2013 ರಲ್ಲಿ ಆಫ್ರಿಕನ್‌ ಚೀತಾಗಳು ವಿದೇಶಿ ತಳಿ ಎಂದು ಅವುಗಳ ಆಮದಿಗೆ ಸುಪ್ರೀಂಕೋರ್ಟ್‌ ನಿರಾಕರಿಸಿತ್ತು. ಆದರೆ ಕಳೆದ ವಾರ ಸುಪ್ರೀಂಕೋರ್ಟ್‌ ಅದೇ ಆಫ್ರಿಕನ್‌ ಚೀತಾಗಳ ಆಮದಿಗೆ ಅನುಮತಿ ನೀಡಿದೆ.

ಚೀತಾಗಳಲ್ಲಿ ಎರಡು ಪ್ರಭೇದಗಳಿವೆ. ಏಷ್ಯಾ ಚೀತಾಗಳು ಹಾಗೂ ಆಫ್ರಿಕಾ ಚೀತಾಗಳು. ಆಫ್ರಿಕಾ ಚೀತಾಗಳು ಹೆಚ್ಚು ಉದ್ದ, ಅವುಗಳ ಬಣ್ಣ ಗಾಢ. ಏಷ್ಯಾದ ಚೀತಾಗಳು ಕಡಿಮೆ ಉದ್ದ, ಅವುಗಳ ಬಣ್ಣ ಕಡಿಮೆ ಗಾಢ. ಆದರೆ ಈ ಸೂಕ್ಷ್ಮ ವ್ಯತ್ಯಾಸ ಹೊರತುಪಡಿಸಿದರೆ, ಇವೆರಡೂ ಒಂದೇ ಮೂಲದಿಂದ ಬಂದಿವೆ ಎನ್ನಲಾಗುತ್ತದೆ.

ದೇಶದಲ್ಲಿ ಚಿರತೆಗಳ ಸಂಖ್ಯೆ ಶೇ.75-90 ರಷ್ಟು ಕುಸಿತ!

ಏಷ್ಯಾ ಚೀತಾಗಳಿಗೆ ದೊಡ್ಡ ಇತಿಹಾಸವೇ ಇತ್ತು. ಆದರೆ ಕಾಲಕ್ರಮೇಣ ಅವು ಅಳಿದು ಹೋದವು. ಏಷ್ಯಾ ಚೀತಾಗಳನ್ನು ಉಪಖಂಡದಾದ್ಯಂತ ಇದ್ದ ರಾಜ ಮಹಾರಾಜರು ಸಾಕಿ, ಅವುಗಳನ್ನು ಪಳಗಿಸಿ ಹುಲ್ಲೆಗಳನ್ನು ಭೇಟೆಯಾಡಲು ಉಪಯೋಗಿಸುತ್ತಿದ್ದರು. ಆದರೆ ಈ ಚೀತಾಗಳು ವಂಶವೃದ್ಧಿಸುವಲ್ಲಿ ಅಷ್ಟೇನೂ ಸಾಮರ್ಥ್ಯ ಹೊಂದಿರಲಿಲ್ಲ. ಹಾಗಾಗಿ ಇವುಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಾ ಬಂತು. ಈ ಏಷ್ಯಾ ಚೀತಾಗಳು ಅಳಿದು ಹೋಗಿ 7 ದಶಕಗಳೇ ಕಳೆದಿವೆ.

