Asianet Suvarna News Asianet Suvarna News

ಕೃಷ್ಣನಂತಿರುವ ಮಳೆ ಹೊತ್ತು ತರುವ ಕಾರ್ಮುಗಿಲೇ ಬಾ ಬೇಗ...

ಮಳೆ ಇಲ್ಲದ ಮೋಡವ ನೋಡಿ ಮಲೆನಾಡ ಮಂದಿಗೂ ಸಾಕಾಗಿ ಹೋಗಿದೆ. ಭೋರ್ಗರೆಯುವ ಆಷಾಢದ ಮಳೆಯಲ್ಲಿ ತೊಯ್ದು ಹೋಗಬೇಕಾದ ಜನರು ಬಿರು ಬೇಸಿಗೆಯಲ್ಲಿ ಬೆಂದು ಹೋಗಿದ್ದಾರೆ. ಮಳೆಗಾಗಿ ಕಾಯುತ್ತಿದೆ ಮನ. ಮಳೆಯ ನೆನಪಿನೊಂದಿಗೆ, ಮರೆಯಾದ ಹಸಿರಿನ ನೆನಪನ್ನು ಮೆಲಕು ಹಾಕಿದ್ದಾರೆ ವಿನಯ್ ಶಿವಮೊಗ್ಗ.

Malnad region awaits for rejuvenation of monsoon 2019
Author
Bengaluru, First Published Jun 17, 2019, 5:03 PM IST

ಜೂನ್ ಬಂತೆಂದರೆ ಹೊಸ ಶೈಕ್ಷಣಿಕ ವರ್ಷ ಆರಂಭಗೊಳ್ಳುತ್ತಿತ್ತು..ನಮಗೆಲ್ಲಾ ಹೊಸ ತರಗತಿಗೆ ಹೋಗುವ ಹುಮ್ಮಸ್ಸು. ಹೊಸ ಟೀಚರ್, ಹೊಸ ಪುಸ್ತಕ, ಹೊಸ ಕ್ಲಾಸ್ ರೂಮ್ .....ಎಲ್ಲವೂ ಹೊಸದು!!!....ಹೊಸ ನೋಟ್ ಪುಸ್ತಕ, ಪಠ್ಯ ಪುಸ್ತಕಗಳನ್ನು ಖರೀದಿಸಿ ಅಮ್ಮನ ಹತ್ತಿರ ಬೈಂಡ್ ಹಾಕಿಸಿ ಹೊಸ ಬ್ಯಾಗಿನಲ್ಲಿ ಅದನ್ನು ಜೋಡಿಸಿಕೊಂಡು ಶಾಲೆಗೆ ಹೋಗುವ ಚಿತ್ರಣ ಕಣ್ಣ ಮುಂದೆ ದಟ್ಟವಾಗಿ ಬೀಡು ಬಿಟ್ಟಿದೆ.

ಈ ಸವಿನೆನಪುಗಳ ಹಿನ್ನೆಲೆಯಲಿ ಜೊತೆ ಜೊತೆಯಲಿ ಎಡೆಬಿಡದೆ ಸುರಿದ ಆ ಭೋರ್ಗರೆವ ಮಳೆ ಕೂಡ ಮನಸ್ಸಿನ ಕೋಣೆಯಲ್ಲ ಶಾಶ್ವತವಾಗಿ ನೆಲೆಯಾಗಿದೆ.
 ಆಗೆಲ್ಲಾ ಅಂದೆತಾ ಮಳೆ!!!! ಹೊಸ ಪುಸ್ತಕಗಳನ್ನ,ಹೊಸ ಬ್ಯಾಗನ್ನ, ಹೊಸ ಯೂನಿಫಾರಂಗಳನ್ನು ಆ ಮಳೆಯಿಂದ ಕಾಪಾಡಿಕೊಳ್ಳುವುದೇ  ನಮಗೆ ಹರಸಾಹಸವಾಗಿತ್ತು.....  ಸಂಜೆ,  ಶಾಲೆ ಬಿಟ್ಟ ಮೇಲೆ  ಹೊಸ ಬೂಟುಗಳು ಮಳೆಯಲ್ಲಿ ನೆಂದು  ಹಾಳಾಗುವ ಭಯದಿಂದ  ಶಾಲೆಯಲ್ಲೇ ಅದನ್ನು ಬಿಚ್ಚಿ,  ಕೈಯಲ್ಲಿ ಹಿಡಿದು ... ಮಳೆ ನಿಲ್ಲುವುದನ್ನೇ ಕಾದು ರಸ್ತೆ ತುಂಬಾ ಹರಿವ ನೀರಿನಲ್ಲಿ ಕಾಲಾಡಿಸುತ್ತಾ  ಮನೆಗೆ ಸೇರುತ್ತಿದ್ದೆವು..... ಛತ್ರಿಯಾಗಲಿ ರೈನ್ ಕೋಟ್ ಆಗಲಿ ಯಾವುದಕ್ಕೂ ಆ ಮಳೆ ಬಗ್ಗುತ್ತಿರಲಿಲ್ಲ!!! 

