500 ರೂ. ಸಾಲ ಮಾಡಿ ಬ್ಯುಸಿನೆಸ್ ಶುರು ಮಾಡಿದವಳೀಗ ವಾರ್ಷಿಕ 7 ಕೋಟಿ ವಹಿವಾಟು ನಡೆಸ್ತಾರೆ!
ಬ್ಯುಸಿನೆಸ್ ನಿರಂತರ ಕೆಲಸ. ಒಂದು ದಿನ ಮಾಡಿ ಇನ್ನೊಂದು ದಿನ ಕೈಕಟ್ಟಿ ಕುಳಿತ್ರೆ ಲಾಭ ಬರಲು ಸಾಧ್ಯವಿಲ್ಲ. ಅದನ್ನು ಚೆನ್ನಾಗಿ ಅರಿತಿರುವ ಈ ಮಹಿಳೆ ಸತತ ಪ್ರಯತ್ನದ ನಂತ್ರ ಯಶಸ್ವಿಯಾಗಿದ್ದಾರೆ. ವ್ಯಾಪಾರ ಸಣ್ಣದಾದ್ರೂ ಲಾಭ ದೊಡ್ಡದಿದೆ.
ದೊಡ್ಡ ಸಾಧನೆ ಮಾಡಿ ಪ್ರಸಿದ್ಧಿ ಪಡೆಯಬೇಕೆಂಬ ಕನಸನ್ನು ಎಲ್ಲರೂ ಹೊಂದಿರುತ್ತಾರೆ. ಕಂಪನಿಯಲ್ಲಿ ಉದ್ಯೋಗ ಮಾಡಿ ತಿಂಗಳಿಗೆ ಸಂಬಳ ಪಡೆಯುವ ಜನರಿಗಿಂತ ಸ್ವಂತ ಉದ್ಯೋಗ ಮಾಡಿ ಹೆಸರು ಮಾಡುವ ಆಸೆಯನ್ನು ಅನೇಕರು ಹೊಂದಿದ್ದಾರೆ. ಮಾರುಕಟ್ಟೆಯಲ್ಲಿ ನಾನಾ ಬ್ಯುಸಿನೆಸ್ ಲಭ್ಯವಿದೆ. ಆದ್ರೆ ಜನರು ಯಶಸ್ವಿ ವ್ಯಕ್ತಿಗಳನ್ನು ಗಮನಿಸಿ ಅವರ ದಾರಿಯನ್ನೇ ತಾವು ತುಳಿಯುತ್ತಾರೆ. ಹೀಗಾದಾಗ ಸ್ವಂತ ಗುರುತು, ಯಶಸ್ಸು ಸಿಗೋದು ಕಷ್ಟವಾಗುತ್ತದೆ. ಅದೇ ನೀವು ಭಿನ್ನ ಆಲೋಚನೆ ಮಾಡಿ, ವ್ಯಾಪಾರ ಶುರು ಮಾಡಿ, ಸತತ ಶ್ರಮವಹಿಸಿದ್ರೆ ಯಶಸ್ಸು ಸಾಧ್ಯ. ಯಾವುದೇ ಗಿಡ ಮರವಾಗಿ ಬೆಳೆಯಲು ಗೊಬ್ಬರ ಹಾಗೂ ನೀರು ಅಗತ್ಯವಿರುವಂತೆ ವ್ಯಾಪಾರಕ್ಕೆ ಹಣ ಮತ್ತು ಅನನ್ಯ ಆಲೋಚನೆ ಮುಖ್ಯ. ಕಷ್ಟದ ಸಮಯದಲ್ಲೂ ಛಲ ಬಿಡದೆ ಕೆಲಸ ಮಾಡಿದ ಈ ಮಹಿಳೆ ಈಗ ಹೆಸರು ಮಾಡಿದ್ದಾರೆ. ತಮ್ಮ ಕೆಲಸಕ್ಕೆ ತಕ್ಕಂತೆ ಸಾಕಷ್ಟು ಪ್ರಶಸ್ತಿ ಪಡೆದಿದ್ದಲ್ಲದೆ 80ಕ್ಕೂ ಹೆಚ್ಚು ಜನರಿಗೆ ಕೆಲಸ ನೀಡಿದ್ದಾರೆ.
