ಚೀನಾ ಒತ್ತಡ: ಪಾಕ್ನಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ ವಿಲೀನ?
ಚೀನಾ ಒತ್ತಡ: ಪಾಕ್ನಲ್ಲಿ ಗಿಲ್ಗಿಟ್-ಬಾಲ್ಟಿಸ್ತಾನ ವಿಲೀನ?| ಸ್ವಾಯತ್ತ ಸ್ಥಾನ ಬದಲಿಸಲು ಇಮ್ರಾನ್ ಸಿದ್ಧತೆ
ಇಸ್ಲಾಮಾಬಾದ್(ಅ.05): ಪಾಕಿಸ್ತಾನದಲ್ಲಿದ್ದರೂ ಸ್ವಾಯತ್ತೆ ಹೊಂದಿರುವ ಗಿಲ್ಗಿಟ್-ಬಾಲ್ಟಿಸ್ತಾನವನ್ನು ಪಾಕಿಸ್ತಾನದಲ್ಲಿ ಸಂಪೂರ್ಣ ವಿಲೀನಗೊಳಿಸಿ, ದೇಶದ 5ನೇ ಪ್ರಾಂತ್ಯ ಎಂದು ಘೋಷಿಸಲು ಇಮ್ರಾನ್ ಖಾನ್ ಸರ್ಕಾರ ಸಿದ್ಧತೆ ನಡೆಸಿದೆ. ಇದು ಭಾರತದ ವಿರುದ್ಧ ಕತ್ತಿ ಮಸೆಯುತ್ತಿರುವ ಚೀನಾ ರಣತಂತ್ರದ ಒಂದು ಭಾಗ ಎಂದು ಹೇಳಲಾಗಿದೆ.
ಈ ಕುರಿತು ಹೇಳಿಕೆ ನೀಡಿರುವ ಪಾಕಿಸ್ತಾನದ ಕಾಶ್ಮೀರ ಹಾಗೂ ಗಿಲ್ಗಿಟ್-ಬಾಲ್ಟಿಸ್ತಾನ ವ್ಯವಹಾರಗಳ ಸಚಿವ ಅಲಿ ಅಮೀನ್ ಗಂದಾಪುರ್, ‘ಪಾಕಿಸ್ತಾನ ಸರ್ಕಾರವು ಗಿಲ್ಗಿಟ್ ಬಲ್ಟಿಸ್ತಾನದ ಸ್ಥಾನಮಾನ ಬದಲಿಸಲು ನಿರ್ಧರಿಸಿದೆ. ಶೀಘ್ರ ಈ ಪ್ರದೇಶಕ್ಕೆ ಪ್ರಧಾನಿ ಇಮ್ರಾನ್ ಖಾನ್ ಭೇಟಿ ನೀಡಿ ಅಧಿಕೃತ ಘೋಷಣೆ ಮಾಡಲಿದ್ದಾರೆ’ ಎಂದು ಹೇಳಿದ್ದಾರೆ.
ಚೀನಾ ಸಂಚು ಏನು?:
ಗಿಲ್ಗಿಟ್-ಬಾಲ್ಟಿಸ್ತಾನವು ಭಾರತ-ಪಾಕಿಸ್ತಾನ-ಚೀನಾ ಗಡಿಗೆ ಹೊಂದಿಕೊಂಡಿರುವ ಮಹತ್ವದ ವ್ಯೂಹಾತ್ಮಕ ಪ್ರದೇಶ. ಅತ್ತ ರಷ್ಯಾ ಹಾಗೂ ಮಧ್ಯಪ್ರಾಚ್ಯಕ್ಕೂ ಸಮೀಪವಿದೆ. ಇಲ್ಲಿನ ಜನರು ಪಾಕಿಸ್ತಾನ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊಂದಿದ್ದು, ನೇರವಾಗಿ ಪಾಕ್ ಆಡಳಿತಕ್ಕೆ ಒಳಪಡಲು ಇಚ್ಛಿಸುವುದಿಲ್ಲ. 1949ರಲ್ಲಿ ಕರಾಚಿ ಒಪ್ಪಂದದ ಪ್ರಕಾರ ಈ ಪ್ರದೇಶದ ಆಡಳಿತದ ಉಸ್ತುವಾರಿಯನ್ನು