Jallianwala Bagh: ಜಲಿಯನ್ ವಾಲಾಬಾಘ್‌ಗೆ ಸೇಡಿಗಾಗಿ ಬ್ರಿಟನ್ ರಾಣಿ ಹತ್ಯೆ ಬೆದರಿಕೆ!
* ಪೂರ್ತಿ ಮುಖ ಮರೆಮಾಚಿದ ಸಿಖ್ ವ್ಯಕ್ತಿಯ ವಿಡಿಯೋ ವೈರಲ್
* ಜಲಿಯನ್ ವಾಲಾಬಾಘ್‌ಗೆ ಸೇಡಿಗಾಗಿ ಬ್ರಿಟನ್ ರಾಣಿ ಹತ್ಯೆ ಬೆದರಿಕೆ
* ಪ್ರಕರಣ ಸಂಬಂಧ ಬ್ರಿಟನ್‌ನಲ್ಲಿ ಭಾರತದ ಸಿಖ್ ವ್ಯಕ್ತಿ ಬಂಧನ
ಲಂಡನ್(ಡಿ.28): 1919ರಲ್ಲಿ 400ಕ್ಕೂ ಹೆಚ್ಚು ಭಾರತದ ಸ್ವಾತಂತ್ರ್ಯ ಹೋರಾಟಗಾರರ ನರಮೇಧಕ್ಕೆ ಕಾರಣವಾದ ಜಲಿಯನ್ ವಾಲಾಬಾಘ್ ಹತ್ಯಾಕಾಂಡದ ಪ್ರತೀಕಾರವಾಗಿ ಬ್ರಿಟನ್ ರಾಣಿ ಎಲಿಜಬೆತ್-2 ಹತ್ಯೆ ಮಾಡುವುದಾಗಿ ಬೆದರಿಕೆ ಹಾಕಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಅದರ ಬೆನ್ನಲ್ಲೇ ಸ್ಕಾಟ್ಲೆಂಡ್ ಯಾರ್ಡ್ ಪೊಲೀಸರು, ಕೊಲೆ ಬೆದರಿಕೆ ಹಾಕಿದ ವ್ಯಕ್ತಿಯನ್ನು ರಾಣಿ ನಿವಾಸ ‘ವಿಂಡ್ಸರ್ ಕ್ಯಾಸ್ಟಲ್’ ಬಳಿ ಬಂಧಿಸಿದ್ದಾರೆ.
ಪೂರ್ತಿ ಮುಖ ಮರೆಮಾಚಿ ತನ್ನನ್ನು ಭಾರತೀಯ ಸಿಖ್ ಜಸ್ವಂತ್ ಸಿಂಗ್ ಚೇಲ್ ಎಂದು ಪರಿಚಯಿಸಿಕೊಂಡಿರುವ ಆಗುಂತಕ, ಬ್ರಿಟನ್ ರಾಣಿಯನ್ನು ಸಂಹಾರ ಮಾಡಿ ಜಲಿಯನ್ ವಾಲಾಬಾಘ್‌ನ ಸೇಡು ತೀರಿಸಿಕೊಳ್ಳುವುದಾಗಿ ಘೋಷಿಸಿದ್ದ ವಿಡಿಯೋವನ್ನು ಸ್ನಾ್ಯಪ್‌ಚಾಟ್‌ನಲ್ಲಿ ಹಂಚಿಕೊಂಡಿದ್ದ. ಜತೆಗೆ ತಾನು ಬ್ರಿಟನ್ ರಾಜಮನೆತನದ ರಾಣಿ ಹತ್ಯೆ ಯತ್ನ ಮಾಡಿದೆ. ಇದಕ್ಕಾಗಿ ಕ್ಷಮೆಯಿರಲಿ. ಭಾರತದ ಸ್ವಾತಂತ್ರ್ಯ ಹೋರಾಟಗಾರರನ್ನು ಹತ್ಯೆಗೈದ, ತೇಜೋವಧೆ ಮತ್ತು ತಾರತಮ್ಯ ಮಾಡಿದ ಪ್ರತೀಕಾರವಾಗಿ ಈ ಕೆಲಸಕ್ಕೆ ಕೈಹಾಕಿದ್ದೇನೆ. ಅಲ್ಲದೆ ಈ ಸಂದೇಶವನ್ನು ನೀವು ಸ್ವೀಕರಿಸಿದ್ದರೆ, ನನ್ನ ಸಾವು ಸಮೀಪಿಸಿದೆ ಎಂದೇ ಅರ್ಥ ಎಂದಿದ್ದ.
ಇದೀಗ ಬಂಧನವಾದ 19 ವರ್ಷದ ವ್ಯಕ್ತಿಯೇ ರಾಣಿ ಅವರಿಗೆ ಕೊಲೆ ಬೆದರಿಕೆ ಹಾಕಿದ್ದಾನೆಯೇ ಎಂಬ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು, ಬಂಧಿತನ ಹೆಸರನ್ನು ಈವರೆಗೆ ಬಹಿರಂಗಪಡಿಸಿಲ್ಲ. ಜತೆಗೆ ಆರೋಪಿಯು ಮಾನಸಿಕ ಅನಾರೋಗ್ಯದಿಂದ ಬಳಲುತ್ತಿದ್ದು, ಆತನಿಗೆ ವೈದ್ಯಕೀಯ ಸಿಬ್ಬಂದಿಯಿಂದ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲದೆ ಶಂಕಿತನ ಕುಟುಂಬ ವಾಸವಿರುವ ಮನೆ ಮೇಲೂ ದಾಳಿ ನಡೆಸಿದ ಪೊಲೀಸರು, ಪರಿಶೀಲನೆ ನಡೆಸಿದರು.