ಬ್ರಿಟಿಷರ ಕಾಲದಿಂದಲೂ ನಿರ್ಲಕ್ಷ್ಯ

ಚೀತಾಗಳು ಬಹು ಬೇಗ ಕಣ್ಮರೆಯಾದವು. ಕಾರಣ ಅವುಗಳ ಆವಾಸಸ್ಥಾನಗಳ ಮೇಲೆ ಮಾನವ ದೌರ್ಜನ್ಯ. ಚೀತಾಗಳು ಹುಲ್ಲುಗಾವಲು ಮತ್ತು ಸಣ್ಣ ಸಣ್ಣ ಬೆಟ್ಟಗಳಲ್ಲಿ ವಾಸಿಸುತ್ತವೆ. ಹುಲ್ಲುಗಾವಲುಗಳು ನಶಿಸುತ್ತಿರುವುದರಿಂದ ಚೀತಾಗಳೂ ನಶಿಸಿ ಹೋದವು. ಅದರ ಜೊತೆಗೆ ಭಾರತೀಯ ತೋಳ, ಕತ್ತೆ ಕಿರುಬ ಮತ್ತು ಕಾಡುಕೋಳಿ ಇತರ ವರ್ಚಸ್ವಿ ಪ್ರಭೇದಗಳೂ ವೇಗವಾಗಿ ಅವನತಿಯತ್ತ ಸಾಗುತ್ತಿವೆ. ಈ ಎಲ್ಲವೂ ಅಳಿವಿನಂಚಿನಲ್ಲಿರುವ ಪ್ರಮುಖ ಕಾರಣ ನಮ್ಮೆಲ್ಲರ ನಿರ್ಲಕ್ಷ್ಯ.

ಈ ನಿರ್ಲಕ್ಷ್ಯ ಇಂದಿನಿಂದಲ್ಲ ಬ್ರಿಟಿಷರ ಕಾಲದಿಂದಲೂ ಇತ್ತು. ಬ್ರಿಟಿಷರು, ಭಾರತದ ಕಾಡುಗಳನ್ನು ಹೊಕ್ಕು ನಿರಂತರವಾಗಿ ಚೀತಾಗಳನ್ನು ಬೇಟೆಯಾಡಿದರು. ಸ್ಥಳೀಯ ರಾಜರೂ ಅವುಗಳನ್ನು ಬೇಟೆಯಾಡಿ ಅವುಗಳ ಚರ್ಮವನ್ನು ತಮ್ಮ ಸಿಂಹಾಸನಗಳಿಗೆ ಮೆತ್ತೆ ಮಾಡಿಕೊಂಡರು. 1950ರಲ್ಲಿ ಚೀತಾಗಳನ್ನು ಕೊನೆಯ ಬಾರಿಗೆ ನೋಡಿದ ಮೇಲೂ ನಿರ್ಲಕ್ಷ್ಯ ಮುಂದುವರೆಯಿತು. ಭಾರತ ಸರ್ಕಾರವು ನೀರಾವರಿ ಯೋಜನೆಗಳ ಹೆಸರಿನಲ್ಲಿ ಅವುಗಳ ಆವಾಸಸ್ಥಾನವನ್ನು ನಾಶ ಮಾಡಿತು.

ಹಸಿರೀಕರಣ ಕಾರ್ಯಕ್ರಮಗಳ ಹೆಸರಲ್ಲಿ ಪ್ರೊಸೊಪಿಸ್‌ ಜುಲಿಫೆಫ್ರರಾದಂತಹ (ರಾಕ್ಷಸೀ ತಳಿ)ಮರಗಳನ್ನು ನೆಟ್ಟಿತು. ಕಾಗದದ ಉದ್ಯಮಕ್ಕಾಗಿ ನೀಲಗಿರಿ ತೋಟದ ಕೃಷಿಯನ್ನು ಉತ್ತೇಜಿಸಿತು. ಮತ್ತು ಆದ್ಯತೆಯಾಗಿ ಪರಿವರ್ತಿಸಲಾದ ತೆರೆದ ಆವಾಸಸ್ಥಾನಗಳನ್ನು ಮುಚ್ಚಿ ಕೈಗಾರಿಕಾ ಬಳಕೆಗಾಗಿ ನಗರಗಳು ಮತ್ತು ಬಂದರುಗಳು ಮೇಲೆದ್ದವು. ಪರಿಣಾಮವಾಗಿ ತೆರೆದ ಆವಾಸಸ್ಥಾನಗಳು ಇಂದು ಅಳಿವಿನಂಚಿನಲ್ಲಿವೆ.

ಕೆಸರಲ್ಲಿ ಬಿದ್ದವನಿಗೆ ನೆರವಿನ ಕೈ ಚಾಚಿದ ಪೂರ್ವಜ: ಬೇಡವೆಂದ ಮನುಜ!

