ಇಸ್ತಾಂಬುಲ್(ಜ.13)‌: ಸುತ್ತಲೂ ಗ್ಲಾಮರಸ್‌ ಮಹಿಳೆಯರ ಗುಂಪು ಕಟ್ಟಿಕೊಂಡು ತನ್ನದೇ ಚಾನೆಲ್‌ ಮೂಲಕ ಹೈಫೈ ಇಸ್ಲಾಂ ಧರ್ಮಪ್ರಚಾರ ಮಾಡುತ್ತಿದ್ದ ಅದ್ನಾನ್‌ ಓಕ್ತರ್‌ (64) ಎಂಬಾತನಿಗೆ ಸ್ಥಳೀಯ ನ್ಯಾಯಾಲಯ 1075 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಕ್ರಿಮಿನಲ್‌ ತಂಡ ರಚನೆ, ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ, ಅತ್ಯಾಚಾರ, ಬ್ಲ್ಯಾಕ್‌ಮೇಲ್‌, ರಾಜಕೀಯ ಮತ್ತು ಮಿಲಿಟರಿ ದ್ರೋಹ ಸೇರಿದಂತೆ ಅದ್ನಾನ್‌ ಮೇಲಿನ 10 ಆರೋಪಗಳು ಸಾಬೀತಾದ ಹಿನ್ನೆಲೆಯಲ್ಲಿ ಕೋರ್ಟ್‌ ಆತನಿಗೆ ಇಷ್ಟುಶಿಕ್ಷೆ ವಿಧಿಸಿದೆ. ಆತನ ಇತರೆ ಹಲವು ಸಹಚರರಿಗೂ ಇದೇ ರೀತಿ ಭಾರೀ ಪ್ರಮಾಣದ ಶಿಕ್ಷೆ ಪ್ರಕಟಿಸಿದೆ.

ಎ 9 ಎಂಬ ಟೀವಿ ವಾಹಿನಿಯೊಂದನ್ನು ಸ್ಥಾಪಿಸಿದ್ದ ಅದ್ನಾನ್‌ ದಶಕಗಳಿಂದ ಅದರ ಮೂಲಕ ಇಸ್ಲಾಂ ಧರ್ಮ ಪ್ರಚಾರ ಮಾಡುತ್ತಿದ್ದ. ಇಂಥ ವೇಳೆಯೂ ಆತ ತನ್ನ ಸುತ್ತಲೂ ಅರೆಬರೆ ಬಟ್ಟೆತೊಟ್ಟಗ್ಲಾಮರಸ್‌ ಮಹಿಳೆಯರ ಗುಂಪನ್ನು ಇಟ್ಟುಕೊಂಡಿರುತ್ತಿದ್ದ. ಡಾರ್ವಿನ್‌ನ ವಿಕಾಸವಾದವೇ ಸುಳ್ಳು ಎಂದು ವಾದಿಸುತ್ತಿದ್ದ ಈತನ ವಿರುದ್ಧ ದಶಕಗಳಿಂದಲೂ ಮಹಿಳೆಯರ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿಬಂದಿತ್ತು. 2018ರಲ್ಲಿ ಈತನ ಟೀವಿ ಚಾನೆಲ್‌ ಅನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು ಆತನ ವಿರುದ್ಧ ಕೇಸು ದಾಖಲಿಸಿ ತನಿಖೆಗೆ ಆದೇಶಿಸಿತ್ತು.

ತನಿಖೆ ವೇಳೆ ಈತನಿಗೆ 1000ಕ್ಕೂ ಗಲ್‌ರ್‍ಫ್ರೆಂಡ್‌ಗಳಿದ್ದು ಬೆಳಕಿಗೆ ಬಂದಿತ್ತು. ಆತನ ಮನೆಯಲ್ಲಿ 69000 ಗರ್ಭನಿರೋಧಕ ಮಾತ್ರೆ ಪತ್ತೆಯಾಗಿತ್ತು. ಈ ಬಗ್ಗೆ ನ್ಯಾಯಾಲಯದಲ್ಲಿ ಪ್ರಶ್ನಿಸಿದಾಗ, ಮಹಿಳೆಯರ ಬಗ್ಗೆ ನನ್ನ ಹೃದಯದಲ್ಲಿ ಪ್ರೀತಿ ಉಕ್ಕಿ ಹರಿಯುತ್ತಿದೆ. ಪ್ರೀತಿ ಎಂಬುದು ಮಾನವನ ಗುಣ. ಅದು ಮುಸ್ಲಿಂ ಒಬ್ಬನ ಗುಣ ಎಂದೆಲ್ಲಾ ಹೇಳಿದ್ದ. ಮನೆಯಲ್ಲಿ ಸಿಕ್ಕಿದ್ದ ಗರ್ಭ ನಿರೋಧಕ ಮಾತ್ರೆಗಳು ಮಹಿಳೆಯರ ಋುತುಚಕ್ರದ ಸಮಸ್ಯೆ ಮತ್ತು ಚರ್ಮದ ಸಮಸ್ಯೆಗೆ ನಿವಾರಣೆಗೆ ತಂದಿದ್ದು ಎಂದೆಲ್ಲಾ ಹೇಳಿಕೊಂಡಿದ್ದ. ಆದರೆ ಈತನ ಎಲ್ಲಾ ವಾದಗಳನ್ನು ತಿರಸ್ಕರಿಸಿದ ನ್ಯಾಯಾಲಯ ಆತನಿಗೆ 1075 ವರ್ಷ ಜೈಲು ಶಿಕ್ಷೆ ವಿಧಿಸಿದೆ.