ನವದೆಹಲಿ(ಮಾ. 15)  ಕರೋನಾ ಭೀತಿ ಎದುರಿಸಲು ಜಗತ್ತಿನ ಎಲ್ಲ ರಾಷ್ಟ್ರಗಳು ಒಂದಾಗಬೇಕಾದ ಅನಿವಾರ್ಯ ಸಂದರ್ಭ ಎದುರಾಗಿದ್ದು ಭಾನುವಾರ ಅಂಥದ್ದೊಂದು ಬೆಳವಣಿಗೆ ನಡೆದಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಸಾರ್ಕ್ ರಾಷ್ಟ್ರಗಳ ಪ್ರತಿನಿಧಿಗಳು ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಿದರು. ತಮ್ಮ ಆರಂಭಿಕ ಭಾಷಣದಲ್ಲಿ ಪ್ರಧಾನಿ ಮೋದಿ ಅವರು, ದಕ್ಷಿಣ ಏಷ್ಯಾ ಪ್ರದೇಶದಲ್ಲಿ 150ಕ್ಕಿಂತ ಕಡಿಮೆ ಕೊರೋನಾ ವೈರಸ್ ಪ್ರಕರಣಗಳು ವರದಿಯಾಗಿವೆ. ನಾವೆಲ್ಲರೂ ಜಾಗೃತರಾಗಿರಬೇಕು ಎಂದು  ತಿಳಿಸಿದರು.

ಕರೋನಾ ಕಾಟ; ಪರೀಕ್ಷೆಗಳು ಮುಂದೂಡಿಕೆ

ಸಾರ್ಕ್ ರಾಷ್ಟ್ರಗಳಾದ ಆಫ್ಘಾನಿಸ್ತಾನದಿಂದ ಅಧ್ಯಕ್ಷ ಆಶ್ರಫ್ ಗನಿ, ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸೆ, ನೇಪಾಳ ಪ್ರಧಾನಿ ಕೆಪಿ ಶರ್ಮಾ ಒಲಿ, ಭೂತಾನ್ ಪ್ರಧಾನಿ ಲೋಟೇ ತ್ಸೆರಿಂಗ್,  ಮಾಲ್ಡೀವ್ಸ್ ಅಧ್ಯಕ್ಷ ಇಬ್ರಾಹಿಂ ಮೊಹಮ್ಮದ್ ಸೊಲಿಹ್, ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸೀನಾ ಮತ್ತು ಪಾಕಿಸ್ತಾನದ ಆರೋಗ್ಯ ಸಚಿವ ಜಾಫರ್ ಮಿರ್ಜಾ ವಿಡಿಯೋ ಕಾನ್ಪರೆನ್ಸ್ ನಲ್ಲಿ ಭಾಗವಹಿಸಿದ್ದರು.

 ಈ ವೇಳೆ ಪಾಕಿಸ್ತಾನದ ಆರೋಗ್ಯ ಸಚಿವ ಜಾಫರ್ ಮಿರ್ಜಾ ಮಾತನಾಡುತ್ತ 'ಭಾರತ ಆಕ್ರಮಿತ ಕಾಶ್ಮೀರ' ದಲ್ಲಿ ನಮಗೆ ಜನರನ್ನು ತಲುಪಲು ಸಾಧ್ಯವಾಗುತ್ತಿಲ್ಲ  ಎಂದು ಹೇಳಿದ್ದು ಅಚ್ಚರಿ ತಂದಿತು. ಆದರೆ ಈ ವಿಚಾರಕ್ಕೆ ತಲೆಕೆಡಿಸಿಕೊಳ್ಳದ ಪ್ರಧಾನಿ ಸಾರ್ಕ್ ರಾಷ್ಟ್ರಗಳು ಒಟ್ಟಾಗಿ ವೈರಸ್ ವಿರುದ್ಧ ಹೋರಾಟ ಮಾಡಬೇಕಾಗಿದೆ ಎಂದು ಮನವರಿಕೆ ಮಾಡಿಕೊಟ್ಟರು.