1970 ರಿಂದಲೂ ಆಮದು ಪ್ರಯತ್ನ

ಚೀತಾಗಳನ್ನು ಭಾರತಕ್ಕೆ ಮರಳಿ ತರುವ ಯತ್ನ 1970ರಲ್ಲಿ ಆರಂಭವಾಯಿತು. ಮೊದಲು ಏಷ್ಯಾದ ಚೀತಾಗಳನ್ನು ಭಾರತಕ್ಕೆ ತರುವ ಯತ್ನಗಳು ನಡೆದವು. ಇರಾನಿನ ಏಷ್ಯಾ ಚೀತಾಗಳನ್ನು ಭಾರತಕ್ಕೆ ತಂದು, ಅದಕ್ಕೆ ಬದಲಾಗಿ ಇಲ್ಲಿ ವಿಪುಲವಾಗಿರುವ ಏಷ್ಯನ್‌ ಸಿಂಹಗಳಲ್ಲಿ ಕೆಲವನ್ನು ಇರಾನ್‌ಗೆ ನೀಡುವ ಬಗ್ಗೆ ಒಪ್ಪಂದದ ಪ್ರಯತ್ನವಾಯಿತು. ಅದಕ್ಕೂ ಮುನ್ನ, ಚೀತಾಕ್ಕೆ ಬೇಕಾದ ವಿಸ್ತಾರವಾದ ಹುಲ್ಲುಗಾವಲು ಅರಣ್ಯ ಹಾಗೂ ಬಲಿಪ್ರಾಣಿಗಳ ಆವಾಸಸ್ಥಾನವನ್ನು ಸಜ್ಜುಗೊಳಿಸಬೇಕಾಗಿತ್ತು. ಹೀಗಾಗಿ ಕೃಷ್ಣಮೃಗ ಹಾಗೂ ಚಿಂಕಾರಾಗಳನ್ನು ಬೆಳೆಸುವ ಪ್ರಯತ್ನಗಳೂ ನಡೆದವು. ಆದರೆ ಇದೇ ವೇಳೆಗೆ ಇರಾನ್‌ನಲ್ಲಿ ಇಸ್ಲಾಮಿಕ್‌ ಬಂಡಾಯ ನಡೆಯಿತು; ಹಳೆಯ ಎಲ್ಲ ಮಾತುಕತೆಗಳು ವ್ಯರ್ಥವಾದವು.

2001ರಲ್ಲಿ ಇನ್ನೊಂದು ಪ್ರಯತ್ನ ನಡೆದು ಅದೂ ವಿಫಲವಾಯಿತು. 2010 ರಲ್ಲಿ ಮತ್ತೆ ಚೀತಾಗಳನ್ನು ಬಿಡಲು ಸೂಕ್ತವಾದ ಕಾಡು ಪ್ರದೇಶದ ಅನ್ವೇಷಣೆಗೆ ತಜ್ಞರ ಸಮಿತಿಯನ್ನು ಸರ್ಕಾರ ರಚಿಸಿತ್ತು. ಅದು ಸೂಚಿಸಿ ದ ಅರಣ್ಯ ಪ್ರದೇಶ ಮಧ್ಯಪ್ರದೇಶದ ಕುನೋ ಪಾಲ್ಪುರ ಮತ್ತು ಗುಜರಾತಿನ ವೇಲವದರ್‌ ರಾಷ್ಟ್ರೀಯ ಉದ್ಯಾನ. ಆದರೆ ವೇಲವದರ್‌ ಅಭಯಾರಣ್ಯ, ಏಷ್ಯನ್‌ ಸಿಂಹಗಳ ಆವಾಸಸ್ಥಾನವಾಗಿದೆ. ಇಲ್ಲಿ ಚಿರತೆಗಳೂ ಇವೆ. ಈಗ ಚೀತಾಗಳನ್ನು ತಂದು ಬಿಡುವುದರಿಂದ ಸಿಂಹಗಳ ಆವಾಸಸ್ಥಾನಕ್ಕೆ ಧಕ್ಕೆಯಾಗಲಿದೆ ಎಂದು ಗುಜರಾತ್‌ ಸರ್ಕಾರ ನಿರಾಕರಿಸಿತು. ಮಧ್ಯಪ್ರದೇಶ ಮಾತ್ರ ಒಪ್ಪಿತು.