ಮಹಿಳೆ ಹೆಸರು ಕೃಷ್ಣ ಯಾದವ್ (Krishna Yadav). ಅವರು ಉತ್ತರ ಪ್ರದೇಶದ ಬುಲಂದ್‌ಶಹರ್ ನಿವಾಸಿ. ಕೃಷ್ಣ ಯಾದವ್ ಅವರ ಪತಿ ಗೋವರ್ಧನ್ ಯಾದವ್ ವಾಹನ (Vehicle) ವ್ಯವಹಾರ ನಡೆಸುತ್ತಿದ್ದರು. ಅದ್ರಲ್ಲಿ ನಷ್ಟವಾಯ್ತು. ಸಾಲ ಹೆಚ್ಚಾದ ಕಾರಣ ಕೆಲಸ ನಿಲ್ಲಿಸಿ ಕೃಷ್ಣ ಯಾದವ್ ಹಾಗೂ ಗೋವರ್ಧನ್ ಯಾದವ್ ದೆಹಲಿ (Delhi)ಗೆ ಬಂದ್ರು. ದೆಹಲಿಯಲ್ಲಿ ಕೇವಲ ಐದುನೂರು ರೂಪಾಯಿಗೆ ವ್ಯವಹಾರ ಶುರು ಮಾಡಿದ ಕೃಷ್ಣ ಯಾದವ್ ಈಗ ವ್ಯಾಪಾರದಲ್ಲಿ ಪಳಗಿದ್ದಾರೆ.
ನಿಮ್ಮ ಯೂಟ್ಯೂಬ್ ಚಾನೆಲ್‌ಗೆ 1 ಲಕ್ಷ ಸಬ್‌ಸ್ಕ್ರೈಬರ್ಸ್ ಇದ್ರೆ ತಿಂಗಳಿಗೆಷ್ಟು ಗಳಿಸಬಹುದು?
ದೆಹಲಿಗೆ ಬಂದ ಸಮಯದಲ್ಲಿ ಏನು ಮಾಡ್ಬೇಕು ಎಂಬುದು ಕೃಷ್ಣ ಯಾದವ್ ದಂಪತಿಗೆ ಗೊತ್ತಾಗಿರಲಿಲ್ಲ. ಆರಂಭದಲ್ಲಿ ಭೂಮಿಯನ್ನು ಗುತ್ತಿಗೆ ಪಡೆದು ತರಕಾರಿ ಬೆಳೆಯಲು ಶುರು ಮಾಡಿದ ಇವರಿಗೆ ಯಾವುದೇ ಲಾಭವಾಗಲಿಲ್ಲ. ಕೃಷಿ ದರ್ಶನದಲ್ಲಿ ಉಪ್ಪಿನಕಾಯಿ (pickle) ತಯಾರಿಕೆ ತರಬೇತಿ ಬಗ್ಗೆ ಮಾಹಿತಿ ಪಡೆದ ಅವರು ಮೂರು ತಿಂಗಳು ತರಬೇತಿ ಪಡೆದರು. ನಂತ್ರ ಉಪ್ಪಿನಕಾಯಿ ತಯಾರಿಕೆ ಶುರು ಮಾಡಿದ್ರು.
ಕೃಷ್ಣ ಯಾದವ್ ಉಪ್ಪಿನಕಾಯಿ ತಯಾರಿಸಿದ್ರೆ ಅವರ ಪತಿ ಬೀದಿ ಬದಿಯಲ್ಲಿ ಉಪ್ಪಿನಕಾಯಿ ಮಾರಾಟ ಮಾಡುತ್ತಿದ್ದರು. ಗ್ರಾಹಕರಿಗೆ ರುಚಿ ನೋಡುವಂತೆ ಹೇಳ್ತಿದ್ದರು. ರುಚಿ ಇಷ್ಟವಾದ್ರೆ ಗ್ರಾಹಕರು ಉಪ್ಪಿನಕಾಯಿ ಖರೀದಿಸುತ್ತಿದ್ದರು. ಒಮ್ಮೊಮ್ಮೆ ಅರ್ಧ ದಿನಗಳವರೆಗೆ ಮಾರಾಟವೇ ಆಗ್ತಿರಲಿಲ್ಲ. ಆದ್ರೂ ದಂಪತಿ ನಿರಾಸೆಗೊಳ್ಳದೆ ಕೆಲಸ ಮುಂದುವರೆಸಿದ್ದರು.
