ನವದೆಹಲಿ(ಡಿ.20): ಭಾರತದಲ್ಲಿ ಅತ್ಯಾಚಾರದ ಆರೋಪ ಎದುರಿಸುತ್ತಿರುವ, ಸದ್ಯ ದೇಶ ಬಿಟ್ಟು ಪರಾರಿಯಾಗಿರುವ ಸ್ವಯಂ ಘೋಷಿತ ದೇವಮಾನವ ನಿತ್ಯಾನಂದ ತನ್ನ ಹೊಸ ದೇಶ ಕೈಲಾಸದಲ್ಲಿ 1 ಲಕ್ಷ ಜನರಿಗೆ ವಾಸಕ್ಕೆ ಅವಕಾಶ ನೀಡುವ ಮಾತುಗಳನ್ನು ಆಡಿದ್ದಾನೆ.

ಅಂತಾರಾಷ್ಟ್ರೀಯ ವಲಸೆ ದಿನಾಚರಣೆ ಹಿನ್ನೆಲೆಯಲ್ಲಿ ಶುಕ್ರವಾರ ಹೇಳಿಕೆ ಬಿಡುಗಡೆ ಮಾಡಿರುವ ನಿತ್ಯಾನಂದ ‘ಕೈಲಾಸ ದೇಶಕ್ಕೆ ಮುಂದಿನ ದಿನಗಳಲ್ಲಿ ಕನಿಷ್ಠ 1 ಲಕ್ಷ ಜನರನ್ನಾದರೂ ಆಕರ್ಷಿಸಲು ಯೋಜಿಸುತ್ತಿದ್ದೇನೆ’ ಎಂದು ಹೇಳಿದ್ದಾನೆ.

ದಕ್ಷಿಣ ಅಮೆರಿಕದ ದೇಶ ಈಕ್ವೇಡರ್‌ ಬಳಿ ದ್ವೀಪ ಪ್ರದೇಶವೊಂದನ್ನು ಖರೀದಿಸಿರುವ ನಿತ್ಯಾನಂದ ಶ್ರೀ, ಅದನ್ನೇ ‘ಕೈಲಾಸ’ ದೇಶವನ್ನಾಗಿ ಸೃಷ್ಟಿಸಿದ್ದಾನೆ. ಅಲ್ಲದೆ ರಿಸರ್ವ್ ಬ್ಯಾಂಕ್‌, ಪಾಸ್‌ಪೋರ್ಟ್‌, ಧ್ವಜ, ಚಿಹ್ನೆ ಮತ್ತು ವೆಬ್‌ಸೈಟ್‌ ಸಹ ಇದೆ. ಅಲ್ಲದೆ ಈಗಾಗಲೇ ಕೈಲಾಸ ಪ್ರವಾಸ ಕೈಗೊಳ್ಳುವವರಿಗೆ ವೀಸಾ ವಿತರಣೆಯನ್ನು ಸಹ ಆರಂಭಿಸಲಾಗಿದೆ.