Russia Ukraine Crisis ಉಕ್ರೇನಿಂದ 3000 ಭಾರತೀಯರು ಒತ್ತೆ, ಪುಟಿನ್ ‘ಬಾಂಬ್’
- ಮಾನವ ತಡೆಗೋಡೆಯಾಗಿ ಉಕ್ರೇನ್‌ನಿಂದ ಬಳಕೆ
- ಕೂಡಲೇ ಉಕ್ರೇನ್ ಇವರ ಸುರಕ್ಷಿತ ಬಿಡುಗಡೆ ಮಾಡಬೇಕು
- ರಷ್ಯಾದ ವಾದವನ್ನು ನಿರಾಕರಿಸಿದ ಭಾರತ
ಮಾಸ್ಕೋ (ಮಾ. 4): ಭಾರತೀಯರನ್ನು ಉಕ್ರೇನ್ (Ukraine) ಒತ್ತೆಯಾಗಿರಿಸಿಕೊಂಡಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಆರೋಪ ಮಾಡಿದ ಬೆನ್ನಲ್ಲೇ, ರಷ್ಯಾ ಅಧ್ಯಕ್ಷ (Russia President ) ವ್ಲಾದಿಮಿರ್ ಪುಟಿನ್ (Vladimir Putin) ಕೂಡ ಇಂಥದ್ದೇ ಗಂಭೀರ ಆರೋಪವನ್ನು ಗುರುವಾರ ತಡರಾತ್ರಿ ಮಾಡಿದ್ದಾರೆ. ‘3000 ಭಾರತೀಯರನ್ನು ಉಕ್ರೇನ್ ಒತ್ತೆಯಾಳಾಗಿರಿಸಿಕೊಂಡಿದೆ’ ಎಂದು ಅವರು ಬಾಂಬ್ ಸಿಡಿಸಿದ್ದಾರೆ.
ಭದ್ರತಾ ಮಂಡಳಿ ಸದಸ್ಯ ದೇಶಗಳನ್ನು (UNSC) ಉದ್ದೇಶಿಸಿವ ವಿಡಿಯೋ ಕಾಲ್ ಮಾಡಿದ ಅವರು, ‘ಭಾರತೀಯರು ಹಾಗೂ ಚೀನೀಯರನ್ನು ಉಕ್ರೇನ್‌ನ ‘ನಾಜೀವಾದಿಗಳು’ ಒತ್ತೆಯಾಳಾಗಿ ಇರಿಸಿಕೊಂಡಿದ್ದಾರೆ. ಇವರ ತೆರವು ಕಾರ್ಯಾಚರಣೆಗೆ ಉಕ್ರೇನ್ ಅನುವು ಮಾಡಿಕೊಡುತ್ತಿಲ್ಲ. ಈ ನಿಯೋ ನಾಜಿವಾದಿಗಳು ವಿದೇಶೀಯರನ್ನು ಮಾನವ ತಡೆಗೋಡೆಯಾಗಿ ಇರಿಸಿಕೊಳ್ಳುತ್ತಿದ್ದಾರೆ. ರಷ್ಯನ್ ಪಡೆಗಳ ಮೇಲೆ ಉಕ್ರೇನಿಗಳು ದಾಳಿ ಮಾಡಿ, ಪ್ರತಿದಾಳಿಗೆ ಪ್ರಚೋದಿಸುತ್ತಿದ್ದಾರೆ. ಕೂಡಲೇ ಇದನ್ನು ಉಕ್ರೇನಿ ಗಳು ನಿಲ್ಲಿಸಬೇಕು. ವಿದೇಶಿಗರು ಹಾಗೂ ನಾಗರಿಕರ ಸುರಕ್ಷಿತ ಬಿಡುಗಡೆಗೆ ಉಕ್ರೇನ್ ಅನುವು ಮಾಡಿಕೊಡಬೇಕು’ ಎಂದು ಒತ್ತಾಯಿಸಿದರು.
