Russia ಶಾಲೆಯಲ್ಲಿ ಮನಬಂದಂತೆ ಗುಂಡಿನ ದಾಳಿ: ಮಕ್ಕಳು ಸೇರಿ 10 ಬಲಿ; 20 ಕ್ಕೂ ಹೆಚ್ಚು ಜನರಿಗೆ ಗಾಯ
ರಷ್ಯಾದ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಲಾಗಿದೆ. ಇನ್ನು, ದಾಳಿ ಬಳಿಕ ಬಂದೂಕುಧಾರಿ ತನ್ನನ್ನು ತಾನೇ ಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿದುಬಂದಿದೆ.
ರಷ್ಯಾದ ಶಾಲೆಯೊಂದರಲ್ಲಿ ವ್ಯಕ್ತಿಯೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಈ ಘಟನೆಯಲ್ಲಿ ಮಕ್ಕಳು ಸೇರಿ 10 ಮಂದಿ ಬಲಿಯಾಗಿದ್ದಾರೆ. ಸೋಮವಾರ ಬೆಳಗ್ಗೆ ಈ ಘಟನೆ ನಡೆದಿದ್ದು, ಈ ಗುಂಡಿನ ದಾಳಿಯಲ್ಲಿ ಸುಮಾರು 20 ಜನರು ಗಾಯಗೊಂಡಿದ್ದಾರೆ ಎಂದೂ ತಿಳಿದುಬಂದಿದೆ. ಬಂದೂಕುಧಾರಿಯೊಬ್ಬ ಮನಬಂದಂತೆ ಗುಂಡಿನ ದಾಳಿ ನಡೆಸಿದ್ದು, ಬಳಿಕ ಆತ ಸಹ ಗುಂಡು ಹೊಡೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ. ರಷ್ಯಾದ ಇಝೆವ್ಸ್ಕ್‌ನಲ್ಲಿ ಶಾಲೆಯೊಂದಕ್ಕೆ ನುಗ್ಗಿದ ಬಂದೂಕುಧಾರಿ ಆ ಶಾಲೆಯ ಸೆಕ್ಯುರಿಟಿ ಗಾರ್ಡ್ ಹಾಗೂ ಕೆಲ ಮಕ್ಕಳನ್ನು ಸಾಯಿಸಿದ್ದಾರೆ ಎಂದು ಉದ್ಮೂರ್ತಿಯಾ ಪ್ರದೇಶದ ಗವರ್ನರ್ ಅಲೆಕ್ಸಾಂಡರ್ ಬ್ರೆಚಾಲೋವ್ ವಿಡಿಯೋ ಮೂಲಕ ಮಾಹಿತಿ ನೀಡಿದ್ದಾರೆ. ಕೆಲ ಮಕ್ಕಳು ಬಲಿಯಾಗಿದ್ದಾರೆ ಹಾಗೂ ಕೆಲವರು ಗಾಯಗೊಂಡಿದ್ದಾರೆ ಎಂದೂ ಬ್ರೆಚಾಲೋವ್ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಹೆಚ್ಚಾಗಿದೆ.
1ನೇ ತರಗತಿಯಿಂದ 11ನೇ ತರಗತಿಯವರೆಗಿನ ಮಕ್ಕಳು ಈ ಶಾಲೆಯಲ್ಲಿ ಓದುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನು, ಗವರ್ನರ್ ಹಾಗೂ ಸ್ಥಳೀಯ ಪೊಲೀಸ್ ಪ್ರಕಾರ ಆ ಬಂದೂಕುಧಾರಿ ತಮ್ಮನ್ನು ತಾವೇ ಶೂಟ್ ಮಾಡಿಕೊಂಡಿದ್ದಾಳೆ. ಅಲ್ಲದೆ, ಅ ಶಾಲೆಯನ್ನು ಖಾಲಿ ಮಾಡಿಸಲಾಗಿದ್ದು, ಆ ಪ್ರದೇಶಕ್ಕೆ ಬೇಲಿ ಹಾಕಲಾಗಿದೆ ಎಂದೂ ಅಧಿಕಾರಿ ಹೇಳಿದ್ದಾರೆ. ಆದರೆ, ಆ ಬಂದೂಕುಧಾರಿ ಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ ಹಾಗೂ ಆತನ ಉದ್ದೇಶದ ಬಗ್ಗೆಯೂ ತಿಳಿದುಬಂದಿಲ್ಲ ಎನ್ನಲಾಗಿದೆ.
ಇಝೆವ್ಸ್ಕ್ ನಗರದಲ್ಲಿ 6 ಲಕ್ಷ 40 ಸಾವಿರ ಜನಸಂಖ್ಯೆ ಇದ್ದು, ಇದು ಮಧ್ಯ ರಷ್ಯಾದ ಉರಲ್ ಪರ್ವತಗಳ ಪಶ್ಚಿಮ ಭಾಗದಲ್ಲಿದೆ. ಅಲ್ಲದೆ, ರಷ್ಯಾ ರಾಜಧಾನಿ ಮಾಸ್ಕೋದಿಂದ ಸುಮಾರು 960 ಕಿಲೋಮೀಟರ್ ದೂರದಲ್ಲಿದೆ.