ, ವಾತಾವರಣದಿಂದ ಪಡೆಯುತ್ತಾರೆ. ಈ ನಾಲ್ಕೂ ಪುರುಷ ಎಂದರೆ ಯಾರು, ಪುರುಷನ ನಡವಳಿಕೆ ಹೇಗಿರಬೇಕು ಎನ್ನುವುದಕ್ಕೆ ಸಂಬಂಧಿಸಿದವು. ಅವುಗಳಲ್ಲಿ ಮೊದಲನೆಯದು ‘ಸ್ಟಿಫ್ ಅಪ್ಪರ್ ಲಿಪ್ ಸಿಂಡೊ್ರೀಮ್’ ಅಂದರೆ ಬಿಗಿದ ತುಟಿಯ ತರಬೇತಿ. ಪರಿಸ್ಥಿತಿಯಲ್ಲಿ ನೋವನ್ನು ಸಹಿಸಿಕೊಂಡು, ಏನನ್ನೂ ಹೇಳದೆ ಇರುವ ಗುಣ. ಎರಡನೆಯದು ಪುರುಷನಾದವನು ಯಾವುದೇ ಪರಿಸ್ಥಿತಿಯನ್ನು ಸಹಾಯ ಕೇಳದೆ ನಿಯಂತ್ರಿಸುವಂತಿರಬೇಕು. ಇದು ‘ಪವರ್ ಫುಲ್ ಲೋನರ್’- ‘ಪ್ರಬಲ ಒಂಟಿತನ’. ಮೂರನೆಯದು ಪುರುಷ ತನ್ನ ಮೇಲೆ ಅವಲಂಬಿಸಿರುವವರನ್ನು ರಕ್ಷಿಸಬೇಕು, ತನ್ನ ದುಃಖದಿಂದ ಅವರಿಗೆ ಎಂದೂ ಸಮಸ್ಯೆಯೊಡ್ಡಬಾರದು. ಕೊನೆಯದಾಗಿ ಯಾವುದೇ ಸವಾಲು ಎದುರಾದರೂ, ಅದನ್ನು ಭಯವಿಲ್ಲದೆ ಎದುರಿಸಬೇಕು.

ಇಂದಿನ ಸಮಾಜದಲ್ಲಿ ಬಹು ಮಟ್ಟಿಗೆ ಇವು ಬದಲಾಗಿವೆ. ಆದರೂ ಸಾವಿನ ಶೋಕದಂತಹ ಸಮಯದಲ್ಲಿ ‘ದುಃಖ ವ್ಯಕ್ತಪಡಿಸುವಿಕೆ’ಯನ್ನು ಪೊ್ರೀತ್ಸಾಹಿಸುವುದು ಕಡಿಮೆಯೇ. ತಮ್ಮ ದುಃಖದ ಬಗ್ಗೆ ಹೇಳಿಕೊಳ್ಳಲು, ಅಳಲು ಒಂದೊಮ್ಮೆ ಯುವಕರು, ಪುರುಷರು ಮುಂದಾದರೂ ಅವರಿಗೆ ಸಿಗುವ ಸಲಹೆಗಳು ‘ಬಲವಾಗಿರು/ ಗಟ್ಟಿಯಾಗಿರು’, ‘ಅಳಬೇಡ’, ‘ಕಂಟೊ್ರೀಲ್ ಮಾಡು’, ‘ಬೇರೆಯವರಿಗೆ ಇರಿಸು ಮುರಿಸು ಉಂಟು ಮಾಡಬೇಡ’. ಇಂತಹ ಸಲಹೆಗಳು ಇತರರೊಂದಿಗೆ ದುಃಖವನ್ನು ಹಂಚಿಕೊಳ್ಳುವ, ಅದನ್ನು ಹೊರ ಹಾಕಿ ಹಗುರಾಗುವ ಅವಕಾಶಗಳನ್ನು ಮುಚ್ಚಿ ಬಿಡುತ್ತವೆ. ಇವು ನಾನು ಈಗಾಗಲೇ ಹೇಳಿರುವ ರೂಢಿಗತವಾದ ಸಂದೇಶಗಳನ್ನು ಅವರಿಗೆ ರವಾನಿಸುತ್ತವೆ. ಪ್ರತ್ಯೇಕತೆಗೆ ಶರಣಾಗುವಂತೆ ಮಾಡುತ್ತವೆ.

ಮನೋವೈಜ್ಞಾನಿಕವಾಗಿ ಯಾವುದೇ ವ್ಯಕ್ತಿಯ ಶೋಕ ಮಾತನಾಡುವ ಮೂಲಕ, ಸತ್ತ ವ್ಯಕ್ತಿಯ ಬಗ್ಗೆ ತನ್ನ ಯೋಚನೆ-ಭಾವನೆಗಳನ್ನು ಪರಿಶೀಲಿಸಿಕೊಳ್ಳುವುದು, ಒಪ್ಪಿಕೊಳ್ಳುವುದು, ಅವರಿಲ್ಲದ ಜಗತ್ತಿಗೆ ಹೊಂದಿಕೊಳ್ಳುವುದು- ಈ ಹಂತಗಳಲ್ಲಿ ಸಾಗಬೇಕು. ಈ ಹಂತಗಳು ಶೋಕದಿಂದ ಹೊರಬಂದು ಮತ್ತೆ ಜೀವನವನ್ನು ಮುಂದುವರಿಸಲು ಸಹಾಯಕ ಎನಿಸುತ್ತವೆ. ಅರ್ಥಪೂರ್ಣವಾದ ಚಟುವಟಿಕೆಗಳು, ಹೊಸ ಸಂಬಂಧಗಳು ರೂಪುಗೊಳ್ಳಲು ಅವಶ್ಯ.