ಇದೇ ವೇಳೆ, ಯುದ್ಧ ನಡೆಯುತ್ತಿದ್ದರೂ ನಾಗರಿಕರು ಸುರಕ್ಷಿತವಾಗಿ ಒಂದು ಸ್ಥಳದಿಂದ ಇನ್ನೊಂದು ಕಡೆ ತೆರಳಲು ರಷ್ಯಾ ‘ಸುರಕ್ಷಿತ ಕಾರಿಡಾರ್’ ಮೂಲಕ ಅನುವು ಮಾಡಿಕೊಡಲಿದೆ ಎಂದು ಪುಟಿನ್ ಸ್ಪಷ್ಟಪಡಿಸಿದರು. ಇದೇ ವೇಳೆ, ಉಕ್ರೇನ್‌ನಲ್ಲಿನ ರಷ್ಯಾ ಯೋಧರ ಹೋರಾಟ ಶ್ಲಾಘಿಸಿದ ಪುಟಿನ್, ಮಡಿದ ಹುತಾತ್ಮರ ಕುಟುಂಬಕ್ಕೆ ಭಾರೀ ನೆರವು ನೀಡಲಾಗುವುದು ಎಂದು ಘೋಷಿಸಿದರು.
ನಿರಾಕರಿಸಿದ್ದ ಭಾರತ: ಜನರನ್ನು ರಷ್ಯಾ ಒತ್ತೆಯಾಳಾಗಿರಿಸಿಕೊಂಡಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯ (Ministry of Foreign Affairs of the Russian Federation) ಮಾಡಿದ ಆರೋಪವನ್ನು ಭಾರತ ಸರ್ಕಾರ ಗುರುವಾರ ಬೆಳಗ್ಗೆ ನಿರಾಕರಿಸಿತ್ತು. ಇಂಥ ಯಾವುದೇ ಮಾಹಿತಿ ನಮ್ಮ ಬಳಿ ಇಲ್ಲ ಎಂದು ಭಾರತದ ವಿದೇಶಾಂಗ ಇಲಾಖೆ ಹೇಳಿತ್ತು ಹಾಗೂ ಯುದ್ಧಪೀಡಿತ ಸ್ಥಳಗಳಿಂದ ಭಾರತೀಯರ ತೆರವಿಗಾಗಿ ವಿಶೇಷ ರೈಲಿಗೆ ಮನವಿ ಮಾಡಿತ್ತು.
ಜನರ ತೆರವು ವೇಳೆ ರಷ್ಯಾ-ಉಕ್ರೇನ್ ‘ಕದನವಿರಾಮ’
ಕೀವ್: ಸತತ 8 ದಿನಗಳಿಂದ ನಡೆಯುತ್ತಿರುವ ರಷ್ಯಾ ಉಕ್ರೇನ್ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಉಭಯ ದೇಶಗಳು ಬೆಲಾರಸ್‌ನಲ್ಲಿ 2ನೇ ಹಂತದ ಸಂಧಾನ ಮಾತುಕತೆ ನಡೆಸಿದ್ದು, ಚರ್ಚೆಯು ಮಹತ್ವದ ಪ್ರಗತಿ ಕಂಡಿದೆ. ಯುದ್ಧಪೀಡಿತ ಸ್ಥಳಗಳಲ್ಲಿ ಜನರ ತೆರವು ಕಾರಾರಯಚರಣೆಗೆ ಅನುವು ಮಾಡಿಕೊಡಲು ಉಭಯ ದೇಶಗಳು ಸಮ್ಮತಿಸಿವೆ.
ಇದೇ ವೇಳೆ, ನಾಗರಿಕರ ತೆರವು ಕಾರ್ಯಾಚರಣೆಯಲ್ಲದೆ ಆಹಾರ ಹಾಗೂ ಔಷಧ ಪೂರೈಕೆಗೆ ಯಾವುದೇ ಅಡ್ಡಿ ಮಾಡಬಾರದು. ಇಂಥ ಕೆಲಸಗಳು ನಡೆಯುವಾಗ ತಾತ್ಕಾಲಿಕವಾಗಿ ಕದನವಿರಾಮ ನೀತಿಯನ್ನು ಅನುಸರಿಸಬೇಕು ಎಂದು ಮಾತುಕತೆಯಲ್ಲಿ ನಿರ್ಧರಿಸಲಾಗಿದೆ. ಇದೇ ವೇಳೆ, ಉಳಿದ ವಿಷಯಗಳಿಗೆ ಸಂಬಂಧಿಸಿದಂತೆ 3ನೇ ಸುತ್ತಿನ ಮಾತುಕತೆಗೆ ನಿರ್ಧರಿಸಲಾಗಿದೆ. ಮಾತುಕತೆ ಆರಂಭದಲ್ಲಿ, ‘ತಕ್ಷಣದಿಂದಲೇ ಕದನ ರಾಮ ಘೋಷಣೆಯಾಗಬೇಕು. ಯುದ್ಧ ಸ್ಥಗಿತಗೊಳಿಸುವ ಒಪ್ಪಂದಕ್ಕೆ ಸಹಿ ಹಾಕಬೇಕು. ಯುದ್ಧದಿಂದ ನಾಶವಾದ ಪ್ರದೇಶಗಳಿಂದ ನಾಗರಿಕರನ್ನು ರಕ್ಷಿಸಲು ಮಾನವೀಯ ಕಾರಿಡಾರ್ ರಚಿಸಬೇಕು’ ಎಂಬ ಷರತ್ತುಗಳನ್ನು ಉಕ್ರೇನ್ ವಿಧಿಸಿತ್ತು ಎಂದು ಮೂಲಗಳು ಹೇಳಿವೆ.
