ಆಕೆಗೆ ಆಗ 9 ವರ್ಷ, ಅವಳಿಗೆ ಒಬ್ಬ ಅಕ್ಕ ಮತ್ತು ಇಬ್ಬರು ತಮ್ಮಂದಿರು. ಅದೊಂದು ದಿನ ಮನೆಯಲ್ಲಿ ತಮ್ಮನ ಹುಟ್ಟುಹಬ್ಬದ ಸಂಭ್ರಮ. ಎಲ್ಲರೂ ಸಂತಸದಲ್ಲಿ ಇರುವಾಗ ಅವಳಿಗೆ ಮಾತ್ರ ಸಿಕ್ಕಾಪಟ್ಟೆ ಹೊಟ್ಟೆನೋವು ಕಾಣಿಸಿಕೊಂಡಿತು. ತಂದೆ ಡಾಕ್ಟರಲ್ಲಿಗೆ ಕರೆದೊಯ್ದರು. ಡಾಕ್ಟರ್‌ ಮದ್ದು ಕೊಟ್ಟು ಸಾಗಹಾಕಲು ನೋಡೊದರಾದರೂ, ಸ್ಕ್ಯಾನಿಂಗ್‌ ಮಾಡಲೇಬೇಕೆಂದು ತಂದೆ ಒತ್ತಾಯಿಸಿದರು. ಆದರೆ ಜಮ್ಮುವಿನಲ್ಲಿ ಆಗ ಸ್ಕ್ಯಾನಿಂಗ್‌ ವ್ಯವಸ್ಥೆ ಕೂಡ ಸರಿಯಾಗಿ ಇರಲಿಲ್ಲ. ಚಂಡೀಗಢಕ್ಕೆ ಹೋಗಬೇಕಾಯ್ತು. ಅಲ್ಲಿ ಸ್ಕ್ಯಾನಿಂಗ್‌ ನಡೆಸಿದಾಗ ಗೊತ್ತಾಯಿತು- ಹುಡುಗಿಗೆ ಗರ್ಭಕೋಶದ ಕ್ಯಾನ್ಸರ್‌ ತಗುಲಿಕೊಂಡಿದೆ.

ಅಷ್ಟು ಚಿಕ್ಕ ಹುಡುಗಿಗೆ ಅದು ಅರ್ಥವಾಗದ ವಿಷಯ ಆದರೂ ತಂಧೆ ತಾಯಿಗೆ ಆಕಾಶ ಮಗುಚಿ ಬಿದ್ದಂತೆ ಅನಿಸಿತು. ಇಬ್ಬರೂ ಶಾಲಾ ಶಿಕ್ಷಕರು. ಮೂವರು ಮಕ್ಕಳನ್ನು ಓದಿಸುವಷ್ಟರಲ್ಲಿ ಆರ್ಥಿಕ ಸಂಪನ್ಮೂಲವೆಲ್ಲ ಒಣಗುತ್ತಿತ್ತು. ಶಿವಾನಿಯ ಚಿಕಿತ್ಸೆಗೆ ಹಣ ಹೊಂದಿಸಬೇಕಾಗಿ ಬಂತು. ಹಣಕ್ಕಿಂತಲೂ ಹೆಚ್ಚಾಗಿ, ಕ್ಯಾನ್ಸರ್‌ ಚಿಕಿತ್ಸೆ, ಕೀಮೋಥೆರಪಿಯ ಯಾತನೆಯನ್ನು ಪುಟ್ಟ ಮಗು ಅನುಭವಿಸಬೇಕಾಗಿ ಬಂತು. ತಲೆಕೂದಲು ಉದುರಿ ಬೋಳಾಯಿತು. ಶೀತ, ನೆಗಡಿ, ಜ್ವರ ಸಾಮಾನ್ಯ. ಎಲ್ಲವನ್ನೂ ಆಕೆ ಎದುರಿಸಿದಳು. ನಾನು ಅತ್ತರೆ, ಅಪ್ಪ ಅಮ್ಮ ಕೂಡ ಧೃತಿಗೆಟ್ಟು ಅಳುತ್ತಾ ಕೂರುತ್ತಾರೆ ಅನ್ನುವುದು ಗೊತ್ತಾಯಿತು, ಅಂದಿನಿಂಧ ಹಲ್ಲು ಕಚ್ಚಿ ಅಳು ಸಹಿಸಿಕೊಳ್ಳುವುದು ಕಲಿತೆ ಎನ್ನುತ್ತಾಳೆ ಸಣ್ಣ ಪ್ರಾಯದಲ್ಲೇ ಬಹಳಷ್ಟು ಬದುಕನ್ನು ನೋಡಿದ ಈ ಹುಡುಗಿ.
 