ಅಚ್ಚರಿಯ ಮಾತೆಂದರೆ ಬಹಳಷ್ಟು ಪುರುಷರೂ ತಮ್ಮ ದುಃಖ -ನೋವನ್ನು ಹಂಚಿಕೊಳ್ಳುವ ಅವಕಾಶಕ್ಕಾಗಿ ಎದುರು ನೋಡುತ್ತಿರುತ್ತಾರೆ ಎನ್ನುವುದು. ಟಾಮ್ ಗೋಲ್ಡನ್ ಎಂಬ ಲೇಖಕ ‘ದಿ ವೇ ಮೆನ್ ಹೀಲ್’ ಎನ್ನುವ ಪುಸ್ತಕವನ್ನು ಬರೆದಿದ್ದಾನೆ. ಟಾಮ್ ಗೋಲ್ಡನ್ ಪುರುಷರಲ್ಲಿ ಶೋಕದ ಪ್ರಕ್ರಿಯೆಯ ಬಗ್ಗೆ ಸಾಕಷ್ಟು ವಿಶ್ಲೇಷಿಸಿದ್ದಾನೆ, ಬರೆಹದಲ್ಲಿ ದಾಖಲಿಸಿದ್ದಾನೆ. ತನ್ನದೇ ವೈಯಕ್ತಿಕ ಅನುಭವವೊಂದನ್ನು ಆತ ಹಂಚಿಕೊಳ್ಳುತ್ತಾನೆ. ‘ನನ್ನ ಅಪ್ಪ ಸತ್ತ ನಂತರದ ಕೆಲ ದಿನಗಳು, ನನ್ನ ಅಪ್ಪನ ಆತ್ಮೀಯ ಸ್ನೇಹಿತನೊಂದಿಗೆ ಮಾತನಾಡುತ್ತಿದ್ದೆ. ಅಪ್ಪನ ನೆನಪಾಗಿ ಸ್ವಲ್ಪ ಅತ್ತೆ. ನನ್ನ ಅಪ್ಪನಿಗೆ ಪರಿಚಯವಿದ್ದ, ನನಗೆ ಗೊತ್ತಿರದಿದ್ದ ಮಹಿಳೆಯೊಬ್ಬರು ಅದನ್ನು ನೋಡಿ, ನಿನ್ನ 4 ವರ್ಷದ ಮಗಳು ನೀನು ಹೀಗೆ ಅಳುತ್ತಿರುವುದನ್ನು ನೋಡಿ ಏನೆಂದುಕೊಂಡಾಳು ಎಂದು ತತ್‌ಕ್ಷಣ ನನ್ನ ಕೈಯ್ಯಲ್ಲಿ ನನಗೆ ಬೇಡವಾಗಿದ್ದ ಟಿಷ್ಯೂ ಪೇಪರ್ ಅನ್ನು, ನನ್ನ ಕಣ್ಣೀರು ಒರೆಸಿಕೊಳ್ಳಲು ನೀಡಿದರು. ನನಗೆ ಅಳಬೇಕಾಗಿತ್ತು. ನಾನೇನಾದರೂ ಒಬ್ಬ ಮಹಿಳೆಯೇ ಆಗಿದ್ದರೆ, ಆ ಮಹಿಳೆ ನನ್ನ ಸುತ್ತ ಕೈಹಾಕಿ, ಸಾಂತ್ವನ ಹೇಳುತ್ತಿದ್ದರು ಎಂಬುದರ ಬಗ್ಗೆ ನನಗೆ ಅನುಮಾನವೇ ಇಲ್ಲ’.

ಬದಲಾಗಬೇಕಾದ್ದೇನು? ಪುರುಷರು ಮೊದಲು ತಾವು ತಮ್ಮ ಶೋಕವನ್ನು ಗುರುತಿಸಿಕೊಳ್ಳುವುದನ್ನು ಕಲಿಯಬೇಕು. ಅದನ್ನು ಅನುಭವಿಸುವುದು, ಅದನ್ನು ಹಾದು ಹೋಗುವುದು ಆತನ ಸಹಜ ಶಕ್ತಿಗಾಗಲೀ, ‘ಪುರುಷತ್ವ’ದ ಗುಣಗಳಿಗಾಗಲೀ ಯಾವ ಧಕ್ಕೆಯನ್ನೂ ತರಲಾರದು. ಇದು ಅರ್ಥವಾಗಬೇಕಾದದ್ದು ಕೇವಲ ಪುರುಷರಿಗಷ್ಟೇ ಅಲ್ಲ. ಅವರ ಸುತ್ತ ಇರುವ ಮಹಿಳೆಯರಿಗೆ, ಗಂಡು ಮಕ್ಕಳನ್ನು ಬೆಳೆಸುವ ತಾಯಂದಿರಿಗೆ, ಇಡೀ ಸಮಾಜಕ್ಕೆ ‘ಶೋಕ’ವನ್ನು ಆರೋಗ್ಯಕರವಾಗಿ ನಿಭಾಯಿಸುವ ಪುರುಷ ದೈಹಿಕವಾಗಿಯಷ್ಟೇ ಅಲ್ಲ ಮಾನಸಿಕವಾಗಿಯೂ ಸಬಲನಾಗುತ್ತಾನೆ.

Follow Us:
Download App:
  • android
  • ios