ಯಾಂಗೋನ್‌(ಮಾ.28‌) : ಕಳೆದ ತಿಂಗಳಷ್ಟೇ ಪ್ರಜಾಪ್ರಭುತ್ವ ಸರ್ಕಾರದ ವಿರುದ್ಧ ದಂಗೆಯೆದ್ದು ನೂರಾರು ಜನರನ್ನು ಹತ್ಯೆ ಮಾಡಿದ್ದ ಮ್ಯಾನ್ಮಾರ್‌ ಸೇನೆ ಶನಿವಾರ ಮತ್ತೆ 91 ಮಂದಿಯನ್ನು ಸಂಹಾರ ಮಾಡಿದೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ. 

ಮ್ಯಾನ್ಮಾರ್‌ ಸೇನಾ ಸಂಸ್ಥಾಪನೆಯ 76 ವರ್ಷಾಚರಣೆಯ ದಿನವಾದ ಶನಿವಾರ ನಡೆದ ಈ ದಾಳಿಯು, ಸೇನಾ ದಂಗೆ ಆರಂಭವಾದ ಬಳಿಕದ ಅತೀ ಭಯಾನಕ ಘಟನೆ ಇದಾಗಿದೆ. ಈ ಹಿಂದೆ ಮಾ.14ರಂದು ಸೇನೆಯಿಂದ ಅತಿಹೆಚ್ಚು 74 ಮಂದಿ ಹತ್ಯೆಗೀಡಾಗಿದ್ದರು.

ಮ್ಯಾನ್ಮಾರ್‌ನಲ್ಲಿ ಸೇನಾ ದಂಗೆ: ಮತ್ತೆ ಮಿಲಿಟರಿ ಆಡಳಿತ ಜಾರಿ! ..

ಮಕ್ಕಳು ಸೇರಿದಂತೆ 91 ನಾಗರಿಕರನ್ನು ಶನಿವಾರ ಹತ್ಯೆ ಮಾಡಿದ ಮ್ಯಾನ್ಮಾರ್‌ ಸೇನೆಯ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖಂಡನೆ ವ್ಯಕ್ತವಾಗಿದೆ. ಮಕ್ಕಳು ಸೇರಿದಂತೆ ಶಸ್ತ್ರಾಸ್ತ್ರ ರಹಿತ ನಾಗರಿಕರ ಮೇಲೆ ದಾಳಿ ಮಾಡುವುದು ಅಸಮರ್ಥನೀಯವಾದದ್ದು ಎಂದು ಯುರೋಪಿಯನ್‌ ಒಕ್ಕೂಟದ ನಿಯೋಗ ಟ್ವೀಟ್‌ ಮೂಲಕ ಮ್ಯಾನ್ಮಾರ್‌ಗೆ ಚಾಟಿ ಬೀಸಿದೆ.

ಫೆ.1ರಂದು ಆರಂಭವಾದ ಪ್ರಜಾಪ್ರಭುತ್ವ ಸರ್ಕಾರದ ವಿರುದ್ಧದ ಸೇನೆಯ ದಂಗೆ ಬಳಿಕ ದೇಶಾದ್ಯಂತ ಜನ-ಸಾಮಾನ್ಯರ ಸಾವಿನ ಸಂಖ್ಯೆ ಹೇರಳವಾಗುತ್ತಿದೆ. ಸೇನೆಯ ದಾಳಿಯಲ್ಲಿ ಈವರೆಗೆ 419 ಮಂದಿ ಸಾವಿಗೀಡಾಗಿದ್ದಾರೆ ಎಂದು ಅಸೋಸಿಯೇಷನ್‌ ಆಫ್‌ ಪೊಲಿಟಿಕಲ್‌ ಪ್ರಿಸನರ್ಸ್‌ ವರದಿಯಲ್ಲಿ ತಿಳಿಸಲಾಗಿದೆ.