Monsoon Remedies : ಮನೆ ತೇವಗೊಂಡು ಗಬ್ಬು ವಾಸನೆ ಬರ್ತಿದ್ಯಾ?
ಮಳೆಗಾಲ ಆರಂಭವಾಯ್ತೆಂದ್ರೆ ಮಳೆ, ತೇವದ ಸಮಸ್ಯೆ ಸಾಮಾನ್ಯ. ಮಳೆಗಾಲ ಮುಗಿಯುವವರೆಗೂ ಆರೋಗ್ಯದ ಜೊತೆಗೆ ಮನೆಯ ಬಗ್ಗೆಯೂ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ಕೆಲವೊಂದು ತಪ್ಪಿನಿಂದಾಗಿ ಮನೆಯ ವಸ್ತು ಹಾಳಾಗುವುದಲ್ಲದೆ ವಾಸನೆ ಬರುತ್ತದೆ. ಮಳೆಗಾಲದಲ್ಲಿ ತೇವ ಕಡಿಮೆಯಾಗ್ಬೇಕೆಂದ್ರೆ ಏನು ಮಾಡ್ಬೇಕೆಂದು ನಾವು ಹೇಳ್ತೇವೆ.
ಮಳೆಗಾಲ ಶುರುವಾಗಿದೆ. ಒಂದೇ ಸಮನೆ ವರುಣ ಅಬ್ಬರಿಸ್ತಿದ್ದಾನೆ. ಅನೇಕ ಕಡೆ ಸೂರ್ಯನ ಬೆಳಕು ಕಾಣ್ದೆ ವಾರವಾಗಿದೆ. ಧೋ ಎಂದು ಹೊಯ್ಯುವ ಮಳೆ ಕೆಲ ದಿನ ಮನಸ್ಸಿಗೆ ಮುದ ನೀಡುತ್ತದೆ ನಿಜ. ಆದ್ರೆ ಮಳೆ ಹೆಚ್ಚಾಗ್ತಿದ್ದಂತೆ ಒಂದೊಂದೇ ಸಮಸ್ಯೆ ಕಾಡಲು ಶುರುವಾಗುತ್ತದೆ. ಮಳೆಗಾಲದಲ್ಲಿ ಮನೆ ತೇವದಿಂದ ಕೂಡಿರುತ್ತದೆ. ಗೋಡೆಗಳ ಮೇಲೆ ನೀರು ಹರಿಯಲು ಶುರುವಾಗಿರುತ್ತದೆ. ಅಡುಗೆ ಮನೆ ಸೇರಿದಂತೆ ಮನೆಯ ಮೂಲೆಗಳಿಂದ ವಾಸನೆ ಬರ್ತಿರುತ್ತದೆ. ತೇವಾಂಶದ ಈ ವಾಸನೆ ಮನಸ್ಸಿಗೆ ಕಿರಿಕಿರಿಯುಂಟು ಮಾಡುತ್ತದೆ. ಅಲ್ಲದೆ ಮನೆ ಬೆಚ್ಚಗಿರದ ಕಾರಣ ಸೂಕ್ಷ್ಮ ಜೀವಿಗಳ ಸಂಖ್ಯೆ ಹೆಚ್ಚಾಗುತ್ತದೆ. ಆಹಾರ ಪದಾರ್ಥ, ಕಾಳು, ಧಾನ್ಯಗಳಲ್ಲಿ ಹುಳ ಕಾಣಿಸಿಕೊಳ್ಳುತ್ತದೆ. ಕಪಾಟಿನಲ್ಲಿಟ್ಟ ಬಟ್ಟೆಯಿಂದ ವಾಸನೆ ಬರುತ್ತದೆ. ಬಿಳಿ ಬಿಳಿ ಫಂಗಸ್ ಅಲ್ಲಲ್ಲಿ ಕಾಣಿಸಿಕೊಳ್ಳುತ್ತದೆ. ಮಳೆಗಾಲದಲ್ಲಿ ಮನೆ ತೇವವಾಗಿರಬಾರದು ಹಾಗೆ ಅದ್ರಿಂದ ವಾಸನೆ ಬರಬಾರದು ಅಂದ್ರೆ ಕೆಲವೊಂದು ಟಿಪ್ಸ್ ಬಳಸಬೇಕು. ಇಂದು ನಾವು ಮನೆಯನ್ನು ಅತಿ ತೇವದಿಂದ ರಕ್ಷಿಸೋದು ಹೇಗೆ ಎಂಬುದನ್ನು ಹೇಳ್ತೆವೆ.