ಚೀತಾಗಳಿಗಿರುವ ಸವಾಲೇನು?

ಚೀತಾಗಳನ್ನು ಬೇರೆಡೆಯಿಂದ ತಂದು ಬಿಡಬಹುದು; ಆದರೆ ಅವುಗಳನ್ನು ಉಳಿಸಿಕೊಳ್ಳವುದೇ ಕಷ್ಟಕರ ಎಂಬುದು ಇನ್ನೊಂದು ವಾದ. ಭಾರತದ ಕುನೋ ಪಾಲ್ಪುರವಾಗಲೀ ಬೇರೆ ಯಾವುದೇ ಅರಣ್ಯ ಪ್ರದೇಶವಾಗಲೀ ಚೀತಾಗಳ ಆವಾಸಕ್ಕೆ ಬೇಕಾದಷ್ಟುವಿಸ್ತಾರವಾಗಿ ಇಲ್ಲ. ಅಲ್ಲದೆ ಚೀತಾಗಳಿಗೆ ಜಿಂಕೆ ಜಾತಿಯ ಪ್ರಾಣಿಗಳು ಆಹಾರಕ್ಕೆ ಅಗತ್ಯ.

ಇಲ್ಲಿ ಚೀತಾಗಳು ಸೀಮಿತ ಪ್ರದೇಶದಲ್ಲಿರುವ ಬೇಟೆ ಪ್ರಾಣಿಗಳಿಗಾಗಿ ಹುಲಿಗಳು, ಚಿರತೆಗಳು ಹಾಗೂ ಸಿಂಹಗಳ ಸ್ಪರ್ಧೆ ಎದುರಿಸಬೇಕು. ಇದರ ಜೊತೆಗೆ, ಕುಟುಂಬದಿಂದ ಪ್ರತ್ಯೇಕಿಸಿದ, ಪ್ರತಿಕೂಲ ವಾತಾವರಣ ಹೊಂದಿರುವ ಪ್ರದೇಶಗಳಲ್ಲಿ ಚೀತಾಗಳು ಸಂತಾನೋತ್ಪತ್ತಿ ನಡೆಸಲು ಉತ್ಸಾಹ ತೋರಿಸುವುದಿಲ್ಲ.

ಮಾಡಬೇಕಾದ ಕೆಲಸ ಬಾಕಿ ಇದೆ

ಈಗ ಆಮದು ಮಾಡಿಕೊಂಡ ಚೀತಾಗಳಿಗಾಗಿ ಮಧ್ಯಪ್ರದೇಶ ಮತ್ತು ಮಹಾರಾಷ್ಟ್ರದ ನೂರಾರು ಚದರ ಕಿ.ಮೀ ಪ್ರದೇಶದ ಹುಲ್ಲುಗಾವಲನ್ನು ಮೀಸಲಿಡಲಾಗಿದೆ. ಆದರೆ ಈ ಪ್ರದೇಶವು ಖಾಸಗೀ ಮಾಲಿಕತ್ವವನ್ನು ಹೊಂದಿದೆ ಅಥವಾ ಅಲ್ಲಿ ಗ್ರಾಮಗಳಿವೆ ಮತ್ತು ಹಲವಾರು ಯೋಜನೆಗಳಿಂದ ಹುಲ್ಲುಗಾವಲುಗಳಿಗೆ ಅಡ್ಡಿಯಾಗಬಹುದಾಗ ಬೆದರಿಕೆ ಇದೆ. ಹಾಗಾಗಿ ಚೀತಾಗಳ ಆಮದಿಗಾಗಿ ಭಾರತ ಮಾಡಬೇಕಾದ ಕೆಲಸ ಇನ್ನೂ ಬಾಕಿ ಇದೆ.

