ಶ್ವೇತಭವನದ ಹ್ಯಾಲೋವೀನ್ ಪಾರ್ಟಿಯಲ್ಲಿ ಜೋ ಬೈಡನ್ ಮಗುವಿನ ಕಾಲು ಕಚ್ಚುವಂತೆ ಪೋಸ್ ನೀಡಿದ ಫೋಟೋ ವೈರಲ್ ಆಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಗ್ರಾಸವಾಗಿದೆ. ಟ್ರಂಪ್ ಬೆಂಬಲಿಗರು ಬೈಡನ್ ಅವರನ್ನು ಟೀಕಿಸಿದ್ದಾರೆ.
ವಾಷಿಂಗ್ಟನ್: ಶ್ವೇತಭವನದಲ್ಲಿ ಆಯೋಜನೆ ಮಾಡಲಾಗಿದ್ದ ಹ್ಯಾಲೋವೀನ್ ಕಾರ್ಯಕ್ರಮದಲ್ಲಿ ಅಮೆರಿಕದ ಅಧ್ಯಕ್ಷ ಜೋ ಬೈಡನ್, ಕೋಳಿಯ ರೀತಿ ಡ್ರೆಸ್ ಧರಿಸಿದ್ದ ಮಗುವಿನ ಕಾಲು ಕಚ್ಚುವಂತೆ ಫೋಟೋಗೆ ಪೋಸ್ ನೀಡಿದ್ದಾರೆ. ಸದ್ಯ ಈ ಫೋಟೋ ಮತ್ತು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಹ್ಯಾಲೋವೀನ್ ಕಾರ್ಯಕ್ರಮದಲ್ಲಿ ಭಾಗವಹಿಸುವ ಜನರು ವಿಚಿತ್ರ ರೀತಿಯಲ್ಲಿ ಉಡುಪು ಧರಿಸಿ ವಿಭಿನ್ನ ಲುಕ್‌ನಲ್ಲಿ ಆಗಮಿಸಿ ಎಲ್ಲರ ಗಮನವನ್ನು ಸೆಳೆಯುತ್ತಾರೆ.
ಈ ಫೋಟೋ ಮತ್ತು ವಿಡಿಯೋಗೆ ಸೋಶಿಯಲ್ ಮೀಡಿಯಾದಲ್ಲಿ ತರೇಹವಾರಿ ಕಮೆಂಟ್‌ಗಳು ಬರುತ್ತಿವೆ. ಜೋ ಬೈಡನ್ ಮಗುವಿನ ಕಾಲು ಕಚ್ಚಿದ್ರಾ? ಓ ಮೈ ಗಾಡ್! ಅಲ್ಲಿ ಏನಾಗ್ತಿದೆ ಎಂಬುವುದು ನನಗೆ ಗೊತ್ತಿಲ್ಲ. ಪ್ಲೀಸ್ ಯಾರಾದ್ರೂ ನನಗೆ ಹೇಳುತ್ತೀರಾ? ಎಂದು ಒಬ್ಬರು ಬರೆದುಕೊಂಡಿದ್ದಾರೆ. ಮತ್ತೋರ್ವ ಬಳಕೆದಾರ, ನಂಬಲು ಆಗುತ್ತಿಲ್ಲ, ಇದು ಬೈಡನ್ ಜೀವನದ ವಿಚಿತ್ರ ಘಟನೆಯಾಗಲಿದೆ ಎಂದ್ರೆ ಮತ್ತೊಬ್ಬರು ಮಗುವನ್ನು ನೋಡಿದ್ರೆ ಎತ್ತಿ ಮುದ್ದಾಡಬೇಕು ಅನ್ನಿಸುತ್ತದೆ. ಆದ್ರೆ ಬೈಡಲ್ ಕಾಲು ಕಚ್ಚಿದ್ಯಾಕೆ ಎಂದು ಪ್ರಶ್ನೆ ಮಾಡಿದ್ದಾರೆ.
ಶ್ವೇತಭವನದಲ್ಲಿನ ಈ ಪಾರ್ಟಿಯಲ್ಲಿ ಸೇನೆಯಲ್ಲಿರುವ ಸೈನಿಕರ ಮಕ್ಕಳು ಮತ್ತು ಸ್ಥಳೀಯ ವಿದ್ಯಾರ್ಥಿಗಳು ಸೇರಿದಂತೆ ಸುಮಾರು 8,000 ಜನರು ಅತಿಥಿಗಳು ಭಾಗಿಯಾಗಿದ್ದರು. ಇನ್ನು ಇದೇ ಪಾರ್ಟಿಯಲ್ಲಿ ಜೋ ಬೈಡನ್ ಮಡದಿ, ಅಮೆರಿಕದ ಮೊದಲ ಮಹಿಳೆ ಜಿಲ್ ಬೈಡನ್ "ಹೆಲೊ-ರೀಡ್" ಥೀಮ್ ಅಡಿಯಲ್ಲಿ ಪಾಂಡಾ ಮಾದರಿಯ ಡ್ರೆಸ್ ಧರಿಸಿ ಆಗಮಿಸಿದ್ದರು. ಪಾಂಡಾ ಡ್ರೆಸ್ ಧರಿಸಿದ್ದ ಜಿಲ್ ಬೈಡನ್ ಮಕ್ಕಳ ಜೊತೆ ಮಗುವಾಗಿ ಕಾಲಕಳೆದರು. ಜಿಲ್ ಮತ್ತು ಬೈಡನ್ ಜೊತೆಯಾಗಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳಿಗೆ ಸಿಹಿ ವಿತರಣೆ ಮಾಡಿದರು. ಸುಮಾರು 1 ಗಂಟೆ ಕಾಲ ಬೈಡನ್ ತಾವೇ ಸಿಹಿ ವಿತರಿಸಿದರು.