ಮಳೆಗಾಲದಲ್ಲಿ ಮನೆಯ ರಕ್ಷಣೆ ಹೀಗಿರಲಿ :
ಶುಷ್ಕತೆ : ಮಳೆಗಾಲದಲ್ಲಿ ನೆಲ ಒಣಗಲು ಸಮಯ ತೆಗೆದುಕೊಳ್ಳುತ್ತದೆ. ನೆಲದ ಮೇಲಿರುವ ನೀರು ತುಂಬಾ ಸಮಯ ಹಾಗೆ ಇರುತ್ತದೆ. ನಾವು ಅಡಿಗೆ ಮನೆ ಮತ್ತು ಸ್ನಾನಗೃಹದಲ್ಲಿ ನೀರನ್ನು ಹೆಚ್ಚು ಬಳಸುತ್ತೇವೆ. ಅಲ್ಲಿ ಸೂರ್ಯನ ಬೆಳಕು ತಲುಪುವುದಿಲ್ಲ. ಇದ್ರಿಂದ ತೇವಾಂಶ ಹಾಗೇ ಇರುತ್ತದೆ. ಬ್ಯಾಕ್ಟೀರಿಯಾ ಬೆಳೆದುಕೊಳ್ಳುತ್ತದೆ. ಅದನ್ನು ತಪ್ಪಿಸಬೇಕೆಂದ್ರೆ ಅಡುಗೆ ಮನೆ ಹಾಗೂ ಬಾತ್ ರೂಮನ್ನು ಶುಷ್ಕವಾಗಿಡಲು ಪ್ರಯತ್ನಿಸಿ. ಅಲ್ಲಿ ಹೆಚ್ಚು ನೀರು ಬೀಳದಂತೆ, ನೀರು ನಿಲ್ಲದಂತೆ ನೋಡಿಕೊಳ್ಳಿ.
ಇದನ್ನೂ ಓದಿ: Smell from Clothes: ಮಳೆಗಾಲದಲ್ಲಿ ಬಟ್ಟೆಯ ಮುಗ್ಗುಲು ವಾಸನೆ ದೂರವಿಡಲು ಹೀಗ್ಮಾಡಿ
ಗೋಡೆಯ ತೇವಕ್ಕೆ ಪೇಪರ್ : ಮಳೆಗೆ ಗೋಡೆಗಳು ತೇವಗೊಳ್ಳುತ್ತವೆ. ಇದ್ರಿಂದ ಗೋಡೆ ಬಣ್ಣ ಮಾಸುತ್ತದೆ. ಗೋಡೆ ಕ್ರಮೇಣ ಬಿರುಕು ಬಿಡಲು ಶುರುವಾಗುತ್ತದೆ. ಗೋಡೆಯ ಅಲ್ಲಲ್ಲಿ ಬಿಳಿ ಫಂಗಸ್ ಕಾಣಿಸುತ್ತದೆ. ಇದನ್ನು ಹೋಗಲಾಡಿಸಲು ಮನೆಯಲ್ಲಿ ದಿನಪತ್ರಿಕೆ ಇದ್ದೇ ಇರುತ್ತದೆ. ಅದನ್ನು ನೀರಿನಲ್ಲಿ ನೆನೆಸಿ ನಂತರ ಚೆನ್ನಾಗಿ ರುಬ್ಬಿ ನಂತರ ಗೋಡೆಗಳ ಮೇಲೆ ಪೇಸ್ಟ್ ಮಾಡಿದರೆ ತೇವ ಕಡಿಮೆಯಾಗುತ್ತದೆ. ಕೆಲವೊಮ್ಮೆ ಅಗ್ಗದ ಬಣ್ಣವು ಮಳೆಯಲ್ಲಿ ತೇವಕ್ಕೆ ಕಾರಣವಾಗುತ್ತದೆ. ಆದ್ದರಿಂದ, ತೇವಾಂಶವನ್ನು ತೊಡೆದುಹಾಕಲು ಮನೆಗೆ ಉತ್ತಮ ಬಣ್ಣವನ್ನು ಹಚ್ಚಬೇಕು.
