Isreal Dispatch: ಗಾಜಾಕ್ಕೆ ವಿದ್ಯುತ್, ಇಂಧನ, ಆಹಾರ ಬಂದ್; ಈವರೆಗೂ 1 ಸಾವಿರ ಟನ್ ಬಾಂಬ್ ಗಿಫ್ಟ್!
ಒಂದೆಡೆ ಹಮಾಸ್ ಉಗ್ರರು ಇಸ್ರೇಲ್‌ನಲ್ಲಿ ಅಟ್ಟಹಾಸ ಮೆರೆಯುತ್ತಿದ್ದರೆ, ಇನ್ನೊಂದೆಡೆ ಇಸ್ರೇಲ್ ಗಾಜಾ ಪ್ರದೇಶವನ್ನು ಸಂಪೂರ್ಣವಾಗಿ ಸೀಜ್ ಮಾಡಲು ಮುಂದಾಗಿದೆ. ಗಾಜಾ ಪ್ರದೇಶಕ್ಕೆ ವಿದ್ಯುತ್, ಆಹಾರ ಹಾಗೂ ಇಂಧನವನ್ನು ಸಂಪೂರ್ಣವಾಗಿ ಬಂದ್ ಮಾಡಿ ಎಂದು ಇಸ್ರೇಲ್ ರಕ್ಷಣಾ ಸಚಿವ ಆದೇಶ ನೀಡಿದ್ದಾರೆ.
ನವದೆಹಲಿ (ಅ.9): ಭಯೋತ್ಪಾದನೆಯನ್ನೇ ಮೂಲವಾಗಿಸಿಕೊಂಡ ಗಾಜಾ ಪ್ರದೇಶಕ್ಕೆ ಇಸ್ರೇಲ್ ಸಂಪೂರ್ಣ ಸೀಜ್ ಆದೇಶ ಜಾರಿ ಮಾಡಿದೆ. ಅಂದರೆ, ಈ ಪ್ರದೇಶಗಳಲ್ಲಿ ನಿತ್ಯ ಅಗತ್ಯಗಳಾದ ವಿದ್ಯುತ್, ಆಹಾರ ಮತ್ತು ಇಂಧನವನ್ನು ಮುಂದಿನ ಆದೇಶದವರೆಗೂ ಬಂದ್ ಮಾಡಬೇಕು ಎಂದು ಇಸ್ರೇಲ್ ರಕ್ಷಣಾ ಸಚಿವ ಸೂಚನೆ ನೀಡಿದ್ದಾರೆ. ಇಸ್ರೇಲ್ ಹಾಗೂ ಈಜಿಪ್ಟ್ ದೇಶಗಳು, 2007ರಲ್ಲಿ ಪ್ಯಾಲಿಸ್ತೇನ್ ಪಡೆಗಳಿಂದ ಗಾಜಾವನ್ನು ಹಮಾಸ್ ಬಂಡುಕೋರರು ವಶಪಡಿಸಿಕೊಂಡು ಬಳಿಕ ಸಾಕಷ್ಟು ನಿರ್ಬಂಧಗಳನ್ನು ವಿಧಿಸಿದ್ದಾರೆ. ಹೊಸ ದಾಳಿಯ ಬಳಿಕ ಮತ್ತಷ್ಟು ನಿರ್ಬಂಧವನ್ನು ಇಸ್ರೇಲ್ ಈಗ ವಿಧಿಸಿದೆ. ಇದರ ನಡುವೆ ಇಸ್ರೇಲ್‌ನ ಭದ್ರತಾ ಪಡೆಗಳ ವಕ್ತಾರ ಇಲ್ಲಿಯವರೆಗೂ ಬೆಳವಣಿಗೆಯ ಮಾಹಿತಿಗಳನ್ನು ಟ್ವೀಟ್ ಮಾಡಿದ್ದಾರೆ.
ಕಳೆದ 20 ಗಂಟೆಗಳಲ್ಲಿ, ಐಡಿಎಫ್ ಗಾಜಾ ಪಟ್ಟಿಯಲ್ಲಿ 4 ಅಲೆಗಳ ವಾಯುದಾಳಿಗಳನ್ನು ನಡೆಸಿತು, ಈ ಸಮಯದಲ್ಲಿ 800 ಕ್ಕೂ ಹೆಚ್ಚು ಟಾರ್ಗೆಟ್‌ಗಳ ಮೇಲೆ ದಾಳಿ ಮಾಡಲಾಗಿದೆ.
