Asianet Suvarna News Asianet Suvarna News

CCD Growth: ವೈರಲ್ ಪೋಸ್ಟ್, ಕಂಪನಿ ಪ್ರಗತಿ ಬಗ್ಗೆ ಮಾಳವಿಕಾ ಹೇಳಿದ್ದಿಷ್ಟು

ಪತಿಯ ಕನಸಿನ ಸಾಮ್ರಾಜ್ಯವನ್ನು ಮತ್ತೆ ಕಟ್ಟಲು ಪಣ ತೊಟ್ಟಿರೋ ಕೆಫೆ ಕಾಫಿ ಡೇ ಸಂಸ್ಥೆ ಸಿಇಒ ಮಾಳವಿಕಾ ಹೆಗಡೆ ಕಳೆದ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ.  ಮಾಳವಿಕಾ ಸಂಸ್ಥೆಯ ಸಾಲದ ಹೊರೆ ತಗ್ಗಿಸಿದ ಸುದ್ದಿಗಳು ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ವೈರಲ್ ಆಗಿವೆ. ಸುವರ್ಣ ನ್ಯೂಸ್ ವೆಬ್ ಸೈಟ್ ಈ ಬಗ್ಗೆ ಮಾಳವಿಕಾ ಅವರನ್ನು ಸಂಪರ್ಕಿಸಿದಾಗ ಅವರು ಕೆಲವೊಂದು ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಅದರ ಪೂರ್ಣ ವಿವರ ಇಲ್ಲಿದೆ. 

Cafe coffee day growth viral post what does its CEO  Malavika Hegde says
Author
Bangalore, First Published Jan 18, 2022, 4:15 PM IST

Business Desk: ಕೆಫೆ ಕಾಫಿ ಡೇ (CCD) ಹಾಗೂ ಅದರ ಸಿಇಒ (CEO) ಮಾಳವಿಕಾ ಹೆಗಡೆ (Malavika Hegde) ಕುರಿತಾದ ಒಂದಿಷ್ಟು ಪೋಸ್ಟ್ ಗಳು ಕಳೆದ ಕೆಲವು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ(Social Media) ಸಾಕಷ್ಟು ವೈರಲ್  (Viral) ಆಗಿವೆ. ಪತಿ ಸಿದ್ಧಾರ್ಥ ಹೆಗಡೆ (Siddhartha Hegde) ಮರಣದ ಬಳಿಕ ಕಾಫಿ ಡೇ (Coffee Day) ಚುಕ್ಕಾಣಿ ಹಿಡಿದ ಮಾಳವಿಕಾ ಕೇವಲ ಎರಡೇ ವರ್ಷದಲ್ಲಿ 5500 ಕೋಟಿ ರೂ. ಸಾಲ (Debt)ತೀರಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಈ ಸಂಬಂಧ ಮಾಳವಿಕಾ ಅವರನ್ನು ಸುವರ್ಣ ನ್ಯೂಸ್ ವೆಬ್ ಸೈಟ್ ಸಂಪರ್ಕಿಸಿದಾಗ ಈ ಸುದ್ದಿಯಲ್ಲಿರೋ ಅಂಶಗಳನ್ನು ಅವರು ತಿರಸ್ಕರಿಸಿಲ್ಲ.ಆದ್ರೆ, ವೈರಲ್ ಪೋಸ್ಟ್ ಗಳಲ್ಲಿರೋ ಮಾಹಿತಿಗಳು ಒಂದು ವರ್ಷ ಹಳೆಯದ್ದಾಗಿವೆ ಎಂಬ ವಿಚಾರವನ್ನು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ಕಾಫಿ ಡೇ (Coffee Day) ಇತ್ತೀಚಿನ ವರ್ಷಗಳಲ್ಲಿ ಸಾಕಷ್ಟು ಪ್ರಗತಿ ಕಂಡಿರೋದು ನಿಜ, ಆದ್ರೆ ಸಾಗಬೇಕಾದ ಹಾದಿ ಇನ್ನೂ ಇದೆ ಎಂದಿದ್ದಾರೆ.

