ಕಾರು ವಾಪಸ್ ಪಡೆಯಲು ನಿರಾಕರಿಸಿದ ಶೋರೂಮ್‌ಗೆ ಕಾರು ನುಗ್ಗಿಸಿದ ಮಾಲೀಕ: ವೀಡಿಯೋ ವೈರಲ್
ಕಾರನ್ನು ವಾಪಸ್ ಪಡೆಯಲು ಶೋರೂಮ್ ನಿರಾಕರಿಸಿದ್ದರಿಂದ ಕೋಪಗೊಂಡ ವ್ಯಕ್ತಿಯೊಬ್ಬ ಕಾರನ್ನು ಶೋರೂಮ್ ಒಳಗೆ ನುಗ್ಗಿಸಿದ ಘಟನೆ ಉತಾಹ್‌ನಲ್ಲಿ ನಡೆದಿದೆ. ಈ ಘಟನೆಯಿಂದ ಆದ ನಷ್ಟ ಒಂದೆರಡು ಲಕ್ಷಗಳಲ್ಲ ಮತ್ತಷ್ಟು?
ಕಾರನ್ನು ವಾಪಸ್ ಪಡೆಯಲು ಶೋರೂಮ್‌ನವರು ನಿರಾಕರಿಸಿದ ಹಿನ್ನೆಲೆ ಕಾರು ಮಾಲೀಕನೋರ್ವ ಕಾರನ್ನು ಶೋರೂಮ್‌ನೊಳಗೆ ನುಗ್ಗಿಸಿದ ಘಟನೆ ನಡೆದಿದೆ. ವೆಸ್ಟರ್ನ್ ಯುನೈಟೆಡ್ ಸ್ಟೇಟ್‌ನ ಉತಹ್‌ನಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕಾರು ಮಾಲೀಕನ ಈ ಕೃತ್ಯದಿಂದ 10 ಸಾವಿರ ಡಾಲರ್ ರೂಪಾಯಿಗಳಷ್ಟು (8,48,695 ಭಾರತೀಯ ರೂಪಾಯಿಗಳು) ವೆಚ್ಚವಾಗಿದೆ. 35 ವರ್ಷದ ಮಿಚೆಲ್ ಮುರ್ರೆ ಎಂಬಾತನೇ ಈ ರೀತಿ ಕಾರನ್ನು ಶೋ ರೂಮ್‌ನೊಳಗೆ ನುಗ್ಗಿಸಿದ ವ್ಯಕ್ತಿ.
ews.com.au ವರದಿ ಮಾಡಿದಂತೆ ಮಿಚೆಲ್ ಮುರ್ರೆ ಅವರು ಸೋಮವಾರ ಟಿಮ್ ಡಹ್ಲೆ ಮಜ್ದಾ ಸೌತ್‌ಟೌನ್‌ನಿಂದ ಸುಬಾರು ಔಟ್‌ಬ್ಯಾಕ್ ಬ್ರಾಂಡ್‌ನ ಎಂದು ಕಾರೊಂದನ್ನು ಖರೀದಿಸಿದರು. ಆದರೆ ಖರೀದಿಸಿದ ಮೇಲೆ ಕಾರಿನ ಬಗ್ಗೆ ಅವರಿಗೆ ಅಸಮಾಧಾನ ಶುರುವಾಗಿದೆ. ಹೀಗಾಗಿ ಡೀಲರ್‌ಶಿಪ್ ರಿಟರ್ನ್ ಮಾಡಿ ಹಣ ರಿಫಂಡ್ ಮಾಡುವಂತೆ ಆಗ್ರಹಿಸಿದ್ದಾರೆ.