ಒಂದೊಂದು ದಾಳಿಯ ಅಲೆಯಲ್ಲಿ 50-60 ಯುದ್ಧವಿಮಾನಗಳು ಭಾಗವಹಿಸಿದ್ದವು. ಒಟ್ಟಾರೆಯಾಗಿ, ಯುದ್ಧದ ಆರಂಭದಿಂದಲೂ ಇಸ್ರೇಲ್ ಏರ್‌ಫೋರ್ಸ್ ಯುದ್ಧವಿಮಾನಗಳು ಗಾಜಾದ ಮೇಲೆ ಸುಮಾರು 2,000 ಯುದ್ಧಸಾಮಗ್ರಿಗಳನ್ನು ಮತ್ತು 1,000 ಟನ್‌ಗಳಿಗಿಂತ ಹೆಚ್ಚು ಬಾಂಬ್‌ಗಳನ್ನು ಬೀಳಿಸಿದೆ ಎಂದು ಮಾಹಿತಿ ನೀಡಿದೆ. ಮೊದಲ ಅಲೆಯ ದಾಳಿಯನ್ನು ಭಾನುವಾರ ಮಧ್ಯಾಹ್ನ 3 ಗಂಟೆಗೆ (ಇಸ್ರೇಲ್ ಕಾಲಮಾನ) ನಡೆಸಲಾಯಿತು. ಇದು ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯಿತು, ಈ ಸಮಯದಲ್ಲಿ ವಾಯುಪಡೆಯು ಬೀಟ್ ಹನೌನ್ ನಗರದಲ್ಲಿ 120 ಟಾರ್ಗೆಟ್‌ಗಳ ಮೇಲೆ ನೂರಾರು ಟನ್ ಯುದ್ಧಸಾಮಗ್ರಿಗಳನ್ನು ಎಸೆದಿದೆ.
ಮೂರನೇ ಅಲೆಯ ದಾಳಿ ಭಾನುವಾರ ರಾತ್ರಿ 9ಕ್ಕೆ ನಡೆಸಲಾಗಿದೆ. ಇದು ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯಿತು, ಈ ಸಮಯದಲ್ಲಿ ಏರ್ ಫೋರ್ಸ್ ಗಾಜಾ ನಗರದ ಸಜಯಾದಲ್ಲಿ ಸುಮಾರು 120 ಟಾರ್ಗೆಟ್‌ಗಳ ಮೇಲೆ 100 ಟನ್ ಯುದ್ಧಸಾಮಗ್ರಿಗಳನ್ನು ಬೀಳಿಸಿದೆ. ಮೂರನೇ ಅಲೆಯ ದಾಳಿ ಸೋಮವಾರ ಮುಂಜಾನೆ 1 ಗಂಟೆಗೆ ನಡೆಸಲಾಗಿದೆ ಮತ್ತು 20 ಮಿಲಿಟರಿ ಮೂಲಸೌಕರ್ಯಗಳು ಸೇರಿದಂತೆ ಸುಮಾರು 25 ಟಾರ್ಗೆಟ್‌ಗಳ ಮೇಲೆ ದಾಳಿಯನ್ನು ಒಳಗೊಂಡಿತ್ತು. ಇದಲ್ಲದೆ, ಜಬಾಲಿಯಾದಲ್ಲಿ ಒಂದು ಮಸೀದಿಯ ಮೇಲೆ ಎಸೆಯಲಾಗಿದೆ. ನಾಲ್ಕನೇ ಅಲೆಯ ದಾಳಿಯು ಇಂದು ಬೆಳಿಗ್ಗೆ ಸ್ವಲ್ಪ ಸಮಯದ ಹಿಂದೆ ಪೂರ್ಣಗೊಂಡಿತು, ಇದರಲ್ಲಿ ವಾಯುಪಡೆಯು ಗಾಜಾ ಪಟ್ಟಿಯಾದ್ಯಂತ 500 ಕ್ಕೂ ಹೆಚ್ಚು ಟಾರ್ಗೆಟ್‌ಗಳ ಮೇಲೆ ದಾಳಿ ಮಾಡಿದೆ.
ಒಟ್ಟಾರೆಯಾಗಿ, ಯುದ್ಧದ ಮೂರನೇ ದಿನದ ಪ್ರಾರಂಭದೊಂದಿಗೆ, ಇಸ್ರೇಲಿ ವಾಯುಪಡೆಯು ಗಾಜಾ ಪಟ್ಟಿಯಲ್ಲಿ ಸುಮಾರು 1,200 ಟಾರ್ಗೆಟ್‌ಗಳನ್ನು ನಾಶಪಡಿಸಿತು. ಈಗ ಇರುವ ಸ್ಥಿತಿ ಯಾವುದೇ ಕ್ಷಣದಲ್ಲಿ ಗಾಜಾಪಟ್ಟಿಯ ಮೇಲೆ ಡಜನ್‌ಗಳಟ್ಟಲೆ ಇಸ್ರೇಲ್ ಯುದ್ಧವಿಮಾನಗಳು ಹಾರಾಡಬಹುದು ಎಂದಿದೆ. ಐಡಿಎಫ್ ಗಾಜಾಪಟ್ಟಿಯಾದ್ಯಂತ ಇನ್ನೂ ಕೆಲವು ದಿನ ಭೀಕರ ದಾಳಿ ನಡೆಯಲಿದೆ. ಇಲ್ಲಿಯವರೆಗೆ, ಗಾಜಾದಲ್ಲಿ 21 ಬಹುಮಹಡಿ ಕಟ್ಟಡಗಳ ಮೇಲೆ ದಾಳಿ ಮಾಡಲಾಗಿದೆ, ಅಲ್ಲಿ ಭಯೋತ್ಪಾದಕರು ಗುಪ್ತಚರ ಮಾಹಿತಿಯನ್ನು ಹಂಚಿಕೊಳ್ಳುತ್ತಿದ್ದರು. ಭಯೋತ್ಪಾದಕ ಸಂಘಟನೆ ಹಮಾಸ್‌ನ ಸೇನಾ ಪ್ರಧಾನ ಕಛೇರಿಯು ಕಟ್ಟಡವೊಂದರಲ್ಲಿ ನೆಲೆಗೊಂಡಿದೆ ಎಂದು ಐಡಿಎಫ್ ತಿಳಿಸಿದೆ.
