700ಕ್ಕೂ ಹೆಚ್ಚು ತಾಲಿಬಾನಿಯರ ಹತ್ಯೆ, 600ಕ್ಕೂ ಅಧಿಕ ಉಗ್ರರ ಸೆರೆ ಹಿಡಿದ ಪಂಜ್‌ಶೀರ್ ಯೋಧರು!
* ತಾಲಿಬಾನ್ ಉಗ್ರರಿಗೆ ದುಃಸ್ವಪ್ನವಾಗಿ ಕಾಡುತ್ತಿದೆ ಪಂಜ್‌ಶೀರ್ ಪ್ರಾಂತ್ಯ
* ಕಣಿವೆ ನಾಡಿನಲ್ಲಿ 700 ಉಗ್ರರ ಹತ್ಯೆ
* ಪಂಜ್‌ಶೀರ್‌ನಿಂದ ಹಿಂದಕ್ಕೋಡಿದ ತಾಲಿಬಾನಿಯರು?
ಪಂಜ್‌ಶೀರ್(ಸೆ.05): ಅಪ್ಘಾನಿಸ್ತಾನ ವಶಪಡಿಸಿಕೊಂಡಿರುವ ತಾಲಿಬಾನಿಯರಿಗೆ ಇಲ್ಲಿನ ಕಣಿವೆ ನಾಡು ಪಂಜ್‌ಶೀರ್ ಬಹುದೊಡ್ಡ ಸವಾಲಾಗಿ ಪರಿಣಮಿಸಿದೆ. ಪುಟ್ಟ ಪ್ರಾಂತ್ಯ ತಾಲಿಬಾನಿಯರಿಗೆ ದುಃಸ್ವಪ್ನವಾಗಿ ಕಾಡುತ್ತಿದೆ. ಹೇಗಾದರೂ ಮಾಡಿ ಪಂಜ್‌ಶೀರ್ ಹರಸಾಹಸ ಪಡುತ್ತಿರುವ ತಾಲಿಬಾನ್ ಉಗ್ರರು ಪಂಜ್‌ಶೀರ್ ಯೋಧರ ವಿರುದ್ಧ ಯುದ್ಧ ಸಾರಿದ್ದಾರೆ. ಆದರೆ ಅತ್ತ ಪಂಜ್‌ಶೀರ್ ಯೋಧರೂ ತಾಲಿಬಾನಿಯರನ್ನು ಹಿಮ್ಮೆಟ್ಟಿಸಲು ಯತ್ನ ನಡೆಸುತ್ತಿದ್ದಾರೆ. ಈ ಪ್ರಯತ್ನದಲ್ಲಿ ಈವರೆಗೂ ಸುಮಾರು 600ಕ್ಕೂ ಹೆಚ್ಚು ತಾಲಿಬಾನಿಯರನ್ನು ಸದೆಬಡಿಯಲಾಗಿದ್ದು, ಒಂದು ಸಾವಿರಕ್ಕೂ ಅಧಿಕ ಉಗ್ರರನ್ನು ಪಂಜ್‌ಶೀರ್ ಬಂಧಿಸಿದೆ.
ಹೌದು ಅಫ್ಘಾನಿಸ್ತಾನದಲ್ಲಿ ಸಂಪೂರ್ಣ ಹಿಡಿತ ಸಾಧಿಸಬೇಕೆಂಬ ಕನಸಿನಲ್ಲಿರುವ ತಾಲಿಬಾನ್ ಪಂಜ್‌ಶೀರ್ ಮೇಲೆ ಯುದ್ಧ ಸಾರಿತ್ತು. ಆದರೆ ಇಲ್ಲಿ ಅಹ್ಮದ್ ಮಸೌದ್ ನೇತೃತ್ವದಲ್ಲಿ ಅಫ್ಘಾನಿಸ್ತಾನ ರಾಷ್ಟ್ರೀಯ ಪ್ರತಿರೋಧ ಪಡೆ ಹೋರಾಟ ತಾಲಿಬಾನ್ ಉಗ್ರರನ್ನು ಎದುರಿಸಿತ್ತು. ಈ ನಡುವೆ ಶುಕ್ರವಾರದಂದು ತಾಲಿಬಾನ್ ಸಂಘಟನೆ ತಾವು ಪಂಜ್‌ಶೀರ್ ಮೇಲೆ ಸಂಪೂರ್ಣ ಹಿಡಿತ ಸಾಧಿಸಿರುವುದಾಗಿ ಘೋಷಿಸಿತ್ತಾದರೂ, ಅಹ್ಮದ್ ಮಸೌದ್ ಮಾತ್ರ ಇದನ್ನು ನಿರಾಕರಿಸಿದ್ದರು.
ಅತ್ತ ತಾಲಿಬಾನ್ ವಕ್ತಾರ ಬಿಲಾಲ್ ಕರಿಮಿ ತಾವು ಪಂಜ್‌ಶೀರ್‌ನ ಒಟ್ಟು ಏಳು ಜಿಲ್ಲೆಗಳಲ್ಲಿ ನಾಲ್ಕು ನಾಲ್ಕನ್ನು ವಶಪಡಿಸಿಕೊಂಡಿದ್ದೇವೆ ಎಂದು ಘೋಷಿಸಿದ್ದರು. ಆದರೆ ಈ ನಡುವೆ ತಾಲಿಬಾನ್ ಹೇಳಿಕೆಯನ್ನು ಅಲ್ಲಗಳೆದಿರುವ ಅಫ್ಘಾನಿಸ್ತಾನ ರಾಷ್ಟ್ರೀಯ ಪ್ರತಿರೋಧ ಪಡೆ, ತಾವು 600ಕ್ಕೂ ಅಧಿಕ ಉಗ್ರರನ್ನು ಸುತ್ತುವರೆದು ಬಂಧಿಸಿದ್ದೇವೆ ಹಾಗೂ 700ಕ್ಕೂ ಹೆಚ್ಚು ಉಗ್ರರನ್ನು ಹತ್ಯೆಗೈದಿದ್ದೇವೆ ಎಂದು ಹೇಳಿದೆ.
ಇನ್ನು ಪಂಜ್‌ಶೀರ್ ಯೋಧರ ಮಾತು ನಿಜ ಎಂದು ಬಿಂಬಿಸುವ ವಿಡಿಯೋಗಳೂ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದು, ಇದರಲ್ಲಿ ಉಗ್ರರು ಪಂಜ್‌ಶೀರ್‌ನಿಂದ ಹೊರಹೋಗುತ್ತಿರುವ ದೃಶ್ಯಗಳಿವೆ ಎನ್ನಲಾಗಿದೆ.