ಕ್ಯಾನ್ಸರ್‌ ಬರುವ ಮುನ್ನ ಹುಡುಗಿ ಶಾಲೆಯಲ್ಲಿ, ಟೇಕ್ವಾಂಡೋ ತರಗತಿಗಳಲ್ಲಿ ಚುರುಕಾಗಿದ್ದಳು. ಕ್ಯಾನ್ಸರ್‌ ಚಿಕಿತ್ಸೆಗಾಗಿ ಪದೇ ಪದೇ ಶಾಲೆಗೆ ರಜೆ, ಚಂಡೀಗಢಕ್ಕೆ ಭೇಟಿ ಕೊಡಬೇಕಾಗಿ ಬಂತು. ಶಾಲೆ ಬಿಟ್ಟಳು. ಮರು ವರ್ಷ ಈ ಯಾತನೆಯನ್ನೆಲ್ಲ ಸಹಿಸಿದಳು. ಮೂರು ವರ್ಷದಲ್ಲಿ, ಈಕೆಯ ಗರ್ಭಕೋಶ ಕ್ಯಾನ್ಸರ್‌ನಿಂದ ಸಂಪೂರ್ಣ ಮುಕ್ತವಾಗಿದೆ ಎಂದು ವೈದ್ಯರು ಸೂಚಿಸಿದರು.

 

ಅಧ್ಯಾತ್ಮ, ತತ್ವಜ್ಞಾನದೊಂದಿಗೆ ಕನೆಕ್ಟ್ ಮಾಡುತ್ತೆ ಭಾರತೀಯ ಆಹಾರ

 

ಈ ಮಧ್ಯೆ ಶಿವಾನಿಗೆ ಟೇಕ್ವಾಂಡೋ ಅಭ್ಯಾಸ ಬಿಟ್ಟುಹೋಗಿತ್ತು. ಒಂದು ದಿನ ತನ್ನ ಅಕ್ಕ ಸ್ಪೋರ್ಟ್ಸ್ ಕ್ಲೈಂಬಿಂಗ್‌ ಮಾಡುತ್ತಿರುವುದನ್ನು ನೋಡಿದಳು. ಇದು ಲಂಬವಾಗಿ ಇರುವ ಬಂಡೆಗೆ ಮೇಲೆ ಅಲ್ಲಲ್ಲಿ ಇರುವ ಆಂಕರ್‌ಗಳನ್ನು ಆಧಾರವಾಗಿಟ್ಟುಕೊಂಡು ಮೇಲಕ್ಕೇರುವ ಸ್ಪರ್ಧೆ. ಪರ್ವತಾರೋಹಣ, ಶಿಲಾರೋಹಣಕ್ಕೂ ಇದಕ್ಕೂ ಸಂಬಂಧವಿದೆ. ತಾನೂ ಇದನ್ನು ಮಾಡಬೇಕು ಎಂದು ಶಿವಾನಿಗೆ ಆಸೆಯಾಯಿತು. ಆದರೆ ಅದು ಅಷ್ಟು ಸುಲಭವಿರಲಿಲ್ಲ. ಜಮ್ಮುವಿನಲ್ಲಿ ಒಂದೇ ಒಂದು ಕಡೆ ಇದರ ಟ್ರೇನಿಂಗ್‌ ಶಿಬಿರ ಇತ್ತು. ಅಲ್ಲಿಗೇ ಹೋದಳು. ಕೋಚ್‌ ಉದಾರ ಮನಸ್ಸಿನಿಂದ ಈಕೆಯನ್ನು ಅಭ್ಯಾಸ ಮಾಡಲು ಬಿಟ್ಟ. ಆದರೆ ಶಿವಾನಿಯ ದೇಹಸ್ಥಿತಿ ನಾಜೂಕಾಗಿತ್ತು. ಕ್ರೀಡೆಯಲ್ಲಿ ಸಾಧನೆ ಆಕೆಗೆ ಸುಲಭವಾಗಿರಲಿಲ್ಲ. ಆದರೆ ಆಕೆ ಎಲ್ಲ ಅಡೆತಡೆಗಳನ್ನೂ ಮೆಟ್ಟಿನಿಂತು ಈ ಕ್ರೀಡೆಯಲ್ಲಿ ಅತ್ಯುನ್ನತಿಯನ್ನೇ ಸಾಧಿಸಿದಳು.

