Asianet Suvarna News Asianet Suvarna News

‘ಕಪ್ಪು ರಂಧ್ರ’ ಸಂಶೋಧಕರಿಗೆ ನೊಬೆಲ್‌!

 

‘ಕಪ್ಪು ರಂಧ್ರ’ ಸಂಶೋಧಕರಿಗೆ ನೊಬೆಲ್‌| ಬ್ರಿಟನ್‌, ಜರ್ಮನಿ, ಅಮೆರಿಕದ 3 ವಿಜ್ಞಾನಿಗಳಿಗೆ ಭೌತಶಾಸ್ತ್ರ ಪುರಸ್ಕಾರ

Physics Nobel Prize Awarded To Trio For Black Hole Research pod
Author
Bangalore, First Published Oct 7, 2020, 11:23 AM IST
  • Facebook
  • Twitter
  • Whatsapp

ಸ್ಟಾಕ್‌ಹೋಮ್(ಅ.07)‌: ಬ್ರಹ್ಮಾಂಡದ ಕುರಿತು ಅದರಲ್ಲೂ ‘ಕಪ್ಪು ರಂಧ್ರ’ (ಬ್ಲಾಕ್‌ ಹೋಲ್‌)ದ ಬಗ್ಗೆ ಹೆಚ್ಚಿನ ಜ್ಞಾನ ಹರಿಸಿದ ಮೂವರು ವಿಜ್ಞಾನಿಗಳಿಗೆ ಪ್ರಸಕ್ತ ಸಾಲಿನ ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿ ಘೋಷಿಸಲಾಗಿದೆ.

ಬ್ರಿಟನ್‌ನ ರೋಜರ್‌ ಪೆನ್ರೋಸ್‌, ಜರ್ಮನಿಯ ರೀನ್‌ಹಾರ್ಡ್‌ ಗೆನ್ಜೆಲ್‌, ಅಮೆರಿಕದ ಆ್ಯಂಡ್ರಿಯಾ ಘೇಜ್‌ ಪ್ರಶಸ್ತಿಗೆ ಆಯ್ಕೆಯಾದವರು. ಈ ಪೈಕಿ ರೋಜರ್‌ ಅವರು ಪ್ರಶಸ್ತಿಯ ನಗದು ಬಹುಮಾನದ ಅರ್ಧಭಾಗ ಪಡೆಯಲಿದ್ದರೆ, ಉಳಿದರ್ಧ ಭಾಗವನ್ನು ಗೆನ್ಜೆಲ್‌ ಮತ್ತು ಆ್ಯಂಡ್ರೆಯಾ ಹಂಚಿಕೊಳ್ಳಲಿದ್ದಾರೆ. ಪ್ರಶಸ್ತಿಯು ಚಿನ್ನದ ಪದಕ ಮತ್ತು 8.25 ಕೋಟಿ ರು. ನಗದು ಬಹುಮಾನ ಒಳಗೊಂಡಿದೆ.

ಸಂಶೋಧನೆ ಏನು?:

ರೋಜರ್‌ ಪೆನ್ರೋಸ್‌ ಅವರು ಆಲ್ಬರ್ಟ್‌ ಐನ್‌ಸ್ಟೀನ್‌ರ ಸಾಮಾನ್ಯ ಸಾಪೇಕ್ಷಾ ಸಿದ್ಧಾಂತವನ್ನೇ ಪ್ರಮುಖವಾಗಿ ಆಧಾರವಾಗಿಟ್ಟುಕೊಂಡು ಕಪ್ಪು ರಂಧ್ರ ನಿರೂಪಿಸಿದ್ದರು. ವಿಶೇಷ ಎಂದರೆ, ಕಪ್ಪು ರಂಧ್ರವನ್ನು ಸ್ವತಃ ಐನ್‌ಸ್ಟೀನ್‌ ಅವರೇ ನಂಬಿರಲಿಲ್ಲ. ಪೆನ್ರೋಸ್‌ ಕುರಿತು ಅವರು 1965ರಲ್ಲೇ ತಮ್ಮ ಸಂಶೋಧನೆಯನ್ನು ಬಹಿರಂಗಪಡಿಸಿದ್ದರಾದರೂ, 1990ರಲ್ಲಿ ರೀನ್‌ಹಾರ್ಡ್‌ ಗೆನ್ಜೆಲ್‌, ಅಮೆರಿಕದ ಆ್ಯಂಡ್ರಿಯಾ ಘೇಜ್‌ ಕಪ್ಪುರಂಧ್ರದ ಕುರಿತು ಮತ್ತಷ್ಟುಬೆಳಕು ಚೆಲ್ಲಿದ ಬಳಿಕ ಪೆನ್ರೋಸ್‌ ಅವರ ವಾದಕ್ಕೆ ಹೆಚ್ಚಿನ ಬಲಬಂದಿತ್ತು.