 ಆ ಮಳೆಯಿಂದ ಪಾರಾಗುವ  ನಮ್ಮ ಎಲ್ಲ ಪ್ರಯತ್ನಗಳೂ ವ್ಯರ್ಥವಾಗುತಿತ್ತು..... ಶಾಲೆ ಶುರುವಾದ ಮೊದಲ ಮೂರು ನಾಲ್ಕು ತಿಂಗಳು ನಾವು ಒದ್ದೆ-ಮುದ್ದೆಯಾಗಿಯೇ ಕಾಲ ಕಳೆಯುತ್ತಿದ್ದೆವು!!
    
ಅದೆಷ್ಟೋ ಬಾರಿ ತುಂಗೆ ಉಕ್ಕಿ ಹರಿದು ನದಿಯ ಆಸು ಪಾಸಿಸ ತಗ್ಗಿನ ಜಾಗಗಳಿಗೆ ನುಗ್ಗಿ ಪ್ರವಾಹದ ವಾತಾವರಣ ಶಿವಮೊಗ್ಗದಲ್ಲಿ ನಿರ್ಮಾಣವಾಗುತಿತ್ತು. ಆಗೆಲ್ಲಾ ನಮಗೆ ಶಾಲೆಯಲ್ಲಿ ರಜ ಘೋಷಿಸಲಾಗುತಿತ್ತು!  ಸೊಕ್ಕಿ ಮೈದುಂಬಿ ಹರಿಯುತ್ತಿದ್ದ ತುಂಗೆಯನ್ನು ಕಣ್ತುಂಬಿಸಿಕೊಳ್ಳುವ ಸಲುವಾಗಿಯೇ ನಾವು ನದಿಯನ್ನು ನೋಡಲು ಹೋಗುತ್ತಿದ್ದೆವು!!!  ತುಂಬಿ ಹರಿವ ತುಂಗೆಗೆ ಅರಿಶಿಣ-ಕುಂಕುಮ  ಬಾಗೀನ ಅರ್ಪಿಸಿ ಕೃತಾರ್ಥ ಭಾವದಿಂದ ತೆರಳುತ್ತಿದ್ಹ ಹೆಂಗಳೆಯರ ನೆನಪು ಮನಸ್ಸಿನಿಂದ ಇನ್ನೂ  ಮಾಸಿಲ್ಲ.