'ಕಳೆದ ಕೆಲವು ದಿನಗಳಿಂದ ಕಾಫಿ ಡೇಗೆ ನೀವೆಲ್ಲರೂ ತೋರುತ್ತಿರೋ ಬೆಂಬಲ (Support) ಹಾಗೂ ಆತ್ಮವಿಶ್ವಾಸ (confidence) ನೋಡಿ ನನ್ನ ಹೃದಯ ತುಂಬಿ ಬಂದಿದೆ. ಈ ಸಕಾರಾತ್ಮಕ ಬೆಳವಣಿಗೆ ನನಗೆ ಖುಷಿ ನೀಡಿದ್ದರೂ ಕೂಡ ಆನ್ ಲೈನ್ ಮಾಧ್ಯಮಗಳಲ್ಲಿ (Online Media) ಪ್ರಕಟಗೊಂಡಿರೋ ಸಂದರ್ಶನ ಹಾಗೂ ಸುದ್ದಿಗಳಲ್ಲಿ ಉಲ್ಲೇಖವಾಗಿರೋ ಅಂಶಗಳು ಒಂದು ವರ್ಷ ಹಿಂದಿನದ್ದು ಎಂಬ ಮಾಹಿತಿಯನ್ನು ಹಂಚಿಕೊಳ್ಳೋದು ನನ್ನ ಜವಾಬ್ದಾರಿ,' ಎಂದು ಮಾಳವಿಕಾ ಹೇಳಿದ್ದಾರೆ. 

Selfies NFT: ತನ್ನ 1000 ಸೆಲ್ಫಿ ಮಾರಾಟ ಮಾಡಿ ಕೋಟ್ಯಧಿಪತಿಯಾದ ಇಂಡೋನೇಷಿಯನ್ ವಿದ್ಯಾರ್ಥಿ!

'ನಿಜ, ನಾವು ಒಂದಿಷ್ಟು ಹಾದಿಯನ್ನು ಯಶಸ್ವಿಯಾಗಿ ಕ್ರಮಿಸಿದ್ದೇವೆ. ಆದ್ರೆ ನಾವು ಸಾಗಬೇಕಿರೋ ದಾರಿ ಸುದೀರ್ಘವಾಗಿದೆ. ನಾವು ಮಾಡಬೇಕಿರೋ ಕೆಲಸ ಈಗ ಆಗಿರೋದಕ್ಕಿಂತ ಇನ್ನೂ ಹೆಚ್ಚಿದೆ. ಮರುಕಳಿಸುತ್ತಿರೋ ಕೊರೋನಾ ಮಹಾಮಾರಿಯಿಂದ ಪರಿಸ್ಥಿತಿ ಮತ್ತಷ್ಟು ಸವಾಲಿನಿಂದ ಕೂಡಿದೆ. ನಮ್ಮ ತಂಡ ಈ ಎಲ್ಲ ಸವಾಲುಗಳನ್ನು ಯಶಸ್ವಿಯಾಗಿ ನಿಭಾಯಿಸಲು ಬದ್ಧವಾಗಿದೆ. ನಮ್ಮ ಹೋರಾಟ ಕೇವಲ ಉಳಿವಿಗಾಗಿ (Survive) ಅಲ್ಲ, ಬದಲಿಗೆ ಯಶಸ್ಸಿಗಾಗಿ (Thrive).ಮುಂದೆ ಸಾಕಷ್ಟು ಅನಿಶ್ಚಿತತೆ ಇರೋವಾಗ  ಈಗ ನಾವು ತಲುಪಿರೋ ಹಂತದಲ್ಲಿ ಯಾವುದೇ ಪ್ರಗತಿಯನ್ನು ಸಾಧನೆಯೆಂದು ಪರಿಗಣಿಸಿ ಸಂಭ್ರಮಿಸೋದು ಅಪಕ್ವ ( premature) ಅನಿಸುತ್ತದೆ' ಎಂಬ ಅಭಿಪ್ರಾಯವನ್ನು ಮಾಳವಿಕಾ ವ್ಯಕ್ತಪಡಿಸಿದ್ದಾರೆ. 

