ನಮ್ ಲೇಡೀಸ್ ಹಾಸ್ಟೆಲ್‌ನ ಹುಡುಗಿಯರಿಗೆ ನಟೋರಿಯಸ್ ಅನ್ನೋ ಬಿರುದು ಇದೆ. ವಾರ್ಡನ್ ಕಣ್ ತಪ್ಪಿಸಿ ಸಾಹಸಗಳನ್ನು ಮಾಡೋದ್ರಲ್ಲಿ ಎತ್ತಿದ ಕೈ. ಪಕ್ಕದಲ್ಲೇ ಇರುವ ಪಿಜಿ (ಪೋಸ್ಟ್ ಗ್ರಾಜ್ಯುವೇಶನ್) ಸ್ಟೂಡೆಂಟ್ಸ್ ಗಿರುವ ಸ್ವಾತಂತ್ರ್ಯ, ಎಂಜಾಯ್ ಮೆಂಟ್ ಡಿಗ್ರಿಯ ಹುಡುಗೀರಿಗಿಲ್ಲ. ಬೆಳಗ್ಗೆ ಐದೂವರೆ ಗಂಟೆಗೆಲ್ಲ ಏಳಲೇ ಬೇಕು. ಎದ್ದು ಪ್ರೇಯರ್ ಮುಗಿಸಿ ಟೀ ಹಿಡ್ಕೊಂಡು ಬಂದು ಬುಕ್ ಹಿಡಿದು ಅದರೆದುರು ತೂಕಡಿಸಬೇಕು. ಆದರೆ ನಾವೆಲ್ಲ ಬೆಡ್‌ ಶೀಟ್ ಹೊದೆದು ಶಿವಾ ಅಂತ ಮತ್ತೆ ನಿದ್ದೆ ಹೊಡೆಯುತ್ತೀವಿ. ಬಾಗಿಲ ಹೊರಗೆ ಕೂತು ಶ್ರದ್ಧೆಯಿಂದ ಬುಕ್ ಹಿಡಿದು ಓದುತ್ತಿರುವ ಕ್ಲಾಸ್ ನ ಜಾಣ ವಿದ್ಯಾರ್ಥಿನಿ ವಾರ್ಡನ್ ಈ ಕಡೆ ಬರೋದು ಗೊತ್ತಾದ ಕೂಡಲೇ ಬಾಗಿಲನ್ನು ನಾಕ್ ಮಾಡಿ ಸಿಗ್ನಲ್ ಕೊಡುತ್ತಾಳೆ.ವೀಕೆಂಡ್ ಔಟಿಂಗ್ ನಲ್ಲಿ ಅದಕ್ಕೆ ಪ್ರತಿಯಾಗಿ ನಾವು ಅವಳಿಗೊಂದು ಚಾಟ್ಸ್ ಲಂಚ ಕೊಡಿಸಬೇಕು. ಆದರೆ ಅವಳು ಪಾಪ. ಎಷ್ಟೋ ಸಲ, ದುಡ್ಡಿಲ್ಲ ಕಣೇ, ಅಪ್ಪ ಈ ಸಲ ಕಡಿಮೆ ಹಣ ಕಳಿಸಿದ್ದಾರೆ, ನೆಕ್ಸ್ಟ್ ವೀಕ್ ಗ್ಯಾರೆಂಟಿ ಅಂತ ಹೇಳಿದ್ರೆ ಅವಳೇನೂ ನೋ ಅಂತ ಹೇಳಲ್ಲ. ವಾರ್ಡನ್ ಗೆ ಚುಚ್ಚಿಕೊಟ್ಟು ನಮಗೆಲ್ಲ ಉಗಿಸೋ ದುಷ್ಟ ಬುದ್ದಿಯೂ ಇಲ್ಲ. ಹಾಗಂತ ಅವಳೇನು ಭಾರೀ ಒಳ್ಳೆಯ ಹುಡುಗಿ ಅಂತೇನೂ ಅಂದುಕೊಳ್ಳಬೇಡಿ. ಅವಳ ಲೆಕ್ಕಾಚಾರವೇ ಬೇರೆ. ಒಂದು ಎಕ್ಸಾಂಪಲ್ ಹೇಳಬೇಕು ಅಂದರೆ..

