ನಂಗೇಲಿ ಎಂಬ ನಿಗಿನಿಗಿ ಕೆಂಡ, ತೆರಿಗೆ ವಿರೋಧಿಸಿ ಸ್ತನವನ್ನೇ ಕತ್ತರಿಸಿ ಕಲೆಕ್ಟರ್ ಕೈಗಿಟ್ಟ ಧೀರೆ..!
ಮಹಿಳೆಯರ ಪಾಲಿಗೆ ಭಾರತದ ಇತಿಹಾಸ ಎಷ್ಟು ರಕ್ತಸಿಕ್ತವಾಗಿತ್ತೆಂದರೆ, ಈಗ ನೆನಪಿಸಿಕೊಂಡರೆ ಮೈ ನಡುಗುತ್ತದೆ. ‘ಸ್ತನ ತೆರಿಗೆ’ ಅಂದಿನ ದಲಿತ ಮಹಿಳೆಯರ ದಾರುಣ ಚಿತ್ರಣವನ್ನು ಕಣ್ಣೆದುರು ತಂದಿತು. ಈ ಟ್ಯಾಕ್ಸ್ ವಿರುದ್ಧ ಬಂಡೆದ್ದು ನಿಂತವಳೇ ನಂಗೇಲಿ. ಸಾವಿರಾರು ಮಹಿಳೆಯರು ಸ್ತನ ತೆರಿಗೆ ಪಾವತಿಸಲಾಗದೇ, ತಮ್ಮ ಹೆಣ್ತನವನ್ನೂ ಕಾಪಾಡಿಕೊಳ್ಳಲಾರದೇ ಕಣ್ಣೀರು ಸುರಿಸುತ್ತಿದ್ದ ಕಾಲದಲ್ಲಿ ನಿಗಿನಿಗಿಯಂತೆ ಎದ್ದು ನಿಂತವಳು.
-ಎಂ.ಸಿ.ಶೋಭಾ, ಏಷ್ಯಾನೆಟ್ ಸುವರ್ಣ ನ್ಯೂಸ್
ಮಹಿಳೆಯರ ಪಾಲಿಗೆ ಭಾರತದ ಇತಿಹಾಸ ಎಷ್ಟು ರಕ್ತಸಿಕ್ತವಾಗಿತ್ತೆಂದರೆ, ಈಗ ನೆನಪಿಸಿಕೊಂಡರೆ ಮೈ ನಡುಗುತ್ತದೆ. ಅಂದು ಆಚರಣೆಯಲ್ಲಿದ್ದ ಸಂಪ್ರದಾಯಗಳು, ಸತಿಪದ್ಧತಿ, ಕೆಳ ವರ್ಗದ ಮಹಿಳೆಯರನ್ನು ಶೋಷಿಸುವ ಪದ್ಧತಿಗಳು ಈ ಜನರೇಷನ್ ಕಲ್ಪಿಸಿಕೊಳ್ಳಲೂ ಆಗದಷ್ಟು ಅನಾಗರೀಕವಾಗಿದ್ದಂತೆ ನಂಬಲಾರದದು. ಮೊನ್ನೆ, The Dalit Voice ಮಾಡಿದ ಟ್ವೀಟ್, 19ನೆ ಶತಮಾನದಲ್ಲಿ ತಿರುವನಂತಪುರದಲ್ಲಿ ಮಹಿಳೆಯರನ್ನು ನಿಕೃಷ್ಟವಾಗಿ ಕಾಣುವ ಅನಾಗರಿಕ, ಕ್ರೂರ ಕಾನೂನು ಜಾರಿಯಲ್ಲಿದ್ದದ್ದನ್ನು ನೆನಪಿಸಿತು. ಅದರಲ್ಲೂ ‘ನಂಗೇಲಿ’ ಮಹಿಳೆಯರ 1803ರಲ್ಲಿ ಬ್ರಿಟಿಷರ ಆಳ್ವಿಕೆಯಲ್ಲಿ ತಿರುವಂತನಪುರ ಸಂಸ್ಥಾನದ ಆಳ್ವಿಕೆಯಲ್ಲಿ ಜಾರಿಗೆ ತಂದಿದ್ದ ‘ಸ್ತನ ತೆರಿಗೆ’ ಅಂದಿನ ದಲಿತ ಮಹಿಳೆಯರ ದಾರುಣ ಚಿತ್ರಣವನ್ನು ಕಣ್ಣೆದುರು ತಂದಿತು. ಈ ಟ್ಯಾಕ್ಸ್ ವಿರುದ್ಧ ಬಂಡೆದ್ದು ನಿಂತವಳೇ ನಂಗೇಲಿ.
