135 ಜನರ ಸಾವಿನ ಬೆನ್ನಲ್ಲೇ ಬಾಂಗ್ಲಾದೇಶ ಮೀಸಲು ಕಡಿತ; ಇತ್ತ ದೀದಿ ಹೇಳಿಕೆಗೆ ಕೆಂಡವಾದ ಬಿಜೆಪಿ

ಮೀಸಲು ನೀತಿಯಿಂದ ಅನ್ಯಾಯವಾಗಲಿದೆ ಎಂದು ವಿದ್ಯಾರ್ಥಿಗಳು ಬೀದಿಗೆ ಇಳಿದು ಹೋರಾಟ ನಡೆಸಿದ್ದರು. ಪೊಲೀಸರ ಜತೆ ರಾಷ್ಟ್ರ ವ್ಯಾಪಿ ಸಂಘರ್ಷ ನಡೆಸಿದ್ದರು. ಈ ಹೋರಾಟದಲ್ಲಿ ನೂರಾರು ಮಂದಿ ಬಲಿಯಾಗಿದ್ದರು.

Bangladesh Reservation Supreme Court revokes High Court order mrq

ಢಾಕಾ: ಹಲವು ದಿನಗಳಿಂದ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟ ಹಿಂಸಾರೂಪ ತಾಳಿ 135ಕ್ಕೂ ಹೆಚ್ಚು ಮಂದಿ ಬಲಿಯಾದ ಬೆನ್ನಲ್ಲೇ ವಿವಾದಿತ ಸಮರ ವೀರರ ಮೀಸಲಾತಿಯನ್ನು ಬಾಂಗ್ಲಾದೇಶ ಸುಪ್ರೀಂಕೋರ್ಟ್‌ ಭಾನುವಾರ ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಇದರಿಂದಾಗಿ ವಿದ್ಯಾರ್ಥಿಗಳ ಹೋರಾಟಕ್ಕೆ ಜಯ ಸಿಕ್ಕಂತಾಗಿದ್ದು, ಬಾಂಗ್ಲಾದೇಶದಲ್ಲಿ ಶಾಂತಿ ಪುನಾಸ್ಥಾಪನೆಯಾಗಬಹುದು ಎಂದು ಹೇಳಲಾಗುತ್ತಿದೆ.

1971ರಲ್ಲಿ ಬಾಂಗ್ಲಾದೇಶದಲ್ಲಿ ಸ್ವಾತಂತ್ರ್ಯಕ್ಕಾಗಿ ಪಾಕಿಸ್ತಾನ ವಿರುದ್ಧ ಯುದ್ಧ ನಡೆದಿತ್ತು. ಆ ಸಮರದಲ್ಲಿ ಹೋರಾಡಿದವರ ಬಂಧುಗಳಿಗೆ ಸರ್ಕಾರಿ ಉದ್ಯೋಗದಲ್ಲಿ ಶೇ.30ರಷ್ಟು ಮೀಸಲು ನೀಡುವ ನೀತಿಯನ್ನು ಬಾಂಗ್ಲಾದೇಶ ಹೈಕೋರ್ಟ್‌ ಎತ್ತಿಹಿಡಿದಿತ್ತು. ಈಗಾಗಲೇ ಉದ್ಯೋಗ ಕೊರತೆ ಎದುರಿಸುತ್ತಿರುವ ದೇಶದಲ್ಲಿ ಈ ಮೀಸಲು ನೀತಿಯಿಂದ ಅನ್ಯಾಯವಾಗಲಿದೆ ಎಂದು ವಿದ್ಯಾರ್ಥಿಗಳು ಬೀದಿಗೆ ಇಳಿದು ಹೋರಾಟ ನಡೆಸಿದ್ದರು. ಪೊಲೀಸರ ಜತೆ ರಾಷ್ಟ್ರ ವ್ಯಾಪಿ ಸಂಘರ್ಷ ನಡೆಸಿದ್ದರು. ಈ ಹೋರಾಟದಲ್ಲಿ ನೂರಾರು ಮಂದಿ ಬಲಿಯಾಗಿದ್ದರು.

 

ಇದರ ಬೆನ್ನಲ್ಲೇ ಭಾನುವಾರ ಸುಪ್ರೀಂಕೋರ್ಟ್‌ ಮೀಸಲು ಪ್ರಮಾಣವನ್ನು ಭಾರಿ ಪ್ರಮಾಣದಲ್ಲಿ ಕಡಿತಗೊಳಿಸಿದೆ. ಸ್ವಾತಂತ್ರ್ಯ ಸೇನಾನಿಗಳಿಗಿದ್ದ ಮೀಸಲಾತಿಯನ್ನು ಶೇ.30ರಿಂದ ಶೇ.5ಕ್ಕೆ ಇಳಿಕೆ ಮಾಡಿದೆ. ಶೇ.93ರಷ್ಟು ಹುದ್ದೆಗಳಿಗೆ ಮೆರಿಟ್‌ ಮೇಲೆ ಆಯ್ಕೆ ಮಾಡಬೇಕು. ಶೇ.2ರಷ್ಟು ಮೀಸಲನ್ನು ಜನಾಂಗೀಯ ಅಲ್ಪಸಂಖ್ಯಾತರು ಹಾಗೂ ಮಂಗಳಮುಖಿಯರು ಮತ್ತು ಅಂಗವಿಕಲರಿಗೆ ನೀಡಬೇಕು ಎಂದು ಆದೇಶಿಸಿದೆ.