ಇನ್ನು ರೀನ್‌ಹಾರ್ಡ್‌ ಗೆನ್ಜೆಲ್‌, ಅಮೆರಿಕದ ಆ್ಯಂಡ್ರೆಯಾ ಘೇಜ್‌ ಅವರು ಮಿಲ್ಕಿವೇ ಗ್ಯಾಲಕ್ಸಿ (ಕ್ಷೀರಪಥ ನಕ್ಷತ್ರಪುಂಜ)ಗಳ ಧೂಳು ತುಂಬಿದಂಥ ಕೇಂದ್ರ ಬಿಂದುವಿನಲ್ಲಿ ಏನೋ ವಿಶೇಷ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿ ಭಾರೀ ದ್ರವ್ಯರಾಶಿಯ ಅಗೋಚರ ವಸ್ತುವೊಂದು ನಕ್ಷತ್ರ ಸೇರಿದಂತೆ ಎಲ್ಲವನ್ನೂ ತನ್ನತ್ತ ಸೆಳೆದುಕೊಳ್ಳುತ್ತಿದೆ. ಹೀಗಾಗಿಯೇ ಅವುಗಳೆಲ್ಲಾ ಭಾರೀ ವೇಗದತ್ತ ಅದರೊಳಗೆ ಸೇರಿಕೊಳ್ಳುತ್ತಿವೆ ಎಂದು ಎಲ್ಲವನ್ನೂ ತನ್ನನ್ನ ಸೆಳೆದುಕೊಳ್ಳುವ ಕಪ್ಪುರಂಧ್ರಗಳ ಕುರಿತು ಸಂಶೋಧನಾ ವರದಿ ಮಂಡಿಸಿದ್ದರು. ಈ ಸಂಶೋಧನೆಗಳ ಬಳಿಕವೇ ಎಲ್ಲಾ ನಕ್ಷತ್ರಪುಂಜಗಳು ಸೂರ್ಯನಿಗಿಂತ 40 ಲಕ್ಷ ಪಟ್ಟು ದೊಡ್ಡದಾದ ದ್ರವ್ಯರಾಶಿಯ ಕಪ್ಪುರಂಧ್ರ ಹೊಂದಿವೆ ಎಂಬ ಖಚಿತ ನಿರ್ಧಾರಕ್ಕೆ ಜಾಗತಿಕ ವಿಜ್ಞಾನಿಗಳು ಬಂದಿದ್ದರು.

ಮಂಗಳವಾರದ ಪ್ರಶಸ್ತಿ ಘೋಷಣೆಯೊಂದಿಗೆ ವೈದ್ಯಕೀಯ ಮತ್ತು ಭೌತಶಾಸ್ತ್ರ ನೊಬೆಲ್‌ ಪ್ರಶಸ್ತಿಗಳು ಘೋಷಣೆಯಾದಂತೆ ಆಗಿದೆ. ಇನ್ನು ರಸಾಯನಶಾಸ್ತ್ರ, ಸಾಹಿತ್ಯ, ಶಾಂತಿ ಮತ್ತು ಅರ್ಥಶಾಸ್ತ್ರ ವಿಭಾಗದ ಪುರಸ್ಕೃತರ ಹೆಸರು ಘೋಷಣೆಯಾಗಬೇಕಿದೆ.

Follow Us:
Download App:
  • android
  • ios