 

ಟೆಕ್ಸ್ಟ್ ಬುಕ್ ಅಂದ್ರೆ ಮೈಲು ದೂರ ಓಡೋ ನಾವು ಎಕ್ಸಾಂ ಬಂದರೆ ಮನಸ್ಸಿಲ್ಲದ ಮನಸ್ಸಲ್ಲಿ ಬುಕ್ ಹತ್ರ ಹೋಗ್ತೀವಿ. ಅಲ್ಲಿಯವರೆಗೆ ಓದದ ಫಲ ಪಾಠ ತಲೆ ಬುಡ ಅರ್ಥ ಆಗಲ್ಲ. ಆದರೂ ಪಾಸ್ ಆಗದೇ ಇದ್ದರೆ ಮನೆಯಲ್ಲಿ ಹುಡುಗ ನೋಡಿ ವಾಲಗ ಊದಿಸೋದು ಗ್ಯಾರೆಂಟಿ ಅನ್ನೋ ಕಟು ಸತ್ಯ ನಮಗೆ ಗೊತ್ತು. ಹಾಗಾಗಿ ಬೆಳಗ್ಗೆ ಬೇಗ ಏಳಬೇಕು ಅಂದುಕೊಂಡಿರ್ತೀವಿ. ಅಲರಾಂ ಸೆಟ್ ಮಾಡಿ ಇಡ್ತೀವಿ ಮೂರೂವರೆಗೆ. ಈ ಜಾಣೆ ನಮಗಿಂತ ಮುಂಚೆ ಎದ್ದು ಒಂಚೂರು ಸದ್ದು ಮಾಡದೇ ಓದುತ್ತಿರುತ್ತಾಳೆ. ನಾವು ಇಟ್ಟ ಅಲರಾಂ ಒಂದು ರಿಂಗ್ ಆದದ್ದೇ ಸದ್ದಿಲ್ಲದೇ ಬಂದು ಆಫ್ ಮಾಡಿ ಹೋಗ್ತಾಳೆ. ಐದೂವರೆಗೆ ಹಾಸ್ಟೆಲ್ ಬೆಲ್ ಹೊಡೆದಾಗಲೇ ನಮಗೆ ಎಚ್ಚರ! ದೊಡ್ಡ ಅನಾಹುತ ಆದ ಹಾಗೆ ಬಾಯ್ ಬಾಯ್ ಬಡಿದುಕೊಂಡು ಬಾತ್ ರೂಂ ಗೆ ಓಡ್ತೀವಿ. 'ಅಲರಾಂ ಆಗಿದ್ದೇ ಗೊತ್ತಾಗ್ಲಿಲ್ವಲ್ಲ, ಛೇ. ನೀನಾದ್ರೂ ಎಬ್ಬಿಸಬಾರದಿತ್ತಾ?' ಅಂತ ಅವಳನ್ನು ಕೇಳಿದ್ರೆ, 'ನಂಗೂ ಗೊತ್ತಾಗ್ಲಿಲ್ಲ ಕಣೇ. ನಾನು ನಿಮ್ಗಿಂತ ಒಂಚೂರು ಮೊದಲೇ ಎದ್ದೆ..' ಅಂತ ಇನೋಸೆಂಟಾಗಿ ಹೇಳ್ತಾಳೆ. ನಾವು ಬುದ್ದುಗಳು ನಂಬುತ್ತಾ ನಮ್ಮ ಪ್ರಾರಬ್ಧಕ್ಕೆ ಬೈಕೊಳ್ತಾ ಪುಸ್ತಕ ಹಿಡೀತೀವಿ. ಮಂಗನಂತೆ ಅತ್ತಿತ್ತ ಓಡುವ ತಲೆ, ಅಲ್ಲಿಯವರೆಗೆ ಓದದ ಕಾರಣ ಯಾವ ಆಂಗಲ್ ನಿಂದಲೂ ಅರ್ಥವಾಗದ ಪಾಠ. ಈ ಸಲ ಗ್ಯಾರೆಂಟಿ ಫೇಲ್ ಅಂದುಕೊಳ್ಳುತ್ತಾ, ಯಾರ್ಯಾರನ್ನೋ ಬೇಡಿ ಒಂದಿಷ್ಟು ಪಾಯಿಂಟ್ಸ್ ಹೇಳಿಸ್ಕೊಂಡು ಎಕ್ಸಾಂ ಹಾಲ್ ಗೆ ಹೋಗ್ತೀವಿ. ಪರೀಕ್ಷೆ ಅನ್ನೋದನ್ನು ಕಂಡುಹಿಡಿದ ವ್ಯಕ್ತಿ ನಮ್ಮ ಕೈಗೇನಾದ್ರೂ ಸಿಕ್ಕಿದ್ರೆ ಬೀದಿಲೇ ಹೊಡ್ದು ಹಾಕೋದು ಗ್ಯಾರೆಂಟಿ. ಅಷ್ಟು ಸಿಟ್ಟಿದೆ ಅವ್ನ ಮೇಲೆ.