ಜೋ ಬೈಡನ್ ಅವರ ಈ ನಡೆಯನ್ನು ರಿಪಬ್ಲಿಕ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಬಣದ ರಾಷ್ಟ್ರೀಯ ಸುರಕ್ಷಾ ಸಲಹೆಗಾರ ಮೈಕಲ್ ಫ್ಲಿನ್ ಕಟುವಾಗಿ ಟೀಕಿಸಿದ್ದಾರೆ. ನಿಮ್ಮ ಮಕ್ಕಳನ್ನು ಈ ವ್ಯಕ್ತಿಯಿಂದ ದೂರವಿಡಿ ಎಂದು ಸಲಹೆ ನೀಡಿದ್ದಾರೆ. ಟ್ರಂಪ್ ಪಕ್ಷದ ವಕ್ತಾರ ಲಾರಾ ಲೂಮರ್ ಎಂಬವರು, ಆ ವ್ಯಕ್ತಿ ನಾಯಿಗಳನ್ನು ತಿನ್ನುತ್ತಿದ್ದಾನೆ. ಇದೀಗ ಮಕ್ಕಳನ್ನು ತಿನ್ನಲು ಮುಂದಾಗಿದ್ದಾನೆ. ಇದು ತುಂಬಾ ಅತಿಯಾಯ್ತು ಎಂದು ಜೋ ಬೈಡನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ: ಅಮೆರಿಕಾ ರಾಜಕೀಯ: ಕಮಲಾ ಹ್ಯಾರಿಸ್ ಧರಿಸಿದ್ದ ಕಿವಿಯೊಲೆ ಬಗ್ಗೆಯೇ ಚರ್ಚೆ, ಬೆಲೆ ಎಷ್ಟು?
ಇತ್ತೀಚೆಗೆ ಟ್ರಂಪ್ ಬೆಂಬಲಿಗರನ್ನು ಕಸ ಎಂದು ಜೋ ಬೈಡನ್ ಟೀಕಿಸಿದ್ದರು. ಅವರ ಈ ಹೇಳಿಕೆಗೆ ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.ಕೆಲ ದಿನಗಳ ಹಿಂದಷ್ಟೇ ಟ್ರಂಪ್ ರ್‍ಯಾಲಿಯೊಂದರಲ್ಲಿ ಮಾತನಾಡಿದ್ದ ಅವರ ಬೆಂಬಲಿಗರೊಬ್ಬರು, ‘ಪೋರ್ಟೊರಿಕೋ ಒಂದು ಕಸದ ದ್ವೀಪ’ ಎಂದು ವ್ಯಂಗ್ಯವಾಡಿದ್ದರು. ಈ ಮೂಲಕ ಬೈಡೆನ್ ಅವರನ್ನು ದೂಷಿಸಿದ್ದರು. ಇದಕ್ಕೆ ಡೆಮಾಕ್ರೆಟ್ ಅಭ್ಯರ್ಥಿ ಕಮಲಾ ಹ್ಯಾರಿಸ್ ಪರ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ತಿರುಗೇಟು ನೀಡಿದ ಅಧ್ಯಕ್ಷ ಬೈಡೆನ್, ‘ಕೆಲ ದಿನಗಳ ಹಿಂದೆ ಭಾಷಣಕಾರರೊಬ್ಬರು ಪೋರ್ಟೊರಿಕೋವನ್ನು ಕಸದ ದ್ವೀಪ ಎಂದು ಟೀಕಿಸಿದ್ದರು.
ನನಗೆ ಗೊತ್ತಿರುವ, ನಾನು ಆರಿಸಿ ಬಂದಿರುವ, ನನ್ನ ತವರು ರಾಜ್ಯವಾದ ಡೆಲ್ವಾರೆಯ ಪೋರ್ಟೊರಿಕೋ ಅಂಥದ್ದಲ್ಲ. ಅಲ್ಲಿಯ ಜನ ಒಳ್ಳೆಯವರು ಸಂಭಾವಿತರು ಮತ್ತು ಗೌರವಾನ್ವಿತರು. ಅಲ್ಲಿ ನನಗೆ ಕಾಣಿಸುವ ಏಕೈಕ ತೇಲುವ ಕಸವೆಂದರೆ ಅವರ ಬೆಂಬಲಿಗರು ಎಂದು ಹೆಸರು ಹೇಳದೆಯೇ ಟ್ರಂಪ್ ಮತ್ತು ಅವರ ಬೆಂಬಲಿಗರ ವಿರುದ್ಧ ವ್ಯಂಗ್ಯವಾಡಿದ್ದಾರೆ.
ಇದನ್ನೂ ಓದಿ: ಕ್ವಾಡ್ ಶೃಂಗ ಸಭೆಯಲ್ಲಿ ಗೊಂದಲಕ್ಕೀಡಾದ ಬೈಡನ್: ಸಮಯಪ್ರಜ್ಞೆ ಮೆರೆದ ಕಮಲಾ ಹ್ಯಾರಿಸ್