ಕೃಷ್ಣ ಯಾದವ್ ರೈತರಿಗೆ ಉತ್ತಮ ಗುಣಮಟ್ಟದ ತರಕಾರಿ ಬೀಜ ನೀಡುತ್ತಾರೆ. ರೈತರು ಬೆಳೆದ ತರಕಾರಿಯನ್ನು ಉಪ್ಪಿನಕಾಯಿಗೆ ಬಳಸ್ತಾರೆ. ಕೆಲ ತರಕಾರಿಯನ್ನು ಮಂಡಿಯಿಂದ ಖರೀದಿ ಮಾಡ್ತಿದ್ದಾರೆ. ಕೇವಲ ಎರಡು ಜನರಿಂದ ಶುರುವಾದ ಉಪ್ಪಿನಕಾಯಿ ಕಂಪನಿಯಲ್ಲಿ ಈಗ ಎಂಟು ಜನರಿದ್ದು, ನಾಲ್ಕು ಘಟಕಗಳಲ್ಲಿ ಕೆಲಸ ನಡೆಯುತ್ತಿದೆ. 7000 ಮಹಿಳೆಯರು ಪರೋಕ್ಷವಾಗಿ ಕೆಲಸ ಮಾಡುತ್ತಿದ್ದಾರೆ.
ಕ್ರೆಡಿಟ್ ಕಾರ್ಡ್ ನಿಂದ ಹಿಡಿದು ಎನ್ ಪಿಎಸ್ ತನಕ, ಏಪ್ರಿಲ್ ತಿಂಗಳಲ್ಲಿ ಈ 6 ನಿಯಮಗಳಲ್ಲಿ ಬದಲಾವಣೆ!
ಕೃಷ್ಣ ಯಾದವ್ ಅವರಿಗೆ ಭಾರತ ಸರ್ಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ನಾರಿ ಶಕ್ತಿ ಸಮ್ಮಾನ್ ಪ್ರಶಸ್ತಿ ನೀಡಿ ಗೌರವಿಸಿದೆ. 2014 ರಲ್ಲಿ ಹರಿಯಾಣ ಸರ್ಕಾರ, ಕೃಷ್ಣ ಯಾದವ್ ಅವರ ವಿನೂತನ ಕಲ್ಪನೆಗಾಗಿ ರಾಜ್ಯದ ಮೊದಲ ಚಾಂಪಿಯನ್ ರೈತ ಮಹಿಳೆ ಪ್ರಶಸ್ತಿ ನೀಡಿದೆ. 2013ರ ಸೆಪ್ಟೆಂಬರ್‌ನಲ್ಲಿ ನಡೆದ ವೈಬ್ರೆಂಟ್ ಗುಜರಾತ್ ಸಮಾವೇಶದಲ್ಲಿ ಕಿಸಾನ್ ಸಮ್ಮಾನ್ ಹೆಸರಿನಲ್ಲಿ 51 ಸಾವಿರ ರೂಪಾಯಿ ಚೆಕ್ ನೀಡಲಾಗಿತ್ತು. 2010 ರಲ್ಲಿ ರಾಷ್ಟ್ರಪತಿ ಪ್ರತಿಭಾ ದೇವಿ ಸಿಂಗ್ ಪಾಟೀಲ್, ಕೃಷ್ಣ ಯಾದವ್ ಸಾಧನೆಯ ಕಥೆಯನ್ನು ಎಲ್ಲರ ಮುಂದಿಟ್ಟಿದ್ದರು. ಶ್ರಮಪಟ್ಟು ಕೆಲಸ ಮಾಡಿದ್ರೆ ಯಶಸ್ಸು ಸಾಧ್ಯ ಎನ್ನುವುದಕ್ಕೆ ಕೃಷ್ಣ ಯಾದವ್ ಉತ್ತಮ ನಿದರ್ಶನ. ಐದು ನೂರು ರೂಪಾಯಿಯಲ್ಲಿ ಶುರುವಾದ ಬ್ಯುಸಿನೆಸ್ ಈಗ ಏಳು ಕೋಟಿ ದಾಟಿದೆ.