 

ಹೇ ಹುಡುಗಿ, ನಿನ್ನ ಲವ್ ಲೈಫ್ ಕೀಲಿಕೈ ನಿನ್ನ ಕೈಲೇ ಇರಲಿ

 

ನಮ್ ಜಾಣೆ ಹುಡುಗಿ ಒಂದಿನ ರೆಡ್ ಹ್ಯಾಂಡ್ ಆಗಿ ಸಿಕ್ಕಾಕ್ಕೊಂಡು ಬಿಟ್ಲು. ಅವತ್ತು ಸೈಕಾಲಜಿ ಎಕ್ಸಾಂ. ಹೆಚ್ಚೇ ಕಷ್ಟ. ಆದರೆ ಇಂಟೆರೆಸ್ಟಿಂಗೂ ಆಗಿರುವ ಕಾರಣ ಓದೋ ಆಸಕ್ತಿ ಸ್ವಲ್ಪ ಇತ್ತು. ಅಲರಾಂ ಇಟ್ಟೆ. ಯಾಕೋ ಮೇಜಿನ ಮೇಲೆ ಇಡಲಿಲ್ಲ. ಮೊಬೈಲ್ ಏರೋಪ್ಲೇನ್ ಮೋಡ್ ಗೆ ಹಾಕ್ಕೊಂಡು ಅಲರಾಂ ಮಾತ್ರ ಆಕ್ಟಿವೇಟ್ ಮಾಡಿ ಕಿವಿ ಪಕ್ಕದಲ್ಲೇ ಮೊಬೈಲ್ ಇಟ್ಟೆ. ಮೂರೂವರೆಗೆ ಸರಿಯಾಗಿ ಅಲರಾಂ ಹೊಡ್ಕೊಳಕ್ಕೆ ಶುರುವಾಗಿರಬೇಕು. ಕನಸಿನಲ್ಲೆಲ್ಲೋ ಕೇಳಿದ ಸೌಂಡ್. ಫಕ್ಕನೆ ಎಚ್ಚರಾಯ್ತು. ಮೊಬೈಲ್ ಆಫ್ ಮಾಡೋಣ ಅಂದುಕೊಂಡರೆ ನನ್ನ ಬೆಡ್ ಶೀಟ್ ಒಳಗೆ ಒಂದು ಕೈ ತಡಕಾಡ್ತಾ ಇಡೋದು ಗೊತ್ತಾಯ್ತು. ಪಕ್ಕದಲ್ಲೇ ಪರಿಚಿತ ಡಿಯೋಡ್ರೆಂಟ್ ಘಮ. ಇದು ಆ ಜಾಣೆನೇ ಅಂತ ಗೊತ್ತಾಯ್ತು. ಸುಮ್ಮನಿದ್ದೆ. ಅವಳು ಮೆತ್ತಗೆ ಮೊಬೈಲ್ ಹಿಡಿದು ಅದನ್ನು ಆಫ್ ಮಾಡಿ ಯಥಾಸ್ಥಾನದಲ್ಲಿಟ್ಟು ಅವಳ ಜಾಗದಲ್ಲಿ ಕೂತು ಓದತೊಡಗಿದಳು. ಐದು ನಿಮಿಷ ನಿದ್ದೆ ಮಾಡಿದ ಫೋಸ್ ಕೊಟ್ಟು ಆಮೇಲೆ ಎದ್ದೆ. 