ತುಂಗಾರತಿ ಈ ಹಾಡು ಕೇಳಿದರೆ ಮೈ ಮರೆಯುತಿ

ಒಟ್ಟಿನಲ್ಲಿ ಮಳೆಗಾಲದ ಮೂರು ತಿಂಗಳು ಆ ಕಪ್ಪು ಬಣ್ಣದ ಮೋಡಗಳದ್ದೇ ಸಾಮ್ರಾಜ್ಯ! ಮಿಕ್ಕ ತಿಂಗಳಲ್ಲಿ ರಾರಾಜಿಸುತ್ತಿದ್ದ ಸೂರ್ಯ .....ಆತು-ಅಂಗಲಾಚಿ ಆಗಲೋ-ಈಗಲೋ ಒಂದು ಬಾರಿ ಕ್ಷಣ ಕಾಲಕ್ಕೆ ಇಣುಕಿ ಮರೆಯಾಗುತ್ತಿದ್ದ!!! ಕೆಸರಾದ ಬಟ್ಟೆಗಳನ್ನು ಒಗೆಯಲೇಬೇಕು, ಒಗೆದ ಬಟ್ಟೆಗಳು ಒಣಗಳು ಸೂರ್ಯ ಬೇಕು.... ಮಲೆನಾಡಿನ ಮಳೆಯ ಆರ್ಭಟಕ್ಕೆ ಸೂರ್ಯನೆಲ್ಲಿ ಬರಬೇಕು?! ಒಣಗದ  ಯೂನಿಫಾರಂನ್ನು ಹಾಗೆಯೇ ಹಸಿ ಹಸಿಯಾಗಿ ಶಾಲೆಗೆ ಹಾಕಿಕೊಂಡು ಹೋದ ಬೆಚ್ಚನೆಯ ಕ್ಷಣಗಳು ಮನಸ್ಸಿನಲ್ಲಿ ಅಚ್ಚಳಿಯದೇ ನಿಂತಿದೆ.

Malnad region awaits for rejuvenation of monsoon 2019

ಈಗ ಅದೇ ಜೂನ್ ತಿಂಗಳು ಮತ್ತೆ ಬಂದಿದೆ......ಆಕಾಶದ ಭಿತ್ತಿಯಲ್ಲಿ ದೂರ ದೂರಕ್ಕೂ  'ಆ' ಕಪ್ಪು ಮೋಡಗಳು ಕಾಣುತ್ತಿಲ್ಲ..... ಮಳೆ ಇಲ್ಲ ,ಮಳೆ ತರುವ ಮರಗಳೂ ಇಲ್ಲ..... ಉಕ್ಕಿ ಹರಿದಿದ್ದ ತುಂಗೆ ಈಗ ಬಚ್ಚಲ ಗುಂಡಿಯಂತಾಗಿದ್ದಾಳೆ!  ಶಾಲೆಗೆ ಮಕ್ಕಳು ಬಸ್ಸಿನಲ್ಲಿ ತೆರಳುತ್ತಾರೆ....ಅವರಿಗೆ ಬಿಸಿಲು ಬೀಳುವುದಿಲ್ಲ! ಮಳೆ ತೋಯಿಸುವುದೂ ಇಲ್ಲ! ಅವರೆಗೆ ಆ ಮಜ ಗೊತ್ತಿಲ್ಲ....ಬೇಕಾಗಿಯೂ ಇಲ್ಲ!

ಬಾಂದಳದಲ್ಲಿ ಕಪ್ಪು ಮೋಡಗಳಿಲ್ಲದ ಆಷಾಢ-ಶ್ರಾವಣದ ದಿನಗಳನ್ನು ಸಹಿಸಲಾಗುತ್ತಿಲ್ಲ.. ನೆತ್ತಿ ಸುಡುವ ಸೂರ್ಯ ಅಣಕಿಸಿದಂತೆ  ಭಾಸವಾಗುತ್ತಿದೆ. ಧಗೆ ತಾಳಲಾರದೆ ಸಂಕಟವಾಗುತ್ತಿದೆ....ಮಳೆಯನ್ನು ಹೊತ್ತು ತರುವ ಕಾರ್ಮುಗಿಲು ಕೃಷ್ಣನಿದ್ದಂತೆ! ತಡವಾಗಿಯಾದರೂ ಸರಿ ಆ 'ಕೃಷ್ಣ' ಬರಲೇಬೇಕು.. ಬಂದೇ ಬರುತ್ತಾನೆ......ಅದಕ್ಕಾಗಿಯೇ ಮನಸ್ಸು ನವಿಲಿನಂತೆ ಗುನುಗುನಿಸುತ್ತಿದೆ.....'ಕೃಷ್ಣಾ ನೀ ಬೇಗನೆ ಬಾರೋ'...

-ವಿನಯ್ ಶಿವಮೊಗ್ಗ


 

Follow Us:
Download App:
  • android
  • ios