ಟೋಕಿಯೊ(ಫೆ.16)  ಟೋಕಿಯೊ ಬಳಿ ಸಮುದ್ರದಲ್ಲೇ ನಿಲ್ಲಿಸಲಾಗಿರುವ ಕ್ರೂಸ್ ಹಡಗಿನಲ್ಲಿ(ಪ್ರವಾಸಿ ಹಡಗು) ಇನ್ನೂ 70 ಜನರಿಗೆ ಕೊರೋನಾವೈರಸ್ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಮಾರಕ ಸೋಂಕಿಗೆ ಒಳಗಾದವರ ಸಂಖ್ಯೆ 355 ಕ್ಕೆ ಏರಿದೆ ಎಂದು ಹೇಳಲಾಗಿದೆ.

70 ಜನರ ಪೈಕಿ 38 ಜನರಲ್ಲಿ ಜ್ವರ ಮತ್ತು ಕೆಮ್ಮಿನಂತಹ ಕೊರೊನಾವೈರಸ್ ಸೋಂಕಿನ ಲಕ್ಷಣಗಳು ಕಂಡುಬಂದಿಲ್ಲ. ಆದರೂ ರಕ್ತ ಪರೀಕ್ಷೆಯಲ್ಲಿ ಸೋಂಕಿಗೆ ತುತ್ತಾಗಿದ್ದಾರೆ. 3,700 ಕ್ಕೂ ಹೆಚ್ಚು ಪ್ರಯಾಣಿಕರು ಮತ್ತು ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಡೈಮಂಡ್ ಪ್ರಿನ್ಸೆಸ್ ಹಡಗಿನಲ್ಲಿ ಒಟ್ಟು 1,219 ಜನರನ್ನು ಸಚಿವಾಲಯ ಇದುವರೆಗೆ ಪರೀಕ್ಷಿಸಿದೆ ಎಂದು ಜಪಾನ್‌ನ ರಾಷ್ಟ್ರೀಯ ಸುದ್ದಿ ಸಂಸ್ಥೆಯಾದ ಎನ್‌ಎಚ್‌ಕೆ ಗೆ ಕ್ಯಾಟೊ ತಿಳಿಸಿದ್ದಾರೆ.

ಚೀನಾದಲ್ಲಿ ವೈರಸ್ ತನ್ನ ರುದ್ರತಾಂಡವ ಮುಂದಿವರಿಸಿದೆ. ಇದೀಗ ಚೀನಾದಲ್ಲಿ ಸೋಂಕು ಪೀಡಿತರ ಸಂಖ್ಯೆ 68,000ಕ್ಕೇರಿದೆ. ಇನ್ನು ಇದೇ ವಿಚಾರವಾಗಿ ಮಾತನಾಡಿರುವ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯೂಹೆಚ್‌ಓ)ಯ ಮಹಾ ನಿರ್ದೇಶಕ ಡಾ. ಟೆಡ್ರೋಸ್ ಗೆಬ್ರೆಯೆಸಸ್ ಚೀನಾ ತುರ್ತುಪರಿಸ್ಥಿತಿಯಲ್ಲೇ ಇದೆ ಎಂದಿದ್ದಾರೆ.

ಡಿಸೆಂಬರ್ ಕೊನೆಯಲ್ಲಿ ಪತ್ತೆಯಾದ ವೈರಸ್ ಖಂಡಗಳಿಂದ ಖಂಡಗಳಿಗೆ ವ್ಯಾಪಿಸುತ್ತಿದೆ. ಒಮ್ಮೆ ನಿಯಂತ್ರಣಕ್ಕೆ ಬಂತು ಎಂದು ಭಾವಿಸಿದರೂ ಮತ್ತೆ ಅಲ್ಲಿಲ್ಲಿ ಉಲ್ಬಣಕೊಳ್ಳುತ್ತಿದೆ.