ಚಳಿಗಾಲದ ಪ್ಯಾರಾಲಿಂಪಿಕ್ಸ್ ನಿಂದ ರಷ್ಯಾ, ಬೆಲಾರಸ್ ಔಟ್
ಬೀಜಿಂಗ್: ಉಕ್ರೇನ್ ವಿರುದ್ಧ ಯುದ್ಧ ಮುಂದುವರಿಸಿರುವ ರಷ್ಯಾ ಹಾಗೂ ಅದಕ್ಕೆ ಬೆಂಬಲಿಸಿರುವ ಬೆಲಾರಸ್ ವಿರುದ್ಧ ಅಂತಾರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿ(ಐಪಿಸಿ) ನಿರ್ಬಂಧ ಹೇರಿದ್ದು, ಅಲ್ಲಿನ ಸ್ಪರ್ಧಿಗಳು ಚಳಿಗಾಲದ ಪ್ಯಾರಾಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ನಿರಾಕರಿಸಿದೆ.
ಬುಧವಾರವಷ್ಟೇ ಸಮಿತಿಯು ರಷ್ಯಾ, ಬೆಲಾರಸ್‌ನ ಸ್ಪರ್ಧಿಗಳಿಗೆ ತಮ್ಮ ದೇಶದ ಧ್ವಜ, ಹೆಸರು ಬಳಸದೆ ತಟಸ್ಥವಾಗಿ ಸ್ಪರ್ಧಿಸಲು ಅವಕಾಶ ನೀಡಿತ್ತು. ಗುರುವಾರ ತನ್ನ ನಿರ್ಧಾರ ಬದಲಿಸಿ ಪ್ರಕಟಣೆ ಹೊರಡಿಸಿದೆ. ಪ್ಯಾರಾಲಿಂಪಿಕ್ಸ್ ಮಾ.4ರಿಂದ 13ರ ವರೆಗೆ ನಿಗದಿಯಾಗಿದೆ. ಇನ್ನು, ಸೆಪ್ಟಂಬರ್‌ನಲ್ಲಿ ನಡೆಯಬೇಕಿದ್ದ ರಷ್ಯನ್ ಗ್ರ್ಯಾನ್ ಪ್ರಿ ಎಫ್ 1 ರೇಸ್ ಅನ್ನು ರದ್ದುಗೊಳಿಸಿದ್ದ ಅಂತಾರಾಷ್ಟ್ರೀಯ ಆಟೋಮೊಬೈಲ್ ಫೆಡರೇಶನ್(ಎಫ್‌ಐಎ), ರೇಸ್ ಆತಿಥ್ಯದಿಂದ ರಷ್ಯಾವನ್ನು ಶಾಶ್ವತವಾಗಿ ಹೊರಗಿಟ್ಟಿದೆ. ‘ರಷ್ಯಾ ಜೊತೆಗಿನ ಒಪ್ಪಂದ ಕೊನೆಗೊಳಿಸಿದ್ದೇವೆ. ಇನ್ನು ರಷ್ಯಾದಲ್ಲಿ ರೇಸ್ ನಡೆಯುವುದಿಲ್ಲ’ ಎಂದು ಎಫ್‌ಐಎ ತಿಳಿಸಿದೆ.