ಪೋಲೀಸ್ ಹೇಳಿಕೆಯ ಪ್ರಕಾರ, ಡೀಲರ್‌ಶಿಪ್ ಪ್ರಕಾರ ಕಾರನ್ನು 'ಇರುವಂತೆ ಸ್ಥಿತಿಯಲ್ಲೇ ಮಾರಾಟ ಮಾಡಿಲಾಗಿದೆ ಮತ್ತು ಹಿಂತಿರುಗಿಸಲು ನಿರಾಕರಿಸಿದೆ. ಹೀಗಾಗಿ ಸಿಟ್ಟಿಗೆದ್ದ ಮೆಚೆಲ್ ಮುರ್ರೆ ಕಾರನ್ನು ಸೀದಾ ತೆಗೆದುಕೊಂಡು ಹೋಗಿ ಗ್ಲಾಸ್ ಡೋರ್‌ಗೆ ಗುದ್ದುವ ಮೂಲಕ ಶೋರೂಮ್‌ನೊಳಗೆ ನುಗ್ಗಿಸಿದ್ದು, ಕಾರಿನ ಮುಂದಿದ್ದ ವಸ್ತುಗಳೆಲ್ಲಾ ಧ್ವಂಸಗೊಂಡಿವೆ. ಹೀಗೆ ಅಚಾನಕ್ ಆಗಿ ಕಾರು ಶೋರೂಮ್‌ನೊಳಗೆ ನುಗ್ಗಿದ್ದರಿಂದ ಶೋರೂಮ್‌ನಲ್ಲಿದ್ದವರೆಲ್ಲಾ ಜೀವ ಉಳಿಸಿಕೊಳ್ಳಲು ಸುರಕ್ಷಿತ ಸ್ಥಳಕ್ಕೆ ಓಡುತ್ತಿರುವುದು ವೀಡಿಯೋದಲ್ಲಿ ರೆಕಾರ್ಡ್ ಆಗಿದೆ. ಅಲ್ಲದೇ ವೀಡಿಯೋದಲ್ಲಿ ಮಿಚೆಲ್ ಮುರ್ರೆ ಅಲ್ಲಿದ್ದ ಸಿಬ್ಬಂದಿಯನ್ನು ಅವಾಚ್ಯವಾಗಿ ನಿಂದಿಸುತ್ತಿರುವುದನ್ನು ವೀಡಿಯೋದಲ್ಲಿ ಕಾಣಬಹುದಾಗಿದೆ. ಇದನ್ನು ನೋಡಿ ಅಲ್ಲಿದ್ದವರೊಬ್ಬರು ಕೂಡಲೇ ಪೊಲೀಸರನ್ನು ಕರೆಯಿರಿ ಎಂದು ಹೇಳುತ್ತಿರುವುದು ಕೂಡ ವೀಡಿಯೋದಲ್ಲಿ ರೆಕಾರ್ಡ್ ಆಗಿದೆ.
ಟ್ವಿಟ್ಟರ್‌ನಲ್ಲಿ ಈ ವೀಡಿಯೋವನ್ನು Collin Rugg ಎಂಬುವವರು ಹಂಚಿಕೊಂಡಿದ್ದು, 'ಕಾರನ್ನು ಹಿಂತಿರುಗಿಸಲು ಬಿಡದಿದ್ದರೆ ಡೀಲರ್‌ಶಿಪ್‌ನ ಮುಂಭಾಗದ ಬಾಗಿಲಿನ ಮೂಲಕ ಕಾರನ್ನು ಓಡಿಸುವುದಾಗಿ ವ್ಯಕ್ತಿ ಡೀಲರ್‌ಶಿಪ್‌ಗೆ ತಿಳಿಸಿದರು. ಆ ಕಾರನ್ನು ಇರುವಂತೆಯೇ ಮಾರಾಟ ಮಾಡಲಾಗಿದೆ ಎಂದು ಅವರು ಕಾರು ಮಾಲೀಕನಿಗೆ ಹೇಳಿದರು. ಈ ವೇಳೆ ಕಾರು ಚಾಲಕ ತಾನು ಹೇಳಿದಂತೆ ಮಾಡಿದನು ಮತ್ತು ಮುಂಭಾಗದ ಬಾಗಿಲಿನ ಮೂಲಕ ಕಾರನ್ನು ಓಡಿಸಿದನು. ಹೀಗಾಗಿ ಅಪರಾಧ, ಕಿಡಿಗೇಡಿತನ ಮತ್ತು ಅಜಾಗರೂಕ ಅಪಾಯದ ಆರೋಪದಡಿ ಆತನನ್ನು ಬಂಧಿಸಲಾಗಿದೆ' ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೋವನ್ನು 16 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದು, ವೈರಲ್ ಆಗಿದೆ. ಅನೇಕರು ವಿವಿಧ ಕಾಮೆಂಟ್ ಮಾಡಿದ್ದಾರೆ.