ಈ ಹೊತ್ತಿಗೆ ಐಡಿಎಫ್‌ನ ಅಂದಾಜಿನ ಪ್ರಕಾರ, ಗಾಜಾ ಸ್ಟ್ರಿಪ್‌ನಲ್ಲಿ 400 ಕ್ಕೂ ಹೆಚ್ಚು ಭಯೋತ್ಪಾದಕರು ಸಾವು ಕಂಡಿದ್ದಾರೆ ಮತ್ತು ಇಸ್ರೇಲ್ ರಾಜ್ಯದ ಭೂಪ್ರದೇಶದಲ್ಲಿ ನೂರಾರು ಭಯೋತ್ಪಾದಕರು ಸಾವಿಗೀಡಾಗಿದ್ದಾರೆ. ಅದರೊಂದಿಗೆ ಸಾಕಷ್ಟು ಭಯೋತ್ಪಾದಕರನ್ನು ಕೈದಿಗಳನ್ನಾಗಿ ಇರಿಸಲಾಗಿದೆ. ಗಾಜಾ ಪಟ್ಟಿಯ ವಾಯುದಾಳಿಗಳ ಸಮಯದಲ್ಲಿ, ಹತ್ತಾರು ಐಡಿಎಫ್ ಸೈನಿಕರು ಗಾಜಾದ ಸುತ್ತಮುತ್ತಲಿನ ಪ್ರದೇಶದಲ್ಲಿ ಭಯೋತ್ಪಾದಕರ ಭೇಟೆಯಾಡುತ್ತಿದ್ದಾರೆ.
ಇಸ್ರೇಲ್‌ನದ್ದು ಕದ್ದ ಭೂಮಿ, ಪ್ಯಾಲೆಸ್ತೇನ್ ಪರವಾಗಿ ಭಾರತ ನಿಲ್ಲಬೇಕು ಎಂದ ಚೇತನ್ ಅಹಿಂಸಾ!
ಇನ್ನು ಇಸ್ರೇಲ್ ನೌಕಾಪಡೆಯ ನಿಯಂತ್ರಣ ಘಟಕಗಳಿಂದ ನಿರ್ದೇಶಿಸಲ್ಪಟ್ಟ ನೌಕಾಪಡೆಯು ಸಮುದ್ರದ ಮೂಲಕ ದೇಶವನ್ನು ಪ್ರವೇಶಿಸಲು ಪ್ರಯತ್ನಿಸಿದ ಡಜನ್‌ಗಟ್ಟಲೆ ಭಯೋತ್ಪಾದಕರನ್ನು ನಿರ್ಮೂಲನೆ ಮಾಡಿದೆ. ಶಾಯೆಟೆಟ್ 13 ಪಡೆಗಳು ಹಮಾಸ್ ನೌಕಾಪಡೆಯ ಹಿರಿಯ ಸದಸ್ಯನನ್ನು ವಶಪಡಿಸಿಕೊಂಡಿದೆ. ಆತನನ್ನು ಸಮುದ್ರ ತೀರದಲ್ಲಿ ಸೆರೆಹಿಡಿಯಲಾಗಿದೆ. ಯುದ್ಧದ ಆರಂಭದಿಂದಲೂ, ಚೀಫ್ ಆಫ್ ಸ್ಟಾಫ್ ಮತ್ತು ಕಮಾಂಡರ್ ಆಫ್ ಸೆಂಟ್ಕಾಮ್ (ಯುನೈಟೆಡ್ ಸ್ಟೇಟ್ಸ್ ಆರ್ಮಿಯ ಸೆಂಟ್ರಲ್ ಕಮಾಂಡ್) ಎರಡು ಬಾರಿ ಮಾತನಾಡಿದ್ದಾರೆ.
ಯುದ್ಧಪೀಡಿತ ಆರ್ಥಿಕತೆಗೆ ಬಲ ತುಂಬಲು 2.49 ಲಕ್ಷ ಕೋಟಿ ವಿದೇಶಿ ಮೀಸಲು ಮಾರಿದ ಇಸ್ರೇಲ್!