Asianet Suvarna News Asianet Suvarna News

T20 World Cup: ಅಭ್ಯಾಸ ಪಂದ್ಯದಲ್ಲಿಂದು ಟೀಂ ಇಂಡಿಯಾಗೆ ಇಂಗ್ಲೆಂಡ್ ಸವಾಲು..!

* ಟಿ20 ವಿಶ್ವಕಪ್ ಟೂರ್ನಿಯ ಅಭ್ಯಾಸ ಪಂದ್ಯಕ್ಕೆ ಕ್ಷಣಗಣನೆ ಆರಂಭ

* ಮೊದಲ ಅಭ್ಯಾಸ ಪಂದ್ಯದಲ್ಲಿ ಭಾರತಕ್ಕೆ ಇಂಗ್ಲೆಂಡ್ ಎದುರಾಳಿ

*  ಹಲವು ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಬೇಕಿದೆ ಟೀಂ ಇಂಡಿಯಾ

ICC T20 World Cup Virat Kohli Led Team India take on England in Warm up match in Dubai kvn
Author
Bengaluru, First Published Oct 18, 2021, 11:03 AM IST

ದುಬೈ(ಅ.18): ಐಪಿಎಲ್‌ 14ನೇ ಆವೃತ್ತಿ (IPL 2021) ಮುಕ್ತಾಯಗೊಂಡ ಬೆನ್ನಲ್ಲೇ ಭಾರತದ ತಾರಾ ಕ್ರಿಕೆಟಿಗರು ಐಸಿಸಿ ಟಿ20 ವಿಶ್ವಕಪ್‌ (ICC T20 World Cup) ಗೆ ಸಿದ್ಧತೆ ಆರಂಭಿಸಿದ್ದಾರೆ. 3 ದಿನಗಳ ಹಿಂದಷ್ಟೇ ಚೆನ್ನೈ ಸೂಪರ್‌ ಕಿಂಗ್ಸ್‌ (Chennai Super Kings) ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ್ದ ಎಂ.ಎಸ್‌.ಧೋನಿ (MS Dhoni), ಈಗ ಮೆಂಟರ್‌ ಆಗಿ ಕಾಣಿಸಿಕೊಳ್ಳಲಿದ್ದು, ಟೀಂ ಇಂಡಿಯಾ (Team India) ಸೋಮವಾರ ತನ್ನ ಮೊದಲ ಅಭ್ಯಾಸ ಪಂದ್ಯದಲ್ಲಿ ಇಂಗ್ಲೆಂಡ್‌ ವಿರುದ್ಧ ಸೆಣಸಲಿದೆ.

ವಿಶ್ವಕಪ್‌ ತಂಡದಲ್ಲಿರುವ ಎಲ್ಲಾ ಆಟಗಾರರು ಐಪಿಎಲ್‌ನಲ್ಲಿ ಆಡಿದರೂ, ಒಟ್ಟಿಗೆ ಟೀಂ ಇಂಡಿಯಾ ಪರವಾಗಿ 7 ತಿಂಗಳ ಬಳಿಕ ಆಡಲಿದ್ದಾರೆ. ಅಕ್ಟೋಬರ್ 24ರಂದು ಬದ್ಧವೈರಿ ಪಾಕಿಸ್ತಾನ (Pakistan) ವಿರುದ್ಧ ತನ್ನ ಅಭಿಯಾನವನ್ನು ಆರಂಭಿಸಲಿರುವ ಭಾರತ, ಅದಕ್ಕೂ ಮುನ್ನ ಬಲಿಷ್ಠ ತಂಡಗಳಾದ ಇಂಗ್ಲೆಂಡ್‌ ಹಾಗೂ ಆಸ್ಪ್ರೇಲಿಯಾ ವಿರುದ್ಧ ಕೆಲ ಪ್ರಶ್ನೆಗಳಿಗೆ ಉತ್ತರ ಹುಡುಕಿಕೊಳ್ಳಲಿದೆ.

