ಕುಂಭ ಮೇಳದಲ್ಲಿ ಜನರಿಗೆ ಗಂಧದ ತಿಲಕವಿಟ್ಟು ದಿನಕ್ಕೆ 65 ಸಾವಿರ ದುಡಿದ ಯುವಕ...!
ಕುಂಭಮೇಳದಲ್ಲಿ ತಿಲಕವಿಟ್ಟು ಯುವಕನೋರ್ವ ದಿನಕ್ಕೆ 65 ಸಾವಿರ ರೂಪಾಯಿ ದುಡಿದಿರುವುದು ನಿಜವೇ? ಸತ್ಯಾಸತ್ಯತೆ ತಿಳಿಯಲು ಸುದ್ದಿ ಓದಿ.
ತಲೆ ಇರೋನು ಎಲೆ ಮಾರಿ ಬದುಕುತ್ತಾನೆ ಎಂಬ ಗಾದೆ ಮಾತನ್ನು ನೀವು ಹಳ್ಳಿ ಕಡೆ ಕೇಳಿರಬಹು. ವೇದ ಸುಳ್ಳಾದರು ಗಾದೆ ಸುಳ್ಳಾಗದು ಎಂಬ ಮಾತಿನಂತೆ ಈ ಗಾದೆ ಮಾತು ಸತ್ಯ ಎಂಬುದಕ್ಕೆ ನಮ್ಮ ನಡುವೆ ನಡೆಯುತ್ತಿರುವ ಹಲವು ನಿದರ್ಶನಗಳೇ ಸಾಕ್ಷಿಯಾಗಿವೆ. ಸಾಧಿಸುವ ಛಲದೊಂದಿಗೆ ಕಷ್ಟಪಡುವ ಮನಸ್ಸಿದ್ದರೆ ಲಕ್ಷ್ಮಿಪುತ್ರನಾಗುವುದು ದೊಡ್ಡ ವಿಷಯ ಅಲ್ಲ ಎಂಬುದನ್ನು ಅನೇಕರು ಸಾಧಿಸಿ ತೋರಿಸಿದ್ದಾರೆ. ಅದೇ ರೀತಿ ಈಗ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾ ಕುಂಭಮೇಳದಲ್ಲಿ ಯುವಕನೋರ್ವ ಅಲ್ಲಿಗೆ ಬರುವ ಪ್ರವಾಸಿಗರಿಗೆ ಯಾತ್ರಿಕರಿಗೆ ಬರೀ ನಾಮ ಹಾಕಿಯೇ ದಿನಕ್ಕೆ 65 ಸಾವಿರ ರೂಪಾಯಿ ಗಳಿಕೆ ಮಾಡಿದ್ದಾನೆ ಎಂಬ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.
ಕುಂಭ ಮೇಳ ಎಂದರೆ ದಿನವೂ ಲಕ್ಷಾಂತರ ಜನ ಸೇರುವ ವಿಶ್ವದ ಅತೀ ದೊಡ್ಡ ಧಾರ್ಮಿಕ ಸಮಾಗಮ ಎಂಬುದು ಎಲ್ಲರಿಗೂ ಗೊತ್ತು. ದಿನವೂ ಲಕ್ಷ ಲಕ್ಷ ಜನ ಈ ಕಾರ್ಯಕ್ರಮಕ್ಕೆ ಆಗಮಿಸಿ ಗಂಗೆಯಲ್ಲಿ ಮಿಂದು ಪುಣ್ಯಸ್ನಾನ ಮಾಡುತ್ತಾರೆ. ಎಲ್ಲ ಪುಣ್ಯ ಕ್ಷೇತ್ರಗಳಲ್ಲಿಯೂ ನೀವು ಗಂಧ, ಚಂದನ, ಕುಂಕುಮ ಮುಂತಾದವುಗಳನ್ನು ಕೈಯಲ್ಲಿರಿಸಿಕೊಂಡು ಅಲ್ಲಿಗೆ ಆಗಮಿಸುವ ಭಕ್ತರ ಹಣೆಗೆ ಅದನ್ನು ಹಾಕಿ ಅವರಿಂದ ಹತ್ತೋ ಇಪ್ಪತ್ತೋ ರೂಪಾಯಿಯನ್ನು ವಸೂಲಿ ಮಾಡುವುದನ್ನು ನೀವು ನೋಡಿರಬಹುದು. ಅದೇ ರೀತಿ ಇಲ್ಲಿ ಯುವಕನೋರ್ವ ಕೇವಲ 20 ರೂಪಾಯಿಗೆ ಸಿಗುವ ಗಂಧದ ಉಂಡೆಯನ್ನು ನೀರು ಮಾಡಿ ಅಲ್ಲಿಗೆ ಆಗಮಿಸುವ ಭಕ್ತರಿಗೆ ತಿಲಕವಿಟ್ಟಿದ್ದು, ಪ್ರತಿಯೊಬ್ಬರಿಂದ ಆತ ಕೇವಲ 10 ರೂಪಾಯಿಯನ್ನು ಇದಕ್ಕಾಗಿ ಪಡೆದಿದ್ದಾನಂತೆ. ಇದರಿಂದ ಆತನಿಗೆ ದಿನದಾಂತ್ಯದಲ್ಲಿ ಸುಮಾರು 65 ಸಾವಿರ ರೂಪಾಯಿ ಸಂಗ್ರಹವಾಗಿದೆಯಂತೆ.
ಈ ರೀತಿ ಹೇಳುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆದರೆ ಅದರ ಸತ್ಯಾಸತ್ಯತೆ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ಯುವಕನ ಫೋಟೋದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹಲವು ಮೀಮ್ಸ್‌ಗಳು ವೈರಲ್ ಆಗುತ್ತಿದ್ದು, ಇದನ್ನು ನೋಡಿದ ಅನೇಕರು ನಾವು ಕೂಡ ಕುಂಭಮೇಳಗೆ ಹೋಗಿ ಈ ರೀತಿಯ ಸಿಂಪಲ್ ಆದ ಉದ್ಯಮ ಶುರು ಮಾಡೋಣ ಎಂದು ಕಾಮೆಂಟ್ ಮಾಡ್ತಿದ್ದಾರೆ. ಆದರೆ ಆ ವ್ಯಕ್ತಿಯೇ ಇದು ಸುಳ್ಳು ತಾನು ಸುಮ್ಮನೇ ತಮಾಷೆ ಮಾಡಿದೆ ಎಂದು ಹೇಳಿದ್ದಾನೆ ಎಂದು ವರದಿಯಾಗಿದೆ. ಆದರೆ ಈ ರೀತಿಯ ಬ್ಯುಸಿನೆಸ್ ಐಡಿಯಾ ವರ್ಕ್ ಆಗೋದಂತು ನಿಜ ಇದರ ಬಗ್ಗೆ ನಿಮ್ಮ ಅಭಿಪ್ರಾಯವೇನು ಕಾಮೆಂಟ್ ಮಾಡಿ.