Asianet Suvarna News Asianet Suvarna News

ಕಚೇರಿಯ ಕೆಟ್ಟ ಪರಿಸರದಿಂದ ಕೆಟ್ಟವರಾಗುವ ತಾಯಂದಿರು!

ಎಲ್ಲ ಕಚೇರಿಗಳಲ್ಲೂ ಇಂಥ ಕತೆಗಳಿರುತ್ತವೆ. ಕೆಲಸ ಮಾಡುವುದು ಯಾರೋ, ಕ್ರೆಡಿಟ್ ತೆಗೆದುಕೊಳ್ಳುವುದು ಮತ್ಯಾರೋ, ಸಹೋದ್ಯೋಗಿಯನ್ನು ಕಡೆಗಣಿಸಿ ಕೀಳರಿಮೆ ಹುಟ್ಟುಹಾಕಲು ಯತ್ನಿಸುವುದು, ಸಹೋದ್ಯೋಗಿಯ ಕುರಿತು ಗಾಸಿಪ್ ಹಬ್ಬಿಸಿವುದು, ಅವರನ್ನು ಒಂಟಿಯಾಗಿಸುವ ಯತ್ನ ಇತ್ಯಾದಿ ನೆಗೆಟಿವ್ ನಡೆಗಳು ಅಲ್ಲೊಂದು ನೆಗೆಟಿವ್ ವಾತಾವರಣವನ್ನೇ ಸೃಷ್ಟಿಸಿರುತ್ತವೆ. ಇದರ ಪರಿಣಾಮವನ್ನು ಮನೆಯಲ್ಲಿರುವ ಪಾಪದ ಮಕ್ಕಳು ಅನುಭವಿಸಬೇಕಾಗುತ್ತಿದೆ ಎನ್ನುತ್ತಿದೆ ಅಧ್ಯಯನ. 

Study says Toxic work environment turns women into bad mothers
Author
Bangalore, First Published Nov 21, 2019, 9:50 AM IST

ನಾವು ಬಹುತೇಕರು ಉದ್ಯೋಗ ಸ್ಥಳದಲ್ಲಿ ಕೆಟ್ಟ ಪರಿಸರವನ್ನು ಒಂದಿಲ್ಲೊಂದು ಬಾರಿ ಅನುಭವಿಸಿರುತ್ತೇವೆ. ಸಹೋದ್ಯೋಗಿಯ ದುರ್ವರ್ತನೆ, ಬಾಸಿಸಂ, ಮೇಲಧಿಕಾರಿಯ ಟಾರ್ಚರ್, ವೃಥಾ ಕಿರುಚಾಟ, ರಜೆಯಿಲ್ಲದ ಕೆಲಸ, ನಿಮಿಷವೂ ಬ್ರೇಕ್ ತೆಗೆದುಕೊಳ್ಳಲು ಬಿಡದ ಉಸಿರುಗಟ್ಟುವ ವಾತಾವರಣ, ಸೇಡಿನ ಸ್ಯಾಂಪಲ್, ಹೊಟ್ಟೆಕಿಚ್ಚು... 0ಕೆಲವೇ ಕೆಲವರ ಇಂಥ ನಡೆಯಿಂದ ಇಡೀ ಕಚೇರಿಯ ವಾತಾವರಣ ಹದಗೆಟ್ಟು ಬಿಡುತ್ತದೆ.

ಇದನ್ನು ಒಬ್ಬೊಬ್ಬರು ಒಂದೊಂದು ರೀತಿ ನಿಭಾಯಿಸುತ್ತಾರೆ. ಆದರೆ, ಕೆಲವರು ಮಾತ್ರ ಇದನ್ನು ನಿಭಾಯಿಸಲಾಗದೆ ಒದ್ದಾಡಿ ಹೋಗುತ್ತಾರೆ. ವಿಷಯವೆಂದರೆ, ಇಂಥ ಕಚೇರಿಯ ಅನಾಗರೀಕ ವಾತಾವರಣಕ್ಕೂ, ಮಹಿಳೆಯ ಪೇರೆಂಟಿಂಗ್ ವಿಧಾನಗಳಿಗೂ ಲಿಂಕ್ ಇದೆ ಎನ್ನುತ್ತಿದೆ ಹೊಸದೊಂದು ಅಧ್ಯಯನ.