ಕಾಫಿ ಡೇ ಷೇರು ಬೆಲೆ ಹೆಚ್ಚಳ
ಕಳೆದ 7 ದಿನಗಳಲ್ಲಿ ಕಾಫಿ ಡೇ ಎಂಟರ್ ಪ್ರೈಸರ್ಸ್ (Coffee Day Enterprises) ಷೇರುಗಳಲ್ಲಿ(Stocks) ಶೇ.70ರಷ್ಟು ಹೆಚ್ಚಳ ಕಂಡುಬಂದಿದೆ.  ಕಾಫೀ ಡೇ ಷೇರುಗಳಿಗೆ ಪ್ರಸ್ತುತ 72.35 ರೂ. ಮೌಲ್ಯವಿದೆ. ಇದು 52 ವಾರಗಳಲ್ಲೇ ಅತ್ಯಧಿಕ ಬೆಲೆಯಾಗಿದೆ. ಸೋಮವಾರ (ಜ.17) ಈ ಕಂಪನಿಯ ಷೇರುಗಳು ಶೇ.6ರಷ್ಟು ಹೆಚ್ಚಳ ದಾಖಲಿಸಿವೆ. ಇನ್ನು ಇಂದು (ಜ.18) ಬೆಳಗ್ಗಿನ ಪ್ರಾರಂಭದ ಅವಧಿಯಲ್ಲಿ ಕೂಡ  ಮಾರುಕಟ್ಟೆಯಲ್ಲಿ ಶೇ.3ರಷ್ಟು ಏರಿಕೆ ಕಂಡಿವೆ. ಕಾಫಿ ಡೇ ಷೇರುಗಳ ಬೆಲೆಯಲ್ಲಿ ಈ ದಿಢೀರ್ ಏರಿಕೆ ಕಂಡುಬರಲು ಕಾರಣವೇನು ಎಂಬ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದ್ದು, ನಿಖರ ಕಾರಣ ಮಾತ್ರ ತಿಳಿದುಬಂದಿಲ್ಲ. ಈ ನಡುವೆ ಈ ಬಗ್ಗೆ ಬಾಂಬೆ ಸ್ಟಾಕ್ ಎಕ್ಸ್ ಚೇಂಜ್ (BSE) ಸ್ಪಷ್ಟನೆ ನೀಡಿರೋ ಕಾಫಿ ಡೇ ಆಡಳಿತ ಮಂಡಳಿ- 'ಕಂಪನಿಯ ಕಾರ್ಯನಿರ್ವಹಣೆ ಅಥವಾ ಬೆಲೆ ಮೇಲೆ ಪರಿಣಾಮ ಬೀರೋ ಯಾವುದೇ ಕಾರ್ಯಕ್ರಮ ಅಥವಾ ಮಾಹಿತಿಯನ್ನು ನಾವು ಹೊಂದಿಲ್ಲ. ಹೀಗಾಗಿ ಕಂಪನಿಯ ಷೇರುಗಳ ಬೆಲೆಯಲ್ಲಿನ ಬದಲಾವಣೆ ಮಾರುಕಟ್ಟೆ ಆಧಾರಿತವಾಗಿದ್ದು, ಕಂಪನಿಯ ಆಡಳಿತ ಮಂಡಳಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ' ಎಂದು ಹೇಳಿದೆ. 

Tesla in India: ಕಾರು ಘಟಕ ತೆರೆಯಲು ಎಲಾನ್‌ಗೆ ವಿವಿಧ ರಾಜ್ಯಗಳ ಆಫರ್: ಮಸ್ಕ್‌ ಟ್ವೀಟ್‌ಗೆ ಭರ್ಜರಿ ಪ್ರತಿಕ್ರಿಯೆ!

ವೈರಲ್ ಪೋಸ್ಟ್ ಗಳಲ್ಲಿ ಏನಿತ್ತು?
ಕಾಫಿ ಡೇ ಮಾಲೀಕ ಸಿದ್ದಾರ್ಥ ಹೆಗಡೆ 2019ರ ಜುಲೈನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಕ್ಕೆ ಸಾಲವೇ ಕಾರಣ ಎಂದು ಹೇಳಲಾಗಿತ್ತು. ಈ ಬಗ್ಗೆ ಅವರು ಬರೆದಿರೋ ಡೆತ್ ನೋಟ್ ಕೂಡ ಸಿಕ್ಕಿತ್ತು. ಆಗ ಕಾಫಿ ಡೇ 7 ಸಾವಿರ ಕೋಟಿ ರೂ. ಸಾಲದ ಸುಳಿಯಲ್ಲಿತ್ತು. ಸಿದ್ಧಾರ್ಥ ಅವರ ನಿಧನದ ಬಳಿಕ ಕಂಪನಿ ಷೇರುಗಳ ಬೆಲೆ ನೆಲಕಚ್ಚಿತ್ತು. ಅಲ್ಲದೆ, ಕೆಲವು ಸಮಯ ಟ್ರೇಡಿಂಗ್ ನಡೆಸದಂತೆಯೂ ನಿರ್ಬಂಧ ವಿಧಿಸಲಾಗಿತ್ತು. ಇಂಥ ಸಮಯದಲ್ಲಿ ಕಂಪನಿ ಚುಕ್ಕಾಣಿ ಹಿಡಿದ ಮಾಳವಿಕಾ ಕೇವಲ ಎರಡೇ ವರ್ಷಗಳ ಅವಧಿಯಲ್ಲಿ ಕಾಫಿ ಡೇ ಸಾಲದ ಮೊತ್ತವನ್ನು 7 ಸಾವಿರ ಕೋಟಿ ರೂ.ನಿಂದ 1731 ಕೋಟಿ ರೂ.ಗೆ ಇಳಿಸಿದ್ದಾರೆ. ಅಂದ್ರೆ 5500 ಕೋಟಿ ರೂ. ಸಾಲ ತೀರಿಸಿದ್ದಾರೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಹಾಗೂ ಕೆಲವು ಆನ್ ಲೈನ್ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು. ಮಾಳವಿಕಾ ಹೆಗಡೆ ಸಾಧನೆಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು ಕೂಡ. 

 

Follow Us:
Download App:
  • android
  • ios