ವಿಯೆನ್ನಾ(ನ.04): ದೇಶವ್ಯಾಪಿ ಲಾಕ್ಡೌನ್‌ಗೂ ಮುನ್ನ ಭೋಜನದಲ್ಲಿ ನಿರತರಾಗಿದ್ದ ಗುಂಪಿನ ಮೇಲೆ ಶಂಕಿತ ಉಗ್ರನೊಬ್ಬ ನಡೆಸಿದ ದಾಳಿಯಲ್ಲಿ ಐವರು ಸಾವನ್ನಪ್ಪಿ, 17 ಜನರು ಗಾಯಗೊಂಡ ಘಟನೆ ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ಸಂಭವಿಸಿದೆ. ಭದ್ರತಾ ಪಡೆಗಳು ನಡೆಸಿದ ಪ್ರತಿದಾಳಿಯಲ್ಲಿ ದಾಳಿಕೋರ ಕೂಡಾ ಹತನಾಗಿದ್ದಾನೆ. ಪ್ರಾಥಮಿಕ ತನಿಖೆ ವೇಳೆ ದಾಳಿಕೋರ ಐಸಿಸ್‌ ಉಗ್ರ ಸಂಘಟನೆ ಪರ ಒಲವು ಹೊಂದಿದ್ದ ಎಂದು ಕಂಡುಬಂದಿದೆ.

ಇತ್ತೀಚಿನ ಫ್ರಾನ್ಸ್‌ ಘಟನೆಯ ಬೆನ್ನಲ್ಲೇ ಆಸ್ಟ್ರಿಯಾದಲ್ಲೂ ಇಂಥ ಘಟನೆ ನಡೆದಿರುವುದು ಆತಂಕಕ್ಕೆ ಕಾರಣವಾಗಿದೆ. ಆದರೀಗ ಈ ಕೃತ್ಯ ತಾನೇ ಎಸಗಿದ್ದೆಂದು ಒಪ್ಪಿಕೊಂಡಿದೆ. ಈ ಘಟನೆಯನ್ನು ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹಾಗೂ ಐರೋಪ್ಯ ರಾಷ್ಟ್ರಗಳ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

ಒಂಟಿ ಉಗ್ರನ ದಾಳಿ:

ಒಂದು ತಿಂಗಳ ಲಾಕ್‌ಡೌನ್‌ ಜಾರಿಯಾಗುವ ಮುನ್ನ ದಿನವಾದ ಹಿನ್ನೆಲೆಯಲ್ಲಿ ವಿಯೆನ್ನಾದ ರೆಸ್ಟೋರೆಂಟ್‌ ಮತ್ತು ಬಾರ್‌ಗಳಲ್ಲಿ ಹೆಚ್ಚು ಜನರು ಸೇರಿದ್ದರು. ಹೀಗಾಗಿ ಬಾರ್‌ಗಳನ್ನೇ ಗುರಿಯಾಗಿಸಿಕೊಂಡ ಆಗಂತುಕ ಸೋಮವಾರ ರಾತ್ರಿ 8 ಗಂಟೆಗೆ ವೇಳೆಗೆ ನಕಲಿ ಆತ್ಮಾಹುತಿ ಜಾಕೆಟ್‌ ಧರಿಸಿ ರೈಫಲ್‌ನಿಂದ ಗುಂಡಿನ ಸುರಿಮಳೆಯೇ ಸುರಿಸಿದ್ದ. ಈ ದಾಳಿಯಲ್ಲಿ ಇಬ್ಬರು ಪುರುಷರು ಹಾಗೂ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಫ್ರಾನ್ಸ್‌ನಲ್ಲಿ ಕಳೆದ ವಾರ ಶಿಕ್ಷಕರೊಬ್ಬರು ಪ್ರವಾದಿ ಮೊಹಮ್ಮದ್‌ರ ಕಾರ್ಟೂನ್‌ ಪ್ರದರ್ಶಿಸಿದ್ದನ್ನು ಅಧ್ಯಕ್ಷ ಇಮ್ಯಾನುಯೆಲ್‌ ಸಮರ್ಥಿಸಿಕೊಂಡ ಬಳಿಕ ಸರಣಿ ಭಯೋತ್ಪಾದಕ ದಾಳಿಗಳು ನಡೆದಿದ್ದವು.

ಪ್ರಧಾನಿ ಮೋದಿ ಖಂಡನೆ:

ಇದೇ ವೇಳೆ ವಿಯೆನ್ನಾದಲ್ಲಿ ನಡೆದ ಭಯೋತ್ಪಾದಕ ದಾಳಿಯನ್ನು ಭಾರತದ ಪ್ರಧಾನಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಘಟನೆಯಿಂದ ತೀವ್ರ ದುಃಖವಾಗಿದ್ದು, ಈ ಸಮಯದಲ್ಲಿ ಭಾರತ ಆಸ್ಟ್ರಿಯಾದ ಬೆಂಬಲಕ್ಕೆ ನಿಲ್ಲುತ್ತದೆ ಎಂದು ಹೇಳಿದ್ದಾರೆ.