ದಲಿತ ಮಹಿಳೆಯರು ತಮ್ಮ ಸ್ತನಗಳ (Breast) ಗಾತ್ರಕ್ಕ ನುಗುಣವಾಗಿ ತೆರಿಗೆ (Tax) ಪಾವತಿಸಬೇಕಿತ್ತು. ಯಾವುದೇ ಕಾರಣಕ್ಕೂ ದಲಿತ ಮಹಿಳೆಯರು ತಮ್ಮ ಸ್ತನ ಮುಚ್ಚಿಕೊಳ್ಳುವಂತಿರಲಿಲ್ಲ. ಎಲ್ಲದ್ದಕ್ಕೂ ತೆರಿಗೆ ತೆತ್ತು ತೆತ್ತು ರೋಸಿ ಹೋಗಿದ್ದರು ದಲಿತರು. ಇಂತಹ ಸಮಯದಲ್ಲಿ ಜಾರಿಗೆ ತಂದ ‘ಸ್ತನ ತೆರಿಗೆ’ ವಿರುದ್ಧ ಅಸಹಾಯಕ ಮಹಿಳೆಯರು ದನಿ ಎತ್ತಲಿಲ್ಲ. ತಿರುವನಂತಪುರಂ ಸಂಸ್ಥಾನದ ಕಲೆಕ್ಟರ್ಗಳು ಮನೆ, ಮನೆಗೆ ತೆರಳಿ ಮಹಿಳೆಯರಿಂದ ಸ್ತನ ತೆರಿಗೆ ವಸೂಲಿ ಮಾಡುತ್ತಿದ್ದರು. ಟ್ಯಾಕ್ಸ್ ಕಟ್ಟಲಾಗದ ಬಡ ಮಹಿಳೆಯರು (Woman), ತಮ್ಮ ಎದೆ ಮುಚ್ಚಿಕೊಳ್ಳಲಾರದೇ ಬರೀ ಮೈಯಲ್ಲೇ ತಿರುಗುವಂತಾಗಿತ್ತು. ಕಿತ್ತು ತಿನ್ನುವ ಬಡತನದ ಜತೆಗೆ ಸಾಮಾಜಿಕವಾಗಿಯೂ ಶೋಷಣೆಗೊಳಗಾಗಿದ್ದ ಮಹಿಳೆಯರು, ಬಲಿಷ್ಠ ಮೇಲ್ವರ್ಗದ ವಿರುದ್ಧ ದನಿ ಎತ್ತಲಾರದೇ ಜೀವ ಕೈಯಲ್ಲಿ ಹಿಡಿದು ಬದುಕುತ್ತಿದ್ದರು. ಸಾವಿರಾರು ಮಹಿಳೆಯರು ಸ್ತನ ತೆರಿಗೆ ಪಾವತಿಸಲಾಗದೇ, ತಮ್ಮ ಹೆಣ್ತನವನ್ನೂ ಕಾಪಾಡಿಕೊಳ್ಳಲಾರದೇ ಕಣ್ಣೀರು (Tears) ಸುರಿಸುತ್ತಿದ್ದ ಕಾಲದಲ್ಲಿ ನಿಗಿನಿಗಿಯಂತೆ ಎದ್ದು ನಿಂತವಳು ನಂಗೇಲಿ.
ಮನೆ ಆಸ್ತಿ ಕಿತ್ಕೊಂಡು ಕ್ಯಾನ್ಸರ್ ಪೀಡಿತ ತಾಯಿಯನ್ನೇ ಹೊರಗಟ್ಟಿದ ಮಗ, ಬುದ್ಧಿಕಲಿಸಿದ ಕರ್ನಾಟಕದ ಡಿಸಿ!
