Asianet Suvarna News Asianet Suvarna News

‘ಇಮೋಜಿ’ ಎಂಬ ಸಾರ್ವತ್ರಿಕ ಭಾಷೆ

ನಮಸ್ತೆ, ಧನ್ಯವಾದ, ಅಭಿನಂದನೆ, ಅಯ್ಯೋಪಾಪ, ನಕ್ಕೂ ನಕ್ಕೂ ಸಾಕಾಯ್ತು, ಒಳ್ಳೇ ಕೆಲಸ, ತುಂಬಾ ಬೇಜಾರಾಗ್ತಿದೆ- ಮುಂತಾದ ಪದಗಳನ್ನು ನೀವು ಟೈಪ್‌ ಮಾಡಿ ಯಾವ ಕಾಲವಾಯಿತು. ಈಗ ಅದರ ಬದಲಾಗಿ ಒಂದು ಇಮೋಜಿ ಹಾಕಿದರೆ ಕೆಲಸ ಮುಗೀತು. ಈ ಇಮೋಜಿಗಳ ಜಗತ್ತು ಭಾಷಿಕ ಜಗತ್ತನ್ನೇ ಬದಲಾಯಿಸುವಷ್ಟು

Dr KS Pavitra talks about World of Emoji vcs
Author
First Published Nov 6, 2022, 4:55 PM IST

ಡಾ.ಕೆ.ಎಸ್‌.ಪವಿತ್ರ

ಇಮೋಜಿಗಳ ಭಾಷೆಯಿಂದ ಮನುಷ್ಯರಲ್ಲಿ ಸಂವಹನ ಒಂದು ಪೂರ್ತಿ ಸುತ್ತು ತಿರುಗಿ ಮೊದಲಿದ್ದಲ್ಲಿಗೆ ಬಂದು ತಲುಪಿದೆ. ಹೇಗೆ? ನೆನಪಿಸಿಕೊಳ್ಳಿ, ಮೊದಲು ಆದಿಮಾನವ ಗುಹೆಗಳ ಒಳಗೆ ಬರೆದ ಚಿತ್ರಗಳು, ಸಂವಹನಕ್ಕಾಗಿಯೇ ಬರೆಯಲ್ಪಟ್ಟವು ಕ್ರಮೇಣ ಭಾಷೆ- ಲಿಪಿಯ ವಿಕಾಸವಾಗುತ್ತ ಬರೆಯುವ - ಮಾತನಾಡುವ ಭಾಷೆಯ ಕ್ರಮ ರೂಪುಗೊಂಡಿತು. ಭಾಷಾವಾರು ಪ್ರಾಂತಗಳು, ಭಾಷೆ-ಸಂಸ್ಕೃತಿ-ಅಸ್ಮಿತೆ-ಜಗಳ-ಶಿಕ್ಷಣ ಇತ್ಯಾದಿ ಗಟ್ಟಿಯಾಗಿ ನಿಂತುಬಿಟ್ಟವು. ‘ಇಮೋಜಿ’ ಎಂಬ ಭಾಷೆಯಿಂದ ಈಗ ಮತ್ತೆ ಮನುಷ್ಯನ ಭಾವನೆಗಳು ಎಲ್ಲೆಡೇ ಒಂದೇ ಎಂಬುದು ಸಿದ್ಧವಾಗುವ ಹಂತದಲ್ಲಿ ನಾವಿದ್ದೇವೆ !

‘ಇಮೋಜಿ’ ಬಂದಿದ್ದಾದರೂ ಎಲ್ಲಿಂದ? ಜಪಾನೀ ತಲೆಗಳಿಂದ! ಜಪಾನೀ ಭಾಷೆಯಲ್ಲಿ ಇಂದೂ ಬರೆಯುವಾಗ ಒಂದು ವಾಕ್ಯಕ್ಕೆ ಒಂದು ಚಿತ್ರದಂತಹ ದೊಡ್ಡ ಅಕ್ಷರವಿದೆ ಎಂಬುದನ್ನು ಗಮನಿಸಬೇಕು. 1999ರಲ್ಲಿ ಜಗತ್ತಿನ ಮೊದಲ ಇಮೋಜಿ ಹವಾಮಾನದ ಸಂಕೇತಗಳಿಂದ ಸ್ಪೂರ್ತಿ ಪಡೆದು ಶಿಗೆಟಾಕಾ ಕುರಿಟಾ ಎಂಬ ವ್ಯಕ್ತಿಯಿಂದ ರೂಪಿತವಾಯಿತು. ಅಲ್ಲಿಂದ ಮುಂದೆ ‘ಮೀಡಿಯಾ ಸ್ಟೋರಿಗಳು’, ಆ್ಯಪಲ್‌-ಆ್ಯಂಡ್ರಾಯ್ಡ್‌ಗಳು, ಕೊನೆಗೆ ಕೋರ್ಚ್‌ ಕೇಸ್‌ಗಳಲ್ಲಿ, 17 ನೇ ಜುಲೈಯನ್ನು ‘ಜಾಗತಿಕ ಇಮೋಜಿ ದಿನ’ ಎಂದು ಆಚರಿಸುವವರೆಗೆ ‘ಇಮೋಜಿ’ ನಮ್ಮೆಲ್ಲರ ಬದುಕನ್ನು ಆವರಿಸಿವೆ. ಅಂಗೈಯಗಲದ ಮೊಬೈಲ್‌ನಲ್ಲಿ ಸುಮಾರು ಮೂರು ಸಾವಿರ ಇಮೋಜಿಗಳಿವೆ! ಕುರಿಟಾ ರೂಪಿಸಿದ 176 ಇಮೋಜಿಗಳು ಇಂದಿಗೂ ನ್ಯೂಯಾರ್ಕ್ನ ಆಧುನಿಕ ಕಲೆಯ ಮ್ಯೂಸಿಯಂನಲ್ಲಿ ಪ್ರದರ್ಶನಕ್ಕಿವೆ.

Dr KS Pavitra talks about World of Emoji vcs

ಇಷ್ಟೆಲ್ಲಾ ಪ್ರಭಾವಶಾಲಿಯೇ ಆದರೂ, ‘ಇಮೋಜಿ’ಗಳು ಒಂದು ಭಾಷೆಯಾಗಿ ಅರ್ಹತೆ ಗಳಿಸುವುದು ಕಷ್ಟವೇ. ‘ಇಮೋಜಿ’ಗಳಿಗೆ ವ್ಯಾಕರಣವಿಲ್ಲವಷ್ಟೆ. ಸರಣಿಯಾಗಿ ಇಮೋಜಿಗಳನ್ನು ಹಾಕಿದರೆ ಒಬ್ಬೊಬ್ಬರಿಗೆ ಅದು ಒಂದೊಂದು ರೀತಿಯಲ್ಲಿ ಅರ್ಥವಾಗಬಹುದು. ಇಮೋಜಿ ಭಾಷೆಯಲ್ಲ ಸರಿ, ಆದರೆ ‘ಟೈಪಿಂಗ್‌’ ಭಾಷೆಯಲ್ಲಿ ಅದರ ಮಹತ್ವ ಅಪಾರ. ಅಂದರೆ ನೀವು ಇತ್ತೀಚೆಗೆ ಮುಖತಃ ಮಾತನಾಡಿದ ಸಂಭಾಷಣೆಯನ್ನೇ ನೆನಪಿಸಿಕೊಳ್ಳಿ. ಮಾತನಾಡುವುದರ ಜೊತೆ ಹಾವಭಾವ-ಸುಮ್ಮನಿರುವುದು ಇತ್ಯಾದಿ ಮಾಡಿದ್ದಿರಿ ತಾನೆ? ಅವುಗಳಿಗೆ ವ್ಯಾಕರಣ ಇಲ್ಲ-ಸಾರ್ವತ್ರಿಕ ಎನ್ನುವಂತಿದ್ದರೂ, ಆ ಸಂಭಾಷಣೆಯಲ್ಲಿ ಅವುಗಳು ‘ಮುಖ್ಯ’ವಾಗಿ ಸಂವಹನವನ್ನು ಸಾಧ್ಯವಾಗಿಸಿದ್ದವು ತಾನೆ? ಇಂತಹ

‘ಹಾವಭಾವ’ಗಳು ಮಾಡುವ ಕೆಲಸವನ್ನು ‘ಇಮೋಜಿ’ಗಳು ಮಾಡಬಲ್ಲವು. ಅಂದರೆ ಒಂದು ಕಣ್ಣಿನ ನೋಟದ ಮೂಲಕ ನೂರು ಭಾವಗಳನ್ನು ಬಿಂಬಿಸಿದ ಹಾಗೆ , ಒಂದು ‘ಇಮೋಜಿ’ ಹತ್ತು ಪದಗಳ ಕೆಲಸ ಮಾಡಬಹುದು. ಅದು ‘ಆಫ್‌ಲೈನು’ ಇದು ‘ಆನ್‌ಲೈನು’!

ಇಮೋಜಿಗಳದ್ದೇ ಒಂದು ಭಾಷೆಯಾಗಿಬಿಟ್ಟರೆ ಎಂದು ಭಾಷಾತಜ್ಞರಿಗೆ ಸ್ವಲ್ಪ ಗಾಬರಿಯಾಗಿದೆ. ಅವರ ಅಂಜಿಕೆ ಏನೆಂದರೆ ಯುವಜನ-ಮಕ್ಕಳು ಹೀಗೆ ಮಾಡುತ್ತ ಮಾಡುತ್ತ ಇಮೋಜಿ ಹೊಸ ಭಾಷೆಯೇ ಆಗಿಬಿಟ್ಟರೆ? ಅಥವಾ ವ್ಯಾಕರಣದ ನಿಯಮಗಳನ್ನು ಯಾವ ಭಾಷೆಯಲ್ಲೂ ಪಾಲಿಸದಂತೆ ಆಗಿಬಿಟ್ಟರೆ! ಭಾಷೆಯ ‘ಪವಿತ್ರ’ ನಿಯಮಗಳನ್ನು ಯುವ ಜನಾಂಗ ಹಾಳು ಮಾಡುತ್ತದೆ ಎನ್ನುವ ಭೀತಿ ಭಾಷೆಯ ವಿಕಾಸದಲ್ಲಿ ಎಂದೂ ಇದ್ದದ್ದೇ. ಕ್ರಿ.ಶ. 63 ರಲ್ಲಿಯೇ ರೋಮನ್‌ ವಿದ್ವಾಂಸನೊಬ್ಬ ತನ್ನ ಶಿಷ್ಯರು ‘ಕೃತಕ ಭಾಷೆ’ ಯೊಂದನ್ನು ಉಪಯೋಗಿಸುವುದರ ಬಗ್ಗೆ ದೂರಿದ್ದನಂತೆ. ಪಾಪ ಆತನ ಭಯ ಸಕರಾಣವೂ ಆಗಿತ್ತು! ಏಕೆಂದರೆ ಆತನ ಶಿಷ್ಯರು ಉಪಯೋಗಿಸುತ್ತಿದ್ದ ‘ಕೃತಕ ಭಾಷೆ’ ಮುಂದೆ ‘ಫ್ರೆಂಚ್‌’ ಎಂಬ ಹೆಸರಿನಿಂದ ಪ್ರಸಿದ್ಧವೂ ಆಯಿತು!

ದಿನ ನಿತ್ಯ ಬಳಸುವ ಎಮೋಜಿಗಳು ನಿಮ್ಮ ವ್ಯಕ್ತಿತ್ವ ಹೇಳುತ್ತೆ!

ಆದ್ದರಿಂದ ‘ಇಮೋಜಿ’ ಗಳನ್ನು ಮಕ್ಕಳು ಬಳಸಿದರೆ ತಪ್ಪಿಲ್ಲ. ಅದು ಭಾಷೆಯ ಕೊಲೆ ಎನ್ನುವುದಕ್ಕಿಂತ, ತಮ್ಮ ಭಾವನೆಗಳನ್ನು ಸ್ಪಷ್ಟಪಡಿಸುವ, ಭಾಷೆಯನ್ನು ವಿಸ್ತರಿಸುವ ವಿಧಾನ ಎಂದೇ ತಿಳಿಯಬೇಕು. ಮನೋವೈದ್ಯೆಯಾಗಿ ನಾನು ಗಮನಿಸಿರುವುದು ಮಕ್ಕಳಿಗೆ ತಮ್ಮ ಭಾವನೆಗಳನ್ನು ಮಾತಿನ ಮೂಲಕ ಹೇಳಲು ಸಾಧ್ಯವಾಗದ ಸಂದರ್ಭಗಳಲ್ಲಿ, ದೌರ್ಜನ್ಯಕ್ಕೆ ಒಳಗಾದಾಗ ಸಂಕೀರ್ಣ ಭಾವನೆಗಳನ್ನು ವ್ಯಕ್ತಪಡಿಸಲು, ಆಟಿಸಂ ಮಕ್ಕಳಲ್ಲಿ, ಸ್ಪೆಲ್ಟಿಂಗ್‌/ಕಾಗುಣಿತದ ಬರೆಹ ಕಲಿಯಲು ಸಮಸ್ಯೆಯಿರುವ ಮಕ್ಕಳಲ್ಲಿ ‘ಇಮೋಜಿ’ ಎಂಬ ‘ಭಾಷೆ’ ಬಹು ಉಪಯುಕ್ತ ಎನಿಸಬಹುದು.

ಇಮೋಜಿಗಳು ಇನ್ನೂ ಒಂದು ಭಾಷೆಯಾಗಿ ರೂಪುಗೊಂಡಿಲ್ಲವಾದರೂ, ಗರ್ವದ ‘ಬಿಬಿಸಿ’ಯನ್ನೇ ‘ಇಮೋಜಿ ಸುದ್ದಿ ಬುಲೆಟಿನ್‌’ ರೂಪಿಸಲು ಪ್ರೇರೇಪಿಸುವಷ್ಟುಶಕ್ತಿಯುತವಾಗಿದೆ. ಆದರೂ ಯಾವುದೇ ಭಾಷೆಯ ಸಂವಹನ ’ಪರಿಣಾಮಕಾರಿ’ ಎನಿಸುವುದು ಎದುರಿನ ವ್ಯಕ್ತಿ ಅದನ್ನು ಸಂಪೂರ್ಣವಾಗಿ ಗ್ರಹಿಸಿದಾಗ, ತನ್ನ ಭಾವನೆಗಳನ್ನು ಅದಕ್ಕೆ ಜೊತೆಯಾಗಿಸಿ ಸ್ಪಂದಿಸಿದಾಗ ಮಾತ್ರ! ಕಣ್ಣು-ಕಣ್ಣು ಕಲೆತಾಗ, ಮೂಕವಾಗಿ ಮನಸ್ಸುಗಳು ಬೆರೆತಾಗ, ನಿಜವಾಗಿ ಹೆಬ್ಬೆಟ್ಟು (ಆಫ್‌ ಲೈನ್‌ ಹೆಬ್ಬೆರಳು) ಎತ್ತಿದಾಗ ನಡೆಯುವ ಸಂವಹನದಷ್ಟೇ ‘ಇಮೋಜಿ’ ಪರಿಣಾಮಕಾರಿ ಎಂದಾಗಬೇಕಾದರೆ ಅವುಗಳನ್ನು ಸ್ವಲ್ಪ ಜಿಪುಣತನದಿಂದ,ಉಳಿತಾಯದ ಮನೋಭಾವದಿಂದ ಎಚ್ಚರಿಕೆಯಿಂದ, ಹದವರಿತು ಬಳಸಬೇಕು. ಪೋಸ್ಟನ್ನೇ ಸರಿಯಾಗಿ ನೋಡದೆ ‘ಎಲ್ಲರೂ ಒತ್ತಿದರು, ನಾನೂ ಒಂದು ಹೆಬ್ಬೆಟ್ಟು ಒತ್ತಿದೆ, ಕೈ ಮುಗಿದೆ’ ಎಂಬ ಇಂದಿನ ಇಮೋಜಿಯ ಅತಿ ಬಳಕೆಗೆ ಮನಸ್ಸಿನ ಕಡಿವಾಣ, ಸರಿಯಾದ ಬಳಕೆಗೆ ಭಾವನೆಗಳ ಸಾಥಿ ಎರಡೂ ಬೇಕೇ ಬೇಕು ,ಅಲ್ಲವೆ!

Follow Us:
Download App:
  • android
  • ios