'ನನ್ ಮೊಬೈಲ್ ಹೇಗೆ ಆಫ್ ಆಯ್ತು?' ಅಂತ ಕೇಳಿದೆ. ಅವಳು ಎಂದಿನ ಹಾಗೆ 'ಗೊತ್ತಿಲ್ಲಮ್ಮಾ, ನಾನು ಜಸ್ಟ್ ಎದ್ದೆ ಅಷ್ಟೇ' ಅಂದಳು. 'ಹಾಗಾದ್ರೆ ನಾಳೆ ನೀನು ಸೈಕಿಯಾಟ್ರಿಸ್ಟ್ ಹತ್ರ ಹೋಗ್ಲೇಬೇಕು ಕಣೇ' ಅಂದೆ. ಅವಳು ಮೆಟ್ಟಿಬಿದ್ದು, 'ಯಾಕೆ?' ಅಂದಳು. ನಾನು 'ನಿಂಗೆ ನಿದ್ದೆಲಿ ನಡಿಯೋ ಅಭ್ಯಾಸದ ಜೊತೆಗೆ ಅಲಾರಂ ಆಫ್ ಮಾಡೋ ಸಮಸ್ಯೆಯೂ ಇದೆ. ಇನ್ ಸೋಮ್ನಿಯಾ ಜೊತೆಗೆ ಮತ್ತೇನೋ ಇರಬೇಕು' ಅಂದೆ ಸಿಟ್ಟಲ್ಲಿ ಅವಳತ್ತ ನೋಡುತ್ತಾ. ಅವಳು ಬಿಳುಚಿಕೊಂಡಳು.

 

#FeelFree ಮದುವೆ ಆದ್ಮೇಲೆ ಹೆಣ್ಮಕ್ಕಳು ದಪ್ಪಗಾಗೋದಕ್ಕೆ ಸೆಕ್ಸ್ ಕಾರಣ ...

 

ಹಾಗಂತ ಅವಳನ್ನು ಎದುರು ಹಾಕ್ಕೊಂಡರೂ ಕಷ್ಟವೇ. ಎಕ್ಸಾಂ ಮುಗಿದ ಮೇಲೆ ನಮ್ಮ ನಿದ್ದೆಗೆ ದಾರಿ ತೋರುವವಳು ಅವಳೇ. ಆಮೇಲಿಂದ ನಾನು ಯಾರಲ್ಲೂ ಈ ವಿಷ್ಯ ಹೇಳಬಾರದು ಅನ್ನೋ ಕಂಡೀಶನ್ ಮೇಲೆ ನನ್ನಿಂದ ಚಾಟ್ಸ್ ವಸೂಲಿ ನಿಂತು ಹೋಯ್ತು. ಬಿಟ್ಟಿಯಾಗಿ ನಿದ್ದೆ ಹೊಡೆಯೋ ಸುಖ ನನ್ನದಾಯ್ತು.