ಕೇರಳದ ಚೆರುತಾಲಾ ಗ್ರಾಮದ ನಂಗೇಲಿ, ಈಳವ ಸಮುದಾಯಕ್ಕೆ ಸೇರಿದವಳು. ದಲಿತರಿಗಿಂತಲೂ ಅತ್ಯಂತ ಹೀನಾಯ ಸ್ಥಿತಿಯಲ್ಲಿದ್ದದ್ದು ಈಳವ ಸಮುದಾಯ. ಆದರೆ, ನಂಗೇಲಿ ಮೂಲತಃ ಹೋರಾಟಗಾರ್ತಿ, ಅವಳ ಎದೆಯೊಳಗೊಬ್ಬಳು ಸ್ವಾಭಿಮಾನಿ, ಕ್ರಾಂತಿಕಾರಿ ಇದ್ದಳು. ಸ್ತನ ತೆರಿಗೆ ವಿರುದ್ಧ ಮೊದಲು ಪ್ರಶ್ನಿಸಿದ್ದೇ ನಂಗೇಲಿ. ಬಂಡಾಯದ ಮೊದಲ ಹಂತವೆಂಬಂತೆ ನಂಗೆಲಿ, ತನ್ನ ಸ್ತನ ತೋರಿಸಲು ನಿರಾಕರಿಸುತ್ತಿದ್ದಳು. ಜತೆಗೆ, ಟ್ಯಾಕ್ಸ್ ಕಟ್ಟೋದಕ್ಕೂ ಬಿಲ್ಕುಲ್ ಒಪ್ಪುತ್ತಿರಲಿಲ್ಲ. ಕಲೆಕ್ಟರ್ಗಳು ಬಂದಾಗಲೆಲ್ಲ ಗಟ್ಟಿ ದನಿಯಲ್ಲಿ, ಧೈರ್ಯವಾಗಿ ತಿರುಗಿ ನಿಲ್ಲುತ್ತಿದ್ದಳು. ಅಕ್ಕಪಕ್ಕದ ಗ್ರಾಮದ ಮಹಿಳೆಯರಿಗೂ ಸ್ತನ ತೆರಿಗೆ ಕಟ್ಟದಂತೆ ತಾಕೀತು ಮಾಡುತ್ತಿದ್ದಳು, ದನಿಯಿಲ್ಲದ ಮಹಿಳೆಯರ ಪರ ದನಿ ಎತ್ತಿ ನಿಲ್ಲುತ್ತಿದ್ದಳು, ಅವರಲ್ಲಿ ಧೈರ್ಯ, ಆತ್ಮವಿಶ್ವಾಸ (Confidence) ತುಂಬುತ್ತಿದ್ದಳು.
ನಂಗೇಲಿಯ ಪ್ರತಿಭಟನೆಗೆ ಹೆದರುತ್ತಿದ್ದ ಕಲೆಕ್ಟರ್ಗಳ ಪಾಲಿಗೆ ನಂಗೇಲಿ ಬಿಸಿತುಪ್ಪವಾಗಿದ್ದಳು. ಆಕೆಯನ್ನು ಬಗ್ಗುಬಡಿಯಲೇ ಬೇಕೆಂದು ನಿರ್ಧರಿಸಿದ ಕಲೆಕ್ಟರ್ಗಳು,ಈಕೆಯ ಮೇಲೆ ಮುಲಕ್ಕರಂ ಕರ ವಿಧಿಸಿದರು. ತಕ್ಷಣವೇ ಟ್ಯಾಕ್ಸ್ ಕಟ್ಟಬೇಕೆಂದು ಫರ್ಮಾನು ಹೊರಡಿಸಿದ್ರು. ನಂಗೇಲಿ ಬಳಿ ಅಷ್ಟು ಹಣವಿಲ್ಲ ಎಂದು ಗೊತ್ತಿದ್ದರೂ, ಆಕೆಯನ್ನು ಮಣಿಸಲೇಬೇಕೆಂದು ರಾಜರ ಅಣತಿಯಾಗಿತ್ತು.