ನಾವು ಒಂದು ಅಥವಾ ಎರಡು ಸ್ಥಳಗಳಲ್ಲಿ ಚೀತಾಗಳನ್ನು ನೋಡಲು ಬಯಸುತ್ತೇವೆಯೋ ಅಥವಾ ದೇಶಾದ್ಯಂತ ಚೀತಾಗಳ ಸಂತಾನೋತ್ಪತ್ತಿ ನೋಡಲು ಬಯಸುತ್ತೇವೆಯೋ ಎಂಬುದನ್ನು ಮೊದಲು ಖಾತ್ರಿಪಡಿಸಿಕೊಳ್ಳಬೇಕು. ಪ್ರಸ್ತುತ ಯೋಜನೆಯಲ್ಲಿ ದೀರ್ಘಕಾಲೀನ ದೃಷ್ಟಿಸ್ಪಷ್ಟವಾಗಿಲ್ಲ ಎಂಬ ವಾದವಿದೆ. ಆದರೆ ಈ ಮರು ಪರಿಚಯವು ಇನ್ನೊಂದು ರೀತಿಯಲ್ಲಿ ಸಹಾಯವಾಗಬಹುದು. ಚೀತಾ ರಕ್ಷಣೆಗೆ ಬೆಳೆಸುವ ಹುಲ್ಲುಗಾವಲುಗಳಲ್ಲಿ ಕೃಷ್ಣಮೃಗ, ಚಿಂಕಾರಾ, ತೋಳ ಮುಂತಾದವುಗಳೂ ರಕ್ಷಣೆಯಾಗುತ್ತವೆ. ಜೊತೆಗೆ ಅಳಿವಿನಂಚಿನಲ್ಲಿರುವ ಹಕ್ಕಿಯ ಆವಾಸಸ್ಥಾನಗಳನ್ನೂ ರಕ್ಷಿಸಲು ಸಹಾಯ ಮಾಡುತ್ತದೆ.

ಇತಿಹಾಸದಲ್ಲಿ ಕಾಡುಗಳ ರಕ್ಷಣೆಗಾಗಿ ಸ್ಥಳೀಯ ಜನರು ಬೆಲೆ ತೆತ್ತ ಸಾಕಷ್ಟುಉದಾಹರಣೆಗಳಿವೆ. ಜಗತ್ತಿನ ಅತ್ಯಂತ ಯಶಸ್ವೀ ಸಂರಕ್ಷಣಾ ಕತೆಗÜಳು ಇದೇ ಪರಂಪರೆಯ ಮೇಲೆ ನಿರ್ಮಾಣವಾಗಿವೆ. ಆದರೆ ಚೀತಾಗಳ ಆವಾಸಸ್ಥಾನವನ್ನು ಇಂತಹ ಅನ್ಯಾಯಗಳಿಲ್ಲದೇ ರಕ್ಷಿಸಬಹುದು. ಏಕೆಂದರೆ ಭಾರತದ ಹುಲ್ಲುಗಾವಲುಗಳು ವಿಶಿಷ್ಟವಾಗಿವೆ.

ಆಫ್ರಿಕನ್‌ ಸವನ್ನಾ ಹುಲ್ಲುಗಾವಲುಗಳು ಹೇರಳವಾದ ಕಾಡು ದ್ರಾಕ್ಷಿಗಳು ಮತ್ತು ಕಡಿಮೆ ಮಾನವ ಸಾಂದ್ರತೆಯೊಂದಿಗೆ ಬೃಹತ್‌ ಪ್ರಮಾಣದ ಭೂಮಿಯನ್ನು ಒಳಗೊಂಡಿವೆ. ಭಾರತೀಯ ತೆರೆದ ಆವಾಸಸ್ಥಾನಗಳು ವಿಭಿನ್ನವಾಗಿವೆ: ಚಿಂಕಾರಾ, ಕೃಷ್ಣಮೃಗಗಳಂತಹ ಸಸ್ಯಹಾರಿ ಪ್ರಾಣಿಗಳು ನೀಲಗಿರಿಯಂತಹ ಕಾಡುಗಳಲ್ಲಿ ವಾಸಿಸುತ್ತವೆ. ಅವುಗಳ ಆವಾಸಸ್ಥಾನಗಳು ಚಿಕ್ಕದಾಗಿರುತ್ತವೆ ಮತ್ತು ತೇವವಾಗಿರುತ್ತವೆ.