ಉದ್ಯೋಗದಲ್ಲಿ ಏಳ್ಗೆ: ಬಿಲ್ ಗೇಟ್ಸ್ ಹೇಳಿದ್ದು ಕೇಳಿ

ಅಧ್ಯಯನ

ಕಚೇರಿಯಲ್ಲಿ ಸರಿಯಾಗಿ ನಡೆಸಿಕೊಳ್ಳಲಿಲ್ಲವೆಂದರೆ ಉದ್ಯೋಗಿ ತಾಯಂದಿರ ಪೇರೆಂಟಿಂಗ್ ವಿಧಾನಗಳ ಮೇಲೆ ಪರಿಣಾಮ ಬೀರುತ್ತದೆಯೇ ಎಂಬುದನ್ನು ಕಾರ್ಲ್‌ಟನ್ ಯೂನಿವರ್ಸಿಟಿಯ ವಿಜ್ಞಾನಿಗಳು ಅಧ್ಯಯನಕ್ಕೊಳಪಡಿಸಿದಾಗ ಕೆಲ ಆಸಕ್ತಿಕರ ಸಂಗತಿಗಳು ಹೊರಬಿದ್ದಿವೆ. ಅಧ್ಯಯನಕಾರರು ಮಾತಿಗೆಳೆದಾಗ ಹಲವು ಉದ್ಯೋಗಿ ತಾಯಂದಿರು ಕಚೇರಿಯ ಕೆಟ್ಟ ವಾತಾವರಣದಿಂದ ತಾವೇನೇನು ಅನುಭವಿಸಬೇಕಾಯಿತು ಎಂಬುದನ್ನು ಹಂಚಿಕೊಂಡಿದ್ದಾರೆ. ಬಳಿಕ ಅವರ ಪತಿಯಂದಿರಿಗೆ  ಕೂಡಾ ಪತ್ನಿ ಮನೆಯಲ್ಲಿ ಎಂಥ ತಾಯಾಗಿದ್ದಾಳೆ ಎಂಬುದನ್ನು ವಿವರಿಸುವಂತೆ ಹೇಳಲಾಗಿತ್ತು. 

ಅಧಿಕಾರಯುತ ಪೇರೆಂಟಿಂಗ್

ಈ ಅಧ್ಯಯನ ಫಲಿತಾಂಶಗಳಂತೆ, ಕಚೇರಿಯ ಟಾಕ್ಸಿಕ್ ವಾತಾವರಣದ ಅನುಭವ ಇರುವ ಮಹಿಳೆಯರು ಅಧಿಕಾರಯುತ ಪೇರೆಂಟಿಂಗ್ ವಿಧಾನ ಅನುಸರಿಸಲಾರಂಭಿಸಿದ್ದರು. ಕಚೇರಿಯಲ್ಲಿ ಅವರನ್ನು ಒರಟಾಗಿ ನಡೆಸಿಕೊಂಡಿದ್ದರಿಂದ ಅಂಥ ಮಹಿಳೆಯರಿಗೆ ತಾವು ಪರಿಣಾಮಕಾರಿ ಪೋಷಕರಾಗಿಲ್ಲ ಎಂಬ ಭಾವನೆ ಹುಟ್ಟುಹಾಕಿತ್ತು. ಇದರಿಂದಾಗಿ, ಅವರು ತಾವು ಪೇರೆಂಟಿಂಗ್ ಕೌಶಲ ಕಳೆದುಕೊಂಡಿಲ್ಲ ಎಂದು ಸಾಬೀತುಪಡಿಸಲು ಸ್ಟ್ರಿಕ್ಟ್ ಆದ ಪೋಷಕರಾಗಿ ಬದಲಾಗಿದ್ದರು. ಮಕ್ಕಳಿಗೆ ಹೊಡೆಯುವುದು, ಬೈಯ್ಯುವುದು, ತಾವು ಹೇಳಿದಂತೆ ಕೇಳಲೇಬೇಕೆಂಬ ಹಟ ಚಲಾಯಿಸುವುದು, ಹೆದರಿಸುವುದು ಮುಂತಾದವನ್ನು ಮಕ್ಕಳ ಮೇಲೆ ಪ್ರಯೋಗಿಸುತ್ತಿದ್ದರು. ಇದು ಮಕ್ಕಳ ಬೆಳವಣಿಗೆ ದೃಷ್ಟಿಯಿಂದಲೂ ಸಮಸ್ಯೆಗಳನ್ನು ಸೃಷ್ಟಿ ಮಾಡುತ್ತದೆ. 

ಕಡಿಮೆ ಸಮಯದಲ್ಲಿ ಹೆಚ್ಚು ಕೆಲಸ ಮಾಡೋ ಸಿಂಪಲ್ ಟ್ರಿಕ್ಸ್‌ಗಳಿವು!