ನೀರಿನ ಪೈಪ್ ಮೇಲೆ ಇರಲಿ ಗಮನ : ಮನೆಯಲ್ಲಿ ಅಳವಡಿಸಿರುವ ನೀರಿನ ಪೈಪ್ ಸೋರಿಕೆಯಿಂದ ಹಲವು ಬಾರಿ ತೇವ ಕಾಣಿಸಿಕೊಳ್ಳುತ್ತದೆ. ಇದನ್ನು ತಪ್ಪಿಸಲು ನೀವು ನೀರಿನ ಪೈಪ್ ಮೇಲೆ ಗಮನ ಹರಿಸಬೇಕು. ಪೈಪ್ ನಲ್ಲಿ ದೋಷ ಕಂಡು ಬಂದಲ್ಲಿ ಅದನ್ನು ಸರಿಪಡಿಸಬೇಕು.
ಇದನ್ನೂ ಓದಿ: Relationship : 45 ವರ್ಷದ ಮಹಿಳೆ ಪ್ರೀತಿಸೋರು ಯಾರೂ ಇಲ್ವಂತೆ
ತೇವ ಹೋಗಲಾಡಿಸಲು ಹೀಗೆ ಮಾಡಿ : ಈಗಾಗಲೇ ಮನೆಯ ಗೋಡೆ ತೇವವಾಗಿದೆ, ಏನು ಮಾಡ್ಬೇಕು ಎನ್ನುವವರು ಗೋಡೆಗೆ ವಾಟರ್ ಪ್ರೂಫ್ ಸುಣ್ಣವನ್ನು ತುಂಬಿಸಿ. ಹೀಗೆ ಮಾಡುವುದರಿಂದ ಆ ಜಾಗದಲ್ಲಿ ಮತ್ತೆ ತೇವ ಕಾಣಿಸಿಕೊಳ್ಳುವುದಿಲ್ಲ.
ಲವಂಗ : ಲವಂಗವನ್ನು ಬಳಸಿಕೊಂಡು ನಿಮ್ಮ ಮನೆಯ ತೇವಾಂಶವನ್ನು ಹೋಗಲಾಡಿಸಬಹುದು. ಲವಂಗ ಮತ್ತು ದಾಲ್ಚಿನಿಯನ್ನು ಸುಮಾರು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಬೇಕು. ಅರ್ಧ ಗಂಟೆಯ ನಂತರ ಈ ನೀರನ್ನು ಕುದಿಸಿ ಮತ್ತು ರೂಮ್ ಪ್ರೆಶನರ್ ರೀತಿಯಲ್ಲಿ ಇದನ್ನು ಬಳಸಿ. ಇದ್ರಿಂದ ತೇವದ ವಾಸನೆ ಇರುವುದಿಲ್ಲ.
ಪತ್ರಿಕೆ : ಅಡುಗೆ ಮನೆ ಮತ್ತು ಕಪಾಟುಗಳ ಕೆಳಗೆ ದಿನಪತ್ರಿಕೆಗಳನ್ನು ಹಾಕಿ ಅದರ ಮೇಲೆ ಪಾತ್ರೆ, ಬಟ್ಟೆಯನ್ನು ಇಡಿ. ಈಗಿನ ದಿನಗಳಲ್ಲಿ ವಾಟರ್ ಪ್ರೂಫ್ ಪೇಪರ್ ಲಭ್ಯವಿದೆ. ಅದನ್ನು ನೀವು ಬಳಸಬಹುದು. ಇದ್ರಿಂದ ತೇವಾಂಶ ಕಡಿಮೆಯಾಗುತ್ತದೆ. ವಾಸನೆ ಬರುವುದಿಲ್ಲ. ಹಾಗೆಯೇ ಹೂವನ್ನು ಕೂಡ ನೀವು ಅಲಂಕಾರದ ವಸ್ತುವಾಗಿ ಬಳಸಬಹುದು. ಇದ್ರಿಂದ ಮನೆಯಲ್ಲಿ ಬರ್ತಿರುವ ವಾಸನೆ ಕಡಿಮೆಯಾಗುತ್ತದೆ.