ಹಾರ್ದಿಕ್‌ ಬೌಲಿಂಗ್‌ ಮಾಡ್ತಾರಾ?: ಆಲ್ರೌಂಡರ್‌ ಆಗಿ ತಂಡದಲ್ಲಿ ಸ್ಥಾನ ಪಡೆದಿರುವ ಹಾರ್ದಿಕ್‌ ಪಾಂಡ್ಯ (Hardik Pandya), ಬೌಲಿಂಗ್‌ ಮಾಡಲು ಫಿಟ್‌ ಇದ್ದಾರಾ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಿದೆ. ಐಪಿಎಲ್‌ನಲ್ಲಿ ಒಮ್ಮೆಯೂ ಅವರು ಬೌಲ್‌ ಮಾಡಲಿಲ್ಲ. ಹಾರ್ದಿಕ್‌ ಬೌಲ್‌ ಮಾಡಲು ಫಿಟ್‌ ಇಲ್ಲಾ ಎನ್ನುವುದಾದರೆ ಶಾರ್ದೂಲ್‌ ಠಾಕೂರ್‌ (Shardul Thakur) ಬೌಲಿಂಗ್‌ ಆಲ್ರೌಂಡರ್‌ ಆಗಿ ಸ್ಥಾನ ಗಳಿಸುವುದು ಬಹುತೇಕ ಖಚಿತ. ಇನ್ನು ಹಾರ್ದಿಕ್‌ರನ್ನು ಆಡಿಸಿದರೆ ಯಾವ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಇಳಿಸಬೇಕು ಎನ್ನುವ ಪ್ರಶ್ನೆಯೂ ನಾಯಕ ಕೊಹ್ಲಿ ಹಾಗೂ ಕೋಚಿಂಗ್‌ ಸಿಬ್ಬಂದಿ ಮುಂದಿದೆ.

'ಪಾಠ ಶುರು ಮಾಡಿದ ಮೇಸ್ಟ್ರು' ಟೀಂ ಇಂಡಿಯಾಕ್ಕೆ ಧೋನಿ ಮೆಂಟರಿಂಗ್ ಶುರು!

ಕಿಶನ್‌ ಆರಂಭಿಕ?: ರೋಹಿತ್‌ ಶರ್ಮಾ (Rohit Sharma) ಜೊತೆ ಇನ್ನಿಂಗ್ಸ್‌ ಆರಂಭಿಸುವ ಹೊಣೆಯನ್ನು ಟೀಂ ಇಂಡಿಯಾ ಕೆ.ಎಲ್‌.ರಾಹುಲ್‌ (KL Rahul)ಗೆ ನೀಡುತ್ತದೆಯೋ ಇಲ್ಲವೇ ಇಶಾನ್‌ ಕಿಶನ್‌ (Kishan Kishan) ಗೆ ನೀಡುತ್ತದೆಯೋ ಎನ್ನುವ ಕುತೂಹಲವೂ ಇದೆ. ರಾಹುಲ್‌ ಐಪಿಎಲ್‌ನ ಬಹುತೇಕ ಪಂದ್ಯಗಳಲ್ಲಿ ಪವರ್‌-ಪ್ಲೇನಲ್ಲಿ ನಿಧಾನಗತಿಯಲ್ಲಿ ಬ್ಯಾಟ್‌ ಮಾಡಿದ್ದರು. ಯುಎಇನ ಪಿಚ್‌ಗಳಲ್ಲಿ ಪವರ್‌-ಪ್ಲೇನಲ್ಲಿ ದೊಡ್ಡ ಮೊತ್ತ ಕಲೆಹಾಕುವುದು ಅತ್ಯಂತ ಮುಖ್ಯ ಎನ್ನುವುದು ಐಪಿಎಲ್‌ನಲ್ಲಿ ಸಾಬೀತಾಗಿದೆ. ಹೀಗಾಗಿ, ರಾಹುಲ್‌ರನ್ನು ಮಧ್ಯಮ ಕ್ರಮಾಂಕದಲ್ಲಿ ಆಡಿಸಿ ಕಿಶನ್‌ರನ್ನು ಆರಂಭಿಕನನ್ನಾಗಿ ಕಣಕ್ಕಿಳಿಸಬಹುದು. ಅಲ್ಲದೇ ವಿರಾಟ್ ಕೊಹ್ಲಿ (Virat Kohli) ತಮಗೆ ಆರಂಭಿಕನಾಗಿ ಆಡಲು ಸಿದ್ಧವಿರುವಂತೆ ಸೂಚಿಸಿದ್ದಾರೆ ಎಂದು ಕಿಶನ್‌ ಇತ್ತೀಚೆಗೆ ಹೇಳಿಕೊಂಡಿದ್ದರು.