ಮಗ ಗೆದ್ದು ತಂದ ತಟ್ಟೆಯಲ್ಲೇ 24 ವರ್ಷ ಉಣ್ಣುತ್ತಿದ್ದ ತಾಯಿ, ವೈರಲ್ ಆಯ್ತು ಮಗನ ಭಾವನಾತ್ಮಕ ಟ್ವೀಟ್
ಸ್ತನ ತೋರಿಸು ಇಲ್ಲ ಟ್ಯಾಕ್ಸ್ ಕಟ್ಟು ಎಂದು ಪಟ್ಟು ಹಿಡಿದರು. ಕಲೆಕ್ಟರ್ ಗಳ ಬೆದರಿಕೆಗೆ ಜಗ್ಗದ ನಂಗೇರಿ, ಮನೆಯೊಳಗೆ ಓಡಿದಳು. ತನ್ನ ಸ್ತನವನ್ನೇ ಕತ್ತರಿಸಿ ಬಾಳೆ ಎಲೆಯಲ್ಲಿಟ್ಟು, ಯಾವುದೇ ಅಳುಕಿಲ್ಲದೇ ಕಲೆಕ್ಟರ್ ಎದುರು ಮುಂದಿಟ್ಟಳು. ಕತ್ತರಿಸಿದ ಸ್ತನದಿಂದ ರಕ್ತ ಧಾರಾಕಾರವಾಗಿ ಹರಿಯುತ್ತಿದ್ದರೆ, ನಂಗೇರಿ ರಕ್ತದ ಮಡುವಿನಲ್ಲಿ ಬಿದ್ದಿದ್ದಳು. ಕಲೆಕ್ಟರ್ಗಳು ಎದ್ದೆನೋ ಬಿದ್ದೆನೋ ಅಂತ ಕಾಲ್ಕಿತ್ತರು.
ನಂಗೇಲಿಯ ಸುದ್ದಿ ಇಡೀ ರಾಜ್ಯ ದಲ್ಲಿ ಕಾಡ್ಗಿಚ್ಚಿನಂತೆ ಹಬ್ಬಿತು. ನಂಗೇಲಿಯ ಸಾವಿನ ಸುದ್ದಿ ತಿಳಿದು ಕಂಗಾಲಾದ ಆಕೆಯ ಗಂಡ, ಹೊತ್ತಿ ಉರಿಯುತ್ತಿದ್ದ ಆಕೆಯ ಚಿತೆಗೆಹಾರಿ ಪ್ರಾಣಬಿಟ್ಟ. ಇದು ಪುರುಷನೊಬ್ಬ ಸತಿ ಸಹಗಮನ ಪದ್ಧತಿಗೆ ಒಳಗಾದ ಮೊದಲ ಪ್ರಕರಣ ಎಂದು ಇತಿಹಾಸದಲ್ಲಿ ದಾಖಲಾಯ್ತು. ನಂಗೆಲಿಯ ಸಾವಿನಿಂದ ಎಚ್ಚೆತ್ತ ತಿರುವನಂತಪುರ ಆಡಳಿತ ಸ್ತನ ತೆರಿತೆ ರದ್ದು ಮಾಡಿತು. ಆಕೆಯ ಗೌರವಾರ್ಥವಾಗಿ ಆಕೆ ಜೀವಿಸಿದ್ದ ಊರಿಗೆ ‘ಮುಲಚಿಪರಂಬು’ (ಸ್ತನಗಳುಳ್ಳ ಮಹಿಳೆಯಭೂಮಿ) ಎಂದು ಹೆಸರಿಡಲಾಯಿತು. ನಂಗೇಲಿಯ ತ್ಯಾಗ ವ್ಯರ್ಥವಾಗಲಿಲ್ಲ. ಬ್ರಿಟಿಷ್ ಸರ್ಕಾರ, ಅಮಾನವೀಯ ಸ್ತನ ತೆರಿಗೆಯನ್ನು ರದ್ದುಪಡಿಸಿತು. ಕೋಟ್ಯಂತರ ಅಸಹಾಯಕ ದಲಿತ ಮಹಿಳೆಯರ ಪಾಲಿಗೆ ನಂಗೇಲಿ ವೀರ ವನಿತೆಯಾಗಿ, ಚರಿತ್ರೆಯ ಪುಟ ಸೇರಿದಳು.