ದೊಡ್ಡ ಹೋರಾಟ

ಪ್ರತಿಪಕ್ಷಗಳ ಚುನಾವಣೆ ಬಹಿಷ್ಕಾರದ ನಡುವೆ ಕಳೆದ ಜನವರಿಯಲ್ಲಷ್ಟೇ ಶೇಖ್‌ ಹಸೀನಾ ಅವರು ಪ್ರಧಾನಿಯಾಗಿ ಸತತ ನಾಲ್ಕನೇ ಬಾರಿಗೆ ಗೆದ್ದು ಬಂದಿದ್ದರು. ಅವರ ಪಕ್ಷ ಅವಾಮಿ ಲೀಗ್‌ 1971ರ ಸ್ವಾತಂತ್ರ್ಯ ಹೋರಾಟದ ನೇತೃತ್ವ ವಹಿಸಿತ್ತು. ತಮ್ಮ ಬೆಂಬಲಿಗರಿಗೆ ಅನುಕೂಲ ಮಾಡಿಕೊಡುವ ಸಲುವಾಗಿಯೇ ಶೇಖ್‌ ಹಸೀನಾ ಸರ್ಕಾರ ಈ ತಾರತಮ್ಯದ ಮೀಸಲು ನೀತಿಯನ್ನು ತಂದಿದೆ ಎಂಬುದು ವಿದ್ಯಾರ್ಥಿಗಳ ಆರೋಪವಾಗಿತ್ತು. ಮೀಸಲಾತಿಯನ್ನು ಸಮರ್ಥಿಸಿಕೊಂಡಿದ್ದ ಹಸೀನಾ, ಪಾಕಿಸ್ತಾನ ವಿರುದ್ಧ ಯುದ್ಧ ನಡೆಸಿದ ಹೋರಾಟಗಾರರು ಯಾವುದೇ ಪಕ್ಷದವರಾಗಿದ್ದರೂ ಅವರಿಗೆ ಅತಿದೊಡ್ಡ ಗೌರವ ಸಲ್ಲಬೇಕು ಎಂದು ಹೇಳಿದ್ದರು.

ಸಮರ ವೀರರಿಗೆ ಹಸೀನಾ ಸರ್ಕಾರ ಈ ಹಿಂದೆ ಮೀಸಲು ತರಲು ಮುಂದಾದಾಗ 2018ರಲ್ಲಿ ದೊಡ್ಡ ಪ್ರತಿಭಟನೆಗಳು ನಡೆದು ಸ್ಥಗಿತಗೊಳಿಸಲಾಗಿತ್ತು. ಆದರೆ ಕಳೆದ ಜೂನ್‌ನಲ್ಲಿ ಬಾಂಗ್ಲಾದೇಶ ಹೈಕೋರ್ಟ್‌ ಆ ಮೀಸಲು ನೀಡಲು ಆದೇಶಿಸಿದ್ದರಿಂದ ಪ್ರತಿಭಟನೆಗಳು ಆರಂಭವಾಗಿದ್ದವು. ಶೇಖ್‌ ಹಸೀನಾ ಸರ್ಕಾರಕ್ಕೆ ಈ ಪ್ರತಿಭಟನೆ ದೊಡ್ಡ ಸವಾಲಾಗಿತ್ತು. ವಿಶ್ವವಿದ್ಯಾಲಯಗಳು ಬಂದ್‌ ಆಗಿದ್ದವು, ಇಂಟರ್ನೆಟ್‌ ಸಂಪರ್ಕ ಕಡಿತವಾಗಿತ್ತು. ಮನೆಯಿಂದ ಹೊರಗೆ ಬಾರದಂತೆ ಜನರಿಗೆ ಸೂಚಿಸಿ ಕರ್ಫ್ಯೂ ಹೇರಲಾಗಿತ್ತು. ಈ ವರೆಗೆ ಈ ಹೋರಾಟದಲ್ಲಿ ಎಷ್ಟು ಮಂದಿ ಬಲಿಯಾಗಿದ್ದಾರೆ ಎಂದು ಸರ್ಕಾರ ಹೇಳಿಲ್ಲ. ಆದರೆ ಪತ್ರಿಕೆಗಳ ಪ್ರಕಾರ ಕನಿಷ್ಠ 103 ಮಂದಿ ಸಾವಿಗೀಡಾಗಿದ್ದಾರೆ.