ಪಾಕಿಸ್ತಾನ ಹೊಂದಿದೆಯಾದರೂ ಸ್ವಾಯತ್ತ ಸ್ಥಾನಮಾನ ನೀಡಿದೆ. ಆದರೆ, ಈಗ ಈ ಸ್ವಾಯತ್ತೆ ತೆಗೆದುಹಾಕಿ, ದೇಶದ 5ನೇ ಪ್ರಾಂತ್ಯ (ರಾಜ್ಯ) ಎಂದು ಘೋಷಿಸುವ ಇಮ್ರಾನ್ ಖಾನ್ ಸರ್ಕಾರದ ಚಿಂತನೆಯ ಹಿಂದೆ ಚೀನಾ ಪ್ರಭಾವ ಕೆಲಸ ಮಾಡುತ್ತಿದೆ ಎಂದು ಹೇಳಲಾಗಿದೆ. ಈ ಪ್ರದೇಶವು ಅಪಾರ ಗಣಿ ಸಂಪತ್ತು ಹೊಂದಿದೆ. ಇದರ ಮೇಲೆ ಚೀನಾ ಕಣ್ಣು ಇರಿಸಿದೆ. ಅಲ್ಲದೆ ತನ್ನ ಹೆದ್ದಾರಿ ಯೋಜನೆಗೆ ಈ ಭಾಗದಲ್ಲಿ ವಿರೋಧ ವ್ಯಕ್ತವಾಗುತ್ತಿದ್ದು, ಅದರ ಸದ್ದಡಗಿಸಲು ಯತ್ನಿಸುತ್ತಿದೆ ಎನ್ನಲಾಗಿದೆ.
ಭಾರತ-ಪಾಕ್-ಚೀನಾದ ಗಡಿಗೆ ಹೊಂದಿಕೊಂಡಿರುವ ವ್ಯೂಹಾತ್ಮಕ ಸ್ಥಳವಾಗಿ ಗಿಲ್ಗಿಟ್-ಬಾಲ್ಟಿಸ್ತಾನ. ಪಾಕಿಸ್ತಾನ ಈ ಪ್ರದೇಶದ ಸ್ವಾಯತ್ತೆ ತೆಗೆದು ಹಾಕಿ, ಸಂಪೂರ್ಣ ಹತೋಟಿ ಸಾಧಿಸಿದರೆ ತನಗೆ ಅನುಕೂಲವಾಗಬಹುದು. ಏಷ್ಯಾದ ಪ್ರಮುಖ ಭಾಗದಲ್ಲಿ ಪರೋಕ್ಷವಾಗಿ ತಾನು ಅಧಿಪತ್ಯ ಸ್ಥಾಪಿಸಿದಂತಾಗುತ್ತದೆ ಎಂಬುದು ಚೀನಾ ಲೆಕ್ಕಾಚಾರ. ಅಲ್ಲದೆ, ಈ ಪ್ರದೇಶವು ಅಪಾರ ಗಣಿ ಸಂಪತ್ತು ಹೊಂದಿದೆ. ಇದರ ಮೇಲೂ ಚೀನಾ ಕಣ್ಣು ಇರಿಸಿದೆ.
ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ) ಯೋಜನೆಯನ್ನು ಚೀನಾ ಸರ್ಕಾರ, ಗಿಲ್ಗಿಟ್-ಬಾಲ್ಟಿಸ್ತಾನ ಮೂಲಕ ಕೈಗೊಳ್ಳುತ್ತಿದೆ. ಇದಕ್ಕೆ ಅಲ್ಲಿನ ಜನರ ವ್ಯಾಪಕ ವಿರೋಧವಿದೆ. ಇನ್ನು ಈ ಭಾಗವು ಸಂಪೂರ್ಣವಾಗಿ ಪಾಕಿಸ್ತಾನದ ಅಂಗವಾದರೆÜ ವಿರೋಧ ಅಡಗಿಸಬಹುದು ಎಂಬುದೂ ಚೀನಾ ತಂತ್ರವಾಗಿದೆ. ಹೀಗಾಗಿ ಗಿಲ್ಗಿಟ್-ಬಾಲ್ಟಿಸ್ತಾನದ ಸ್ವಾಯತ್ತೆ ತೆಗೆದುಹಾಕಲು ಪಾಕ್ ಮೇಲೆ ಚೀನಾ ಒತ್ತಡ ಹೇರಿದೆ ಎನ್ನಲಾಗಿದೆ.