ಅಸಾಧ್ಯ ಎಂದಿದ್ದು ಸಾಧ್ಯವಾಗಿಲ್ಲವೇ?

1973ರಲ್ಲಿ ಭಾರತ ಅಸಾಧ್ಯ ಎಂದುಕೊಂಡ ಹುಲಿ ಸಂರಕ್ಷಣಾ ಕೇಂದ್ರಗಳನ್ನೇ ಸ್ಥಾಪಿಸಿತು. ಎರಡೇ ಎರಡು ದಶಕದಲ್ಲಿ ಹುಲಿಗಳ ಸಂಖ್ಯೆ ದ್ವಿಗುಣವಾಯ್ತು. ಹುಲಿಗಳ ಆವಾಸ ಸ್ಥಾನದಿಂದ ಮಾನವನ ಹಸ್ತಕ್ಷೇಪವನ್ನು ತಡೆಗಟ್ಟುವುದರಿಂದ ಹುಲಿಗಳ ಸಂಖ್ಯೆ ಪುಟಿಯುತ್ತದೆ ಎಂಬ ವಿಶ್ವಾಸವನ್ನು ಇದು ಹೆಚ್ಚಿಸಿತು. ಇದೇ ಸರಳ ತರ್ಕ ಇಟ್ಟುಕೊಂಡು ಭಾರತೀಯ ಅರಣ್ಯ ಇಲಾಖೆ ಮತ್ತು ಸಂರಕ್ಷಣಾ ಸಮುದಾಯಗಳು ಚೀತಾಗಳ ಆಮದಿಗೆ ದೊಡ್ಡ ಮನಸ್ಸು ಮಾಡಿವೆ.

ಇನ್ನೊಂದು ಗಂಭೀರ ವಿಷಯ ಎಂದರೆ ಈಗ ಭಾರತ ಆಮದು ಮಾಡಿಕೊಳ್ಳುತ್ತಿರುವ ಆಫ್ರಿಕನ್‌ ಚೀತಾಗಳೂ ಅಳಿವಿನಂಚಿನಲ್ಲಿವೆ. ಭಾರತದ ಹವಾಮಾನ ಪರಿಸ್ಥಿತಿಗೆ ಅವು ಹೊಂದಿಕೊಳ್ಳುತ್ತವಾ ಎಂಬುದು ಈಗಿರುವ ದೊಡ್ಡ ಪ್ರಶ್ನೆ. ಭೇಟೆ, ಪರಭಕ್ಷಕ ಪ್ರಾಣಿಗಳು, ಹವಾಮಾನ ಮತ್ತು ಆವಾಸ ಸ್ಥಾನ ಬದಲಾವಣೆಯಂತಹ ಸವಾಲುಗಳನ್ನು ಮೀರಿ ಭಾರತದಲ್ಲಿ ಚೀತಾ ತಳಿಗಳು ಬೆಳೆಯುತ್ತವಾ ಎಂಬುದು ಎಲ್ಲರ ನಿರೀಕ್ಷೆ.

ಇದಕ್ಕಾಗಿ ಮಾನವ ಮತ್ತು ಸಾಕುಪ್ರಾಣಿಗಳ ಹಸ್ತಕ್ಷೇಪದ ನಿಯಂತ್ರಣ, ಪರಭಕ್ಷಕ ಪ್ರಾಣಿಗಳಿಂದ ರಕ್ಷಣೆಗೆ ಸಂಬಂಧಿಸಿದಂತೆ ಭಾರತ ಕಠಿಣ ಕ್ರಮ ಕೈಗೊಳ್ಳಲೇಬೇಕು. ಇಲ್ಲಿಗೇ ಸರ್ಕಾರದ ಕೆಲಸ ಸೀಮಿತವಾಗಿಲ್ಲ. ಅವುಗಳಿಗೆ ಸರಿಯಾದ ಆವಾಸಸ್ಥಾನವನ್ನೂ ಗುರುತಿಸಬೇಕು.