 

ಮಗ ಕುಡಿತಿದ್ದಾನೆಂದರೆ ಮುಚ್ಚಿಡಬೇಡಿ, ಸೂಕ್ತ ಚಿಕಿತ್ಸೆ ಕೊಡಿಸಿ...

 

ಮೊದಲು ಆಕೆ ತಾಲೂಕು ಲೆವೆಲ್‌, ನಂತರ ಜೋನಲ್‌ ಲೆವೆಲ್‌ಗಳಲ್ಲಿ ಆಡಿದಳು. ಗೆದ್ದಳು. ನಂತರ ರಾಜ್ಯ ಮಟ್ಟಕ್ಕೂ ಹೋದಳು. ಅಲ್ಲೂ ಗೆದ್ದಳು. ರಾಷ್ಟ್ರಮಟ್ಟದ ಸ್ಪೋರ್ಟ್ಸ್ ಕ್ಲೈಂಬಿಂಗ್‌ನಲ್ಲೂ ಭಾಗವಹಿಸಿ ಚಾಂಪಿಯನ್‌ ಆದಳು! ಕಳೆದ ವರ್ಷ ಬೆಂಗಳೂರಿನಲ್ಲಿ ನಡೆದ ಏಷ್ಯನ್‌ ಯುತ್‌ ಚಾಂಪಿಯನ್‌ಶಿಪ್‌ ಪಂದ್ಯಾವಳಿಯಲ್ಲಿ ಈಕೆ ಜೂನಿಯರ್‌ ಕಂಚು ಗೆದ್ದಳು. 2009ರಲ್ಲಿ ಇಂಡೋನೇಷ್ಯಾದಲ್ಲಿ ನಡೆದ ಏಷ್ಯನ್‌ ಚಾಂಪಿಯನ್‌ಶಿಪ್‌ನಲ್ಲೂ ಭಾಗವಹಿಸಿದಳು.
 

ಈಗ ಈಕೆಯ ಗುರಿ 2022ರಲ್ಲಿ ನಡೆಯುವ ಟೋಕಿಯೋ ಒಲಿಂಪಿಕ್ಸ್. ಒಲಿಂಪಿಕ್ಸ್‌ನಲ್ಲಿ ಸ್ಪೋರ್ಟ್ಸ್ ಕ್ಲೈಂಬಿಂಗ್‌ ಹೊಸದಾಗಿ ಸೇರ್ಪಡೆಯಾಗಿದೆ. ಆದರೆ ಶಿವಾನಿಗೆ ಈ ಕ್ರೀಡೆಯಲ್ಲಿ ಸಾಕಷ್ಟು ಕೋಚ್‌ಗಳಾಗಲೀ ಆಕೆಯಿರುವ ಜಮ್ಮುವಿನಲ್ಲಿ ಕ್ರೀಡಾ ಸೌಲಭ್ಯವಾಗಲೀ ಲಭ್ಯವಿಲ್ಲ. ಈಕೆಯ ಸಂಪನ್ಮೂಲವೂ ಕಡಿಮೆ. ಇದಕ್ಕೆ ಬೇಕಾದ ಒಂದು ಜೊತೆ ಶೂಗಳಿಗೆ 1 0ಸಾವಿರ ರೂ ಖರ್ಚಾಗುತ್ತದೆ. ಮತ್ತಿದು ಬಾಳಿಕೆ ಬರುವುದು ಒಂದು ತಿಂಗಳು ಮಾತ್ರವೇ. ಅಂದಮೇಲೆ ಈ ಕ್ರೀಡೆಗೆ ಖರ್ಚೆಷ್ಟು ಎಂಬುದನ್ನು ಊಹಿಸಬಹುದು. ಇದನ್ನೆಲ್ಲ ಮೆಟ್ಟಿನಿಂತು ಸಾಧನೆ ಮಾಡಲು ಹೊರಟಿರುವ ಶಿವಾನಿ ಚರಕ್‌ಗೆ ಶುಭವಾಗಲಿ ಎಂದಷ್ಟೇ ನಾವು ಹಾರೈಸಬಹುದು.