ಬಾಂಗ್ಲಾದಲ್ಲಿರುವ ಭಾರತದ ನಿವಾಸಿಗಳಿಗೆ ಸಲಹಾವಳಿ, ಹೆಲ್ಪ್‌ಲೈನ್ ಬಿಡುಗಡೆ ಮಾಡಿದ ಹೈ ಕಮೀಷನರ್

ಆಶ್ರಯ ನೀಡಲು ಸಿದ್ಧ ಎಂದ ದೀದಿ

ಮೀಸಲು ಹೋರಾಟದ ಕಾರಣ ತೀವ್ರ ಹಿಂಸಾಚಾರಕ್ಕೆ ಸಾಕ್ಷಿಯಾಗಿರುವ ಬಾಂಗ್ಲಾದೇಶದ ಜನರು ಆಶ್ರಯ ಕೋರಿ ಬಂದರೆ ಅವರಿಗೆ ಆಶ್ರಯ ನೀಡಲು ಸಿದ್ಧವಿರುವುದಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಘೋಷಿಸಿದ್ದಾರೆ.

‘ಬಾಂಗ್ಲಾದೇಶದ ಬಗ್ಗೆ ನಾನು ಮಾತನಾಡುವುದಿಲ್ಲ. ಏಕೆಂದರೆ ಅದು ಪ್ರತ್ಯೇಕ ದೇಶ. ಭಾರತ ಸರ್ಕಾರ ಆ ಬಗ್ಗೆ ಮಾತನಾಡಲಿದೆ. ಆದರೆ ಬಾಂಗ್ಲಾದ ಅಸಹಾಯಕ ಜನರು ಬಂಗಾಳದ ಬಾಗಿಲು ಬಡಿದರೆ, ಅವರಿಗೆ ನಾವು ಆಶ್ರಯ ನೀಡುತ್ತೇವೆ. ಈ ಬಗ್ಗೆ ವಿಶ್ವಸಂಸ್ಥೆಯ ನಿರ್ಣಯವೇ ಇದೆ’ ಎಂದು ಮಮತಾ ಬ್ಯಾನರ್ಜಿ ಅವರು ಕೋಲ್ಕತಾದಲ್ಲಿ ಸುರಿವ ಮಳೆಯ ನಡುವೆಯೇ ಹುತಾತ್ಮ ದಿನಾಚರಣೆಯಲ್ಲಿ ಮಾಡಿದ ಭಾಷಣದಲ್ಲಿ ಹೇಳಿದರು.

ಹಿಂಸಾಚಾರಕ್ಕೆ ತಿರುಗಿದ ಮೀಸಲು ನೀತಿ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ; ಸಾವಿನ ಸಂಖ್ಯೆ 105ಕ್ಕೆ ಏರಿಕೆ

ಮಮತಾ ಬ್ಯಾನರ್ಜಿಗೆ ಅಧಿಕಾರ ನೀಡಿದವರು ಯಾರು?

ಬೇರೆ ದೇಶಗಳಿಂದ ಭಾರತಕ್ಕೆ ಆಗಮಿಸುವವರಿಗೆ ಆಶ್ರಯ ನೀಡಲು ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಅಧಿಕಾರ ನೀಡಿದವರು ಯಾರು?. ವಲಸೆ ಮತ್ತು ಪೌರತ್ವ ನೀಡುವ ಅಧಿಕಾರ ಕೇಂದ್ರ ಸರ್ಕಾರದ್ದು. ಅಂತಹ ವಿಷಯಗಳಲ್ಲಿ ರಾಜ್ಯಗಳಿಗೆ ಯಾವುದೇ ಸ್ಥಾನವಿಲ್ಲ. ಇಂಡಿಯಾ ಮೈತ್ರಿಕೂಟ ಬಾಂಗ್ಲಾದೇಶದ ಪ್ರಜೆಗಳನ್ನು ಭಾರತಕ್ಕೆ ಬರಮಾಡಿಕೊಂಡು, ಅವರನ್ನು ಬಂಗಾಳದಿಂದ ಜಾರ್ಖಂಡ್‌ಗೆ ಕಳುಹಿಸಿ ಅಲ್ಲಿ ನೆಲೆಸುವಂತೆ ಮಾಡಿ ಮುಂಬರುವ ಚುನಾವಣೆಯಲ್ಲಿ ಗೆಲ್ಲುವ ಕುತಂತ್ರ ಮಾಡಿದೆ ಎಂದು ಪಶ್ಚಿಮ ಬಂಗಾಳ ಬಿಜೆಪಿ ಸಹ ಉಸ್ತುವಾರಿ, ಅಮಿತ್‌ ಮಾಳವೀಯ ಆರೋಪಿಸಿದ್ದಾರೆ.

Latest Videos
Follow Us:
Download App:
  • android
  • ios