ನೆಗೆಟಿವ್ ಫಲಿತಾಂಶ

''ಕಚೇರಿಯಲ್ಲಿ ಅನಾಗರೀಕರಂತೆ ಯಾರನ್ನಾದರೂ ನಡೆಸಿಕೊಂಡರೆ ಅದರ ಪರಿಣಾಮ ಬಹಳ ದೊಡ್ಡದಾಗಿಯೂ, ನೆಗೆಟಿವ್ ಆಗಿಯೂ ಇರುತ್ತದೆ ಎಂಬುದು ಈ ಅಧ್ಯಯನದಿಂದ ತಿಳಿಯಿತು. ಉದಾಹರಣೆಗೆ, ಉದ್ಯೋಗಿ ಸ್ಥಳದ ಅನಾಗರೀಕತೆಗೆ ಬಲಿಪಶುವಾದವರಲ್ಲಿ ಕಡಿಮೆ ಪ್ರಯತ್ನ, ಕೆಲಸದ ವಿಷಯದಲ್ಲಿ ಕಡಿಮೆ ಪರ್ಫಾರ್ಮೆನ್ಸ್ ಕಂಡುಬಂದರೆ, ಹೆಚ್ಚು ಒತ್ತಡ, ಗಮನಹೀನತೆ, ನಿರ್ಧಾರ ಕೈಗೊಳ್ಳುವಿಕೆಯಲ್ಲಿ ಹಾಗೂ ಮಾಹಿತಿ ಶೇಖರಣೆಯಲ್ಲಿ ಸಮಸ್ಯೆ ಹೆಚ್ಚಿರುತ್ತದೆ '' ಎನ್ನುತ್ತಾರೆ ಸಂಶೋಧನೆಯ ಸಹಲೇಖಕ ಡಾ. ಕ್ಯಾಥರಿನ್ ಡೂಪ್ರೆ. ಈ ಅಧ್ಯಯನ ವರದಿಯನ್ನವರು ಪ್ರತಿಷ್ಠಿತ ಅಮೆರಿಕನ್ ಸೈಕಾಲಜಿಕಲ್ ಅಸೋಸಿಯೇಶನ್ ಮುಂದೆ ಪ್ರೆಸೆಂಟ್ ಮಾಡಿದ್ದಾರೆ. 

ಕಚೇರಿಯ ಕೆಟ್ಟ ವಾತಾವರಣ ನಿಭಾಯಿಸುವುದು

ಸಹೋದ್ಯೋಗಿಯನ್ನು ಕಡೆಗಣಿಸಿವುದು, ಅಗೌರವ ತೋರುವುದು, ಮನಸ್ಸಿಗೆ ನೋವಾಗುವ ಮಾತಾಡುವುದು, ಮಾಡಿದ ಕೆಲಸದಲ್ಲಿ ವೃಥಾ ಪದೇ ಪದೆ ತಪ್ಪು ಹುಡುಕುವುದು, ಮತ್ತೊಬ್ಬರ ಕೆಲಸದ ಕ್ರೆಡಿಟ್ ತೆಗೆದುಕೊಳ್ಳುವುದು, ಸಹೋದ್ಯೋಗಿಯು ಕೀಳರಿಮೆಯಿಂದ ಬಳಲುವಂತೆ ಮಾಡಲು ಪ್ರಯತ್ನಿಸುವುದು, ಇಷ್ಟವಿಲ್ಲದ, ಸಂಬಂಧಿಸದ ವಿಭಾಗಕ್ಕೆ ಎತ್ತಿ ಹಾಕುವುದು, ಪ್ರತಿಭೆಗೆ ತಕ್ಕ ಅವಕಾಶ ನೀಡದಿರುವುದು, ಸಂಬಳದಲ್ಲಿ ತಾರತಮ್ಯ ಎಲ್ಲವೂ ಉದ್ಯೋಗ ಸ್ಥಳದ ಅನಾಗರಿಕತೆ ಎನಿಸಿಕೊಳ್ಳುತ್ತದೆ. ಇಂಥ ಅನಾಗರಿಕತೆಯನ್ನು ಸಮರ್ಥವಾಗಿ ನಿಭಾಯಿಸುವುದು ಸುಲಭವಲ್ಲ ಎನ್ನುತ್ತಾರೆ ತಜ್ಞರು.

ಈಗಷ್ಟೇ ಕೆಲಸಕ್ಕೆ ಸೇರಿದ್ದೀರಾ? ತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ!

ಇಂಥ ಕಿರುಕುಳವನ್ನು ಸಹೋದ್ಯೋಗಿಯಿಂದ ಅನುಭವಿಸುತ್ತಿದ್ದರೆ ನೇರವಾಗಿ ಅವರ ಬಳಿಯೇ ಹೋಗಿ, ತನ್ನನ್ನು ಈ ರೀತಿ ನಡೆಸಿಕೊಳ್ಳುತ್ತಿರುವುದರ ಕಾರಣವೇನು ಎಂದು ಕೇಳಿಬಿಡುವುದು ಒಳ್ಳೆಯ ಐಡಿಯಾ. ಆದರೆ, ಇಂಥ ಕಿರುಕುಳ ಒಂದು ಗುಂಪಿನಿಂದಲೇ ಆಗುತ್ತಿದೆ ಎಂದರೆ ಟ್ರಾನ್ಸ್‌ಫರ್ ಕೇಳುವುದು ಅಥವಾ ಕೆಲಸ ಬದಲಿಸುವುದು ಒಳ್ಳೆಯದು. ಸನ್ನಿವೇಶ ಹೇಗೇ ಇರಲಿ, ಆತ್ಮವಿಶ್ವಾಸ ಕಳೆದುಕೊಳ್ಳದೆ ಮಾನಸಿಕ ಸದೃಢತೆ ಕಾಪಾಡಿಕೊಳ್ಳುವುದು ಬಹಳ ಮುಖ್ಯ. 

Follow Us:
Download App:
  • android
  • ios