ಬಾಂಗ್ಲಾ: 60 ಹಿಂದೂಗಳ ಮನೆ ಧ್ವಂಸ, 20 ಮನೆಗೆ ಬೆಂಕಿ, ನಿಲ್ಲದ ತಾಲಿಬಾನ್ ತಾಂಡವ
- ಬಾಂಗ್ಲಾ: 60 ಹಿಂದೂಗಳ ಮನೆ ಧ್ವಂಸ, 20 ಮನೆಗೆ ಬೆಂಕಿ
- ನೆರೆ ದೇಶದಲ್ಲಿ ಇನ್ನೂ ನಿಲ್ಲದ ಹಿಂದೂಗಳ ಮೇಲಿನ ದಾಳಿ
- ಈ ಹಿಂಸಾಚಾರ ಕೃತ್ಯವೆಸಗಿದ 52 ಶಂಕಿತರು ಪೊಲೀಸರ ಬಲೆಗೆ
ಢಾಕಾ (ಅ. 22): ದಸರಾ ಪ್ರಯುಕ್ತ ದುರ್ಗಾ ಪೂಜೆ ಪೆಂಡಾಲ್‌ಗಳ ಮೇಲಿನ ದಾಳಿ ವಿರೋಧಿಸಿ ಬಾಂಗ್ಲಾದೇಶದಲ್ಲಿ ಹಿಂದುಗಳು ಪ್ರತಿಭಟನೆ ನಡೆಸುತ್ತಿರುವ ನಡುವೆಯೇ, ಉದ್ರಿಕ್ತರ ಗುಂಪೊಂದು ಹಿಂದುಗಳಿಗೆ ಸೇರಿದ 66 ಮನೆಗಳನ್ನು ಹೊಡೆದುರುಳಿಸಿದ್ದಾರೆ. ಅಲ್ಲದೆ 20ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರ ಮೆರೆದಿದ್ದಾರೆ.
ಘಟನೆ ಬಗ್ಗೆ ತ್ವರಿತ ಕಾರ್ಯಾಚರಣೆ ಕೈಗೊಂಡ ಪೊಲೀಸರು, 52 ಶಂಕಿತರನ್ನು ಬಂಧಿಸಿದ್ದಾರೆ. ಅಲ್ಲದೆ ಉಳಿದವರಿಗಾಗಿ ಬಲೆ ಬೀಸಲಾಗಿದೆ. ಈ ಘಟನೆಯಲ್ಲಿ ಸಾವು-ನೋವಿನ ವರದಿಯಾಗಿಲ್ಲ. ಆದರೆ ಮನೆಯಲ್ಲಿ ಇಡಲಾಗಿದ್ದ ಭಾರೀ ಪ್ರಮಾಣದ ವಸ್ತುಗಳು ಬೆಂಕಿಗೆ ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿದೆ.