Asianet Suvarna News Asianet Suvarna News

Ind vs NZ Kanpur Test: ಕಿವೀಸ್‌ ಪಡೆಯನ್ನು ಸೋಲಿನಿಂದ ಪಾರು ಮಾಡಿದ 'ಭಾರತದ' ಜೋಡಿ..!

* ಭಾರತ-ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ರೋಚಕ ಡ್ರಾನಲ್ಲಿ ಅಂತ್ಯ

* ಟೀಂ ಇಂಡಿಯಾ ಗೆಲುವನ್ನು ಕಸಿದ ಭಾರತ ಮೂಲದ ಕಿವೀಸ್ ಜೋಡಿ

* ನೆಲಕಚ್ಚಿ ಆಡಿ ಕಿವೀಸ್‌ ಸೋಲು ತಪ್ಪಿಸಿದ ರಚಿನ್ ರವೀಂದ್ರ

Ind vs NZ Kanpur Test Rachin Ravindra Ajaz Patel help New Zealand earn a Thrilling draw against India kvn
Author
Bengaluru, First Published Nov 29, 2021, 4:46 PM IST

ಕಾನ್ಪುರ(ನ.29): ಯಾವ ಸೀಮಿತ ಓವರ್‌ಗಳ ಪಂದ್ಯಕ್ಕೂ ಕಮ್ಮಿಯಿಲ್ಲದಂತೆ ಸಾಗಿದ ಭಾರತ ಹಾಗೂ ನ್ಯೂಜಿಲೆಂಡ್ (India vs New Zealand) ನಡುವಿನ ಕಾನ್ಪುರ ಟೆಸ್ಟ್‌ ಪಂದ್ಯವು ರೋಚಕ ಡ್ರಾನಲ್ಲಿ ಅಂತ್ಯವಾಗಿದೆ. ಭಾರತದ ಕೈಯಲ್ಲಿದ್ದ ಟೆಸ್ಟ್‌ ಗೆಲುವನ್ನು ಕಸಿಯುವಲ್ಲಿ ಭಾರತೀಯ ಮೂಲದ ಕಿವೀಸ್ ಆಟಗಾರರಾದ ರಚಿನ್ ರವೀಂದ್ರ (Rachin Ravindra) ಹಾಗೂ ಅಜಾಜ್ ಪಟೇಲ್ (Ajaz Patel) ಯಶಸ್ವಿಯಾದರು. ಈ ಜೋಡಿ ಕೊನೆಯ ವಿಕೆಟ್‌ಗೆ 52 ಎಸೆತಗಳನ್ನು ಎದುರಿಸಿ ವಿಕೆಟ್‌ ಕೈಚೆಲ್ಲದಂತೆ ನೋಡಿಕೊಂಡಿತ್ತು. ಈ ಮೂಲಕ ಕಿವೀಸ್ ತಂಡವನ್ನು ಸೋಲಿನಿಂದ ಪಾರು ಮಾಡುವಲ್ಲಿ ಯಶಸ್ವಿಯಾಗಿದೆ.

ಇಲ್ಲಿನ ಗ್ರೀನ್ ಪಾರ್ಕ್‌ ಮೈದಾನದಲ್ಲಿ (Green Park Stadium) ಭಾರತ ನೀಡಿದ್ದ 284 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಕ್ರಿಕೆಟ್‌ ತಂಡವು (New Zealand Cricket Team) ನಾಲ್ಕನೇ ದಿನದಾಟದಂತ್ಯದ ವೇಳೆಗೆ ಒಂದು ವಿಕೆಟ್ ಕಳೆದುಕೊಂಡು 4 ರನ್‌ಗಳಿಸಿದ್ದ ಪ್ರವಾಸಿ ನ್ಯೂಜಿಲೆಂಡ್ ತಂಡವು ಕೊನೆಯ ದಿನದಾಟವನ್ನು ಉತ್ತಮವಾಗಿಯೇ ಆರಂಭಿಸಿತು. ಐದನೇ ದಿನದಾಟದಲ್ಲಿ ನೈಟ್‌ ವಾಚ್‌ಮನ್‌ ಸೋಮರ್‌ವಿಲ್ಲೆ ಹಾಗೂ ಲೇಥಮ್ ಆಸರೆಯಾದರು. ಎರಡನೇ ವಿಕೆಟ್‌ಗೆ ಈ ಜೋಡಿ ಮುರಿಯದ 75 ರನ್‌ಗಳ ಜತೆಯಾಟವಾಡುವ ಮೂಲಕ ದಿಟ್ಟ ಆರಂಭ ಒದಗಿಸಿಕೊಟ್ಟಿತು. ಲಂಚ್‌ ಬ್ರೇಕ್‌ ವೇಳೆಗೆ ನ್ಯೂಜಿಲೆಂಡ್ ತಂಡವು ಕೇವಲ ಒಂದು ವಿಕೆಟ್‌ ನಷ್ಟಕ್ಕೆ 79 ರನ್ ಗಳಿಸಿತ್ತು.

ಲಂಚ್‌ ಬ್ರೇಕ್‌ ಬಳಿಕ ಮೈದಾನಕ್ಕಿಳಿದ ಭಾರತ ತಂಡಕ್ಕೆ ವೇಗಿ ಉಮೇಶ್ ಯಾದವ್‌ (Umesh Yadav) ಮೊದಲ ಎಸೆತದಲ್ಲೇ ನೈಟ್‌ ವಾಚ್‌ಮನ್‌ ವಿಲಿಯಮ್ ಸೋಮರ್‌ವಿಲ್ಲೆ(36) ವಿಕೆಟ್ ಕಬಳಿಸುವ ಮೂಲಕ ಕೊನೆಯ ದಿನದಾಟದಲ್ಲಿ ವಿಕೆಟ್ ಖಾತೆ ತೆರೆದರು. ಇದಾದ ಬಳಿಕ ಮೂರನೇ ವಿಕೆಟ್‌ಗೆ ನಾಯಕ ಕೇನ್‌ ವಿಲಿಯಮ್ಸನ್ (Kane Williamson) ಹಾಗೂ ಟಾಮ್ ಲೇಥಮ್ ಎಚ್ಚರಿಕೆಯ ಬ್ಯಾಟಿಂಗ್ ನಿಭಾಯಿಸಿದರು. ಈ ಜೋಡಿಯನ್ನು ಬೇರ್ಪಡಿಸಲು ಅಶ್ವಿನ್ ಯಶಸ್ವಿಯಾದರು. ಟಾಮ್ ಲೇಥಮ್‌ 52 ರನ್‌ ಬಾರಿಸಿ ಅಶ್ವಿನ್‌ ಬೌಲಿಂಗ್‌ನಲ್ಲಿ ವಿಕೆಟ್‌ ಒಪ್ಪಿಸಿದರು. 

ಕಿವೀಸ್‌ಗೆ ಮತ್ತೆ ಕೈಕೊಟ್ಟ ಮಧ್ಯಮ ಕ್ರಮಾಂಕ: ಮೊದಲ ಸೆಷನ್‌ನಲ್ಲಿ ಕಿವೀಸ್ ಆಡಿದ ರೀತಿ ನೋಡಿದರೇ ಗೆಲುವಿನತ್ತ ದಾಪುಗಾಲಿಡುತ್ತಿದೆ ಎಂದೇ ಭಾವಿಸಲಾಗಿತ್ತು. ಆದರೆ ಟಾಮ್ ಲೇಥಮ್ (Tom Latham) ವಿಕೆಟ್ ಪತನದ ಬಳಿಕ ಕಿವೀಸ್ ಮಧ್ಯಮ ಕ್ರಮಾಂಕದಲ್ಲಿ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿತು. ಅದರಲ್ಲೂ ಅನುಭವಿ ಬ್ಯಾಟರ್ ರಾಸ್ ಟೇಲರ್ (Ross Taylor) 2 ರನ್‌ ಗಳಿಸಿ ವಿಕೆಟ್ ಒಪ್ಪಿಸಿದರೆ, ಹೆನ್ರಿ ನಿಕೋಲಸ್‌ ಒಂದು ರನ್‌ ಬಾರಿಸಿ ಅಕ್ಷರ್ ಪಟೇಲ್‌ (Axar Patel) ಬೌಲಿಂಗ್‌ನಲ್ಲಿ ಎಲ್‌ಬಿ ಬಲೆಗೆ ಬಿದ್ದರು. ಇನ್ನು ವಿಕೆಟ್ ಕೀಪರ್ ಬ್ಯಾಟರ್ ಟಾಮ್ ಬ್ಲಂಡೆಲ್‌ 2 ರನ್‌ ಬಾರಿಸಿ ಅಶ್ವಿನ್‌ಗೆ ಮೂರನೇ ಬಲಿಯಾದರು. 

Ind vs NZ Kanpur Test: ಮೊದಲ ಟೆಸ್ಟ್‌ ಗೆಲ್ಲಲು ಟೀಂ ಇಂಡಿಯಾ ಗೆಲುವಿಗೆ 6 ವಿಕೆಟ್‌..!

ಕಿವೀಸ್‌ ತಂಡವನ್ನು ಸೋಲಿನಿಂದ ಪಾರು ಮಾಡಿದ ಭಾರತದ ಜೋಡಿ: ಒಂದು ಹಂತದಲ್ಲಿ 155 ರನ್‌ಗಳಿಗೆ 9 ವಿಕೆಟ್ ಕಳೆದುಕೊಂಡು ಸೋಲಿನ ದವಡೆಗೆ ಸಿಲುಕಿದ್ದ ನ್ಯೂಜಿಲೆಂಡ್ ತಂಡವನ್ನು ಬಚಾವ್ ಮಾಡುವಲ್ಲಿ ಭಾರತ ಮೂಲದ ಅಜಾಜ್ ಪಟೇಲ್ ಹಾಗೂ ರಚಿನ್ ರವೀಂದ್ರ ಜೋಡಿ ಯಶಸ್ವಿಯಾಗಿದೆ. ಅದರಲ್ಲೂ ಕಿವೀಸ್ ಮಧ್ಯಮ ದಿಢೀರ್ ಕುಸಿತ ಕಂಡರು ಸಹಾ ಆಲ್ರೌಂಡರ್ ರಚಿನ್ ರವೀಂದ್ರ ನೆಲಕಚ್ಚಿ ಆಡುವ ಮೂಲಕ ಕಿವೀಸ್‌ ತಂಡಕ್ಕೆ ಆಸರೆಯಾದರು. ರಚಿನ್ ರವೀಂದ್ರ 91 ಎಸೆತಗಳನ್ನು ಎದುರಿಸಿ 2 ಬೌಂಡರಿ ಸಹಿತ 18 ರನ್‌ ಬಾರಿಸಿ ಅಜೇಯರಾಗುಳಿದರು. ಪಾದಾರ್ಪಣೆ ಪಂದ್ಯದಲ್ಲೇ ರಚಿನ್ ಕಿವೀಸ್‌ ಪಾಲಿಗೆ ಆಪತ್ಭಾಂಧವನೆನಿಸಿದರು. ಇನ್ನೊಂದೆಡೆ ಅಜಾಜ್ ಪಟೇಲ್ 23 ಎಸೆತಗಳನ್ನು ಎದುರಿಸಿ 2 ರನ್‌ ಗಳಿಸಿ ವಿಕೆಟ್ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾದರು. ಕೊನೆಯ ವಿಕೆಟ್‌ಗೆ ಈ ಜೋಡಿ 52 ಎಸೆತಗಳನ್ನು ಎದುರಿಸಿ ವಿಕೆಟ್‌ ಕಳೆದುಕೊಳ್ಳದಂತೆ ನೋಡಿಕೊಂಡಿತು.

ಹೇಗಿತ್ತು ಮೊದಲ ಟೆಸ್ಟ್‌: ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ, ಶ್ರೇಯಸ್ ಅಯ್ಯರ್ (Shreyas Iyer) ಬಾರಿಸಿದ ಆಕರ್ಷಕ ಶತಕದ ನೆರವಿನಿಂದ 345 ರನ್ ಬಾರಿಸಿ ಸರ್ವಪತನ ಕಂಡಿತ್ತು. ಇನ್ನು ಇದಕ್ಕುತ್ತರವಾಗಿ ನ್ಯೂಜಿಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 296 ರನ್‌ಗಳಿಗೆ ಆಲೌಟ್ ಆಯಿತು. ಬಳಿಕ 49 ರನ್‌ಗಳ ಮೊದಲ ಇನಿಂಗ್ಸ್‌ ಮುನ್ನಡೆಯೊಂದಿಗೆ ಎರಡನೇ ಇನಿಂಗ್ಸ್ ಆರಂಭಿಸಿದ ಭಾರತ, ಆರಂಭಿಕ ಆಘಾತದ ಹೊರತಾಗಿಯೂ 234/7 ರನ್ ಬಾರಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಗೆಲ್ಲಲು 284 ರನ್‌ಗಳ ಕಠಿಣ ಗುರಿ ಪಡೆದ ನ್ಯೂಜಿಲೆಂಡ್ ಕೊನೆಯ ದಿನದಾಟದಂತ್ಯದ ವೇಳೆಗೆ 9 ವಿಕೆಟ್ ಕಳೆದುಕೊಂಡು 165 ರನ್ ಗಳಿಸುವ ಮೂಲಕ ರೋಚಕವಾಗಿ ಡ್ರಾ ಮಾಡಿಕೊಂಡಿತು.
 

Follow Us:
Download App:
  • android
  • ios