3ನೇ ಸ್ಪಿನ್ನರ್‌ ಯಾರು?: ರವೀಂದ್ರ ಜಡೇಜಾ (Ravindra Jadeja) ತಂಡದ ಮೊದಲ ಆಯ್ಕೆಯಾಗಲಿದ್ದಾರೆ. ವರುಣ್‌ ಚಕ್ರವರ್ತಿ ಸಂಪೂರ್ಣ ಫಿಟ್‌ ಇದ್ದರೆ ಅವರಿಗೆ ಸ್ಥಾನ ಸಿಗುವುದು ಖಚಿತ. ಇನ್ನೊಂದು ಸ್ಥಾನಕ್ಕಾಗಿ ಆರ್‌.ಅಶ್ವಿನ್‌ ಹಾಗೂ ರಾಹುಲ್‌ ಚಹರ್‌ ನಡುವೆ ಪೈಪೋಟಿ ನಡೆಯಬಹುದು. ಇನ್ನು ಬುಮ್ರಾ, ಭುವನೇಶ್ವರ್‌ ಜೊತೆ ಶಾರ್ದೂಲ್‌ ಆಡುವ ನಿರೀಕ್ಷೆ ಇದೆ.

ಮತ್ತೊಂದೆಡೆ ಇಂಗ್ಲೆಂಡ್‌ ಟಿ20 ತಜ್ಞ ಆಟಗಾರರ ದಂಡನ್ನೇ ಹೊಂದಿದೆ. ಕೆಲ ಆಟಗಾರರು ಐಪಿಎಲ್‌ನಲ್ಲಿ ಆಡಿ ಸ್ಥಳೀಯ ವಾತಾವರಣ, ಪಿಚ್‌ ಬಗ್ಗೆ ಮಾಹಿತಿ ಕಲೆಹಾಕಿದ್ದಾರೆ. ಹೀಗಾಗಿ ಎದುರಾಳಿಯನ್ನು ಸೋಲಿಸುವುದು ಭಾರತ ತಂಡಕ್ಕೆ ಕಠಿಣ ಸವಾಲಾಗಿ ಪರಿಣಮಿಸಿದರೆ ಅಚ್ಚರಿಯಿಲ್ಲ.

ತಂಡಗಳು

ಭಾರತ: ವಿರಾಟ್‌ ಕೊಹ್ಲಿ(ನಾಯಕ), ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌, ಸೂರ್ಯಕುಮಾರ್‌, ರಿಷಭ್‌ ಪಂತ್‌, ಇಶಾನ್‌ ಕಿಶನ್‌, ರವೀಂದ್ರ ಜಡೇಜಾ, ಹಾರ್ದಿಕ್‌ ಪಾಂಡ್ಯ, ಆರ್‌.ಅಶ್ವಿನ್‌, ವರುಣ್‌ ಚಕ್ರವರ್ತಿ, ರಾಹುಲ್‌ ಚಹರ್‌, ಭುವನೇಶ್ವರ್‌ ಕುಮಾರ್‌, ಶಾರ್ದೂಲ್‌ ಠಾಕೂರ್‌, ಜಸ್‌ಪ್ರೀತ್‌ ಬುಮ್ರಾ, ಮೊಹಮದ್‌ ಶಮಿ.

ಇಂಗ್ಲೆಂಡ್‌: ಇಯಾನ್‌ ಮೊರ್ಗನ್‌(ನಾಯಕ), ಜೇಸನ್‌ ರಾಯ್‌, ಸ್ಯಾಮ್‌ ಬಿಲ್ಲಿಂಗ್ಸ್‌, ಲಿಯಾನ್‌ ಲಿವಿಂಗ್‌ಸ್ಟೋನ್‌, ಡೇವಿಡ್‌ ಮಲಾನ್‌, ಜೋಸ್‌ ಬಟ್ಲರ್‌, ಜಾನಿ ಬೇರ್‌ಸ್ಟೋವ್‌, ಮೋಯಿನ್‌ ಅಲಿ, ಟಾಮ್‌ ಕರ್ರನ್‌, ಕ್ರಿಸ್‌ ಜೋರ್ಡನ್‌, ಡೇವಿಡ್‌ ವಿಲ್ಲಿ, ಕ್ರಿಸ್‌ ವೋಕ್ಸ್‌, ಟೈಮಾಲ್‌ ಮಿಲ್ಸ್‌, ಆದಿಲ್‌ ರಶೀದ್‌, ಮಾಕ್‌ವುಡ್‌

ಪಂದ್ಯ ಆರಂಭ: ಸಂಜೆ 7.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

Follow Us:
Download App:
  • android
  • ios